Nanda Gokula Serial: ಹೆಣ್ಮಕ್ಕಳ ಬಾಯಲ್ಲಿ ಮಾತು ನಿಲ್ಲಲ್ಲ.. 'ನಂದಗೋಕುಲ'ದ ಸಹೋದರರ ಸವಾಲ್ ಏನಾಯ್ತು?
ಕಿರುತೆರೆಯ ಜನಪ್ರಿಯರ ಧಾರಾವಾಹಿಗಳಲ್ಲಿ 'ನಂದಗೋಕುಲ' ಕೂಡ ಒಂದು. ಕಿರುತೆರೆ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದು ಮುನ್ನುಗ್ಗುತ್ತಿದೆ. ಅಪ್ಪಟ ಕೌಟುಂಬಿಕ ಧಾರಾವಾಹಿ ಟಿಆರ್‌ಪಿಯಲ್ಲೂ ಉತ್ತಮ ಸಾಧನೆಯನ್ನು ಮಾಡಿದೆ. ಕೌಟುಂಬಿಕ ಮೌಲ್ಯಗಳ ಜೊತೆಗೆ ಸಣ್ಣ ಪುಟ್ಟ ಹಾಸ್ಯದ ಪ್ರಸಂಗಗಳು ವೀಕ್ಷಕರನ್ನು ಸೆಳೆಯುತ್ತಿವೆ. ಅದರಲ್ಲೂ ಕೇಶವ ಮತ್ತು ವಲ್ಲಭನ ಸನ್ನಿವೇಶಗಳು ಸಿಕ್ಕಾಪಟ್ಟೆ ಮನರಂಜನೆಯನ್ನು ನೀಡುತ್ತಿದೆ.
ಹೌದು, 'ನಂದಗೋಕುಲ' ಧಾರಾವಾಹಿಯಲ್ಲಿ ಕೇಶವ ಹಾಗೂ ವಲ್ಲಭ ಇಬ್ಬರ ಸನ್ನಿವೇಶಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಈ 'ಸಹೋದರರ ಸವಾಲ್' ಪ್ರಸಂಗ ಧಾರಾವಾಹಿಯಲ್ಲಿ ಹಾಸ್ಯದ ಕಚಗುಳಿ ಇಡುವ ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆ. ಇನ್ನೊಂದು ಕಡೆ ಕೇಶವ ಹಾಗೂ ಮೀನಾ ಅವರ ಭಾವನಾತ್ಮಕ ಸನ್ನಿವೇಶಗಳು ಕೂಡ ನಡೆಯುತ್ತಿವೆ.

ಕೇಶವ ಹಾಗೂ ಮೀನಾ ಇಬ್ಬರೂ ಪ್ರೀತಿಸಿ ಮದುವೆ ಮಾಡಿಕೊಂಡವರು. ಇದು ಮೀನಾ ತಂದೆಯ ಕೋಪಕ್ಕೆ ಕಾರಣವಾಗಿತ್ತು. ಅವರಿಗೆ ಈ ಸಂಬಂಧ ಎಳ್ಳಷ್ಟೂ ಇಷ್ಟವಿರಲಿಲ್ಲ. ಮೀನಾ ತಂದೆಯ ಮನೆಗೆ ಹೋದಾಗ ಅವರ ತಂದೆ ಕೋಪ ಮಾಡಿಕೊಂಡಿದ್ದರು. ಕೇಶವ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಾನೆಂದು ಅವಮಾನ ಮಾಡಿದ್ದರು. ಇದು ಕೇಶವನ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟಿತ್ತು. ಹೀಗಾಗಿ ಸರ್ಕಾರಿ ಕೆಲಸ ಮಾಡುವ ಶಪಥ ತೆಗೆದುಕೊಂಡಿದ್ದಾನೆ.
ಸರ್ಕಾರಿ ಕೆಲಸ ಮಾಡದೆ ಇದ್ದಿದ್ದಕ್ಕೆ ಅವಮಾನ ಆಗಿರುವ ಕೇಶವ, ತನ್ನ ಸಹೋದರ ವಲ್ಲಭನ ಮುಂದೆ ಹೋಗಿ ಹೇಳಿಕೊಂಡಿದ್ದಾನೆ. ಹೇಗಾದರೂ ಮಾಡಿ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಳ್ಳಲೇ ಬೇಕು ಎಂದು ಕೇಶವ ಶಪಥ ಮಾಡಿದ್ದಾನೆ. ಇನ್ನೊಂದು ಕಡೆ ಸಹೋದರ ವಲ್ಲಭ ಕೂಡ ತಾನು ಡ್ರೈವಿಂಗ್ ಕೆಲಸ ಮಾಡುವುದಕ್ಕೆ ನಿರ್ಧರಿಸಿದ್ದಾನೆ. ಇದರಿಂದ ಒಂದು ಹಣವನ್ನು ಸಂಪಾದನೆ ಮಾಡಬೇಕು ಎಂಬ ತನ್ನ ಮನದ ಆಸೆಯನ್ನು ಅಣ್ಣನ ಹೊರ ಹಾಕಿದ್ದಾನೆ.
ಕೇಶವ ಹಾಗೂ ಮೀನಾ ಇಬ್ಬರು ಸಹೋದರರು ಒಟ್ಟಿಗೆ ಸೇರಿಕೊಂಡು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಇಬ್ಬರೂ ತೆಗೆದುಕೊಂಡಿರುವ ನಿರ್ಧಾರಗಳು ನಮ್ಮ ಹೆಂಡತಿಯರಿಗೆ ಮಾತ್ರ ಗೊತ್ತಾಗಬಾರದು ಎಂದು ನಿರ್ಧಾರ ಕೈಗೊಂಡಿದ್ದಾರೆ. ಇಬ್ಬರೂ ತಮ್ಮ ಗುಟ್ಟು ರಟ್ಟಾಗದಂತೆ ಒಬ್ಬರಿಗೊಬ್ಬರು ಪ್ರಾಮಿಸ್ ಮಾಡಿಕೊಂಡಿದ್ದಾರೆ. ಆದರೆ, ಕೇಶವ ಮನೆಗೆ ಬರುತ್ತಿದ್ದಂತೆ ತನ್ನ ಹೆಂಡತಿ ಮೀನಾ ಬಳಿ ವಲ್ಲಭ ಡ್ರೈವಿಂಗ್ ಕೆಲಸ ಹೋಗುತ್ತಾನೆ ಅನ್ನೋ ಗುಟ್ಟನ್ನು ರಟ್ಟು ಮಾಡುತ್ತಾನೆ. ಅಷ್ಟೇ ಅಲ್ಲದೆ, ಇದು ಯಾವುದೇ ಕಾರಣಕ್ಕೂ ಅಮೂಲ್ಯಗೆ ಹೇಳಬಾರದು ಎಂಬ ಶರತ್ತು ಕೂಡ ಹಾಕುತ್ತಾನೆ.

ಇತ್ತ ವಲ್ಲಭ ಸುಮ್ಮನೆ ಕೂತಿಲ್ಲ. ತನ್ನ ಹೆಂಡತಿ ಅಮೂಲ್ಯಗೆ ಕೇಶವ ಸರ್ಕಾರಿ ಕೆಲಸಕ್ಕೆ ಸೇರಬೇಕು ಅನ್ನೋ ನಿರ್ಧಾರವನ್ನು ಬಾಯಿ ಬಿಡುತ್ತಾನೆ. ಅಷ್ಟೇ ಅಲ್ಲದೆ ಮೀನಾಳ ಮುಂದೆ ಹೇಳದೆ ಇರುವಂತೆ ಕಂಡೀಷನ್ ಹಾಕುತ್ತಾನೆ. ಆದರೆ, ಮೀನಾಗೆ ಗುಟ್ಟುಗಳನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಆ ಗುಟ್ಟನ್ನು ತನ್ನಲ್ಲಿ ಇಟ್ಟುಕೊಳ್ಳದೆ ಮೀನಾ ಒದ್ದಾಡುತ್ತಿರುತ್ತಾಳೆ. ಅಡುಗೆ ಮನೆಯಲ್ಲಿ ಅಮೂಲ್ಯ ಸಿಕ್ಕ ಕೂಡಲೇ ವಲ್ಲಭ ಡ್ರೈವಿಂಗ್ ಕೆಲಸ ಸೇರಿಕೊಳ್ಳುವ ಸಂಗತಿಯನ್ನು ಬಾಯಿ ಬಿಟ್ಟಿದ್ದಾಳೆ. ಅಲ್ಲಿಗೆ ಸಹೋದರರ ಸವಾಲ್ ಮಣ್ಣು ಪಾಲಾಗಿ, ಹೆಣ್ಮಕ್ಕಳ ಬಾಯಲ್ಲಿ ಮಾತು ನಿಲ್ಲಲ್ಲ ಅನ್ನೋದು ಸಾಬೀತಾಗಿದೆ.
'ನಂದಗೋಕುಲ' ಧಾರಾವಾಹಿಯಲ್ಲಿ ಸಹೋದರರ ಈ ಸವಾಲ್ ಹಾಸ್ಯದ ರೂಪ ಪಡೆದುಕೊಂಡಿದೆ. ಅಪ್ಪಟ ಕೌಟುಂಬಿಕ ಧಾರಾವಾಹಿಯಲ್ಲಿ ಹಾಸ್ಯದ ಸನ್ನಿವೇಶಗಳು ಸಖತ್ ಮನರಂಜನೆಯ ನೀಡುತ್ತಿವೆ. ಗಂಡಂದಿರ ಅತಿಯಾದ ಆತ್ಮವಿಶ್ವಾಸ ಮತ್ತು ಹೆಂಡತಿಯರ ಮುಗ್ಧ ಚಾಡಿ ಮಾತುಗಳು. ಜೊತೆಗೆ ಕಚ್ಚಾಟಗಳು ವೀಕ್ಷಕರಿಗೆ ಭರಪೂರ ಮನರಂಜನೆ ನೀಡುತ್ತಿವೆ. 'ನಂದಗೋಕುಲ' ಧಾರಾವಾಹಿಯ ಈ ಹಾಸ್ಯದ ಪ್ರಸಂಗಗಳು ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರ ಆಗುತ್ತಿದೆ. ರಾತ್ರಿ 9ಕ್ಕೆ ಕಲರ್ಸ್ ಕನ್ನಡ ಮತ್ತು ಜಿಯೋಹಾಟ್‌ಸ್ಟಾರ್‌ನಲ್ಲಿ ಈ ಧಾರಾವಾಹಿಯನ್ನು ವೀಕ್ಷಿಸಬಹುದಾಗಿದೆ.


Click it and Unblock the Notifications
