2 ವರ್ಷಗಳ ಹಿಂದೆ 'ಕರ್ಣ' ಸೀರಿಯಲ್‌ಗೆ ಬಂದಿದ್ದ ಆಫರ್ ತಿರಸ್ಕರಿಸಿದ್ದೇಕೆ? ನಮ್ರತಾ ಗೌಡ ಈಗ ಒಪ್ಪಿದ್ದೇಕೆ?
ಕನ್ನಡ ನಟಿ ನಮ್ರತಾ ಗೌಡ ಬಹಳ ದಿನಗಳ ಬಳಿಕ ಹೊಚ್ಚ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಿಗ್ ಬಾಸ್ ಅಂತಹ ರಿಯಾಲಿಟಿ ಶೋನಲ್ಲಿ ಮಿಂಚಿದ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಹೊಸ ಧಾರಾವಾಹಿಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಜೀ ಕನ್ನಡದ ಹೊಸ ಸೀರಿಯಲ್ 'ಕರ್ಣ'ದಲ್ಲಿ ನಿತ್ಯಾ ಎನ್ನುವ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ, ಎರಡು ವರ್ಷಗಳ ಹಿಂದೇನೆ ನಮ್ರತಾಗೆ ಈ ಪಾತ್ರಕ್ಕೆ ಆಫರ್ ಬಂದಿತ್ತು.
'ಕರ್ಣ' ಧಾರಾವಾಹಿ ನಿರ್ಮಾಣ ಮಾಡುವುದಕ್ಕೆ ಎರಡು ವರ್ಷಗಳಿಂದ ನಡೆಯುತ್ತಲೇ ಇತ್ತು. ಆದರೆ, ಕಾರಣಾಂತರಗಳಿಂದ ಸೆಟ್ಟೇರಲಿಲ್ಲ. ಈಗ ಜೀ ಕನ್ನಡದಲ್ಲಿ ಹಲವು ಮಾರ್ಪಾಡುಗಳೊಂದಿಗೆ ಈ ಧಾರಾವಾಹಿ ವೀಕ್ಷಕರ ಮುಂದೆ ಬರುತ್ತಿದೆ. ಪ್ರಮುಖ ಪಾತ್ರದಲ್ಲಿ ಕಿರಣ್ ರಾಜ್, ಭವ್ಯಾ ಗೌಡ ಹಾಗೂ ನಮ್ರತಾ ಗೌಡ ನಟಿಸುತ್ತಿದ್ದಾರೆ. ನಾಗಿಣಿ 2 ಸೀರಿಯಲ್ ಬಳಿಕ ಲಾಂಗ್ ಗ್ಯಾಪ್ ಕೊಟ್ಟು ಮತ್ತೊಂದು ಸೀರಿಯಲ್‌ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಧಾರಾವಾಹಿ ಬಗ್ಗೆ ನಮ್ರತಾ ಫಿಲ್ಮಿಬೀಟ್ ಕನ್ನಡ ಜೊತೆ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ.

'ನಾಗಿಣಿ 2' ಬಳಿಕ 'ಕರ್ಣ'
"ನಾನು ಕೊನೆಯದಾಗಿ ನಟಿಸಿದ್ದೇ ನಾಗಿಣಿ 2 ಜೀ ಕನ್ನಡದಲ್ಲಿನೇ. ನಾಗಿಣಿ 2 ಆದ್ಮೇಲೆ ನಾನೇ ಬ್ರೇಕ್ ತೆಗೆದುಕೊಂಡಿದ್ದೆ. ಗ್ಯಾಪ್‌ನಲ್ಲಿ ನಾನು ಬೇರೆ ಹೋಗಿದ್ದೆ ಮತ್ತೆ ಬಂದೆ. ಅದಾದ್ಮೇಲೆ ನಾನು ತುಂಬಾ ಕಥೆಗಳನ್ನು ಕೇಳಿದೆ. ತುಂಬಾ ಪಾತ್ರಗಳನ್ನು ಕೇಳಿದೆ ನನಗೆ ಯಾವುದೂ ಹೊಂದಾಣಿಕೆ ಆಗಲಿಲ್ಲ. ನನ್ನನ್ನು ಆ ಪಾತ್ರಗಳಲ್ಲಿ ನೋಡಿಕೊಳ್ಳುವುದಕ್ಕೆ ಆಗಲಿಲ್ಲ. ಹಾಗಾಗಿ ನಾನು ತುಂಬಾ ಪ್ರಾಜೆಕ್ಟ್‌ಗಳನ್ನು ಕೈ ಬಿಟ್ಟೆ. ಅದಾದ್ಮೇಲೆ ನನಗೆ ಸಿಕ್ಕಿದ್ದೇ ಕರ್ಣ." ಎಂದು ನಮ್ರತಾ ಹೇಳಿದ್ದಾರೆ.
2 ವರ್ಷಗಳ ಹಿಂದೆನೇ ಅಪ್ರೋಚ್ ಮಾಡಿದ್ರು
"ಕರ್ಣ ಧಾರಾವಾಹಿಯನ್ನು ಸುಮಾರು ಎರಡು ವರ್ಷಗಳ ಹಿಂದೆನೇ ನಿತ್ಯಾ ಪಾತ್ರಕ್ಕೆ ಅಪ್ರೋಚ್ ಮಾಡಿದ್ದರು. ಆಗ ಕಾರಣಾಂತರಗಳಿಂದ ಕರ್ಣ ಆಗಲಿಲ್ಲ. ಈಗ ಮತ್ತೊಮ್ಮೆ ಎರಡನೇ ಬಾರಿ ಅಪ್ರೋಚ್ ಮಾಡಿದಾಗ ಒಪ್ಪಿಕೊಂಡೆ. ಕೂತು ಕಥೆಯನ್ನು ಕೇಳಿದೆ. ಈ ಪಾತ್ರ ನನಗೆ ತುಂಬಾನೇ ಇಷ್ಟ ಆಯ್ತು." ಎನ್ನುತ್ತಾರೆ.

ಈ ಹಿಂದೆ ಇಂತಹ ಪಾತ್ರ ಮಾಡಿಲ್ಲ
"ನಾನು ಮಾಡುತ್ತಿರುವ ಪಾತ್ರ ಹಿಂದಿನ ಮಾಡಿದ ರೋಲ್ ಎರಡೂ ಒಂದೇ ತರ ಆಗಿರಬಾರದು. ಯಾಕಂದ್ರೆ ಆಕ್ಟಿಂಗ್ ಎಕ್ಸ್‌ಪೀರಿಯನ್ಸ್ ಬಿದ್ದು ಹೋಗಿಬಿಡುತ್ತೆ ಅನ್ನೋದು ನಂಬಿಕೆ. ಈ ಪಾತ್ರವನ್ನು ಜನರು ಇಷ್ಟ ಪಡುತ್ತಾರೋ ಇಲ್ಲವೋ ಎನ್ನುವ ಒಂದು ಕನ್ಫ್ಯೂಷನ್ ಇರುತ್ತೆ ಗೊತ್ತಾ? ಅಂದರೆ, ಈ ಪಾತ್ರದಲ್ಲಿ ಏನೋ ಒಂದು ನಡೀತಾ ಇದೆ ಅಂದಾಗ ಅದನ್ನು ಜನರು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಇವೆರಡು ಇದ್ದರೆ ಬೇರೆ ಏನೂ ಬೇಕಾಗಲ್ಲ ಅಂತ ಅನಿಸುತ್ತೆ." ಎಂದಿದ್ದಾರೆ.
ಅಪ್ಪು ನೆನಪಿಸುತ್ತೆ 'ಕರ್ಣ'ನ ಪಾತ್ರ
"ಕರ್ಣ ಪಾತ್ರ ತುಂಬಾನೇ ಒಳ್ಳೆಯ ಪಾತ್ರ. ನನಗೆ ಯಾವಾಗಲೂ ರಾಜ್‌ಕುಮಾರ ಸಿನಿಮಾ ನೋಡಿದಾಗ ಪುನೀತ್ ರಾಜ್‌ಕುಮಾರ್ ಕ್ಯಾರೆಕ್ಟರ್ ತುಂಬಾನೇ ಕನೆಕ್ಟ್ ಆಗುತ್ತೆ. ಮಹಿಳೆಯಾಗಿ ತುಂಬಾ ಬೇಗನೇ ಕನೆಕ್ಟ್ ಆಗುತ್ತೆ. ಅದೇ ರೀತಿಯ ಒಂದು ಪಾತ್ರ ಕರ್ಣನ ಪಾತ್ರ. ಅವನು ಫ್ಯಾಮಿಲಿ ಮ್ಯಾನ್ ಆಗಿರುತ್ತಾನೆ. ಅವನು ಆಚೆ ಬಂದರೂ ತುಂಬಾನೇ ಸಹಾಯ ಮಾಡುವುದು ಮಾಡುತ್ತಿರುತ್ತಾನೆ. ಆ ಪಾತ್ರ ತುಂಬಾನೇ ಇಷ್ಟ ಆಗುತ್ತೆ. ವೀಕ್ಷಕರೊಂದಿಗೆ ಅವರು ತುಂಬಾ ಬೇಗನೇ ಕನೆಕ್ಟ್ ಆಗುತ್ತಾರೆ." ಎಂದು ನಮ್ರತಾ ಹೇಳಿದ್ದಾರೆ.
ರಿಯಲ್ ಕ್ಯಾರೆಕ್ಟರ್‌ಗೆ ಹೋಲುತ್ತಾಳೆ ನಿತ್ಯಾ
"ನಾನು ಮಾಡುತ್ತಿರುವ ನಿತ್ಯಾ ಪಾತ್ರ ಸಿಕ್ಕಾಪಟ್ಟೆ ಪ್ರಾಕ್ಟಿಕಲ್ ಲೇಡಿ. ಕಾನ್ಫಿಡೆನ್ಸ್ ಇರುವಂತಹ ಪಾತ್ರ. ಸ್ವಾವಲಂಬಿ, ಕೆಲಸ ಮಾಡುತ್ತಿರುವ ಮಹಿಳೆ. ಅವಳಾಯ್ತು, ಅವಳ ಕೆಲಸ ಆಯ್ತು ಎನ್ನುವ ಪಾತ್ರ. ಅವರು ಸ್ವಾರ್ಥಿ ಅಲ್ಲ. ಆದರೆ, ಅವಳಿಗೆ ಅವಳ ಮೇಲೆ ಸ್ವಾರ್ಥ ಪ್ರೀತಿ ಇರುತ್ತೆ. ಅವಳ ಜವಾಬ್ದಾರಿಗಳೇ ಡಿಫ್ರೆಂಟ್. ತಂಗಿಗೆ ಮೆಡಿಸಿನ್ ಓದಿಸುತ್ತಿರುತ್ತಾಳೆ. ತುಂಬಾ ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಕಡ್ಡಿ ಮುರಿದಂತೆ ಮಾತಾಡುತ್ತಾರೆ. ಒಂದು ಲೆವೆಲ್‌ಗೆ ನನ್ನ ರಿಯಲ್ ಕ್ಯಾರೆಕ್ಟರ್ ಎನ್ನಬಹುದು." ಎನ್ನುತ್ತಾರೆ.
ತ್ರಿಕೋನ ಪ್ರೇಮ ಕಥೆನಾ?
"ಮೂರು ಜನ ಇದ್ದಾರೆ ಅಂದ್ಮೇಲೆ ಇದು ತ್ರಿಕೋನ ಪ್ರೇಮಕಥೆ ಆಗಬಹುದಾ? ಅಂತ. ನಿಜ ಹೇಳಬೇಕು ಅಂದರೆ, ನನಗೂ ಗೊತ್ತಿಲ್ಲ. ಕಥೆ ಹೇಗೆ ಮುಂದಕ್ಕೆ ಹೋಗುತ್ತೆ. ಸರ್ಪ್ರೈಸ್ ಹೇಗಿದೆ ಅಂತ. ಆದರೆ, ಈ ಕಥೆಯಲ್ಲಿ ಒಂದು ಟ್ವಿಸ್ಟ್ ಇದೆ. ಇದು ತ್ರಿಕೋನ ಪ್ರೇಮಕಥೆ ಆಗುತ್ತಾ ಇಲ್ವಾ? ಅನ್ನೋದನ್ನು ಕಾದು ನೋಡಬೇಕು." ಎನ್ನುತ್ತಾರೆ ನಮ್ರತಾ ಗೌಡ.


Click it and Unblock the Notifications











