'ನಂದಗೋಕುಲ'ಗೆ ಹಿರಿ ಸೊಸೆ ಪ್ರಿಯಾ ದರ್ಬಾರ್; ನಂದಕುಮಾರ್ ಮನೆಯಲ್ಲಿ ವಾರಗಿತ್ತಿಯರ ವಾರ್?
ಕಿರುತೆರೆಯ ಧಾರಾವಾಹಿಗಳು ದಿನಕ್ಕೊಂದು ಟ್ವಿಸ್ಟ್ ಅಂಡ್ ಟರ್ನ್ ಅನ್ನು ಹೊತ್ತು ತಮ್ಮ ವೀಕ್ಷಕರ ಮುಂದೆ ಬರುತ್ತಲೇ ಇರತ್ತವೆ. ಇಂತಹ ಧಾರಾವಾಹಿಗಳ ಸಾಲಿಗೆ ಕಲರ್ಸ್ ಕನ್ನಡದ ಸೀರಿಯಲ್ 'ನಂದಗೋಕುಲ' ಕೂಡ ಒಂದು. ಇತ್ತೀಚೆಗೆ ಈ ಧಾರಾವಾಹಿಯ ಕಥೆ ವೀಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಈಗ ಕಥೆಯ ಹಾದಿಯೂ ಕೂಡ ಬದಲಾಗುವ ಮುನ್ಸೂಚನೆ ಸಿಗುತ್ತಿದೆ.
ಕಲರ್ಸ್ ಕನ್ನಡದ 'ನಂದಗೋಕುಲ' ಧಾರಾವಾಹಿಯಲ್ಲಿ ಒಂದು ಟ್ವಿಸ್ಟ್ ಸಿಕ್ಕಿದೆ. ಕಿರುತೆರೆ ವೀಕ್ಷಕರಲ್ಲಿ ಈ ಸಂಚಲನಕ್ಕೆ ಪ್ರಮುಖ ಕಾರಣ ನಂದಕುಮಾರ್ ಅವರ ಮುದ್ದಿನ ಹಿರಿ ಸೊಸೆ ಪ್ರಿಯಾ. ಹೌದು 'ನಂದಗೋಕುಲ'ಕ್ಕೆ ಸೊಸೆಯ ಆಗಮನ ಆಗಿದೆ. ಹೀಗಾಗಿ ಇಲ್ಲಿಂದ ಕಥೆಯಲ್ಲಿ ಭಾರೀ ಟ್ವಿಸ್ಟ್ ಅಂಡ್ ಟರ್ನ್‌ಗಳು ಸಿಗುವ ಎಲ್ಲಾ ಮುನ್ಸೂಚನೆಯೂ ಸಿಗುತ್ತಿದೆ.

ನಂದ ಗೋಕುಲಾ ಧಾರಾವಾಹಿಯಲ್ಲಿ ತಾನು ತೋರಿಸಿದ ಹುಡುಗಿಯನ್ನೇ ತನ್ನ ಮೂವರೂ ಮಕ್ಕಳು ಮದುವೆ ಆಗಬೇಕು ಎಂದು ತಂದೆ ನಂದಕುಮಾರ್ ಆಸೆಯಾಗಿತ್ತು. ಇದು ನಂದಕುಮಾರನ ಮೂವರು ಮಕ್ಕಳಿಗೂ ಗೊತ್ತಿತ್ತು. ಆದರೆ, ಕೇಶವ ಮತ್ತು ಮೀನಾ ಲವ್ ಮಾಡಿ ಮದುವೆ ಆದರು. ಅತ್ತ ತಂದೆಗೆ ತಿಳಿಯದ ಹಾಗೇ ವಲ್ಲಭ ಕೂಡ ಅಮೂಲ್ಯಳನ್ನು ಮದುವೆ ಆಗಿದ್ದಾನೆ. ಇಷ್ಟೆಲ್ಲ ಆದ್ಮೇಲೆ ತಂದೆಯ ಮಾತಿಗೆ ಬೆಲೆ ನೀಡಿ ಅವರು ತೋರಿಸಿದ ಹುಡುಗಿಯನ್ನೇ ಮಾಧವ ಮದುವೆಯಾಗಿದ್ದಾನೆ. ಕೊನೆಗೂ ನಂದನ ಕನಸು ಈಡೇರಿದಂತೆ ಆಗಿದೆ. ಈ ಕಾರಣಕ್ಕೆ ನಂದಕುಮಾರ್‌ಗೆ ಮಾಧವ ಹಾಗೂ ಆತನ ಪತ್ನಿ ಪ್ರಿಯಾ ಮೇಲೆ ಸಾಫ್ಟ್ ಕಾರ್ನರ್.
ಈಗ ಪ್ರಿಯಾ 'ನಂದಗೋಕುಲ'ದಲ್ಲಿ ನಂದಕುಮಾರನ ಅತ್ಯಂತ ನೆಚ್ಚಿನ ಸೊಸೆಯಾಗಿ ಮನೆಯಲ್ಲಿ ಸ್ಥಾನ ಪಡೆದುಕೊಂಡಿದ್ದಾಳೆ. ಪ್ರಿಯಾ ಏನೇ ಹೇಳಿದರೂ ಅದೇ ಸರಿ ಎನ್ನುವ ವರಸೆ ನಂದಕುಮಾರ್‌ರದ್ದು. ಆದರೆ, ಮಾವನ ಈ ಅತಿಯಾದ ಪ್ರೀತಿಯನ್ನು ಬಂಡವಾಳ ಮಾಡಿಕೊಳ್ಳುವುದಕ್ಕೆ ಪ್ರಿಯಾ ಮುಂದಾಗಿದ್ದಾಳೆ. ಮನೆಯಲ್ಲಿ ಏನೇ ನಡೆದರೂ ತನ್ನದೇ ನಡೀಬೇಕು ಅನ್ನೋ ವರಸೆ ಆಕೆಯದ್ದು. ಹೀಗಾಗಿ ನಂದಗೋಕುಲದ ಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತಿದೆ.

ಈ ಕಾರಣಕ್ಕೆ ಅತ್ತೆ ಗಿರಿಜಾ, ಮೀನಾ ಹಾಗೂ ಅಮೂಲ್ಯ ಒಂದು ಕಡೆಯಾದರೆ, ಪ್ರಿಯಾ ಮತ್ತೊಂದು ಕಡೆ ಎನ್ನುವಂತಾಗಿದೆ. ಮೇಲ್ನೋಟಕ್ಕೆ 'ನಂದಗೋಕುಲ'ದಲ್ಲಿ ಒಳಗೊಳಗೆ ವಾರಗಿತ್ತಿಯರ ನಡುವೆ ಕಿಡಿ ಅಂತೂ ಹೊತ್ತಿಕೊಂಡಿದೆ. ಆ ಜಟಾಪಟಿಯಲ್ಲಿ ಕೆಲವೊಮ್ಮೆ ಮೀನಾ ಗೆದ್ದರೆ, ಮಗದೊಮ್ಮೆ ಪ್ರಿಯಾ ತನ್ನ ಪಟ್ಟು ಸಡಿಲಿಸದೆ ಗೆಲ್ಲುತ್ತಿದ್ದಾಳೆ. ಈ ಎಲ್ಲ ಬೆಳವಣಿಗೆಗಳಿಂದ ನಂದಕುಮಾರನ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಲು ಶುರುವಾಗಿವೆ. ಹೀಗಾಗಿ ಸೀರಿಯಲ್ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆದುಕೊಳ್ಳುತ್ತೋ ಗೊತ್ತಿಲ್ಲ.
ಈ ಎಲ್ಲ ಗದ್ದಲಗಳ ನಡುವೆ ಪ್ರಿಯಾಳ ಈ ವರ್ತನೆ ಯಾಕೆ ಹೀಗೆ ಅಂತ ಅನಿಸುವುದಕ್ಕೆ ಶುರುವಾಗಿದೆ. ಪ್ರಿಯಾ ಇದೆಲ್ಲಾ ಮಾಡುತ್ತಿರೋದು ಕುಟುಂಬದ ಹಿತಕ್ಕಾಗಿಯೋ ಅಥವಾ ಆಕೆಯ ಅಸಲಿ ಮುಖವಾಡವೇ ಬೇರೆಯಿದೆಯೋ ಎಂಬ ಪ್ರಶ್ನೆ ಮೂಡುತ್ತಿದೆ. ಇದರ ಜೊತೆಗೆ ಕಥೆಯಲ್ಲಿ ಮತ್ತೊಂದು ಭಾವನಾತ್ಮಕ ಎಳೆ ಕೂಡ ತೆರೆದುಕೊಳ್ಳುತ್ತಿದೆ. ಮದುವೆಯಾದ್ಮೇಲೆ ಅಮೂಲ್ಯ ತವರಿಗೆ ಹೋಗಿಲ್ಲ. ವಲ್ಲಭನಿಗೆ ಹೇಗಾದರೂ ಒಮ್ಮೆಯಾದರೂ ತವರಿಗೆ ಕಳಿಸಬೇಕು ಅನ್ನೋ ಆಸೆ. ಅದು ಈಡೇರುತ್ತಾ? ವಲ್ಲಭ ಹಾಕಿದ ಪ್ಲ್ಯಾನ್ ವರ್ಕ್ ಆಗುತ್ತಾ? ಹಿರಿ ಸೊಸೆ ಪ್ರಿಯಾಳ ಅಸಲಿ ಮುಖ ನಂದಕುಮಾರ್ ಮುಂದೆ ಬಯಲಾಗುತ್ತಾ? ಅನ್ನೋದು 'ನಂದಗೋಕುಲ' ಧಾರಾವಾಹಿಯಲ್ಲಿ ನೋಡಬಹುದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಲಿದೆ.


Click it and Unblock the Notifications











