ಥಿಯೇಟರ್‌ನಲ್ಲಿ ಮೆಗಾ ಹಿಟ್.. ಕಿರುತೆರೆಯಲ್ಲಿ ಮೆಗಾ ಪ್ಲಾಪ್: ಟಿವಿಯಲ್ಲಿ 'ಸಲಾರ್' ಸೋತಿದ್ದೇಕೆ?
ಒಂದರ ಹಿಂದೊಂದು ಸೋಲುಗಳನ್ನು ಕಂಡಿದ್ದ ಪ್ರಭಾಸ್‌ಗೆ ಕೊನೆಗೂ ಮೆಗಾ ಹಿಟ್ ಕೊಟ್ಟಿದ್ದು 'ಸಲಾರ್'. ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಮತ್ತೆ ಪ್ರಭಾಸ್ ಗೆಲುವಿನ ನಗೆ ಬೀರುವಂತಾಗಿತ್ತು. ಬಾಹುಬಲಿ 2 ಬಳಿಕ ಸೋಲಿನ ಕಹಿಯುಂಡಿದ್ದ ನಟ ಗೆಲುವಿನ ಅಲೆಯಲ್ಲಿ ತೇಲಾಡುವಂತಾಗಿತ್ತು.
ಥಿಯೇಟರ್‌ನಲ್ಲಿ ಈ ಮಾಸ್ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದ್ದು ಗೊತ್ತೇ ಇದೆ. ಪ್ಯಾನ್ ಇಂಡಿಯಾ ರಿಲೀಸ್ ಆಗಿದ್ದ 'ಸಲಾರ್' ಬಹುತೇಕ ಎಲ್ಲಾ ಭಾಷೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಬಾಕ್ಸಾಫೀಸ್‌ನಲ್ಲಿ ಸುಮಾರು 670 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದ್ರೀಗ ಇದೇ ಸಿನಿಮಾ ಟಿವಿಯಲ್ಲಿ ನೀರಸ ಪ್ರತಿಕ್ರಿಯೆ ನೀಡಿದೆ.

ಒಂದ್ಕಡೆ ಪ್ರಭಾಸ್.. ಇನ್ನೊಂದು ಕಡೆ ಪ್ರಶಾಂತ್ ನೀಲ್. ಇಬ್ಬರು ಪ್ಯಾನ್ ಇಂಡಿಯಾ ದಿಗ್ಗಜರು ಜೊತೆಗೆ ಸೇರಿದ ಮೇಲೆ ಸಿನಿಮಾ ದೊಡ್ಡ ಸಕ್ಸಸ್ ಆಗಲೇ ಬೇಕಿತ್ತು. ನಿರೀಕ್ಷೆಯಂತೆ ಥಿಯೇಟರ್‌ನಲ್ಲಿ ದೊಡ್ಡ ಮಟ್ಟದ ಸಕ್ಸಸ್ ಏನೋ ಸಿಕ್ಕಿತ್ತು. ಅದೇ ನಿರೀಕ್ಷೆ ಕಿರುತೆರೆಯಲ್ಲೂ ಇತ್ತು. ಆದರೆ, ಟಿವಿಯಲ್ಲಿ 'ಸಲಾರ್' ಪ್ರಸಾರ ಆದಾಗ ವೀಕ್ಷಕರು ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ. ಅಷ್ಟಕ್ಕೂ ಈ ಸಿನಿಮಾ ಟಿವಿಯಲ್ಲಿ ಸೋತಿದ್ದೇಕೆ? ತಿಳಿಯಲು ಮುಂದೆ ಓದಿ.
ಥಿಯೇಟರ್‌ನಲ್ಲಿ ಸಕ್ಸಸ್ ಟಿವಿಯಲ್ಲಿ ಫ್ಲಾಪ್
ಪ್ರಭಾಸ್ ಸಿನಿಮಾ 'ಸಲಾರ್'ಗೆ ತೆಲುಗು ಏರಿಯಾಗಳಲ್ಲಷ್ಟೇ ಅಲ್ಲ. ಹಿಂದಿ ಬೆಲ್ಟ್‌ನಲ್ಲಿಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಇದೇ ವೇಳೆ ಶಾರುಖ್ ಖಾನ್ ನಟನೆಯ 'ಡಂಕಿ' ಸಿನಿಮಾ ತೆರೆಕಂಡಿದ್ದರೂ, ಬಾಕ್ಸಾಫೀಸ್‌ನಲ್ಲಿ 'ಸಲಾರ್'ಗೂ ಅಷ್ಟೇ ರೆಸ್ಪಾನ್ಸ್ ಸಿಕ್ಕಿತ್ತು. ಹೀಗಾಗಿ ಈ ಬಿಗ್ ಬಜೆಟ್ ಸಿನಿಮಾ ಟಿವಿಯಲ್ಲಿ ಗೆಲ್ಲಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಕೇವಲ 6.5 ಟಿಆರ್‌ಪಿ ಗಿಟ್ಟಿಸಿಕೊಂಡಿದೆ. ಈ ಮೂಲಕ ಕಿರುತೆರೆಯಲ್ಲಿ ದೊಡ್ಡ ಫ್ಲಾಪ್ ದಾಖಲಾದಂತೆ ಆಗಿದೆ.
ಕಿರುತೆರೆಯಲ್ಲಿ ಸೋತಿದ್ದೇಕೆ?
ತೆಲುಗು ಮಂದಿ 'ಸಲಾರ್' ಸಿನಿಮಾ ಕಿರುತೆರೆಯಲ್ಲಿ ಸೋಲುವುದಕ್ಕೆ ಕಾರಣಗಳನ್ನು ಹುಡುಕುವುದಕ್ಕೆ ಶುರು ಮಾಡಿದ್ದಾರೆ. ಎರಡು ಪ್ರಮುಖ ಕಾರಣಗಳೆಂದರೆ, ಥಿಯೇಟರ್‌ನಲ್ಲಿ ಬಹುತೇಕ ಮಂದಿ 'ಸಲಾರ್' ಸಿನಿಮಾ ವೀಕ್ಷಣೆ ಮಾಡಿದ್ದರು. ಇನ್ನೊಂದು ಕಡೆ ಓಟಿಟಿಯಲ್ಲೂ 'ಸಲಾರ್' ರಿಲೀಸ್ ಆದ ಬಹಳ ದಿನಗಳ ಬಳಿಕ ಟಿವಿಯಲ್ಲಿ ರಿಲೀಸ್ ಆಗಿತ್ತು. ಈ ಕಾರಣಕ್ಕೆ ಟಿವಿಯಲ್ಲಿ ಜನ ನೋಡಲು ಮನಸ್ಸು ಮಾಡಿಲ್ಲ ಎಂದು ಗೆಸ್ ಮಾಡುತ್ತಿದ್ದಾರೆ.

ಐಪಿಎಲ್, ಎಲೆಕ್ಷನ್ ಎಫೆಕ್ಟ್
'ಸಲಾರ್' ಸಿನಿಮಾವನ್ನು ಜನರು ನೋಡದೇ ಇರುವುದಕ್ಕೆ ಇನ್ನೆರಡು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಸದ್ಯ ಐಪಿಎಲ್ ಪಂದ್ಯಗಳು ನಡೆಯುತ್ತಿರುವುದರಿಂದ ಕ್ರಿಕೆಟ್ ಪಂದ್ಯಗಳನ್ನೇ ಹೆಚ್ಚು ನೋಡುತ್ತಿದ್ದಾರೆ. ಇನ್ನೊಂದು ಕಡೆ ಆಂಧ್ರದಲ್ಲಿ ಚುನಾವಣೆಯಿದೆ. ಈ ಕಾರಣಕ್ಕೆ ಜನರ ಗಮನ ಬೇರೆ ಕಡೆಗೆ ಇದೆ. ಹೀಗಾಗಿ 'ಸಲಾರ್' ಸಿನಿಮಾವನ್ನು ಹೆಚ್ಚು ಮಂದಿ ನೋಡಿಲ್ಲ. ಈ ವೇಳೆ ಪ್ರಸಾರ ಮಾಡಬಾರದಿತ್ತು ಎಂಬ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಮಹೇಶ್, ನಾಗಾರ್ಜುನಾ ಸಿನಿಮಾಗಿಂತ ಕಮ್ಮಿ
ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಹಾಗೂ ನಾಗಾರ್ಜುನಾ ನಟನೆಯ 'ನಾ ಸಾಮಿ ರಂಗ' ಸಿನಿಮಾಗಳಿಗೆ ಥಿಯೇಟರ್‌ಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಕಿರುತೆರೆಯಲ್ಲಿ ಈ ಎರಡೂ ಸಿನಿಮಾಗಳಿಗೂ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ನಾಗಾರ್ಜುನಾ ಸಿನಿಮಾ 'ನಾ ಸಾಮಿ ರಂಗ' ಸಿನಿಮಾಗೆ 8 ಟಿಆರ್‌ಪಿ ಬಂದಿದ್ದು, 'ಸಲಾರ್'ಗೆ ಇದಕ್ಕಿಂತ ಕಮ್ಮಿ ರೆಸ್ಪಾನ್ಸ್ ಸಿಕ್ಕಿದೆ.


Click it and Unblock the Notifications











