ರಮ್ಯಾಗೆ ರಾಹುಲ್ ಗಾಂಧಿನೇ ಪ್ರೇರಣೆ: ಸಾವು ಬದುಕಿನ ಬಗ್ಗೆ 'ರಾಗ' ಪಾಠ ಮಾಡಿದ್ಯಾವಾಗ?
ವೀಕೆಂಡ್ ವಿತ್ ರಮೇಶ್ ಸೀಸನ್ 5 ಹಲವು ನಿರೀಕ್ಷೆಗಳೊಂದಿಗೆ ಆರಂಭ ಆಗಿದೆ. ಈ ಬಾರಿ ಸೀಸನ್‌ನಲ್ಲಿ 20 ಮಂದಿ ಸಾಧಕರನ್ನು ಪರಿಯ ಮಾಡುವುದಕ್ಕೆ ಜೀ ಕನ್ನಡ ನಿರ್ಧರಿಸಿದೆ. ಸೀಸನ್ 5ರ ಮೊದಲ ಅತಿಥಿಯ ರಮ್ಯಾ ಆಗಮಿಸಿದ್ದು, ಎರಡು ದಿನಗಳ ಕಾಲ ಅವರ ಬಗ್ಗೆ ಆಸಕ್ತಿಕರ ವಿಷಯಗಳನ್ನು ಪ್ರಸಾರ ಮಾಡಲಾಗಿದೆ.
ಮೋಹಕತಾರೆ ರಮ್ಯಾ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಸಾಧಕರ ಸೀಟ್‌ನಲ್ಲಿ ಕೂರಬೇಕು ಅನ್ನೋದು ಹಲವು ದಿನಗಳ ಬೇಡಿಕೆಯಾಗಿತ್ತು. ಹೀಗಾಗಿಯೇ ಈ ಬಾರಿ ರಮ್ಯಾರನ್ನು ವೀಕೆಂಡ್ ವಿತ್ ರಮೇಶ್‌ಗೆ ಮೊದಲ ಅತಿಥಿಯಾಗಿ ಕರೆಸಲಾಗಿತ್ತು. ಎರಡನೇ ದಿನದಲ್ಲಿ ರಮ್ಯಾ ಸಿನಿಮಾ, ರಾಜಕೀಯ ಹಾಗೂ ತಮ್ಮ ಬದುಕಿನ ಕೆಲವು ಗೊತ್ತಿರದ ಸಂಗತಿಗಳನ್ನು ರಿವೀಲ್ ಮಾಡಿದ್ದಾರೆ.

ರಮ್ಯಾ ಸಿನಿಮಾದಿಂದ ರಾಜಕೀಯಕ್ಕೆ ಎಂಟ್ರಿ ಕೊಡುವ ಸಂದರ್ಭದಲ್ಲಿ ಸಾಕಷ್ಟು ಕಷ್ಟಗಳು ಎದುರಾಗಿದ್ದವು. ರಾಜಕೀಯ ಪ್ರಚಾರದ ವೇಳೆನೇ ರಮ್ಯಾ ತಂದೆ ತೀರಿಕೊಂಡಿದ್ದರು. ಮಂಡ್ಯದಿಂದ ಆಯ್ಕೆ ಆದಾಗ, ಪಾರ್ಲಿಮೆಂಟ್ ಬಗ್ಗೆ ಕಿಂಚಿತ್ತೂ ಜ್ಞಾನವಿರಲಿಲ್ಲ. ತಂದೆ ನಿಧನ ಬಳಿಕ ರಮ್ಯಾ ಬದುಕನ್ನೇ ಅಂತ್ಯಗೊಳಿಸಬೇಕು ಅಂತ ಅಂದ್ಕೊಡ್ಡಿದ್ದರಂತೆ. ಈ ವೇಳೆ ರಾಹುಲ್ ಗಾಂಧಿ ಮೋಹಕತಾರೆ ರಮ್ಯಾಗೆ ಬದುಕಿನ ಬಗ್ಗೆ ಪ್ರೇರಣೆ ನೀಡಿದ್ದರು. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ತಾಯಿ ಮೊದಲು.. ನಂತ್ರ ತಂದೆ ಪ್ರೇರಣೆ
ಮೋಹಕತಾರೆ ರಮ್ಯಾ ಸಿನಿಮಾ ಹಾಗೂ ರಾಜಕೀಯ ಎರಡಲ್ಲೂ ಸಕ್ಸಸ್ ಕಂಡವರು. ಸಿನಿಮಾದಲ್ಲಂತೂ ಒಂದು ದಶಕಗಳ ಕಾಲ ನಂಬರ್ 1 ನಟಿಯಾಗಿ ಮೆರೆದಿದ್ದವರು. ಹಾಗೇ ರಾಜಕೀಯದಲ್ಲೂ ಸೋಲಿಗಿಂತ ಗೆಲುವು ಕಂಡಿದ್ದೇ ಹೆಚ್ಚು. ಈ ಯಶಸ್ಸಿಗೆ ಪ್ರೇರಣೆ ತಂದೆ-ತಾಯಿ ಎಂದು ಮನಬಿಚ್ಚಿ ಮಾತಾಡಿದ್ದಾರೆ.

"ನನ್ನ ತಂದೆಯನ್ನು ಕಳೆದು ಕೊಂಡ ಎರಡು ವಾರಗಳ ಬಳಿಕ ನಾನು ಪಾರ್ಲಿಮೆಂಟ್‌ನಲ್ಲಿ ಇದ್ದೆ. ಅಲ್ಲಿ ನನಗೆ ಯಾರೂ ಗೊತ್ತಿಲ್ಲ. ಏನೂ ಗೊತ್ತಿಲ್ಲ. ಪಾರ್ಲಿಮೆಂಟ್‌ನ ಪ್ರೊಸಿಡಿಂಗ್ಸ್ ಕೂಡ ಗೊತ್ತಿಲ್ಲ. ಆದರೆ, ನಾನು ಕಲಿತೆ. ಮಂಡ್ಯದ ಜನತೆಗೆ ನಾನು ಧನ್ಯವಾದಗಳನ್ನು ಹೇಳುತ್ತೇನೆ. ಅವರು ಇಲ್ಲದೆ ನನಗೆ ಆ ಧೈರ್ಯ ಬರುತ್ತಿರಲಿಲ್ಲ. ನನ್ನ ತಾಯಿ ಮೊದಲು ನನಗೆ ದೊಡ್ಡ ಪ್ರೇರಣೆ. ಆ ಮೇಲೆ ನನ್ನ ತಂದೆ." ಎಂದು ರಮ್ಯಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
"ನನ್ನ ಬದುಕನ್ನೇ ಅಂತ್ಯಗೊಳಿಸುವುದಕ್ಕೆ ನಿರ್ಧಾರಿಸಿದ್ದೆ"
ಕಷ್ಟ ಅಂತ ಬಂದಾಗ ರಮ್ಯಾ ಸಹಾಯ ಹಸ್ತ ಚಾಚಿರುವ ಹಲವು ಉದಾಹರಣೆಗಳಿವೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವೇ ಇದಕ್ಕೆ ಸಾಕ್ಷಿಯಾಗಿತ್ತು. ಕನ್ನಡ ಚಿತ್ರರಂಗದ ಹಲವು ಮಂದಿ ರಮ್ಯಾ ಬಗ್ಗೆ ಮಾತಾಡಿದ್ದಾರೆ. ಆದರೆ, ತಂದೆ ನಿಧನರಾದಾಗ, ರಮ್ಯಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ತನ್ನ ಬದುಕನ್ನೇ ಅಂತ್ಯಗೊಳಿಸುವುದಕ್ಕೆ ನಿರ್ಧರಿಸಿದ್ದರಂತೆ. ಆಗ ಸಹಾಯಕ್ಕೆ ಬಂದವರೇ ರಾಹುಲ್ ಗಾಂಧಿ ಎಂದು ರಮ್ಯಾ ಹೇಳಿಕೊಂಡಿದ್ದಾರೆ.
"ಮೂರನೇ ಪ್ರೇರಣೆ ರಾಹುಲ್ ಗಾಂಧಿ ಅವರು. ನನ್ನ ತಂದೆಯನ್ನು ಕಳೆದುಕೊಂಡಾಗ ನಾನು ತುಂಬಾನೇ ಕಷ್ಟದಲ್ಲಿದ್ದೆ. ನಾನು ಸುಳ್ಳು ಹೇಳಲ್ಲ. ನನ್ನ ಬದುಕನ್ನೇ ಅಂತ್ಯಗೊಳಿಸುವುದಕ್ಕೆ ನಿರ್ಧಾರ ಮಾಡಿದ್ದೆ. ನಾನು ಏಕಾಂಗಿಯಾಗಿದ್ದೆ. ಚುನಾವಣೆಯಲ್ಲಿ ಸೋತೆ. ಆ ಸಮಯದಲ್ಲಿ ನಿಜವಾಗಲೂ ನಾನು ಏನಾಗಿದ್ದೇನೆ ಅನ್ನೋ ಗೊಂದಲವಿತ್ತು." ಎಂದು ರಮ್ಯಾ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಸಾವು-ಬದುಕಿನ ಬಗ್ಗೆ ಪಾಠ ಮಾಡಿದ್ದ ರಾಹುಲ್ ಗಾಂಧಿ
ಮೋಹಕತಾರೆ ರಮ್ಯಾ ಬದುಕಿನಲ್ಲಿ ಹಿನ್ನೆಡೆಯಾದಾಗ ರಾಹುಲ್ ಗಾಂಧಿ ಭಾವನಾತ್ಮಕವಾಗಿ ಸಪೋರ್ಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. "ಆ ಸಂದರ್ಭದಲ್ಲಿ ಸಾವು ಅಂದರೇನು? ಬದುಕು ಅಂದರೇನು? ನಾವು ಏನಕ್ಕೆ ಬಂದಿದ್ದೀವಿ. ನಮ್ಮ ಉದ್ದೇಶವೇನು? ಆ ಸಮಯದಲ್ಲಿ ಭಾವನಾತ್ಮಕವಾಗಿ ರಾಹುಲ್ ಗಾಂಧಿ ಸಪೋರ್ಟ್ ಮಾಡಿದ್ರು." ಎಂದಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾರೆ, ರಮ್ಯಾ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅದೇ ಇನ್ನೊಂದು ಕಡೆ 'ಉತ್ತರಕಾಂಡ' ಸಿನಿಮಾದ ಮೂಲಕ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಹೀಗಾಗಿ ಉತ್ತರಕಾಂಡ ಬಗ್ಗೆ ಹಲವು ನಿರೀಕ್ಷೆಗಳಿವೆ.


Click it and Unblock the Notifications











