Nanda Gokula:ಕೇಶವನ ಮದುವೆ ಮೀನಾಳ ಜೊತೆ ನಡೆಯುತ್ತಾ? ನಂದಕುಮಾರ್ ಈ ಸವಾಲನ್ನು ಹೇಗೆ ಎದುರಿಸುತ್ತಾನೆ?
ಕಲರ್ಸ್ ಕನ್ನಡ ತನ್ನ ವೀಕ್ಷಕರಿಗಾಗಿ ವಿಭಿನ್ನ ಕಥೆಗಳನ್ನು ಹೊತ್ತು ಬರುತ್ತಿದೆ. ಭಾವನಾತ್ಮಕ ಕೌಟುಂಬಿಕ ಕತೆಗಳ ಮೂಲಕ ತನ್ನ ಆಡಿಯನ್ಸ್ ಅನ್ನು ಸೆಳೆಯುತ್ತಿದೆ. ಇಂತಹ ಧಾರಾವಾಹಿಗಳಲ್ಲಿ ಇತ್ತೀಚೆಗೆ ಪ್ರಸಾರ ಆಗುತ್ತಿರುವ 'ನಂದಗೋಕುಲ' ಧಾರಾವಾಹಿ ಕೂಡ ಒಂದು.
ತಂದೆ ಹಾಗೂ ಮಕ್ಕಳ ಭಾವನಾತ್ಮಕ ಸಂಬಂಧಗಳನ್ನು ಸಾರಿ ಹೇಳುವ ಕತೆಯನ್ನು 'ನಂದಗೋಕುಲ' ಧಾರಾವಾಹಿಯಲ್ಲಿ ಹೇಳಲಾಗುತ್ತಿದೆ. "ಮಕ್ಕಳನ್ನು ಹೀರೋ ಮಾಡೋಕೆ ಹೋರಾಟ ಮಾಡುವ ಪ್ರತಿಯೊಬ್ಬ ತಂದೆಯ ಬದುಕಿನ ಜರ್ನಿಯನ್ನು ತೆರೆಮೇಲೆ ತೋರಿಸಲಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ 'ನಂದಗೋಕುಲ' ಧಾರಾವಾಹಿ ರಾತ್ರಿ 9ಕ್ಕೆ ಪ್ರಸಾರವಾಗುತ್ತಿದ್ದು, ಇಂದು (ಜುಲೈ 9) ವೀಕ್ಷಕರು ಹೊಸ ತಿರುವನ್ನು ನಿರೀಕ್ಷೆ ಮಾಡಬಹುದಾಗಿದೆ.

'ನಂದ ಗೋಕುಲ'ದ ಆಧಾರವೇ ನಂದಕುಮಾರ್. ಈ ಧಾರಾವಾಹಿಯಲ್ಲಿ ನಂದ ಕುಮಾರ್ ಒಬ್ಬ ಕಟ್ಟುನಿಟ್ಟಾದ, ಆತ್ಮವಿಶ್ವಾಸದಿಂದ ಇರುವ ವ್ಯಕ್ತಿ. 'ಗಿರಿಜಾ ಸ್ಟೋರ್ಸ್' ಎಂಬ ದಿನಸಿ ಅಂಗಡಿ ಇಟ್ಟುಕೊಂಡಿರುವ ನಂದನಿಗೆ ಆತನ ಕುಟುಂಬವೇ ಎಲ್ಲ. ಆದರೆ, ತನ್ನ ಮನೆ ಎದುರು ಇರುವ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಇಬ್ಬರನ್ನೂ ಕಂಡರೆ, ನಂದಕುಮಾರ್‌ಗೆ ಎಲ್ಲಿಲ್ಲದ ಕೋಪ. ಅವರಿಬ್ಬರೂ ಈತನ ಹೆಂಡತಿ ಗಿರಿಜಾಳ ಸಹೋದರು. ನಂದಕುಮಾರ್ ಹಾಗೂ ಗಿರಿಜಾ 25 ವರ್ಷಗಳ ಹಿಂದೆ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದು, ಈ ಎರಡೂ ಕುಟುಂಬಗಳ ವೈಮನಸ್ಸಿಗೆ ಕಾರಣ.
ನಂದಕುಮಾರ್ ಮತ್ತು ಗಿರಿಜಾ ದಂಪತಿಗೆ ಐದು ಮಂದಿ ಮಕ್ಕಳು. ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ಅನನ್ಯಾ. ತಂದೆಯ ಮಾತು ಮೀರದಂತೆ ಮಕ್ಕಳು ಬಂದಿದ್ದಾರೆ. ಈಗಾಗಲೇ ನಂದ ಕುಮಾರ್ ತನ್ನ ಮಕ್ಕಳು ಪ್ರೀತಿಸಿ ಮದುವೆ ಆಗಬಾರದು ಎಂದು ಅವರಿಂದ ಮಾತು ಪಡೆದುಕೊಂಡಿದ್ದಾನೆ. ತನ್ನಂತೆ ಪ್ರೀತಿಸಿ ಮದುವೆಯಾದರೆ ಮುಂದಿನ ದಿನಗಳಲ್ಲಿ ನೋವು ಅನುಭವಿಸಬೇಕಾಗುತ್ತೆ. ಅವರ ಜೀವನದಲ್ಲಿ ನೆಮ್ಮದಿ ಇರುವುದಿಲ್ಲ ಅನ್ನೋದು ನಂದ ಕುಮಾರ್ ಆತಂಕ. ಹೀಗಾಗಿ "ನೀವ್ಯಾರೂ ಪ್ರೀತಿಸಿ ಮದ್ವೆ ಆಗೊಲ್ಲ ಅಂತ ನನಗೆ ಮಾತು ಕೊಡಿ" ಎಂದು ನಂದಕುಮಾರ್ ಮಕ್ಕಳಿಂದ ಭಾಷೆ ಪಡೆದುಕೊಂಡಿದ್ದಾನೆ.
ಆದರೆ ನಂದ ಕುಮಾರ್ ಎರಡನೇ ಮಗ ಕೇಶವ್ ಮೀನಾಳನ್ನು ಪ್ರೀತಿಸುತ್ತಾನೆ. ಅಪ್ಪನಿಗೆ ಕೊಟ್ಟ ಮಾತು ಮುರಿದು ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ. ಇವರಿಬ್ಬರ ಪ್ರೀತಿಯ ವಿಷಯ ಮೀನಾಳ ತಂದೆಗೆ ತಿಳಿದು ಬೇರೊಬ್ಬ ಹುಡುಗನ ಜೊತೆ ಮದುವೆ ನಿಶ್ಚಿಯ ಮಾಡಿದ್ದಾನೆ. ಇತ್ತ ನಂದಕುಮಾರ್‌ಗೂ ಮಗ ಕೇಶವನ ಪ್ರೀತಿಯ ವಿಷಯ ಗೊತ್ತಾಗಿದೆ. ಹೀಗಾಗಿ ದೊಡ್ಡ ಮಗ ಮಾಧವನಿಗೆ ಹೆಣ್ಣು ನೋಡುತ್ತಿದ್ದಾಗಲೇ ಕೇಶವನಿಗೂ ಹೆಣ್ಣು ನೋಡಿ ಮದುವೆ ಮಾಡುವ ಆಲೋಚನೆಯಲ್ಲಿದ್ದಾನೆ.
ಕಹಾನಿಯಲ್ಲಿ ಟ್ವಿಸ್ಟ್ ಶುರುವಾಗುವುದೇ ಇಲ್ಲಿಂದ. ಒಂದೇ ಮನೆಯ ಅಕ್ಕ ತಂಗಿಯರನ್ನು ನೋಡಿ ಮೊದಲನೇ ಮಗ ಹಾಗೂ ಎರಡನೇ ಮಗ ಕೇಶವನಿಗೆ ಮದುವೆ ಫಿಕ್ಸ್ ಆಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಮೀನಾಳ ಮದುವೆ ಇನ್ನೊಬ್ಬ ಹುಡುಗನ ಜೊತೆ ನಡೆಯುತ್ತಿದೆ. ಇತ್ತ ನಂದಕುಮಾರ್ ಮೂರನೇ ಮಗ ವಲ್ಲಭನಿಗೆ ಅಣ್ಣ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಸಬೇಕು ಅಂತ ಆಸೆ ಪಟ್ಟಿದ್ದಾನೆ. ಹೀಗಾಗಿ ಹತಾಶೆಯಿಂದ ಮದುವೆ ಮಂಟಪಕ್ಕೆ ಹೋಗುತ್ತಿರುವ ಮೀನಾಳನ್ನು ಅಲ್ಲಿಂದ ವಲ್ಲಭ ಕರೆದೊಯ್ದಿದ್ದಾನೆ.
ಈಗ ವಲ್ಲಭ ತನ್ನ ಅಣ್ಣ ಕೇಶವನ ಮದುವೆಯನ್ನು ಮೀನಾಳ ಜೊತೆ ಮಾಡಿಸುತ್ತಾನಾ? ತಂದೆಗೆ ಕೊಟ್ಟ ಮಾತನ್ನು ಮಕ್ಕಳು ಮುರಿಯುತ್ತಾರಾ? ಒಂದು ವೇಳೆ ಕೇಶವನ ಮದುವೆ ಮೀನಾ ಜೊತೆ ಆದರೆ ನಂದ ಕುಮಾರ್‌ಗೆ ಆಗುವ ಆಘಾತವೇನು? ಮಗಳ ಮದುವೆಯನ್ನು ಒಪ್ಪಿಕೊಳ್ಳುತ್ತಾನಾ? ವಿರೋಧಿಗಳ ಮುಂದೆ ನಂದಕುಮಾರ್ ಎದುರಿಸಬೇಕಿರುವ ಸವಾಲುಗಳೇನು? ಕುಟುಂಬ ನಂದ ಗೋಕುಲದಂತೆ ಇರಬೇಕು. ಸಂತೋಷದಿಂದ ಬಾಳಿ ಬದುಕ ಎನ್ನುವ ನಂದ ಕುಮಾರ್ ಕನಸು ಕನಸಾಗಿಯೇ ಉಳಿಯುತ್ತಾ? ಇಲ್ಲ ನನಸಾಗುತ್ತಾ? ಇಂದಿನ (ಜುಲೈ 9) ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.
ಅಂದ್ಹಾಗೆ, ಬಣ್ಣ ಟಾಕೀಸ್' ನಿರ್ಮಿಸುತ್ತಿರುವ 'ನಂದ ಗೋಕುಲ' ಧಾರಾವಾಹಿಯಪ್ರಮುಖ ಪಾತ್ರದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಸೇರಿದಂತೆ ಹಲವು ನಟಿಸಿದ್ದಾರೆ.


Click it and Unblock the Notifications











