Max Premier:ಸಿಸಿಎಲ್ ಮ್ಯಾಚ್ ಮುಗೀತಿದ್ದಂತೆ 'ಮ್ಯಾಕ್ಸ್' ಟೆಲಿವಿಷನ್ ಪ್ರೀಮಿಯರ್‌ಗೆ ಮುಹೂರ್ತ; ಯಾವಾಗ? ಎಲ್ಲಿ?
2024ರಲ್ಲಿ ಕೊನೆಯಲ್ಲಿ ರಿಲೀಸ್ ಆಗಿದ್ದ ಸಿನಿಮಾ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಭಿಸಿತ್ತು. ಸೋಲಿನಿಂದ ಬೇಸತ್ತು ಹೋಗಿದ್ದ ಕನ್ನಡ ಚಿತ್ರರಂಗಕ್ಕೆ 'ಮ್ಯಾಕ್ಸ್' ವರ್ಷದ ಕೊನೆಯಲ್ಲಿ ರಿಲೀಫ್ ಕೊಟ್ಟಿತ್ತು. ಸುದೀಪ್‌ಗೆ ಬಾಕ್ಸಾಫೀಸ್‌ನಲ್ಲಿ ಮತ್ತೆ ಗೆಲುವು ಸಿಕ್ಕಿತ್ತು. ಸಿನಿಮಾ ಪ್ರೇಮಿಗಳು ಥಿಯೇಟರ್‌ನಲ್ಲಿ ಸಿನಿಮಾ ನೋಡಿ ಎಂಜಾಯ್ ಮಾಡಿದ್ದರು.
ಚಿತ್ರಮಂದಿರದಲ್ಲಿ ಅಬ್ಬರಿಸಿದ ಕನ್ನಡ ಸಿನಿಮಾ 'ಮ್ಯಾಕ್ಸ್' ಈ ಕಿರುತೆರೆಗೆ ಲಗ್ಗೆ ಇಡುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಕಿರುತೆರೆಯಲ್ಲಿ 'ಮ್ಯಾಕ್ಸ್' ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. 'ಮ್ಯಾಕ್ಸ್' ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಬ್ಲಾಕ್‌ಬಸ್ಟರ್ ಸಿನಿಮಾ ಇದೇ ತಿಂಗಳು ಫೆಬ್ರವರಿ 15ರಂದು ವರ್ಲ್ಡ್ ಪ್ರೀಮಿಯರ್ ಆಗುತ್ತಿದೆ.

'ವಿಕ್ರಾಂತ್ ರೋಣ' ಸಿನಿಮಾದ ಬಳಿಕ ಕಿಚ್ಚ ಸುದೀಪ್ ಸಿನಿಮಾ ಎರಡೂವರೆ ವರ್ಷಗಳ ಕಾಲ ರಿಲೀಸ್ ಆಗಿರಲಿಲ್ಲ. ಕಿಚ್ಚನ ಸಿನಿಮಾಗಾಗಿ ಕಾದೂ ಕಾದು ಅಭಿಮಾನಿಗಳು ಸುಸ್ತಾಗಿದ್ದರು. ಎರಡೂವರೆ ವರ್ಷ ಕಾದಿದ್ದಕ್ಕೂ ಸಿನಿಮಾ ಪ್ರೇಮಿಗಳಿಗೆ, ಕಿಚ್ಚನ ಅಭಿಮಾನಿಗಳಿಗೆ 'ಮ್ಯಾಕ್ಸ್' ಮನರಂಜನೆ ನೀಡಿತ್ತು. ಸುದೀಪ್ ಮ್ಯಾನರಿಸಂ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಇನ್ನು ಥಿಯೇಟರ್‌ನಲ್ಲಿ ಯಾರೆಲ್ಲ ಈ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದರೋ ಅವರಿಗೆ ಕಿರುತೆರೆಯಲ್ಲಿ ಸಿನಿಮಾ ನೋಡುವ ಅವಕಾಶವಿದೆ.
'ಮ್ಯಾಕ್ಸ್' ಸಿನಿಮಾ ಜೀ ಕನ್ನಡದಲ್ಲಿ ಇದೇ ವೀಕೆಂಡ್‌ಗೆ ಪ್ರಸಾರ ಆಗುತ್ತಿದೆ. ಫೆಬ್ರವರಿ 15ರಂದು ಸಂಜೆ 7.30ರಿಂದ ಕಿಚ್ಚ ಸುದೀಪ್ ಸಿನಿಮಾ ಪ್ರಸಾರ ಆಗಲಿದೆ. ಹೀಗಾಗಿ ಈ ವೀಕೆಂಡ್ ಕಂಪ್ಲೀಟ್ ಆಗಿ ಕಿಚ್ಚನಮಯ ಆಗಲಿದೆ. ಒಂದು ಕಡೆ ಮೈದಾನಕ್ಕಿಳಿದು ಕ್ರಿಕೆಟ್ ಆಡಿ ಪ್ರೇಕ್ಷಕರನ್ನು ರಂಜಿಸಿದರೆ, ಇನ್ನೊಂದು ಕಡೆ ಸಿನಿಮಾ ಮೂಲಕ ವೀಕ್ಷಕರಿಗೆ ಮನರಂಜನೆಯನ್ನು ನೀಡಲಿದ್ದಾರೆ. ಹೀಗಾಗಿ ಕಿಚ್ಚನ ಅಭಿಮಾನಿಗಳಿಗೆ ಡಬಲ್ ಮನರಂಜನೆ ಸಿಗೋದು ಗ್ಯಾರಂಟಿ.

ಕಿಚ್ಚ ಸುದೀಪ್ 'ಮ್ಯಾಕ್ಸ್' ಸಿನಿಮಾವನ್ನು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ವಿಜಯ್ ಅವರಿಗೂ ಚೊಚ್ಚಲ ಸಿನಿಮಾ. ಇದನ್ನು ಕಿಚ್ಚ ಸುದೀಪ್ ಹಾಗೂ ಕಲೈಪುಲಿ ಎಸ್ ತನು ಇಬ್ಬರೂ ಸೇರಿ ನಿರ್ಮಾಣ ಮಾಡಿದ್ದಾರೆ. ಮಾಸ್ ಪ್ರಿಯರಿಗೆ ಈ ಸಿನಿಮಾ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಅಷ್ಟೇ ಅಲ್ಲದೆ ಕಿಚ್ಚ ಫ್ಯಾನ್ಸ್ ಕೂಡ ಖುಷಿ ಪಟ್ಟಿದ್ದರು. ಈಗ ಕಿರುತೆರೆಯಲ್ಲಿ ಈ ಸಿನಿಮಾ ನೋಡುವ ಅವಕಾಶ ಸಿಕ್ಕಿದೆ. ಇನ್ನು ಕಿಚ್ಚ ಸುದೀಪ್ ಜೊತೆಗೆ ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್, ತೆಲುಗು ನಟ ಸುನೀಲ್, ಉಗ್ರಂ ಮಂಜು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚಂಡೂರು ಸೇರಿದಂತೆ ಕಲಾವಿದರ ದೊಡ್ಡ ತಂಡವೇ ಇದೆ. 'ಮ್ಯಾಕ್ಸ್' ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಶೇಖರ್ ಚಂದ್ರ ಕ್ಯಾಮರಾ ವರ್ಕ್ ಇದೆ.
'ಮ್ಯಾಕ್ಸ್' ಸಿನಿಮಾದಲ್ಲಿ ಸುದೀಪ್ ಅರ್ಜುನ್ ಮಹಾಕ್ಷಯ್ ಅಲಿಯಾಸ್ ಮ್ಯಾಕ್ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಅರ್ಜುನ್ ನ್ಯಾಯದ ಪರ ಹೋರಾಡಲು ಹೆಚ್ಚು ಬಾರಿ ಅಮಾನತ್ತುಗೊಂಡಿರುತ್ತಾನೆ. ಮ್ಯಾಕ್ಸ್ ಹೆಸರು ಕೇಳಿದರೆ ಗ್ಯಾಂಗ್‌ಗಳು ಬೆಚ್ಚಿಬೀಳುತ್ತವೆ. ಇದೇ ವೇಳೆ ಹೊಸ ಸ್ಟೇಷನ್‌ಗೆ ವರ್ಗಾವಣೆಯಾಗಿ ಬರುವ ಮ್ಯಾಕ್ಸ್ ಒಂದು ಸವಾಲು ಎದುರಾಗುತ್ತೆ. ಅದನ್ನು ಭೇದಿಸಿ ಹೇಗೆ ಹೊರ ಬರುತ್ತಾರೆ ಅನ್ನೋದೇ ಸಿನಿಮಾದ ಹೈಲೈಟ್.
ಇನ್ನು 'ಮ್ಯಾಕ್ಸ್' ಜೊತೆಗೆ ಈ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಸಿಸಿಎಲ್ ಪಂದ್ಯಗಳ ಮೂಲಕವೂ ರಂಜಿಸಲಿದ್ದಾರೆ. ಶುಕ್ರವಾರ ಹಾಗೂ ಶನಿವಾರ ಕರ್ನಾಟಕ ಬುಲ್ಡೋಜರ್ ತಂಡ ಎರಡು ಪಂದ್ಯಗಳನ್ನು ಆಡಲಿದೆ. ಈ ಎರಡು ಪಂದ್ಯಗಳು ಮುಗಿಯುತ್ತಿದ್ದಂತೆ ಕಿರುತೆರೆಯಲ್ಲಿ 'ಮ್ಯಾಕ್ಸ್' ಸಿನಿಮಾ ವರ್ಲ್ಡ್ ಪ್ರೀಮಿಯರ್ ಆಗಲಿದೆ.


Click it and Unblock the Notifications











