Lal Salaam Trailer: ಮೊಯ್ದೀನ್ ಭಾಯಿ ಅವತಾರ ಎತ್ತಿದ್ಮೇಲೆ ಏಕೆ ಭಯ? ಮಗಳಿಗೆ ರಜನಿನೇ ಪವರ್
'ಜೈಲರ್' ಬಳಿಕ ರಜನಿಕಾಂತ್ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟ ಬಳಿಕ ಮತ್ತೆ ಸೂಪರ್‌ಸ್ಟಾರ್ ಅನ್ನು ಕಣ್ತುಂಬಿಕೊಳ್ಳುವ ಅವಕಾಶ ಅವರ ಅಭಿಮಾನಿಗಳಿಗೆ ಸಿಕ್ಕಿದೆ. ರಜನಿ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ 'ಲಾಲ್ ಸಲಾಂ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.
ಇದೇ ಜೋಷ್‌ನಲ್ಲಿ ಐಶ್ವರ್ಯಾ ರಜನಿಕಾಂತ್ ತಮ್ಮ ಸಿನಿಮಾದ ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ. ಇದೊಂದು ಸ್ಪೋರ್ಟ್ ಡ್ರಾಮ ಎಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿತ್ತು. ಆದರೆ, ಟ್ರೈಲರ್ ಅನ್ನು ಮಾತ್ರ ರಿಲೀಸ್ ಮಾಡಿರಲಿಲ್ಲ. ಇನ್ನೇ ಫೆಬ್ರವರಿ 9ಕ್ಕೆ ಸಿನಿಮಾ ರಿಲೀಸ್ ಮಾಡೋದು ಅಂತ ನಿರ್ಧರಿಸುತ್ತಿದ್ದಂತೆ 'ಲಾಲ್ ಸಲಾಂ' ಟ್ರೈಲರ್ ಹೊರಬಿದ್ದಿದೆ.

'ಲಾಲ್ ಸಲಾಂ' ಸಿನಿಮಾದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊಯ್ದೀನ್ ಭಾಯಿ ಅವತಾರದಲ್ಲಿ ಸೂಪರ್‌ಸ್ಟಾರ್ ಅನ್ನು ನೋಡಬಹುದಾಗಿದೆ. ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿದ ಈ ಸಿನಿಮಾದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಎಲ್ಲರ ಕಣ್ಣು ರಜನಿಕಾಂತ್ ಮೇಲೆ ಹೋದರೂ, ಸಿನಿಮಾದ ಕಥೆ ಗಟ್ಟಿಯಾಗಿರಬಹುದು ಅನ್ನುವ ಅಂದಾಜು ಮೂಡುತ್ತೆ.
ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸಿರುವ 'ಲಾಲ್ ಸಲಾಂ' ಸಿನಿಮಾ ಎರಡು ಪಂಗಡಗಳ ನಡುವಿನ ಕಿತ್ತಾಟವನ್ನು ಇಟ್ಟುಕೊಂಡು ಕಥೆ ಹೆಣೆದಿರಬಹುದು ಅಂತ ಮೇಲ್ನೋಟಕ್ಕೆ ಭಾಸವಾಗುತ್ತಿದೆ. ಈ ಪಂಗಡಗಳ ನಡುವಿನ ಭಿನ್ನಾಭಿಪ್ರಾಯವನ್ನು ತಣಿಸಲು ಸೂಪರ್‌ಸ್ಟಾರ್ ರಜನಿಕಾಂತ್ ಮಧ್ಯೆ ಪ್ರವೇಶ ಮಾಡಬಹುದೆಂದು ಊಹೆ ಮಾಡಲಾಗುತ್ತಿದೆ.

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ವಿಷ್ಣು ವಿಶಾಲ್ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ. ಕ್ರಿಕೆಟ್ ಆತನ ಬದುಕು. ಒಂದೊಳ್ಳೆ ಅವಕಾಶಕ್ಕಾಗಿ ಪರದಾಡುವ ಯುವಕನಾಗಿ ಕಂಡರೆ, ಇನ್ನೊಂದು ಕಡೆ ಹೊಡೆದಾಟ, ಕಿತ್ತಾಟಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಈ ಮಧ್ಯೆ ಸೂಪರ್‌ಸ್ಟಾರ್ ರಜನಿಕಾಂತ್ ಎಂಟ್ರಿ ಸಿನಿಮಾದ ಮತ್ತೊಂದು ಹೈಲೈಟ್.
ಇಲ್ಲಿ ಮೊಯ್ದೀನ್ ಭಾಯಿ ಅವತಾರವೆತ್ತಿರೋ ರಜನಿಕಾಂತ್ ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿ ಕಾಣಿಸುತ್ತಾರೆ. ಕೆಲವು ಪ್ರಮುಖ ಸನ್ನಿವೇಶಗಳಲ್ಲಿ ರಜನಿಕಾಂತ್ ಕಾಣಿಸಿಕೊಂಡಿರುವ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ಸಿಕ್ಕಿದೆ. ಹಾಗೇ ಕೆಲವು ಆಕ್ಷನ್ ಸನ್ನಿವೇಶಗಳಲ್ಲೂ ರಜನಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ "ನಾನು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಈ ವ್ಯವಸ್ಥೆಯಲ್ಲಿರುವ ಕೆಲವು ಕಪ್ಪು ಕುರಿಗಳನ್ನು ನಾನು ನಂಬುವುದಿಲ್ಲ" ಎನ್ನುವ ಡೈಲಾಗ್ ಹೈಲೈಟ್ ಆಗಿದೆ.
'ಲಾಲ್ ಸಲಾಂ' ಟ್ರೈಲರ್‌ನಲ್ಲಿ ರಜನಿಕಾಂತ್ ಹೈಲೈಟ್. ತಮ್ಮ ಸ್ಟೈಲಿಷ್ ಲುಕ್‌ನಿಂದ ಗಮನ ಸೆಳೆಯುತ್ತಾರೆ. ಆದರೆ, ಅತಿಥಿ ಪಾತ್ರ ಆಗಿದ್ದರಿಂದ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸುವ ಮ್ಯಾನರಿಸಂ ಕಾಣಿಸುತ್ತಿಲ್ಲ. ಇನ್ನು ಸಿನಿಮಾದಲ್ಲಿ ಐಶ್ವರ್ಯಾ ಏನಾದರೂ ಚಮತ್ಕಾರ ಮಾಡಿದ್ದಾರಾ? ಅನ್ನೋದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಈ ಸಿನಿಮಾಗೆ ಎಆರ್ ರೆಹಮಾನ್ ಸಂಗೀತ ನೀಡಿರೋದು ವಿಶೇಷ. ಇನ್ನು ರಜನಿ ಜೊತೆಗೆ ವಿಷ್ಣು ವಿಶಾಲ್, ವಿಕ್ರಾಂತ್, ಸೆಂಥಿಲ್, ಜೀವಿತಾ, ರಂಬಿ ರಾಮಯ್ಯ, ವಿವೇಕ್ ಪ್ರಸನ್ನ, ತಂಗ ದೊರೈ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ತಮಿಳಿನ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾಗೆ ಹಣ ಹೂಡಿದೆ.


Click it and Unblock the Notifications











