9ನೇ ತರಗತಿ ಓದುತ್ತಿದ್ದಾಗಲೇ ಮಾಧುರಿ ದೀಕ್ಷಿತ್ ಜೊತೆ ನಟಿಸಿದ್ದ 'ರಾಧೆಶ್ಯಾಮ' ಸೀರಿಯಲ್ ನಟಿ ತನ್ವಿ ರಾವ್
ಉತ್ತರ ಪ್ರದೇಶದಲ್ಲಿ ಒಂದು 'ಗುಲಾಬಿ ಗ್ಯಾಂಗ್' ಅಂತಿತ್ತು. ಅವರಿಂದ ಪ್ರೇರಣೆ ಹೊಂದಿ ಒಂದು ಸಿನಿಮಾವನ್ನು 'ಗುಲಾಬಿ ಗ್ಯಾಂಗ್' ಎನ್ನುವ ಸಿನಿಮಾವನ್ನು ನಿರ್ಮಾಣ ಮಾಡಲಾಗಿತ್ತು. ಈ ಚಿತ್ರದಲ್ಲಿ ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೇ ಸಿನಿಮಾದಲ್ಲಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ಯುವ ನಟಿ, 'ರಾಧೆಶ್ಯಾಮ' ಧಾರಾವಾಹಿಯ ನಾಯಕಿ ತನ್ವಿ ರಾವ್ ಕೂಡ ನಟಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ತನ್ನ ಪ್ರತಿಭೆಯಿಂದ ಬಾಲಿವುಡ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರು. ಮಹಿಳಾ ದಿನಾಚರಣೆಯಂದು ಕಿರುತೆರೆ ನಟಿಯ ಅಪರೂಪದ ಸಾಧನೆ ಇಲ್ಲಿದೆ.
ತನ್ವಿ ರಾವ್ ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ 'ರಾಧೆಶ್ಯಾಮ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ರಾಧೆಯ ಪಾತ್ರದಲ್ಲಿ ನಟಿಸುತ್ತಿರುವ ತನ್ವಿ ರಾವ್ ಕಿರುತೆರೆ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಆದರೆ, ಈ ನಟಿ ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಭರತನಾಟ್ಯಂ ಡ್ಯಾನ್ಸರ್ ಹಾಗೂ ಮಾಧುರಿ ದೀಕ್ಷಿತ್ ಅಪ್ಪಟ ಅಭಿಮಾನಿಯಾಗಿದ್ದ ತನ್ವಿ ರಾವ್ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದೇ ರೋಚಕ. ಮಹಿಳಾ ದಿನಾಚರಣೆಯ ಈ ವಿಶೇಷ ದಿನದಂದು ತನ್ವಿ ರಾವ್ ತನ್ನ ಕನಸನ್ನು ಈಡೇರಿಸಿಕೊಂಡ ಕ್ಷಣಗಳ ಬಗ್ಗೆ ಫಿಲ್ಮಿ ಬೀಟ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

'ರಾಧೆಶ್ಯಾಮ' ನಟಿ ಮಾಧುರಿ ಜೊತೆ ನಟನೆ
"ನಾನು ಆಗ 9ನೇ ಕ್ಲಾಸ್‌ನಲ್ಲಿ ಓದುತ್ತಿದ್ದೆ. ಆಗ ನನಗೆ ಆಕ್ಟರ್ ಆಗಬೇಕು ಅಂತ ಆಸೆಯಿರಲಿಲ್ಲ. ಡ್ಯಾನ್ಸರ್ ಆಗಬೇಕು ಅಂತ ಆಸೆಯಿತ್ತು. ಭರತನಾಟ್ಯಂ ಕಲಿಯುತ್ತಿದ್ದೆ ಅದರ ಬಗ್ಗೆ ತುಂಬಾನೇ ಗಂಭೀರವಾಗಿ ಆಲೋಚಿಸುತ್ತಿದ್ದೆ. ವಿದೇಶದಲ್ಲಿಯೂ ಡ್ಯಾನ್ಸ್ ಪರ್ಫಾಮೆನ್ಸ್ ಕೊಟ್ಟಿದ್ದೆ. ನನಗೆ ಚಿಕ್ಕ ವಯಸ್ಸಿನಿಂದಲೂ ಮಾಧುರಿ ದೀಕ್ಷಿತ್ ಅಂದರೆ, ದೊಡ್ಡ ಫ್ಯಾನ್ ನಾನು. ಅವರ ಸಣ್ಣ ಸಣ್ಣ ಹೆಜ್ಜೆಯನ್ನೂ ಮನೆಯಲ್ಲಿ ಕೂತು ನೋಡುತ್ತಿದ್ದೆ. ಮನೆಯಲ್ಲಿ ಕೂತು ಅವರ ಸಿಡಿ ಹಾಕಿ ಹಾಕಿ ನೋಡುತ್ತಿದ್ದೆ. ನಾನು ಮಾಡಿ ಡಾನ್ಸ್ ವಿಡಿಯೋವನ್ನು ಅವರಿಗೆ ಕಳುಹಿಸಿದ್ದೆ. ಆಗಲೇ ಅವರು ವಾಪಸ್ ಬರೆದು ಕಳುಹಿಸಿದ್ದರು."

ತನ್ವಿ ರಾವ್‌ಗೆ ಮಾಧುರಿ ಸಿನಿಮಾ ಸಿಕ್ಕಿದ್ದೇಗೆ?
"ನನ್ನ ಡ್ಯಾನ್ಸ್ ವಿಡಿಯೋ ನೋಡಿ, ನಿನ್ನ ಡ್ಯಾನ್ಸ್ ವಿಡಿಯೋ ನೋಡಿದ್ದೀನಿ. ಚೆನ್ನಾಗಿ ಮಾಡುತ್ತೀಯಾ. ಹೀಗೆ ಮುಂದುವರೆಸು ಅಂತ ಮಾಧುರಿ ದೀಕ್ಷಿತ್ ಮೆಚ್ಚುಗೆ ಸೂಚಿಸಿದ್ದರು. ನನಗೆ ಅವರು ಒಬ್ಬ ವ್ಯಕ್ತಿಯಾಗಿ ತುಂಬಾ ಒಳ್ಳೆಯವರು ಅಂತ ಗೌರವವಿತ್ತು. ಅವರೊಂದಿಗೆ ಕೆಲಸ ಮಾಡುತ್ತೇನೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ಮುಂಬೈನಲ್ಲಿ ಯಾವುದೋ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ಸಂಬಂಧಿಯೊಬ್ಬರದ್ದು ರಂಗಪ್ರವೇಶವಿತ್ತು. ಅವಳೂ ಕೂಡ ಭರತನಾಟ್ಯಂ ಡ್ಯಾನ್ಸರ್. ಆಗ ಸಮಯದಲ್ಲಿ ಈ ಸಿನಿಮಾಗೆ ಆಡಿಷನ್ ನಡೆಯುತ್ತಿತ್ತು. ಆಡಿಷನ್ ಕೊಟ್ಟು ಬಂದಿದ್ದೆ. ಅದೇನೋ ನನ್ನ ಅದೃಷ್ಟ ಅಂತ ಅನಿಸುತ್ತೆ. ನಾನು ಸೆಲೆಕ್ಟ್ ಆದೆ. ನಾನು ಅವಕಾಶ ಸಿಗುತ್ತೆ ಅಂತ ನಿರೀಕ್ಷೆನೇ ಮಾಡಿರಲಿಲ್ಲ. ನನ್ನ ಫಸ್ಟ್ ಡೇ ಶೂಟಿಂಗ್ ನಾನು ನನ್ನ ಅಪ್ಪ ಹೋಗಿದ್ದೆವು. ನಾವಿಬ್ಬರೂ ಕೂತಿದ್ದೆವು. ಆಗ ಮಾಧುರಿ ದೀಕ್ಷಿತ್ ನನ್ನ ಮುಂದೆನೇ ನಡೆದುಕೊಂಡು ಹೋದ್ರು. ಆ ಕ್ಷಣದಲ್ಲಿ ನಾನು ಇನ್ನೂ ಇಲ್ಲಿ ಇದ್ದೀನಾ ಅಂತ ಅನಿಸಿತ್ತು." ಎಂದು ಆ ಘಳಿಗೆಯನ್ನು ನೆನಪಿಸಿಕೊಳ್ಳುತ್ತಾರೆ.

'ಮಾಧುರಿಯಿಂದ ಶಿಸ್ತು ಕಲಿತಿದ್ದೇನೆ'
"ಮಾಧುರಿ ದೀಕ್ಷಿತ್ ಅವರಿಂದ ಆಕ್ಟಿಂಗ್ ಆಗಲಿ, ಡ್ಯಾನ್ಸ್ ಆಗಲಿ ಕಲಿಯುವುದು ತುಂಬಾನೇ ಇದೆ. ತುಂಬಾನೇ ಸೀರಿಯಸ್ ಆಗಿ ತಗೋತಾರೆ. ಸಣ್ಣ ಸಣ್ಣ ಭಾವನೆಗಳ ಮೇಲೂ ಗಮನ ಇಡುತ್ತಾರೆ. ಅವರೇ ಕೆಲವೊಮ್ಮೆ ಹೇಳುತ್ತಾರೆ. ನನ್ನಿಂದ ಆಗಿಲ್ಲ. ಇನ್ನೊಮ್ಮೆ ತೆಗೆದುಕೊಳ್ಳಲ್ಲಾ? ಅಂತ ಹೇಳುತ್ತಾರೆ. ಅವರಿಂದ ನಾನು ತುಂಬಾನೇ ಶಿಸ್ತನ್ನು ಕಲಿತಿದ್ದೇನೆ. ಅವರು ಸಿಕ್ಕಿಲ್ಲ ಅಂದರೆ, ನಾನು ಇಂದು ಸ್ಕ್ರಿಪ್ಟ್ ಓದಿ ನಟನೆ ಮಾಡುತ್ತಿರಲಿಲ್ಲ ಅಂತ ಅನಿಸುತ್ತೆ." ಎನ್ನುತ್ತಾರೆ ತನ್ವಿ ರಾವ್.
ಜೂಹಿ ಚಾವ್ಲಾ ಭೇಟಿ ಮಾಡಿದ್ದ ತನ್ವಿ
" ಜೂಹಿ ಚಾವ್ಲಾ ಅವರನ್ನೂ ಭೇಟಿ ಮಾಡಿದ್ದೆ. ಅವರು ಸೆಟ್ಟಲ್ಲಿ ತುಂಬಾನೇ ತಮಾಷೆಯಾಗಿ ಇರುತ್ತಾರೆ. ಆದರೆ, ಅವರು ವಿಲನ್ ಕ್ಯಾರೆಕ್ಟರ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಯುತ್ತೆ. ಒಬ್ಬ ಪೊಲಿಟಿಷಿಯನ್ ಮಗ ಅತ್ಯಾಚಾರ ಮಾಡಿರುತ್ತಾನೆ. ಆಗ ಈ ಕೇಸ್ ಮುಚ್ಚಿಹಾಕಲು ಪ್ರಯತ್ನ ಪಡುತ್ತಾರೆ. ಆ ವೇಳೆ ಗುಲಾಬ್ ಗ್ಯಾಂಗ್ ಬಂದು ಸಪೂರ್ಟ್ ಮಾಡುತ್ತಾರೆ. ಅಲ್ಲಿಂದ ಸ್ಟೋರಿ ಮುಂದಕ್ಕೆ ಹೋಗುತ್ತೆ. ನನ್ನಿಂದ ಫೈಟ್ ಮಾಡುತ್ತಾ ಕಥೆ ಮುಂದಕ್ಕೆ ಹೋಗುತ್ತೆ." ಎಂದು ಮಾಧುರಿ ದೀಕ್ಷಿತ್ ಹಾಗೂ ಜೂಹಿ ಚಾವ್ಲಾ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.


Click it and Unblock the Notifications











