'ಮೈನಾ' ಜೋಡಿಯ ಫೋಟೊಶೂಟ್ ಹೇಗಿದೆ ನೋಡಿ? ಸಿಂಪಲ್ ಅಂಡ್ ನ್ಯಾಚುರಲ್
ಕನ್ನಡಿಗರ ನೆಚ್ಚಿನ ವಾಹಿನಿಯಾಗಿ ಉದಯ ಚಾನೆಲ್ ಹಲವಾರು ಉತ್ತಮ ಧಾರಾವಾಹಿಗಳನ್ನು ಪ್ರಸಾರ ಮಾಡುತ್ತಾ ಬಂದಿದೆ. ಅಂತಹ ಧಾರಾವಾಹಿಗಳಲ್ಲಿ 'ಮೈನಾ' ಕೂಡ ಒಂದು. ಒಂದು ರೀತಿಯಲ್ಲಿ ತ್ರಿಕೋನ ಪ್ರೇಮ ಕತೆಗಳ ಸಾಲಿಗೆ ಸೇರುವ ಈ ಧಾರಾವಾಹಿ ಈಗಾಗಲೇ ತನ್ನ ಕಥಾಹಂದರದ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಬಡ ಕುಟುಂಬದಿಂದ ಬಂದ ಸೀದ ಸಾದಾ ಹುಡುಗಿ ಮೈನಾ ಎಂಬ ಹುಡುಗಿ ಈ ಕಥೆಯ ನಾಯಕಿ. ಹಳ್ಳಿಯಿಂದ ಪಟ್ಟಣಕ್ಕೆ ಬಂದು ಬೇರೆ ಬೇರೆ ತರದ ಸಮಸ್ಯೆಗಳಲ್ಲಿ ಸಿಲುಕಿಕೊಳ್ಳುವ ಮೈನಾ ಅಷ್ಟೇ ನಾಜೂಕಾಗಿ ಸಮಸ್ಯೆಗಳನ್ನು ಬಗೆಹರಿಸುವ ಪರಿಯನ್ನೂ ನೋಡುಗರಿಗೆ ತಿಳಿಸಿಕೊಡುತ್ತಿದ್ದಾಳೆ.

ಅಲ್ಲದೆ ಗಾರ್ಮೆಂಟ್ಸ್ನಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಮೈನಾಳಿಗೆ ಈ ಹಿಂದೆಯೇ ಅವಳನ್ನು ಮೆಚ್ಚಿದ್ದ ನಾಯಕ ಪುಷ್ಪಕ್ ಬಾಸ್ ಆಗಿ ಸಿಗುತ್ತಾರೆ. ಇತ್ತ ಅದೇ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡುವ ಧ್ರುವ ಎಂಬವನು ಮೈನಾಳಿಗೆ ಪ್ರೇಮ ಪತ್ರಗಳನ್ನು ಬರೆಯುತ್ತಾ ತನ್ನ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾನೆ. ಇವಿಷ್ಟು ಈ ಧಾರಾವಾಹಿಯ ಹೈಲೈಟ್ಸ್.
ಅಷ್ಟಕ್ಕೂ ಮೈನಾ ಬಗ್ಗೆ ವಿವರಣೆಯನ್ನು ನೀಡಲು ಕಾರಣ ಈ ಬರಹದ ನಾಯಕ ನಾಯಕಿಯೂ ಅವರೇ ಆಗಿರುವುದು. ಮೈನಾ ಪಾತ್ರದಲ್ಲಿ ನಟಿಸುತ್ತಿರುವ ವಿಜಯಲಕ್ಷ್ಮಿ ಮತ್ತು ಲವ್ ಬಾಯ್ ಕ್ಯಾರೆಕ್ಟರ್ ಧ್ರುವ ಪಾತ್ರದಲ್ಲಿ ನಟಿಸುತ್ತಿರುವ ಸಿದ್ದಾರ್ಥ್ ಸ್ವಾಮಿ ಜೋಡಿಯ ಫೋಟೋ ಕಂಡು ಧಾರಾವಾಹಿ ವೀಕ್ಷಕರು ಫಿದಾ ಆಗಿದ್ದಾರೆ.
ಧಾರಾವಾಹಿಯಲ್ಲಿ ಉತ್ತಮವಾದ ನಟನೆಯ ಮೂಲಕ ಎಲ್ಲರನ್ನು ರಂಜಿಸುತ್ತಿರುವ ಈ ಜೋಡಿ ನಿಜ ಜೀವನದಲ್ಲೂ ಉತ್ತಮವಾದ ಬಾಂಧವ್ಯವನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಆಗಾಗ ಶೇರ್ ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.
ಇತ್ತೀಚೆಗಷ್ಟೇ ಈ ಜೋಡಿಯು ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಅದು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಫೋಟೋಗಳನ್ನು ನೋಡಿದ ಅಭಿಮಾನಿಗಳು 'ಮುದ್ದಾದ ಜೋಡಿ' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಈ ಜೋಡಿ ಧಾರಾವಾಹಿಯಲ್ಲಿಯೂ ಒಂದಾಗಿದ್ದರೆ ಚೆನ್ನಾಗಿತ್ತು ಎಂದು ಹಲವರು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಮೂರು ಕಡೆಯ ಪ್ರೇಮ ಕಥೆಯೊಂದಿಗೆ ಸಾಗುತ್ತಿರುವ ಸೀರಿಯಲ್ ಪಯಣ ಎಲ್ಲಿಗೆ ತಲುಪುವುದೋ ಕಾದು ನೋಡಬೇಕಾಗಿದೆ.


Click it and Unblock the Notifications











