ಸುಂದರ ದೃಶ್ಯ ಕಾವ್ಯ 'ಪ್ರೇಮ ಕಾವ್ಯ'ದ ಈ ಇಬ್ಬರು ನಾಯಕಿಯರ ಪಾತ್ರಗಳೇನು? ಯಾವಾಗ? ಎಲ್ಲಿ ಪ್ರಸಾರ?
ಕಿರುತೆರೆಯಲ್ಲಿ ನಿರಂತರವಾಗಿ ಹೊಸ ಧಾರಾವಾಹಿಗಳನ್ನು ಪ್ರಸಾರ ಆಗುತ್ತಲೇ ಇರುತ್ತವೆ. ಒಂದು ಧಾರಾವಾಹಿ ಮುಗಿಯುತ್ತಿದ್ದಂತೆ ಮತ್ತೊಂದು ಸೀರಿಯಲ್ ವೀಕ್ಷಕರನ್ನು ರಂಜಿಸುವುದಕ್ಕೆ ರೆಡಿಯಿರುತ್ತೆ. ಕನ್ನಡದ ಮನರಂಜನ ವಾಹಿನಿಗಳಲ್ಲಿ ಇದು ಕಾಮನ್. ಈಗ ಕಲರ್ಸ್ ಕನ್ನಡದಲ್ಲಿ ಹೊಚ್ಚ ಹೊಸ ಧಾರಾವಾಹಿಯೊಂದು ಪ್ರೇಕ್ಷಕರನ್ನು ರಂಜಿಸುವುದಕ್ಕೆ ರೆಡಿಯಾಗಿದೆ. ಅದುವೇ 'ಪ್ರೇಮ ಕಾವ್ಯ'.
ಇತ್ತೀಚೆಗೆ ಕಲರ್ಸ್ ಕನ್ನಡದ ಎರಡು ಪ್ರಮುಖ ಧಾರಾವಾಹಿಗಳು ಮುಗಿಯುತ್ತಿವೆ. ಈ ಜಾಗಕ್ಕೆ ಹೊಸ ಧಾರಾವಾಹಿಗಳನ್ನು ಪರಿಚಯಿಸಲಾಗುತ್ತಿದೆ. ಇನ್ನು ಮೂರು ತಿಂಗಳಲ್ಲಿ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 ಶುರುವಾಗುತ್ತೆ. ಅದಕ್ಕೂ ಮುನ್ನ ಕೆಲವು ಧಾರಾವಾಹಿಗಳಿಗೆ ಗುಡ್ ಬೈ ಹೇಳಿ, ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡುವುದಕ್ಕೆ ಕಲರ್ಸ್ ಕನ್ನಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದರಲ್ಲೊಂದು 'ಪ್ರೇಮ ಕಾವ್ಯ'.

'ಪ್ರೇಮ ಕಾವ್ಯ' ಕಲರ್ಸ್ ಕನ್ನಡದಲ್ಲಿ ಆಗಸ್ಟ್ 4ರಿಂದ ಪ್ರಸಾರವಾಗುತ್ತಿದೆ. ಈ ಧಾರಾವಾಹಿಯಲ್ಲಿ ಕಿರುತೆರೆಯರ ಜನಪ್ರಿಯ ನಟರು ನಟಿಸುತ್ತಿದ್ದಾರೆ. ಇದೊಂದು ಎರಡು ಜೋಡಿಯ ಪ್ರೇಮಕಥೆ. ಈ ಸೀರಿಯಲ್‌ಗೆ ನಾಯಕಿಯರಾಗಿ ಪ್ರೇಮಾ ಪಾತ್ರದಲ್ಲಿ ಪ್ರಿಯಾ ಜೆ ಆಚಾರ್, ಕಾವ್ಯಾ ಪಾತ್ರದಲ್ಲಿ ವೈಷ್ಣವಿ ನಟಿಸುತ್ತಿದ್ದಾರೆ. ಹಾಗೇ 'ನಮ್ಮನೆ ಯುವರಾಣಿ' ಖ್ಯಾತಿಯ ರಾಘವೇಂದ್ರ ಹಾಗೂ ವಿಕಾಸ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು 'ಪ್ರೇಮ ಕಾವ್ಯ' ಧಾರಾವಾಹಿಯನ್ನು ರವೀನ್ ಕುಮಾರ್ ನಿರ್ಮಾಣ ಮಾಡುವುದರ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಈ ಧಾರಾವಾಹಿ ಬಗ್ಗೆ ಇಬ್ಬರು ನಾಯಕಿಯರು ತಮ್ಮ ಪಾತ್ರಗಳ ಬಗ್ಗೆ ಸುಳಿವನ್ನು ಬಿಟ್ಟು ಕೊಟ್ಟಿದ್ದಾರೆ. "ನಾನು ಈ ಧಾರಾವಾಹಿಯಲ್ಲಿ ಪ್ರೇಮ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ತಂದೆ, ತಾಯಿ ಹಾಗೂ ತಂಗಿ ಇದೇ ನನ್ನ ಪುಟ್ಟ ಪ್ರಪಂಚ. ಪ್ರೇಮಾ ಹೆಚ್ಚು ವಿದ್ಯಾವಂತೆ ಅಲ್ಲ. ಆದರೆ ತಂಗಿ ಕಾವ್ಯಾ ಸೈಂಟಿಸ್ಟ್ ಆಗಬೇಕೆಂಬ ಆಸೆ ಇಟ್ಟಕೊಂಡಿದ್ದಾಳೆ. ಅವಳ ಕನಸಿಗೆ ಸಹಕಾರ ನೀಡುತ್ತೇನೆ. ಜೊತೆಗೆ ಬಾಲ್ಯದ ಗೆಳೆಯ ರಾಮ್‌ನನ್ನು ಪ್ರೀತಿಸುತ್ತಿರುತ್ತೇನೆ" ಎಂದು ತಮ್ಮ ಪಾತ್ರದ ಬಗ್ಗೆ ನಟಿ ಪ್ರಿಯಾ ಜೆ ಆಚಾರ್ ಮಾಹಿತಿ ಹಂಚಿಕೊಂಡಿದ್ದಾರೆ.
'ಪ್ರೇಮ ಕಾವ್ಯ' ಧಾರಾವಾಹಿಯಲ್ಲಿ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋದು ವೈಷ್ಣವಿ. ಈ ಧಾರಾವಾಹಿಯಲ್ಲಿ ಅವರದ್ದು ಕಾವ್ಯ ಎನ್ನುವ ಪಾತ್ರ. "ನಾನು ಈ ಧಾರಾವಾಹಿಯಲ್ಲಿ ವಿದ್ಯಾವಂತೆ. ಬಾಹ್ಯಾಕಾಶ ವಿಜ್ಞಾನಿ ಆಗಬೇಕೆಂಬುದು ನನ್ನ ಆಸೆ. ಹಳ್ಳಿಯಲ್ಲಿ ಹೆಚ್ಚು ಇರೋದಿಲ್ಲ. ನಗರದಲ್ಲೇ ಹೆಚ್ಚು ವಾಸ್ತವ್ಯ. ವಿದ್ಯಾವಂತೆ ಹಾಗೂ ಸೌಮ್ಯ ಸ್ವಾಭಾವದ ಹುಡುಗಿ" ಎಂದು ವೈಷ್ಣವಿ ತಮ್ಮ ಪಾತ್ರದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹಾಗೇ ಈ ಧಾರಾವಾಹಿಗೆ 'ನಮ್ಮನೆ ಯುವರಾಣಿ' ಸೀರಿಯಲ್‌ನಲ್ಲಿ ಸಾಕೇತ್ ಪಾತ್ರದಲ್ಲಿ ನಟಿಸಿದ್ದ ರಾಘವೇಂದ್ರ ನಾಯಕ. ಇಲ್ಲಿ ಮಾದೇವನಾಗಿ ವೀಕ್ಷಕರಿಗೆ ಮನರಂಜನೆಯನ್ನು ನೀಡುವುದಕ್ಕೆ ಬರುತ್ತಿದ್ದಾರೆ. "ಮಾತು ಬಾರದ ತಂಗಿ. ಅವಳೆ ನನಗೆ ಪ್ರಪಂಚ. ಇನ್ನೂ ಅಮ್ಮನ ಮಾತೇ ವೇದವಾಕ್ಯ. ಕೆಟ್ಟದ್ದರ ಹಾಗೂ ಕೆಟ್ಟವರ ವಿರುದ್ಧ ಹೋರಾಡುತ್ತೇನೆ. ನಾನು ಸ್ವಲ್ಪ ಮುಂಗೋಪಿ. ಹಾಗಾಗಿ ಎಲ್ಲರಿಗೂ ನಾನು ಕೆಟ್ಟವನಾಗಿ ಕಾಣುತ್ತೇನೆಂದು ತಮ್ಮ ಪಾತ್ರದ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
ಈ ಧಾರಾವಾಹಿಯ ಇನ್ನೊಬ್ಬ ಹೀರೋ ವಿಕಾಸ್. 'ಪ್ರೇಮ ಕಾವ್ಯ'ದ ಮೂಲಕ ಕಿರುತೆರೆಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ." ನನ್ನ ಪಾತ್ರದ ಹೆಸರು ರಾಮ್. ಮೃದು ಸ್ವಭಾವದವನು. ನಾನು ವೃತ್ತಿಯಲ್ಲಿ ವೈದ್ಯ. ಮಾದೇವನ ದೊಡ್ಡಮ್ಮನ ಮಗ. ದೊಡ್ಡಮ್ಮನಿಗೆ ನಾನು ಈ ಊರಿನಲ್ಲೇ ಆಸ್ಪತ್ರೆ ಕಟ್ಟಿ ವೈದ್ಯನಾಗಿರಬೇಕೆಂಬ ಆಸೆ. ದೊಡ್ಡಮ್ಮನ ಆಸೆಯೇ ನನ್ನ ಆಸೆ" ಎನ್ನುತ್ತಾರೆ ನಟ ವಿಕಾಸ್. ಇನ್ನು ಈ ಧಾರಾವಾಹಿ ಆಗಸ್ಟ್ 4 ರಿಂದ ಕಲರ್ಸ್ ಕನ್ನಡದಲ್ಲಿ ಸಂಜೆ 6.30ಕ್ಕೆ ಪ್ರಸಾರ ಆಗುತ್ತಿದೆ.


Click it and Unblock the Notifications











