'ಲಕ್ಷ್ಮಿ ನಿವಾಸ' ಧಾರಾವಾಹಿ ವಿರುದ್ಧ ನಟಿ ಅಂಜಲಿ ಅಸಮಾಧಾನ; ಅಂತಹದ್ದೇನಾಯ್ತು?
ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರು ಜನಪ್ರಿಯ ಧಾರಾವಾಹಿ 'ಲಕ್ಷ್ಮಿ ನಿವಾಸ'. ವೀಕ್ಷಕರು ಈ ಸೀರಿಯಲ್ ಅನ್ನು ಮೆಚ್ಚುಕೊಂಡಿದ್ದಾರೆ. ನಾಲ್ಕೈದು ಟ್ರ್ಯಾಕ್‌ಗಳಲ್ಲಿ ಸಾಗುವ ಈ ಧಾರಾವಾಹಿ ಜನರನ್ನು ಸೆಳೆಯುತ್ತಿರೋದೇನೋ ನಿಜ. ಆದರೆ, ಇದು ಆಗಾಗ ವಿವಾದಕ್ಕೆ ಸಿಕ್ಕಿಕೊಳ್ಳುತ್ತಿದೆ. ಇತ್ತೀಚೆಗೆ ನಿರ್ಮಾಪಕರು ಬದಲಾಗಿದ್ದರು. ಹಣಕಾಸಿನ ಸಮಸ್ಯೆ ಮಾಡಿಕೊಂಡು ವಿವಾದಕ್ಕೆ ಸಿಕ್ಕಿಕೊಂಡಿದ್ದರು.
'ಲಕ್ಷ್ಮಿ ನಿವಾಸ' ಧಾರಾವಾಹಿಯನ್ನು ನಟ ಸತ್ಯ ಹಾಗೂ ಅವರ ಪತ್ನಿ ನಿರ್ಮಲಾ ನಿರ್ಮಾಣ ಮಾಡುತ್ತಿದ್ದರು. ಆದರೆ, ಧಾರಾವಾಹಿಯ ಬಜೆಟ್ ಅನ್ನು ಮ್ಯಾನೇಜ್ ಮಾಡುವುದಕ್ಕೆ ಆಗದೇ ಸಂಕಷ್ಟದಲ್ಲಿ ಸಿಲುಕಿದ್ದರು. ಹೀಗಾಗಿ ಕೆಲವು ಕಲಾವಿದರಿಗೆ, ತಂತ್ರಜ್ಞರಿಗೆ ಹಣವನ್ನು ನೀಡಿರಲಿಲ್ಲ. ಹೀಗಾಗಿ ಕೆಲ ಕಲಾವಿದರು ಧಾರಾವಾಹಿಯನ್ನೇ ಬಿಟ್ಟು ಹೋಗಿದ್ದರು. ಬಳಿಕ ಜೀ ಕನ್ನಡ ನಿರ್ಮಾಪಕರನ್ನೇ ಬದಲಾವಣೆ ಮಾಡಿ, ಹೊಸಬರನ್ನು ಕರೆದುಕೊಂಡು ಬಂದಿದ್ದರು.

ಈಗ ಮತ್ತೊಬ್ಬ ನಟಿ ಈ ಧಾರಾವಾಹಿಯ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಸೀರಿಯಲ್ ಆರಂಭ ಆಗುವುದಕ್ಕೂ ಮುನ್ನ ಅಂಜಲಿಯವರಿಗೆ ಹೇಳಿದ್ದ ಕಥೆನೇ ಬೇರೆ. ಆದರೆ, ನಂತರದ ದಿನಗಳಲ್ಲಿ ಅದು ಬೇರೆಯದೇ ದಾರಿ ಹಿಡಿದಿದೆ ಎಂದು ಹೇಳಿ ಬೇಸರ ಹೊರ ಹಾಕಿದ್ದಾರೆ. ಹಿರಿಯ ನಟಿ ಕೊಟ್ಟ ಈ ಕೇಳಿಕೆಯೀಗ ಧಾರಾವಾಹಿ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಅಂಜಲಿ ಸುಧಾಕರ್ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದಾರೆ. ಈಗಾಗಲೇ 'ರಾಮಾಚಾರಿ', 'ಲಕ್ಷ್ಮಿ ನಿವಾಸ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಇತ್ತೀಚಗೆ ನ್ಯೂಸ್ ಫಸ್ಟ್‌ಗೆ ಸಂದರ್ಶನ ನೀಡಿದ್ದು, ಇದರಲ್ಲಿ 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಅವರ ಪಾತ್ರವನ್ನು ಬಿಂಬಿಸುತ್ತಿರುವುದಕ್ಕೆ ಅಸಮಾಧಾನವನ್ನು ಹೊರ ಹಾಕಿದ್ದಾರೆ.
"ನನಗೆ ಲಕ್ಷ್ಮಿ ನಿವಾಸ ಧಾರಾವಾಹಿಯ ಬೇರೆ ಕಥೆ ಹೇಳಿದ್ದರು. ಮೊದಲ ಕಥೆಯನ್ನು ಈ ಮಟ್ಟಕ್ಕೆ ಹೇಳಿರಲಿಲ್ಲ. ನಾನು ಯಾವಾಗಲೂ ಹೇಳುತ್ತೇನೆ. ಕಲಾವಿದರನ್ನು ಕರೆದುಕೊಳ್ಳುವಾಗ ಅವರ ಪಾತ್ರವನ್ನು ಹೇಳಿಬಿಡಿ. ಅವರಿಗೆ ಇಷ್ಟ ಆದರೆ ಒಪ್ಪಿಕೊಳ್ಳುತ್ತಾರೆ. ಇಲ್ಲದೇ ಹೋದರೆ ಒಪ್ಪಿಕೊಳ್ಳಲ್ಲ. ನೀವು ಕಥೆ ಹೇಳಿದಾಗ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಇಲ್ಲದೇ ಹೋದರೆ ಒಪ್ಪಿಕೊಳ್ಳಲ್ಲ. ನನಗೆ ನಿರ್ಮಲಾ ಮೇಡಂ ಕಥೆಯನ್ನು ಬೇರೆ ರೀತಿ ಹೇಳಿದ್ದರು. ದಿನ ಹೋಗುತ್ತಾ, ಈ ಪ್ರಡ್ಯೂಸರ್, ಪೇಮೆಂಟ್ ಸಮಸ್ಯೆ, ಜಗಳ ಮಧ್ಯೆ ಆರ್ಟಿಸ್ಟ್ ಬಂದಿಲ್ಲ ಅಂದರೆ, ಈ ಕಥೆಯನ್ನು ಎಳೆದುಕೊಂಡು ಹೋಗೋದು ಮಾಡುತ್ತಿದ್ದರು. ಏನಾಗಿದೆ ಅಂದರೆ,ಕಲಾವಿದರು ಸಿಕ್ಕಿಲ್ಲ ಅಂದರೆ, ಯಾರು ಇರುತ್ತಾರೋ ಅವರ ಮೇಲೆ ಒಂದು ಕಥೆ ಬರೆದು ಬಿಡುತ್ತಾರೆ. ಅದು ಇನ್ನೊಂದು ಪಾತ್ರಕ್ಕೆ ಏಟು ಬೀಳುತ್ತೆ. ಆಗ ಅವಮಾನ ಆಗುತ್ತೆ. ಆ ಪಾತ್ರವನ್ನು ಮಾಡುವುದಕ್ಕೆ ಕಷ್ಟ ಆಗುತ್ತೆ ಅನ್ನೋದನ್ನು ಯೋಚನೆ ಕೂಡ ಮಾಡುವುದಿಲ್ಲ" ಎಂದು ನಟಿ ಅಂಜಲಿ ಬೇಸರ ಹೊರ ಹಾಕಿದ್ದಾರೆ.
ಈ ಧಾರಾವಾಹಿಯಲ್ಲಿ ನೆಗೆಟಿವ್ ಆಗಿ ತೋರಿಸುತ್ತಿರುವುದರಿಂದ ಅಂಜಲಿಗೆ ಸಮಸ್ಯೆಗಳಾಗಿವೆಯಂತೆ. ಹೀಗಾಗಿ ಸಾಕಷ್ಟು ಬಾರಿ ವಾದ-ವಿವಾದಗಳು ಕೂಡ ನಡೆದಿವೆಯಂತೆ. "ಪ್ರತಿ ಸಾರಿನೂ ನಮ್ಮ ಮತ್ತು ಅವರ ನಡುವೆ ವಾದ-ವಿವಾದಗಳು ನಡೆಯುತ್ತಲೇ ಇರುತ್ತೆ. ನಾನು ಪ್ರತಿ ಬಾರಿ ನಿರ್ದೇಶಕರಿಗೆ ಹೋಗಿ ಕಾರಣ ಏನು ಅಂತ ಕೇಳುತ್ತೇನೆ. ರೇಣುಕಾ ಮಗನನ್ನು ತುಂಬಾನೇ ಪ್ರೀತಿ ಮಾಡುತ್ತಿದ್ದಳು. ಅವನಿಗೆ ದೊಡ್ಡವಳನ್ನು ಹೋಗಿ ಮದುವೆ ಆದ ಅನ್ನೋ ಕೋಪ ಇತ್ತಷ್ಟೇ. ಈಗೇನು ಕಾರಣವಿದೆ? ನೀವು ಸುಮ್ಮನೆ ಒಂದು ಪಾತ್ರ ಬರಲಿಲ್ಲ ಅನ್ನೋ ಕಾರಣಕ್ಕೆ ಇನ್ನೊಂದು ಪಾತ್ರವನ್ನು ಕೊಲ್ಲುತ್ತೀರಲ್ಲ. ಕಲಾವಿದರಿಗೆ ಹಾಗೆ ಮಾಡಬೇಡಿ" ಎಂದು ನಟಿ ಅಂಜಲಿ ಹೇಳಿದ್ದಾರೆ.
ಇನ್ನು 'ಲಕ್ಷ್ಮಿ ನಿವಾಸ' ಧಾರಾವಾಹಿಯಲ್ಲಿ ಅಂಜಲಿ ತಮ್ಮ ಪಾತ್ರದ ಬಗ್ಗೆ ಜೀ ಕನ್ನಡದವರ ಜೊತೆನೂ ಚರ್ಚೆ ಮಾಡಿದ್ದಾರೆ. ವಾಹಿನಿ ಕೂಡ ಎಲ್ಲವನ್ನೂ ಸರಿ ಮಾಡಿಕೊಡುತ್ತೇವೆ ಎಂದು ಹೇಳಿದ್ದಾಗಿ ನಟಿ ಅಂಜಲಿ ಪ್ರತ್ರಿಕ್ರಿಯಿಸಿದ್ದಾರೆ.


Click it and Unblock the Notifications











