'ಪಾರು' ಧಾರಾವಾಹಿಯ ಅನುಷ್ಕಾಗೆ ಕಿಡಿಗೇಡಿಯಿಂದ ಕಿರುಕುಳ
'ಪಾರು' ಧಾರಾವಾಹಿಯ ಅನುಷ್ಕಾ ಖ್ಯಾತಿಯ ನಟಿ ಮಾನಸಿ ಜೋಶಿ ಅವರ ಅಭಿಮಾನಿಯ ಹೆಸರಿನಲ್ಲಿ ಕೆಲವರು ಕಿರುಕುಳ ನೀಡುತ್ತಿರುವುದು ವರದಿಯಾಗಿದೆ. ಇದರಿಂದ ಅವರು ಪೊಲೀಸರ ಮೊರೆ ಹೋಗಿದ್ದಾರೆ.
Recommended Video
ಇನ್‌ಸ್ಟಾಗ್ರಾಂನಲ್ಲಿ ಮಾನಸಿ ಜೋಶಿ ಅವರ ಅಭಿಮಾನಿಗಳು ಎಂಬ ಹೆಸರಲ್ಲಿ ಪೇಜ್ ಸೃಷ್ಟಿಸಿರುವ ವ್ಯಕ್ತಿಯೊಬ್ಬ ಅವರಿಗೆ ಕಿರುಕುಳ ನೀಡುತ್ತಿದ್ದಾನೆ. ಈ ಬಗ್ಗೆ ಮಾನಸಿ ಸುದೀರ್ಘ ಪೋಸ್ಟ್ ಹಾಕಿದ್ದಾರೆ. 'ನನ್ನ ಹೊಸ ಫ್ಯಾನ್ ಪೇಜ್‌ಗೆ ನನ್ನ ನಂಬರ್ ನೀಡಿಲ್ಲ. ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ಗಳನ್ನು ಆತ ಕೇಳುತ್ತಿದ್ದಾನೆ. ಅದಕ್ಕೆ ನಿರಾಕರಿಸಿರುವುದರಿಂದ ನನಗೆ ಬೆದರಿಕೆ ಹಾಕತೊಡಗಿದ್ದಾನೆ ಎಂದು ಮಾನಸಿ ತಿಳಿಸಿದ್ದಾರೆ. ಮುಂದೆ ಓದಿ..

ಮತ್ತೆ ಮತ್ತೆ ಹೊಸ ಪೇಜ್ ಮಾಡುತ್ತಿದ್ದಾನೆ
ಆರಂಭದಲ್ಲಿ ನಾನು ಅದನ್ನು ನಿರ್ಲಕ್ಷಿಸಿದೆ ಮತ್ತು ಆ ಪುಟವನ್ನು ರಿಪೋರ್ಟ್ ಮಾಡಿದೆ. ಆದರೆ ಆ ವ್ಯಕ್ತಿ ಮತ್ತೆ ಮತ್ತೆ ಹೊಸ ಪೇಜ್ ಸೃಷ್ಟಿಸುತ್ತಿದ್ದಾನೆ. ನನ್ನ ಹೆಸರು ಇರುವ ಯಾವುದೇ ಪುಟದಲ್ಲಿ ಯಾವುದೇ ಕೆಟ್ಟ ಅಥವಾ ಅವಮಾನಕಾರಿಯಾದ ಸಂಗತಿಯನ್ನು ಕಂಡರೆ ದಯವಿಟ್ಟು ಸೈಬರ್ ಕ್ರೈಂ ವಿಭಾಗಕ್ಕೆ ಮಾಹಿತಿ ನೀಡಿ. ನಾನು ಕೂಡ ಅದನ್ನು ಮಾಡಿದ್ದೇನೆ. ಸೈಬರ್ ಬೆದರಿಕೆಯನ್ನು ನಿಲ್ಲಿಸಿ ಎಂದು ಮಾನಸಿ ಹೇಳಿದ್ದಾರೆ.

ಇಲ್ಲಸಲ್ಲದ ಕಥೆ ಬರೆಯುತ್ತಿದ್ದಾರೆ
ನಾನು ಈ ಪೋಸ್ಟ್ ಹಾಕಲು ಕಾರಣವೇನೆಂದರೆ ನಾನು ಬಹಳ ಡಿಸ್ಟರ್ಬ್ ಆಗಿದ್ದೇನೆ. ನನ್ನ ಬಗ್ಗೆ ಮಾತ್ರವಲ್ಲ, ಎಲ್ಲ ಕಲಾವಿದರು ಮತ್ತು ಇತರೆ ಹೆಣ್ಣುಮಕ್ಕಳ ಬಗ್ಗೆಯೂ ಚಿಂತೆಯಾಗಿದೆ. ಮಾನಸಿ ಜೋಷಿ ಫ್ಯಾನ್‌ಡಂ ಎಂಬ ಫ್ಯಾನ್ ಕ್ಲಬ್ ಪುಟದಿಂದ ನನ್ನ ಬಗ್ಗೆ ಕಥೆಗಳನ್ನು ಹುಟ್ಟಿಸುತ್ತಿದ್ದಾರೆ. ಜತೆಗೆ ನನ್ನ ನಂಬರ್, ನನ್ನ ಇನ್‌ಸ್ಟಾಗ್ರಾಂ ವಿವರಗಳನ್ನು ಕೇಳುವುದರ ಜತೆಗೆ ನನ್ನ ಖಾತೆಯ ಅಡ್ಮಿನ್ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.

ಕೀಳುಮಟ್ಟದ ಪೋಸ್ಟ್ ಹಾಕುತ್ತಿದ್ದಾರೆ
ಇದಕ್ಕೆ ನಾನು ಸಾಧ್ಯವಿಲ್ಲ ಎಂದಾಗ ನನ್ನ ಕುರಿತು ಕೀಳುಮಟ್ಟದ ಪೋಸ್ಟ್‌ಗಳನ್ನು ಹಾಕಲು ಆರಂಭಿಸಿದ್ದಾರೆ. ಅಂತಹ ಪೋಸ್ಟ್‌ಗಳು ನಿಮ್ಮ ಗಮನಕ್ಕೆ ಬಂದಲ್ಲಿ ದಯವಿಟ್ಟು ಸೈಬರ್ ಕ್ರೈಂ ಇಲಾಖೆಗೆ ಮಾಹಿತಿ ನೀಡಿ. ಕಲಾವಿದರು ಮತ್ತು ಮಹಿಳೆಯರನ್ನು ಮುಖ್ಯವಾಗಿ ಇಂತಹ ಭಯಾನಕ ಕ್ರಿಮಿನಲ್‌ಗಳಿಂದ ರಕ್ಷಿಸಲು ಸಹಾಯ ಮಾಡಿ ಎಂದು ಮಾನಸಿ ಹೇಳಿದ್ದಾರೆ.

ನಿನಗೆ ತಕ್ಕ ಪಾಠ ಕಲಿಸುತ್ತೇನೆ
ಬಳಿಕ ತಮಗೆ ಕಾಟ ಕೊಡುತ್ತಿರುವ ವ್ಯಕ್ತಿಯನ್ನು ಉದ್ದೇಶಿಸಿ ಬರೆದಿರುವ ಮಾನಸಿ, ನನ್ನನ್ನು ಗುರಿಯಾಗಿಸುವುದರಿಂದ ನಿನಗೆ ನಿಜಕ್ಕೂ ಖುಷಿ ಸಿಗುತ್ತಿದೆ ಎನ್ನುವುದು ನನಗೆ ಗೊತ್ತಿದೆ. ಮಹಿಳೆಗೆ ಕಿರುಕುಳ ನೀಡುವುದು ಮತ್ತು ಕೆಟ್ಟ, ಅಶ್ಲೀಲ ಪೋಸ್ಟ್‌ಗಳನ್ನು ಹಾಕುವುದು ಕಾನೂನಿಗೆ ವಿರುದ್ಧ ಮತ್ತು ಅಮಾನವೀಯ ಎನ್ನುವುದನ್ನು ಮೊದಲು ನೀನು ಅರ್ಥ ಮಾಡಿಕೊಳ್ಳಬೇಕು. ನೀನು ಕಲ್ಪಿಸಿಕೊಂಡಿದ್ದಕ್ಕಿಂತಲೂ ಕೆಟ್ಟದಾಗಿ ಜನರ ಮೇಲೆ ಇದು ಪರಿಣಾಮ ಬೀರುತ್ತದೆ. ನೀನು ಮಾಡಿರುವುದಕ್ಕೆ ಪ್ರತಿಯಾಗಿ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ. ನಿನಗೆ ತಕ್ಕುದಾದ ಶಾಸ್ತಿ ಆಗಲಿದೆ ಎಂದು ಮಾನಸಿ ಹೇಳಿದ್ದಾರೆ.


Click it and Unblock the Notifications











