Karna TRP:ಶಾಪ ಮುಕ್ತನಾಗಿ ಎಂಟ್ರಿ ಕೊಟ್ಟ 'ಕರ್ಣ'ನಿಗೆ ವೀಕ್ಷಕರಿಂದ ಭರ್ಜರಿ ಸ್ವಾಗತ; ಮೊದಲ ವಾರವೇ ದಾಖಲೆ ಟಿಆರ್‌ಪಿ
ಕನ್ನಡ ಕಿರುತೆರೆಯಲ್ಲಿ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಆಗುತ್ತಲೇ ಇರುತ್ತವೆ. ಮನರಂಜನಾ ವಾಹಿನಿಗಳು ವೀಕ್ಷಕರನ್ನು ಸೆಳೆಯುವುದಕ್ಕೆ ಮೆಗಾ ಸೀರಿಯಲ್‌ಗಳನ್ನು ಆರಂಭ ಮಾಡುತ್ತವೆ. ಇವುಗಳಲ್ಲಿ ಕೆಲವು ಸೀರಿಯಲ್‌ಗಳು ಭಾರೀ ನಿರೀಕ್ಷೆಯನ್ನು ಹುಟ್ಟಾಕುತ್ತವೆ. ಅದರಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ 'ಕರ್ಣ' ಧಾರಾವಾಹಿ ಕೂಡ ಒಂದು. ವೀಕ್ಷಕರನ್ನು ತಲುಪುವುದಕ್ಕೆ ಇನ್ನೇನು ಒಂದು ದಿನವಿದೆ ಎನ್ನುವಾಗಲೇ ವಿವಾದಕ್ಕೆ ಸಿಲುಕಿದ್ದ ಧಾರಾವಾಹಿ ಕಳೆದ ವಾರದಿಂದ ಪ್ರಸಾರ ಆರಂಭಿಸಿದೆ.
ಹಲವು ಕಾರಣಗಳಿಗೆ 'ಕರ್ಣ' ವೀಕ್ಷಕರ ಗಮನ ಸೆಳೆದಿತ್ತು. ಈ ಧಾರಾವಾಹಿಯ ಸ್ಟಾರ್ ಕಾಸ್ಟ್ ಒಂದು ಕಡೆಯಾದರೆ, ಇನ್ನೊಂದು ಕಡೆ ವಿವಾದವೂ ಕೂಡ ಪರೋಕ್ಷವಾಗಿ ಪಬ್ಲಿಸಿಟಿಯನ್ನು ನೀಡಿತ್ತು. ನಿರೀಕ್ಷೆ ಮಾಡಿದಂತೆ 'ಕರ್ಣ' ಧಾರಾವಾಹಿಗೆ ಕನ್ನಡಿಗರಿಂದ ಮೊದಲ ವಾರ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಜೀ ಕನ್ನಡದಲ್ಲಿ ಮತ್ತೊಂದು ಧಾರಾವಾಹಿಯ ಟಿವಿಆರ್ ಎರಡು ಅಂಕಿಗಳನ್ನು ದಾಟಿದೆ.

ಜೀ ಕನ್ನಡ ಜುಲೈ 3 ರಿಂದ 'ಕರ್ಣ' ಧಾರಾವಾಹಿ ಪ್ರಸಾರ ಆರಂಭಿಸಿತ್ತು. ಅಲ್ಲಿಂದ ಇಲ್ಲಿವರೆಗೂ ಈ ಧಾರಾವಾಹಿಗೆ ಪ್ರತ್ಯೇಕ ಫ್ಯಾನ್ ಬೇಸ್ ಹುಟ್ಟಿಕೊಂಡಿದೆ. ಈ ಸೀರಿಯಲ್‌ನ ಅದ್ಧೂರಿ ಶೂಟಿಂಗ್ ಮಾಡಲಾಗಿದೆ. ಅದರಲ್ಲೂ ಧಾರಾವಾಹಿಯ ಹೀರೋ 'ಕರ್ಣ'ನ ತಾಳ್ಮೆ, ಸಹನೆ, ಮುಗ್ಧ ನಗು ಎಲ್ಲವೂ ವೀಕ್ಷಕರಿಗೆ ಕಾಡುವುದಕ್ಕೆ ಶುರು ಮಾಡಿದೆ. ಹೀಗಾಗಿ ಮೊದಲ ವಾರ ಈ ಸೀರಿಯಲ್ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಮುಂದೆ ಓದಿ
'ಕರ್ಣ' ಧಾರಾವಾಹಿಗೆ ಮೊದಲ ವಾರವೇ ಭರ್ಜರಿ ರೆಸ್ಪಾನ್ಸ್
ಎರಡಂಕಿ ಟಿಆರ್‌ಪಿ ದಾಟಿದ ಜೀ ಕನ್ನಡದ ಧಾರಾವಾಹಿ
ಕಿರಣ್ ರಾಜ್, ಭವ್ಯಾ ಗೌಡ, ನಮ್ರತಾ ಗೌಡ ಹೈಲೈಟ್
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಮೀರಿಸಿತೇ 'ಕರ್ಣ'?
ಹೌದು, 'ಕರ್ಣ' ಧಾರಾವಾಹಿಯ ಮೊದಲ ವಾರದ ಟಿಆರ್‌ಪಿ ಹೊರ ಬಿದ್ದಿದೆ. ಶ್ರುತಿ ನಾಯ್ಡು ನಿರ್ಮಾಣ ಮಾಡುತ್ತಿರುವ ಈ ಧಾರಾವಾಹಿಯಲ್ಲಿ ಕಿರಣ್ ರಾಜ್ 'ಕರ್ಣ'ನಾಗಿ ನಟಿಸುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ಭವ್ಯಾ ಗೌಡ, ನಮ್ರತಾ ಗೌಡ ಇಬ್ಬರೂ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಂದು ಕಡೆ 'ಕರ್ಣ' ಟ್ರ್ಯಾಕ್ ನಡೆಯುತ್ತಿದ್ದರೆ, ಇನ್ನೊಂದು ಕಡೆ ಭವ್ಯಾ ಗೌಡ ಪಾತ್ರದ ಲವ್ ಟ್ರ್ಯಾಕ್ ನಡೆಯುತ್ತಿದೆ. ಮತ್ತೊಂದು ಕಡೆ ನಮ್ರತಾ ಗೌಡ ಟ್ರ್ಯಾಕ್. ಹೀಗೆ ಮೂರು ಟ್ರ್ಯಾಕ್‌ಗಳಲ್ಲಿ 'ಕರ್ಣ' ಸೀರಿಯಲ್ ಸ್ಟೋರಿ ನಡೆಯುತ್ತಿದೆ.
ಇನ್ನು ಟಿಆರ್‌ಪಿ ಕಡೆಗೆ ಬರೋದಾದರೇ, 'ಕರ್ಣ' ಧಾರಾವಾಹಿಗೆ ಟಿವಿಆರ್ ಎರಡು ಅಂಕಿಗಳನ್ನು ದಾಟಿದೆ. ಟಿಆರ್‌ಪಿಯನ್ನು ಲೆಕ್ಕ ಹಾಕುವ ಸಂಸ್ಥೆ ಬಾರ್ಕ್ ಅಂಕಿ ಅಂಶಗಳನ್ನು ಹೊರ ಹಾಕಿದೆ. ಮೊದಲ ವಾರ 'ಕರ್ಣ' ಸೀರಿಯಲ್‌ನ ಟಿವಿಆರ್ 11.0 ಎಂದು ಹೇಳಲಾಗಿದೆ. ಕರ್ನಾಟಕದಲ್ಲಿ ಈ ಧಾರಾವಾಹಿಗೆ ಇಷ್ಟು ದೊಡ್ಡ ಮಟ್ಟಕ್ಕೆ ಪ್ರತಿಕ್ರಿಯೆ ಸಿಕ್ಕಿದ್ದು, ಇದನ್ನು ಜೀ ಕನ್ನಡ ಕೂಡ ಅಧಿಕೃತವಾಗಿ ಹೇಳಿಕೊಂಡಿದೆ.

ಕನ್ನಡದ ಹಿರಿಯ ನಟಿ ಉಮಾಶ್ರೀ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೂ ಇಂತಹದ್ದೇ ಪ್ರತಿಕ್ರಿಯೆ ಸಿಕ್ಕಿತ್ತು. ಆ ಧಾರಾವಾಹಿ ಕೂಡ ಎರಡು ಅಂಕಿಗಳನ್ನು ದಾಟಿತ್ತು. ಆದರೆ, ಅಲ್ಲಿಂದ ಜೀ ಕನ್ನಡದ ಯಾವುದೇ ಧಾರಾವಾಹಿಗಳು ಎರಡು ಅಂಕಿಗಳನ್ನು ದಾಟುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಆ ಸಾಧನೆಯನ್ನು 'ಕರ್ಣ' ಧಾರಾವಾಹಿ ಮಾಡಿದೆ. ಮೊದಲ ವಾರವೇ 'ಕರ್ಣ' ಧಾರಾವಾಹಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ.
ಈ ಜೂನ್ ತಿಂಗಳಲ್ಲೇ ಪ್ರಸಾರ ಆಗಬೇಕಿದ್ದ ಧಾರಾವಾಹಿ ಎರಡು ವಾರ ಮುಂದಕ್ಕೆ ಹೋಗಿತ್ತು. ಭವ್ಯಾ ಗೌಡ ಬಿಗ್ ಬಾಸ್ ಅಗ್ರಿಮೆಂಟ್ ಅನ್ನು ಮುರಿದಿದ್ದಾರೆಂಬ ಕಾರಣಕ್ಕೆ ಕಲರ್ಸ್ ಕನ್ನಡ ವಾಹಿನಿ ಕೋರ್ಟ್ ಮೆಟ್ಟಿಲೇರಿತ್ತು. ಹೀಗಾಗಿ ಧಾರಾವಾಹಿ ಪ್ರಸಾರ ಆಗದಂತೆ ತಡೆಯನ್ನು ನೀಡಲಾಗಿತ್ತು. ಎರಡು ವಾರಗಳ ಬಳಿಕ ನ್ಯಾಯಾಲಯದಿಂದ ಅನುಮತಿ ಸಿಕ್ಕಿದ ಕೂಡಲೇ ಜುಲೈ 3 ರಂದು 'ಕರ್ಣ' ಧಾರಾವಾಹಿ ಪ್ರಸಾರ ಆಗಿತ್ತು. ಅಲ್ಲಿಂದ ವೀಕ್ಷಕರನ್ನು ಹಿಡಿದಿಟ್ಟು ಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇದೇ ಜನಪ್ರಿಯತೆಯನ್ನು ಕಾಪಾಡಿಕೊಂಡು ಹೋಗುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications











