BBK 12: ಗಾರೆ ಕೆಲಸದಿಂದ ಬಿಗ್ ಬಾಸ್‌ವರೆಗೆ ಕಾಮಿಡಿಯನ್ ಚಂದ್ರಪ್ರಭ ಜರ್ನಿ ಸುಲಭದ್ದೇನಲ್ಲ!
ಕೆಲವರಿಗೆ ಅದೃಷ್ಟ.. ಇನ್ನು ಕೆಲವರಿಗೆ ಹಾರ್ಡ್ ವರ್ಕ್.. ಇವೆರಡರಲ್ಲಿ ಯಾವುದಾದರೂ ಒಂದು ಕೈ ಹಿಡಿದ ಸಾಕು ಅವರು ನಸೀಬೇ ಬದಲಾಗುತ್ತೆ. ಅವರೊಳಗೆ ಇದ್ದ ಪ್ರತಿಭೆ ಅವರಿಗೆ ಗೊತ್ತಿಲ್ಲದ ಹಾಗೇ ಪ್ರಪಂಚಕ್ಕೆ ಗೊತ್ತಾಗುತ್ತೆ. ಅಂತಹದ್ದೊಂದು ಪ್ರತಿಭೆ ಇಂದು (ಸೆಪ್ಟೆಂಬರ್ 28) ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಎಂಟ್ರಿ ಕೊಟ್ಟಿದೆ. ಅವರೇ ಕಾಮಿಡಿಯನ್ ಚಂದ್ರಪ್ರಭ.
ಚಂದ್ರಪ್ರಭ ಕಳೆದ ಕೆಲವು ವರ್ಷಗಳಿಂದ ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಕಲರ್ಸ್ ಕನ್ನಡದ 'ಮಜಾಭಾರತ' ಹಾಗೂ 'ಗಿಚ್ಚಿ ಗಿಲಿ ಗಿಲಿ' ಯಂತಹ ಕಾಮಿಡಿ ರಿಯಾಲಿಟಿ ಶೋನಲ್ಲಿ ಮಿಂಚಿದ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾರೆ. ಇವರ ಕಾಮಿಡಿ ಸೆನ್ಸ್‌ಗೆ ಟೈಮಿಂಗ್ ಪ್ರತ್ಯೇಕವಾದ ಅಭಿಮಾನಿ ಬಳಗವೇ ಇದೆ. ಹಾಗೇ ಟೀಕೆ ಮಾಡುವವರೂ ಇದ್ದಾರೆ.

ಗಾರೆ ಕೆಲಸ, ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಚಂದ್ರಪ್ರಭ ಇಂದು ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ. ಕೆಲವರ ಕೆಂಗಣ್ಣಿಗೂ ಗುರಿಯೂ ಆಗಿದ್ದಾರೆ. ಆದರೆ, ಇವರು ಬೆಳೆದು ಬಂದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ ಅನ್ನೋದು ಸತ್ಯ. ಒಬ್ಬ ಗಾರೆ ಕೆಲಸಗಾರ ಮುಂದೊಂದು ದಿನ ಬಿಗ್ ಬಾಸ್‌ಗೆ ಎಂಟ್ರಿ ಕೊಡಬಹುದು ಅನ್ನೋ ಚಿಕ್ಕದೊಂದು ಸುಳಿವು ಇರಲಿಲ್ಲ.
ಇವರ ಪೂರ್ತಿ ಹೆಸರು ಚಂದ್ರಪ್ರಭ ಜಿ ಯುವಕ. ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ತಾಲೂಕಿನ ದುಡ್ಡೋಗೌಡನ ಕೊಪ್ಪಲು ಗ್ರಾಮದವರು. ಇವರಿಗೆ ಇಬ್ಬ ತಮ್ಮ ಕೂಡ ಇದ್ದಾನೆ. ಇವರದ್ದು 70 ರಿಂದ 80 ಮನೆಯಿರುವ ಗ್ರಾಮ. ಇವರ ತಂದೆ-ತಾಯಿಗೆ ಮಗನನ್ನು ಓದಿಸಬೇಕು ಎಂಬ ಆಸೆಯಿತ್ತು. 10ನೇ ತರಗತಿವರೆಗೂ ಕಷ್ಟಪಟ್ಟು ಓದಿದ್ದರು. ಆದರೆ, ಇಂಗ್ಲಿಷ್‌ನಲ್ಲಿ ಫೇಲ್ ಆದರು. ಹೀಗಾಗಿ ತಂದೆ-ತಾಯಿ ಜೊತೆ ಕೂಲಿ ಕೆಲಸಕ್ಕೆ ಹೋಗುವುದಕ್ಕೆ ಶುರು ಮಾಡಿದರು.
ತಂದೆ ಇಂಗ್ಲಿಷ್ ಪರೀಕ್ಷೆಯನ್ನು ಬರೆದು ಪಾಸ್ ಮಾಡಿಕೊ ಎಂದರು. ಎಷ್ಟೇ ಬಾರಿ ಕಟ್ಟಿದರೂ ಪಾಸ್ ಆಗಲಿಲ್ಲ. ಗಾರೆ ಕೆಲಸ ಮಾಡಿ ಸಾಕಿದ್ದ ಚಂದ್ರಪ್ರಭ ಶ್ರೀರಂಗಪಟ್ಟಣದ ರೆಸಾರ್ಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡರು. ಹೀಗೊಮ್ಮೆ ದರ್ಶನ್ ಸಿನಿಮ ನೋಡುವುದಕ್ಕೆ ಮೈಸೂರಿಗೆ ಹೋದಾಗ 'ರಂಗಾಯಣ'ದ ಪರಿಚಯ ಆಯ್ತು. ಅಲ್ಲಿ ಆಡಿಷನ್ ಕೊಟ್ಟು ನಟನೆ ಕಡೆಗೆ ಆಸಕ್ತಿ ಬೆಳೆಸಿಕೊಂಡರು.
ಹೀಗೆ ರಂಗಾಯಣದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡರು. ವರ್ಷಕ್ಕೊಮ್ಮೆ ನಾಟಕೋತ್ಸವ ಮಾಡಿಸುತ್ತಿದ್ದರು. ಇದರಲ್ಲಿ ಭಾಗವಹಿಸಿ ಅನುಭವ ಪಡೆದುಕೊಂಡರು. ಹಾಗೇ ಲೋಕಲ್ ಟಿವಿ ಚಾನೆಲ್ ಸೇರಿಕೊಂಡರು. 'ಹಳ್ಳಿ ಚಂದ ಕೇಳೋ ಕಂದ' ಎನ್ನುವ ಕಾರ್ಯಕ್ರಮವನ್ನು ನೆಡೆಸಿಕೊಡುತ್ತಿದ್ದರು. ಸಂದರ್ಭವೊಂದರಲ್ಲಿ ರವಿ ಶಂಕರ್ ಎನ್ನುವವರು ಮಜಾಭಾರತ ನಡೆಯುತ್ತಿದೆ ಆಡಿಷನ್ ಕೊಡು ಎಂದಿದ್ದರು. ಅಲ್ಲಿಂದ ಇವರ ಜರ್ನಿ ಶುರು ಬೇರೆಯದ್ದೇ ಹಾದಿ ಹಿಡಿದಿತ್ತು.
ಇಲ್ಲಿಂದ 'ಮಜಾ ಭಾರತ', ಕಾಮಿಡಿ ಟಾಕೀಸ್ ಹಾಗೂ 'ಗಿಚ್ಚಿ ಗಿಲಿ ಗಿಲಿ' ಎರಡು ಕಾಮಿಡಿ ಶೋನಲ್ಲಿ ಭಾಗವಹಿಸಿದ್ದರು. ಇಲ್ಲಿಂದ ಚಂದ್ರಪ್ರಭ ಕಿರುತೆರೆಯಲ್ಲಿ ಮಿಂಚುವುದಕ್ಕೆ ಶುರು ಮಾಡಿದ್ದರು. ಮತ್ತೆ ಹಿಂತಿರುಗಿ ನೋಡುವ ಪರಿಸ್ಥಿತಿಯ ಬರಲಿಲ್ಲ. ತನ್ನ ಕಾಮಿಡಿ ಸೆನ್ಸ್ ಮೂಲಕ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ ಚಂದ್ರಪ್ರಭ, ರಿಯಾಲಿಟಿ ಶೋ ಜೊತೆಗೆ 35 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲಿಂದ ಶುರುವಾದ ಜರ್ನಿ ಬಿಗ್ ಬಾಸ್‌ವರೆಗೂ ಬಂದು ನಿಂತಿದೆ. ಇನ್ನು ಇವರ ಮ್ಯಾರೇಜ್ ಸ್ಟೋರಿ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ.
ಮಲೆ ಮಹಾದೇಶ್ವರ ದೇವಸ್ಥಾನಕ್ಕೆ ಹೋಗಿದ್ದಾಗ ಅವರ ಪತ್ನಿಯ ದರ್ಶನ ಆಗಿತ್ತು. ಅದಕ್ಕೂ ಮುಂಚೆ ಫೇಸ್‌ಬುಕ್‌ನಲ್ಲಿ ಪರಿಚಯ ಆಗಿತ್ತು. ಆ ಬಳಿಕ ವಾಟ್ಸಾಪ್ ಮೆಸೇಜ್, ಬಳಿಕ ಹಾರ್ಟ್ ಸಿಂಬಲ್ ಬಂತು ಎಂದು ಫಿಲ್ಮಿಬೀಟ್ ಕನ್ನಡದಕ್ಕೆ ನೀಡಿದ್ದ ಸಂದರ್ಶನದಲ್ಲಿ ಚಂದ್ರಪ್ರಭ ಹೇಳಿಕೊಂಡಿದ್ದರು. ಇಬ್ಬರೂ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟು ಎರಡೂವರೆ ವರ್ಷಗಳಾಗಿವೆ.
"ಮದುವೆ ಆಗುವುದಕ್ಕೆ ಹೊರಟಾಗ ಅವರ ಅಪ್ಪ ಹುಡುಗನಿಗೆ ನನ್ನ ವಯಸ್ಸಾಗಿದೆ ಅಂತ ಖ್ಯಾತೆ ತೆಗೆದರು. ಇನ್ನೇನು ಮದುವೆ ಟೈಮ್‌ನಲ್ಲಿ ಹೀಗೆ ಮಾಡಿದ್ರಲ್ಲ ಅಂದ್ಕೊಂಡು ಒಂದು ಪ್ಲಾನ್ ಮಾಡಿದೆ. ಅದಕ್ಕೆ ಡ್ಯೂಪ್ಲಿಕೇಟ್ ಆಧಾರ್ ಕಾರ್ಡ್ ಮಾಡಿಸಿಕೊಟ್ಟೆ. 25 ವರ್ಷ ಅಂತ ಡ್ಯೂಪ್ಲಿಕೇಟ್ ಕಾರ್ಡ್ ಮಾಡಿಸಿ ಕೊಟ್ಟೆ. ತಕ್ಷಣವೇ ಮದುವೆ ಆಗಿಬಿಟ್ಟೆ." ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications











