Adhi Lakshmi Purana: ಕಿರುತೆರೆಯಲ್ಲಿ 'ಆದಿಲಕ್ಷ್ಮೀ ಪುರಾಣ'; ಎಲ್ಲಿ? ಯಾವಾಗ? ಸ್ಟಾರ್‌ಕಾಸ್ಟ್ ಏನು?
ಕನ್ನಡ ಕಿರುತೆರೆಯ ವೀಕ್ಷಕರಿಗೆ ಹೊಚ್ಚ ಹೊಸ ಧಾರಾವಾಹಿಗಳು ನೋಡುವುದಕ್ಕೆ ಸಿಗುತ್ತಲೇ ಇರುತ್ತೆ. ಪ್ರತಿ ತಿಂಗಳು ಒಂದೊಂದು ಹೊಸ ಸೀರಿಯಲ್ ಆರಂಭ ಆಗುತ್ತೆ. ಕನ್ನಡದ ಎಲ್ಲಾ ಮನರಂಜನಾ ವಾಹಿನಿಗಳು ಇಂತಹ ಪ್ರಯತ್ನ ಮಾಡುತ್ತಲೇ ಇರುತ್ತೆ. ಅದರಲ್ಲೂ ಜೀ ಕನ್ನಡ ಹೊಚ್ಚ ಹೊಸ ಸೀರಿಯಲ್ ಅನ್ನು ಪ್ರಾರಂಭ ಮಾಡುತ್ತಿದೆ. ವರ್ಷದ ಕೊನೆಯಲ್ಲಿ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ಕೊಡುತ್ತಿದೆ.
ವೀಕ್ಷಕರ ಅಭಿರುಚಿಯನ್ನು ಅರಿತು ಧಾರಾವಾಹಿಗಳನ್ನು ನೀಡುತ್ತಿರುವ ಜೀ ಕನ್ನಡ ಮತ್ತೊಂದು ಸೀರಿಯಲ್ ಕೂಡ ವಿಭಿನ್ನವಾಗಿದೆ. 'ಆದಿಲಕ್ಷ್ಮೀ ಪುರಾಣ' ಇಬ್ಬರು ವಿಭಿನ್ನ ವ್ಯಕ್ತಿತ್ವದ ಸಾಗುವ ವ್ಯಕ್ತಿಗಳ ಕಥೆಯನ್ನು ತೆರೆಮೇಲೆ ತರುವುದಕ್ಕೆ ಹೊರಟಿದೆ. ಈಗಾಗಲೇ ಜೀ ಕನ್ನಡ ಈಗಾಗಲೇ ಪ್ರೋಮೋವನ್ನು ಕೂಡ ಹೊರ ಬಿಟ್ಟಿದೆ. ಈ ವಿಡಿಯೋವನ್ನು ವೀಕ್ಷಕರು ಕೂಡ ಮೆಚ್ಚಿಕೊಂಡಿದ್ದಾರೆ.

ಜನರ ನಾಡಿ ಮಿಡಿತವನ್ನು ಅರಿತಿರುವ ಜೀ ಕನ್ನಡ ವಾಹಿನಿ ಅದನ್ನೇ ಮುಂದಿಟ್ಟುಕೊಂಡು 'ಆದಿಲಕ್ಷ್ಮೀ ಪುರಾಣ' ಪ್ರಸಾರ ಮಾಡಲಿದೆ. 'ಆದಿಲಕ್ಷ್ಮೀ ಪುರಾಣ' ಸಂಪ್ರದಾಯ ಮತ್ತು ಆಧುನಿಕತೆಯ ಮಧ್ಯೆ ನಿರ್ಮಾಣವಾಗಿರುವ ಕಥೆಯಾಗಿದೆ. ಹಳ್ಳಿ ಹುಡುಗಿ ಲಕ್ಮಿ ಹಾಗೂ ಸಿಟಿ ಹುಡುಗ ಆದಿ ನಡುವಿನ ಕಥೆಯನ್ನು ಕಿರುತೆರೆ ವೀಕ್ಷಕರ ಮುಂದೆ ಇಡುತ್ತಿದೆ. ಇದನ್ನು ಕೂಡ ವೀಕ್ಷಕರು ಮೆಚ್ಚಿಕೊಳ್ಳುತ್ತಾರೆಂಬ ಭರವಸೆಯಲ್ಲಿ ಜೀ ಕನ್ನಡವಿದೆ.
ಇನ್ನು ಕಥೆಯ ಕಡೆಗೆ ಬರೋದಾರೇ, ಲಕ್ಷ್ಮಿ ಮೊದಲ ಭೇಟಿಯಲ್ಲೇ ಆದಿಯಿಂದ ತಿರಸ್ಕರಿಸಲ್ಪಟ್ಟಿರುತ್ತಾಳೆ. ಆದರೆ, ಪುನಃ ಆತನ ಜಗತ್ತಿಗೆ ಮರಳಿ ಬರುತ್ತಾಳೆ. ಆದಿಯ ಪ್ರೀತಿಯನ್ನು ಪಡೆಯಲು ಲಕ್ಷ್ಮಿ ಪರದಾಡುತ್ತಾಳೆ. ಆತನ ತಾತ ಧರ್ಮರಾಜ್ ನೀಡುವ ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತೆ. ಮನೆ ಹಾಗೂ ಕಾಲೇಜು ಇವೆರಡರನ್ನು ಲಕ್ಷ್ಮಿ ಹೇಗೆ ಸರಿದೂಗಿಸಿಕೊಂಡು ಮುಂದೆ ಸಾಗುತ್ತಾಳೆಂಬುವುದೇ 'ಆದಿಲಕ್ಷ್ಮೀ ಪುರಾಣ'ದ ಕಥೆ.
'ಆದಿಲಕ್ಷ್ಮೀ ಪುರಾಣ' ಧಾರಾವಾಹಿಯ ಕಥೆಯನ್ನು ನಟಿಸುತ್ತಿರುವ ತಾರಾಬಳಗ ಮತ್ತಷ್ಟು ಜೀವಂತಗೊಳಿಸುತ್ತೆ. ರಜನೀಶ್ ಮತ್ತು ಆಶಾ ಅಯ್ನರ್ ಆದಿ ಮತ್ತು ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ 'ಆದಿಲಕ್ಷ್ಮೀ ಪುರಾಣ' ಈ ಧಾರಾವಾಹಿಯಲ್ಲಿ ಸಂಜೀವ ಅನ್ನುವ ಒಬ್ಬ ಸಾಧಾರಣ ಹಳ್ಳಿ ಟೀಚರ್ ಮತ್ತು ಅಮೃತ, ಸಿಟಿ ಹುಡುಗಿ PHD ಆಕಾಂಕ್ಷಿ, ಇವರಿಬ್ಬರು ಮದುವೆ ಆದ್ಮೇಲೆ ಇವರಿಬ್ಬರ ಬದುಕು ಹೇಗೆ ಬದಲಾಗುತ್ತೆ ಅನ್ನೋ ಕಥೆಯಲ್ಲಿ ನೋಡಬೇಕಿದೆ. 'ಆದಿಲಕ್ಷ್ಮೀ ಪುರಾಣ' ಧಾರಾವಾಹಿಯಲ್ಲಿ ಮಂಜುನಾಥ ಹೆಗ್ಡೆ, ಅಶೋಕ್ ಶರ್ಮಾ, ರಕ್ಷಿತಾ, ಸುಷ್ಮಾ ನಾಣಯ್ಯ, ಮಾಲತಿ ಸರ್ದೇಶಪಾಂಡೆ, ಕೈಲಾಶ್, ಜ್ಯೋತಿ, ಸವಿತಾ ಕೃಷ್ಣಮೂರ್ತಿ ಮತ್ತು ಭಾಗ್ಯಶ್ರೀ ರಾವ್ ಅಂತಹ ಹೆಸರಾಂತ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದಾರೆ. ಅದ್ಬುತ ಕಲಾವಿದರು, ಅತ್ಯುತ್ತಮ ಹಾಗೂ ವಿಭಿನ್ನ ಕಥಾಹಂತರವೇ 'ಆದಿಲಕ್ಷ್ಮಿ ಪುರಾಣ' ಸೀರಿಯಲ್‌ನ ಪ್ಲಸ್ ಪಾಯಿಂಟ್.
'ಆದಿಲಕ್ಷ್ಮಿ ಪುರಾಣ' ಕೇವಲ ಸಾಧಾರಣ ಕಥೆಯಲ್ಲ. ನಿಜ ಜೀವನಕ್ಕೆ ತೀರಾ ಹತ್ತಿರವಾಗಿದೆ ಎಂದು ಜೀ ಕನ್ನಡ ಹೇಳಿಕೊಂಡಿದೆ. ಜೀ ಕನ್ನಡ ಇಲ್ಲಿವರೆಗೂ ವೀಕ್ಷಕರನ್ನು ಸೆಳೆದಿಟ್ಟುಕೊಂಡಿದೆ. ಈಗ 'ಆದಿಲಕ್ಷ್ಮೀ ಪುರಾಣ' ಕಥೆಯ ನೈಜ್ಯತೆ, ಉತ್ತಮ ತಾರಾಬಳಗ, ಲೋಕೇಶನ್, ನಿರ್ದೇಶನ, ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ಸೆಟ್‌ಗಳು ವೀಕ್ಷಕರನ್ನು ತನ್ನತ್ತ ಸೆಳೆಯಲಿದೆ ಎಂದು ಜೀ ಕನ್ನಡ ಹೇಳಿದೆ. ಇನ್ನು ಸಾಮಾನ್ಯವಾಗಿ ಇಬ್ಬರು ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸುವವರು ಒಂದಾದರೆ ಏನಾಗುತ್ತೆ ಅನ್ನೋದು ಸೀರಿಯಲ್ ಆರಂಭ ಆಗುತ್ತಿದ್ದಂತೆ ತಿಳಿಯುತ್ತಾ ಹೋಗುತ್ತೆ.
ಇನ್ನು ಶ್ರೀ ಲಕ್ಷ್ಮಿ ಜನಾರ್ದನ ಮೂವೀಸ್ ಮೂಲಕ ಬರುತ್ತಿರುವ ಈ ಧಾರಾವಾಹಿಯನ್ನು ಜನಾರ್ಧನ ಪಿ ಮತ್ತು ಸಂತೋಷ್ ಕೋಟಿ ಅವರು ನಿರ್ಮಾಣ ಮಾಡುತ್ತಿದ್ದಾರೆ. ಸುಭಾಷ್ ಅರ್ವ ಅವರು ಈ ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮದುವೆಯ ಬಂಧ ಬೆಸೆಯೋ ಪ್ರೀತಿಯ ಪಯಣ ವೀಕ್ಷಕರನ್ನು ತನ್ನತ್ತ ಸೆಳೆಯಲಿದೆ.
ಇನ್ನು ಈ ಧಾರಾವಾಹಿ ಇದೇ ಡಿಸೆಂಬರ್ 8 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:00 ಗಂಟೆಗೆ ಪ್ರಸಾರ ಆಗಲಿದೆ. ಇನ್ನು ಇಲ್ಲಿವರೆಗೂ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತಿದ್ದ 'ಶ್ರೀ ರಾಘವೇಂದ್ರ ಮಹಾತ್ಮೆ' ಈ ವಾರದಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6 ಗಂಟೆಯಿಂದ 7 ಗಂಟೆಯ ವರೆಗೆ ಪ್ರಸಾರ ಆಗುತ್ತಿದೆ. ಹೀಗಾಗಿ 'ಆದಿಲಕ್ಷ್ಮೀ ಪುರಾಣ' ಯಾವ ಮಟ್ಟಿಗೆ ವೀಕ್ಷಕರನ್ನು ಸೆಳೆಯುತ್ತೆ ಅನ್ನೋದನ್ನು ನೋಡಬೇಕಿದೆ.


Click it and Unblock the Notifications











