ಥಿಯೇಟರ್, ಓಟಿಟಿ ಆಯ್ತು.. ಕಿರುತೆರೆಯಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ; ಯಾವಾಗ? ಎಷ್ಟೊತ್ತಿಗೆ ಪ್ರಸಾರ?
ವೀಕೆಂಡ್‌ನಲ್ಲಿ ಟಿವಿಗಾಗಿ ಮನೆಯಲ್ಲಿ ಜಗಳ ಆದರೂ ಆಗಬಹುದು. ಯಾಕಂದ್ರೆ, ಐಪಿಎಲ್ ಪಂದ್ಯಗಳು ಆರಂಭ ಆದ ಬೆನ್ನಲ್ಲೇ ಮನರಂಜನಾ ವಾಹಿನಿಗಳು ಪೈಪೋಟಿ ನೀಡುವುದಕ್ಕೆ ಸಜ್ಜಾಗುತ್ತಿವೆ. ಕನ್ನಡದ ಹೊಚ್ಚ ಸಿನಿಮಾಗಳನ್ನು ಟಿವಿಯಲ್ಲಿ ಪ್ರೀಮಿಯರ್ ಮಾಡುವುದಕ್ಕೆ ಸಜ್ಜಾಗಿ ನಿಂತಿವೆ. ಹೀಗಾಗಿ ಒಂದ್ಕಡೆ ಕ್ರಿಕೆಟ್ ಪ್ರೇಮಿಗಳು. ಇನ್ನೊಂದು ಕಡೆ ಸಿನಿ ಪ್ರೇಮಿಗಳ ನಡುವೆ ಟಿವಿ ನೋಡುವುದಕ್ಕೆ ಪೈಪೋಟಿಗೆ ಬಿದ್ದರೂ ಬೀಳಬಹುದು.
ಇದೇ ಭಾನುವಾರ ಜೀ ಕನ್ನಡದಲ್ಲಿ ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾ 'ಸಪ್ತಸಾಗರದಾಚೆ ಎಲ್ಲೋ' ಸೈಡ್ ಬಿಯನ್ನು ಇದೇ ಮೊದಲ ಬಾರಿಗೆ ಪ್ರಸಾರ ಮಾಡಲಾಗುತ್ತಿದೆ. ಹೀಗಾಗಿ ವೀಕೆಂಡ್‌ನಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ನೋಡುತ್ತಾ ಎಮೋಷನಲ್ ಮೂಡಿಗೆ ಜಾರುವುದು ಗ್ಯಾರಂಟಿ.

ಜೀ ಕನ್ನಡ ವಾಹಿನಿಯಲ್ಲಿ ಕೇವಲ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳನ್ನಷ್ಟೇ ಹೆಚ್ಚಾಗಿ ಪ್ರಸಾರ ಮಾಡುತ್ತಿತ್ತು. ಆಗಾಗ ವಿಶೇಷ ಸಂದರ್ಭಗಳಲ್ಲಿ ಮೆಗಾ ಹಿಟ್ ಕಂಡ ಸಿನಿಮಾಗಳನ್ನು ಪ್ರಸಾರ ಮಾಡಿದೆ. ಅದರಲ್ಲಿ 'ಕೆಜಿಎಫ್', 'ವಿಕ್ರಾಂತ್ ರೋಣ', 'ಗರುಡ ಗಮನ ವೃಷಭ ವಾಹನ', 'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಅಂತಹ ಸಿನಿಮಾಗಳನ್ನು ಪ್ರಸಾರ ಮಾಡಿದೆ.
ಈಗ ಐಪಿಎಲ್ ಆರಂಭ ಆಗಿರುವ ಬೆನ್ನಲ್ಲೇ ಪೈಪೋಟಿ ನೀಡುವುದಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡಲಾಗುತ್ತಿದೆ. ಈ ವೀಕೆಂಡ್‌ನಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಹಾಗೂ ಚೈತ್ರ ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯನ್ನು ಪ್ರಸಾರ ಮಾಡುತ್ತಿದೆ. ಹೇಮಂತ್ ಎಂ ರಾವ್ ನಿರ್ದೇಶಿಸಿದ ಈ ಸಿನಿಮಾಗೆ ಕನ್ನಡ ಅಷ್ಟೇ ಅಲ್ಲ, ತೆಲುಗು, ಹಿಂದಿ ಭಾಷೆಯಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು.
ರಕ್ಷಿತ್ ಶೆಟ್ಟಿ ನಿರ್ಮಾಣದ ಈ ಸಿನಿಮಾಗೆ ಓಟಿಟಿಯಲ್ಲೂ ಸೂಪರ್ ಹಿಟ್ ಆಗಿತ್ತು. ಅದರಲ್ಲೂ ಹೇಮಂತ್ ರಾವ್ ನಿರ್ದೇಶನ ಹಾಗೂ ಚರಣ್ ರಾಜ್ ಹಾಡುಗಳಿಗೆ ಕನ್ನಡಿಗರ ಫಿದಾ ಆಗಿದ್ದರು. ಇನ್ನೊಂದು ಕಡೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣಕ್ಕೂ ಭೇಷ್ ಎಂದಿದ್ದರು. ಸದ್ಯ ಥಿಯೇಟರ್‌ನಲ್ಲಿ, ಓಟಿಟಿಯಲ್ಲಿ ಮೋಡಿ ಮಾಡಿದ್ದ ಈ ಸಿನಿಮಾವನ್ನು ಈಗ ಕಿರುತೆರೆಯಲ್ಲೂ ನೋಡಬಹುದಾಗಿದೆ. ಇನ್ನೊಂದು ವಿಶೇಷ ಅಂದ್ರೆ, ಇತ್ತೀಚೆಗೆ ಸೈಡ್ ಬಿ ಓಟಿಟಿಯಲ್ಲೂ ಸಿಗದೆ ಹಿನ್ನೆಲೆಯಲ್ಲಿ ಟಿವಿಯಲ್ಲಿ ನೋಡಿವ ಸದಾವಕಾಶ ಸಿಕ್ಕಿದೆ.

'ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ' ಜೀ ಕನ್ನಡದಲ್ಲಿ ರಿಲೀಸ್ ಆಗಿತ್ತು. ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರ ಆದಾಗ ವೀಕ್ಷಕರಿಂದಲೂ ಜನಮೆಚ್ಚುಗೆ ಗಳಿಸಿತ್ತು. ಈಗ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಕೂಡ ವರ್ಲ್ಡ್ ಪ್ರೀಮಿಯರ್ ಆಗುತ್ತಿದೆ. ಈ ಸಿನಿಮಾ ಕಿರುತೆರೆಯಲ್ಲಿ ಅದ್ಯಾವ ಮಟ್ಟಿಗೆ ಮೋಡಿ ಮಾಡಲಿದೆ ಅನ್ನುವ ಕುತೂಹಲಕ್ಕೆ ಮುಂದಿನ ವಾರ ತೆರೆಬೀಳಲಿದೆ.
ಅಂದ ಹಾಗೆ, 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿ ಇದೇ ಭಾನುವಾರ (ಮಾರ್ಚ್ 24)ದಂದು ಜೀ ಕನ್ನಡ ವಾಹಿನಿಯಲ್ಲಿ ರಾತ್ರಿ 7.30 ಕ್ಕೆ ಪ್ರಸಾರವಾಗುತ್ತಿದೆ. ಇದೂವರೆಗೂ ಈ ಸಿನಿಮಾ ನೋಡದವರು ಕಿರುತೆರೆಯಲ್ಲಿ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್ ಬಿಯನ್ನು ನೋಡಿ ಆನಂದಿಸಬಹುದು.


Click it and Unblock the Notifications











