ಬೆದರಿಕೆ ಹಾಕಿಲ್ಲ.. ಎಚ್ಚರಿಕೆ ಕೊಟ್ಟಿಲ್ಲ; ಕಿಚ್ಚ ಸುದೀಪ್ ಮತ್ತೆ ಬಿಗ್ ಬಾಸ್ ನಿರೂಪಣೆ ಮಾಡಲು ಒಪ್ಪಿದ್ದು ಯಾಕೆ?
ಬಿಗ್ ಬಾಸ್ ಕನ್ನಡ 11 ಆರಂಭದಲ್ಲಿಯೇ ಕಿಚ್ಚ ಸುದೀಪ್ ಇದು ತನ್ನ ಕೊನೆಯ ಶೋ ಎಂಬ ಸುಳಿವು ನೀಡಿದ್ದರು. ಇನ್ನೇನು ಶೋ ಮುಗಿಯುತ್ತಿದ್ದಂತೆ ಕಿಚ್ಚ ಸುದೀಪ್ ಇದೇ ನನ್ನ ಕೊನೆಯ ಸೀಸನ್ ಎಂದು ಅನೌನ್ಸ್ ಮಾಡಿಯೇ ಬಿಟ್ಟಿದ್ದರು. ಇದು ವೀಕ್ಷಕರು ಹಾಗೂ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಸುದೀಪ್ ಇಲ್ಲದೆ ಮುಂದೇನು? ಯಾರು ನಿರೂಪಣೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿತ್ತು.
ಅಲ್ಲಿಂದ ಕಿಚ್ಚ ಸುದೀಪ್ ಬದಲು ಯಾರು ನಿರೂಪಣೆ ಮಾಡುತ್ತಾರೆ? ಎನ್ನುವ ಚರ್ಚೆ ನಡೆಯುತ್ತಲೇ ಇತ್ತು. ಗಣೇಶ್, ರಮೇಶ್ ಅರವಿಂದ್ ಹೆಸರುಗಳು ಕೂಡ ಓಡಾಡಿದ್ದವು. ಆದರೆ, ಕೊನೆಗೂ ಈಗ ಕಿಚ್ಚ ಸುದೀಪ್ ಬಿಗ್ ಬಾಸ್ ಕನ್ನಡ 12 ನಿರೂಪಣೆ ಮಾಡೋದು ಫಿಕ್ಸ್ ಆಗಿದೆ. ಕಲರ್ಸ್ ಕನ್ನಡದ ಮುಖ್ಯಸ್ಥರು ಕಿಚ್ಚ ಸುದೀಪ್ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೀಗ ಅಧಿಕೃತವಾಗಿ ಅನೌನ್ಸ್ ಆಗಿದೆ.

ಬಿಗ್ ಬಾಸ್ ನಿರೂಪಣೆ ಮಾಡಲ್ಲ ಕಿಚ್ಚ ಸುದೀಪ್ ಹೇಳಿದ್ಯಾಕೆ ಎನ್ನುವ ಪ್ರಶ್ನೆ ಎದ್ದಿತ್ತು. ಕನ್ನಡಕ್ಕೆ ಆದ್ಯತೆ ನೀಡುತ್ತಿಲ್ಲ ಎನ್ನುವ ಕಾರಣಕ್ಕೆ ಬಿಟ್ಟಿದ್ದಾರೆಂಬ ಚರ್ಚೆ ಆಗಿತ್ತು. ಅದಕ್ಕೀಗ ಕಿಚ್ಚ ಸುದೀಪ್ ಕ್ಲಾರಿಟಿ ಕೊಟ್ಟಿದ್ದಾರೆ. ತಾನೇಕೆ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡುವುದಕ್ಕೆ ಹಿಂದೇಟು ಹಾಕಿದೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಕಿಚ್ಚ ಸುದೀಪ್ ಹೇಳಿದ್ದೇನು? ತಿಳಿಯುವುದಕ್ಕೆ ಮುಂದೆ ಓದಿ.
ಪಾರ್ಟಿ ಮಾಡುತ್ತಾ ಮಾಡಿದ ಟ್ವೀಟ್ ಅಲ್ಲ
"ಸೀಸನ್ ಎಂಡ್‌ನಲ್ಲಿ ಬಿಗ್ ಶಾಕ್ ಕೊಟ್ಟಿದ್ರಿ ಅಂತ ಹೇಳಿದ್ರಿ. ಆದರೆ, ಸೀಸನ್ ಬಿಗಿನಿಂಗ್‌ನಲ್ಲೇ ಕೊಟ್ಟಿದ್ದೆ. ಸೀಸನ್ ಎಂಡ್‌ನಲ್ಲಿ ಕನ್ಫರ್ಮ್ ಮಾಡಿದೆ. ಅದು ಯಾವುದೇ ಪಾರ್ಟಿ ಮಾಡುತ್ತಾ ಮಾಡಿದ ಟ್ವೀಟ್ ಅಲ್ಲ. ಅದಕ್ಕೆ ಸಂಜೆಯೋ, ಮಧ್ಯಾಹ್ನವೋ ಇನ್ನೊಂದು ಟ್ವೀಟ್ ಮಾಡಿದೆ. ಈಗ ಸೀಸನ್ 12 ನಡೆಯುತ್ತಿದೆ. ನಮ್ಮ ಟೆಕ್ನಿಕಲ್ ಟೀಮ್ ನಡೆಸಿಕೊಡುತ್ತಿರುವ ರೀತಿ, ಬೆಳೆಯುತ್ತಿರುವ ರೀತಿ, ಇದು ನಮ್ಮೆಲ್ಲರಿಗಿಂತ ಹೆಚ್ಚು ಈ ಸೀಸನ್‌ನ ಸ್ಪರ್ಧಿಗಳು ಹಾಗೂ ವೀಕ್ಷಕರ ಮೇಲೆ ಹೆಚ್ಚು ಕುತೂಹಲವಿದೆ ಅಂತ ಅಂದುಕೊಳ್ಳುತ್ತೇನೆ." ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.
"ಐಪಿಎಲ್ ರೇಂಜ್‌ಗೆ ನೋಡುತ್ತಾರೆ"
"ಕಳೆದ ಮೂರು ಸೀಸನ್‌ನಿಂದ ಬಿಗ್‌ಬಾಸ್ ತುಂಬಾ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಅದು ಚಿಕ್ಕದಾಗಿ ಅಲ್ಲ. ದೊಡ್ಡದಾಗಿ ಬೆಳೆದಿದೆ. ಹಾಗಾಗಿ ಸ್ಪರ್ಧಿಗಳು ತುಂಬಾನೇ ಖುಷಿಯಾಗಿದ್ದಾರೆ. ನಾನು ನೋಡಿದ ಹಾಗೇ ವೀಕ್ಷಕರು ಬಿಗ್ ಬಾಸ್ ಅನ್ನು ಐಪಿಎಲ್ ರೇಂಜ್‌ಗೆ ನೋಡುತ್ತಾರೆ. ಮೂರು ತಿಂಗಳು ಎಲ್ಲದನ್ನೂ ಬದಿಗಿಟ್ಟು ನೋಡುತ್ತಾರೆ. ಹೀಗಾಗಿ ದೊಡ್ಡದಾಗಿ ಈ ಶೋ ಅನ್ನು ಮಾಡಲೇಬೇಕಿದೆ." ಎಂದು ಸುದೀಪ್ ಹೇಳಿದ್ದಾರೆ.
"ಚೈತನ್ಯ ಯಾವತ್ತೂ ಕಮ್ಮಿ ಆಗಿಲ್ಲ"
ಬಿಗ್ ಬಾಸ್ ಕನ್ನಡ 11 ಸೀಸನ್ ಮಾಡಿದ್ದೇನೆ. ಆದರೆ, ಯಾವತ್ತೂ ಚೈತನ್ಯ ಕಮ್ಮಿಯಾಗಲ್ಲ. ಆಗುವುದೂ ಇಲ್ಲ ಎಂದಿದ್ದಾರೆ. "ನಮ್ಮ ಚೈತನ್ಯ ಯಾವತ್ತೂ ಕಮ್ಮಿ ಆಗಿಲ್ಲ. ಬಿಗ್ ಬಾಸ್ ಮಾಡಿದ್ದರೂ ಹಾಗೆ ಇರೋದು. ಮಾಡದೇ ಇದ್ದರೂ ಹಾಗೇ ಇರೋದು. ನಮ್ಮ ಮನೆಯಲ್ಲಿ ಕೆಲಸ ಇಲ್ಲದೆ ಅಡುಗೆ ಮಾಡುತ್ತಾ ಕೂತಿದ್ದರೂ ಅದೇ ಹುಮ್ಮಸ್ಸಿನಲ್ಲಿ ಕೂತಿರುತ್ತೇನೆ." ಎಂದು ಸುದೀಪ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಬೆದರಿಕೆ ಹಾಕಿಲ್ಲ.. ಎಚ್ಚರಿಕೆ ಕೊಟ್ಟಿಲ್ಲ
"ನಾನು ಟ್ವೀಟ್ ಮಾಡಿದಾಗ ಅದು ಬೆದರಿಕೆ ಆಗಿರಲಿಲ್ಲ. ಅದು ಎಚ್ಚರಿಕೆನೂ ಆಗಿರಲಿಲ್ಲ. ಅದು ನನ್ನ ಭಾವನೆಯಾಗಿತ್ತು. ನನ್ನ ಅನುಭವವನ್ನು ಪ್ರಪಂಚದ ಜೊತೆ ಹೇಳಿಕೊಳ್ಳಬೇಕಿತ್ತು. ವಿಡಿಯೋ ತುಣುಕುಗಳನ್ನು ಹಾಕಿ ಬಿಗ್‌ಬಾಸ್ ಅನ್ನು ನೆನಪಿಸಿದರು. ಅದು ಖುಷಿ ಕೊಟ್ಟಿದೆ. ಆದರೆ, ಇನ್ನೊಬ್ಬರು ಬಂದು ಬಿಗ್ ಬಾಸ್ ನಡೆಸಿಕೊಟ್ಟಿದ್ದರೂ, ಆ ಶೋ ಅನ್ನು ಮಿಸ್ ಮಾಡುತ್ತಿರಲಿಲ್ಲ. ಬಹುಶ: ನಾನು ಕೂತು ನೋಡುತ್ತಿದ್ದೆ. ನನಗೆ ಗೊತ್ತಿದ್ದವರೇ ಮಾಡುತ್ತಿದ್ದರೆ, ಅವರಿಗೆ ಹಾಗೆ ಮಾಡಬೇಡ, ಹೀಗೆ ಮಾಡಬೇಡ ಅಂತ ಹೇಳುತ್ತಿದ್ದೆ. ಆ ಹೆದರಿಕೆಯಲ್ಲಿ ನಾನು ಜೀವನ ನಡೆಸಿಯೇ ಇಲ್ಲ." ಎಂದಿದ್ದಾರೆ ಸುದೀಪ್.
"ಬಿಗ್‌ಬಾಸ್ ವಿವಾದಿತ ಅಂತ ಹೇಳುವುದಕ್ಕೆ ಆಗಲ್ಲ"
"ನಾನು ವಿವಾದಿತ ಪ್ರಶ್ನೆಗಳನ್ನು ಕೇಳುವ ಮಿತ್ರರಿಗೆ ಕರೀಬೇಡಿ ಅಂತಾನೇ ಹೇಳಲ್ಲ. ಇಂತಹ ಕ್ಯಾರೆಕ್ಟರ್‌ಗಳು ಅಥವಾ ಪರ್ಸನಾಲಿಟಿ ಇಲ್ಲದೆ ಬಿಗ್ ಬಾಸ್ ಹೇಗೆ ಆಗುತ್ತೆ ಹೇಳಿ. ಎಲ್ಲರೂ ಒಂದೇ ರೀತಿ ಯೋಚನೆ ಮಾಡುವವರನ್ನ, ಬೆಳಗ್ಗೆ ಎದ್ದ ಕೂಡಲೇ ಒಬ್ಬರನ್ನೊಬ್ಬರನ್ನು ತಬ್ಬಿಕೊಂಡು ಮುತ್ತುಕೊಟ್ಕೊಂಡು, ಮಾತು ಎತ್ತಿದರೆ ಹಿಂದಿನಿಂದ ದೇವರ ಭಜನೆ ಬಂದರೆ ನಡೆಯುತ್ತಾ? ಬಿಗ್ ಬಾಸ್ ಅನ್ನು ವಿವಾದಿತ ಅಂತ ಹೇಳುವುದಕ್ಕೆ ಆಗುವುದಿಲ್ಲ. ನಾನು ಅವರಿಗ ಕೇಳಿದ್ದು ಇವರನ್ನು ಮನೆಯೊಳಗೆ ಕಳಿಸುತ್ತಿದ್ದೀರಿ ಅಂದರೆ ಯಾಕೆ ಎನ್ನುವ ಕ್ಲಾರಿಟಿ ಬೇಕು. ಅದು ಇಲ್ಲದೆ ಹೋದಲ್ಲಿ ಅನಾವಶ್ಯಕವಾಗಿ ಒಂದು ಶೋ ನಡೆಸುವುದಕ್ಕೆ ಕೆಲವರನ್ನು ಹಾಕಲಾಗುತ್ತೆ. ಅದು ಬಂದಾಗ ತಪ್ಪಾಗುತ್ತೆ." ಎಂದಿದ್ದಾರೆ.
"ಕನ್ನಡಕ್ಕೆ ಸ್ವಲ್ಪ ಪ್ರೀತಿ ತೋರಿಸಿ"
"ನೀವು ಯಾವ ಚಾನೆಲ್‌ಗೆ ಹೋಗಿ ಏನೇ ಮಾಡಿ, ಕನ್ನಡಕ್ಕೆ ಸ್ವಲ್ಪ ಪ್ರೀತಿ ತೋರಿಸಿ. ನಮಗೆ ವಾಹಿನಿಯಿಂದ ಯಾವುದೇ ಕೊರತೆ ಬಂದಿಲ್ಲ. ಬರುವುದಕ್ಕೆ ಬಿಡುವುದೂ ಇಲ್ಲ. ಅದೇನೋ ಗೊತ್ತಿಲ್ಲ. ನನಗೆ ಆ ಪ್ರೀತಿ ಕಾಣಿಸುತ್ತಿರಲಿಲ್ಲ. ನಾನು ಯಾರನ್ನೂ ದೂರುತ್ತಿಲ್ಲ. ಇದು ನನ್ನ ವೈಯಕ್ತಿಕ. ಬೇರೆ ಭಾಷೆಗಳು ಚೆನ್ನಾಗಿ ನಡೆಯುತ್ತಿರುತ್ತೆ. ಅದು ನಡೀಲಿ. ನಡೆಯಬೇಕು. ಬೇರೆ ಭಾಷೆಗೆ ತೋರಿದ ಪ್ರೀತಿ ಕನ್ನಡದ ವಾಹಿನಿಯಲ್ಲಿ ಕಷ್ಟು ಪಟ್ಟು ಕೆಲಸ ಮಾಡುವವರಿಗೆ ಸಿಗುತ್ತಿದೆ ಅಂತ ನನಗೆ ಅನಿಸಲಿಲ್ಲ. ನಾನು ಜಾಸ್ತಿ ತಿದ್ದೋ ವ್ಯಕ್ತಿ ಅಲ್ಲ. ತಿದ್ದುಕೊಳ್ಳುವ ವ್ಯಕ್ತಿ." ಎಂದು ಹೇಳುವ ಮೂಲಕ ಬಿಗ್ ಬಾಸ್ ನಿರೂಪಣೆ ಮಾಡಲು ಹಿಂದೇಟು ಹಾಕಿದ ಕಾರಣವನ್ನು ರಿವೀಲ್ ಮಾಡಿದ್ದಾರೆ.
ಇದೇ ವೇಳೆ ಕಲರ್ಸ್ ಕನ್ನಡದ ಹೆಡ್ ಪ್ರಶಾಂತ್ ನಾಯಕ್ ಕೂಡ ಈ ವೇಳೆ ಕಿಚ್ಚ ಸುದೀಪ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಬೇರೆ ಭಾಷೆಗಳಿಗಿಂತ ನಮ್ಮ ಭಾಷೆಯ ಶೋ ಉತ್ತಮವಾಗಿ ಮೂಡಿ ಬರಬೇಕು ಅಂತ ಇತ್ತು. ಆ ಬಗ್ಗೆ ಸುದೀಪ್ ಅವರೊಂದಿಗೆ ಚರ್ಚೆ ಮಾಡಿ, ಅವರ ಸಲಹೆಯನ್ನು ಅಳವಡಿಸಿ, ಕಳೆದ 11 ಸೀಸನ್‌ಗಿಂತ ದೊಡ್ಡದಾಗಿ 12ನೇ ಸೀಸನ್‌ನಲ್ಲಿ ಬರುತ್ತೇವೆ. ದೊಡ್ಡ ಮಟ್ಟದಲ್ಲಿ ಬರುತ್ತೇವೆ ಅನ್ನೋದನ್ನು ಹೇಳುತ್ತೇನೆ." ಎಂದು ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಅನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಏರಿಸುವ ಆಲೋಚನೆ ಇದೆಯೇ ಎಂದು ಪ್ರಶ್ನೆ ಮಾಡಲಾಗಿತ್ತು. ಅದು ಪ್ರಶಾಂತ್ ನಾಯಕ್ ಕೊಟ್ಟ ಉತ್ತರ ಹೀಗಿತ್ತು. "ಅವರು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಅಂತಿದ್ದಾರೆ. ಈಗಾಗಲೇ ಬಿಗ್ ಬಾಸ್‌ನಿಂದ ಸಿನಿಮಾ ಮಾಡುತ್ತಿಲ್ಲ ಅಂತ ಆರೋಪವಿದೆ. ಹೀಗಾಗಿ ಆರು ತಿಂಗಳು ಬಿಗ್ ಬಾಸ್ ಮಾಡುತ್ತಿಲ್ಲ. ಸದ್ಯಕ್ಕೆ ಅಂತಹ ಪ್ಲಾನ್ ಯಾವುದೂ ಇಲ್ಲ. ರೆಗ್ಯೂಲರ್ ಹೇಗೆ ನಡೆಯುತ್ತೋ ಹಾಗೆಯೇ ನಡೆಯುತ್ತೆ. ಡೇಟ್ ಇನ್ನೂ ಡಿಸೈಡ್ ಆಗಿಲ್ಲ. ಯಾವಾಗ ಶುರು ಮಾಡಬೇಕು ಅನ್ನೋದನ್ನು ಡಿಸೈಡ್ ಮಾಡಿಲ್ಲ." ಎಂದಿದ್ದಾರೆ. ಒಟ್ನಲ್ಲಿ ಕಿಚ್ಚ ಸುದೀಪ್ ಮನವೊಲಿಸಿದ್ದು ಆಗಿದೆ. ಕಿಚ್ಚ ಸುದೀಪ್ ಒಪ್ಪಿ ಸೀಸನ್ 12 ಅಷ್ಟೇ ಅಲ್ಲ. ಸೀಸನ್ 15ರವರೆಗೂ ಅವರೇ ನಿರೂಪಣೆ ಮಾಡುವುದಾಗಿ ಹೇಳಿದ್ದಾರೆ.


Click it and Unblock the Notifications











