ಉಪ್ಪಿ ಡೈರೆಕ್ಷನ್ ಈ ದಿಗ್ಗಜರೇ ಫ್ಯಾನ್ಸ್; ಶಂಕರ್, ಪ್ರಶಾಂತ್ ನೀಲ್, ರಕ್ಷಿತ್, ಆರ್‌ಜಿವಿ ಏನು ಹೇಳಿದ್ದಾರೆ ಗೊತ್ತೇ?
ರಿಯಲ್‌ಸ್ಟಾರ್ ಉಪೇಂದ್ರ 10 ವರ್ಷಗಳ ಬಳಿಕ ನಿರ್ದೇಶಿಸಿರುವ 'ಯುಐ' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಉಪೇಂದ್ರ ಎಲ್ಲಾ ಸಿನಿಮಾ ಪ್ರಚಾರ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ವರ್ಷದ ಕೊನೆಯಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ನಿರೀಕ್ಷೆ ಈಗಾಗಲೇ ದುಪ್ಪಟ್ಟಿದೆ. ಅದಕ್ಕೊಂದೇ ಕಾರಣ ಉಪೇಂದ್ರ ನಿರ್ದೇಶನ.
ಉಪೇಂದ್ರ ನಿರ್ದೇಶನ ಅಂದರೆ ಕೇವಲ ಕನ್ನಡಿಗರಿಗಷ್ಟೇ ಅಲ್ಲ. ದಕ್ಷಿಣ ಭಾರತದ ಎಲ್ಲಾ ಭಾಷೆಯ ಸಿನಿಮಾ ಪ್ರೇಮಿಗಳಿಗೂ ಏನೋ ಒಂದು ಕುತೂಹಲ. ಉಪ್ಪಿ ಸಿನಿಮಾ ರಿಲೀಸ್ ಆದಾಗಲೆಲ್ಲ ತೆಲುಗಿಗೆ ಡಬ್ ಆಗಿ ರಿಲೀಸ್ ಆಗುತ್ತಿತ್ತು. ಆದರೆ, 'ಕಬ್ಜ' ಬಳಿಕ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. 'ಯುಐ' ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಪ್ರಚಾರ ಭರ್ಜರಿಯಾಗಿ ನಡೆಯುತ್ತಿದೆ.

ಉಪ್ಪಿ ನಿರ್ದೇಶಿಸಿದ ಸಿನಿಮಾಗೆ ಫ್ಯಾನ್ ಫಾಲೋವಿಂಗ್ ಏನು ಕಮ್ಮಿಯಿಲ್ಲ. ಬೇರೆ ಬೇರೆ ಚಿತ್ರರಂಗದ ದಿಗ್ಗಜರೇ ಉಪೇಂದ್ರ ಸಿನಿಮಾಗೆ ದೊಡ್ಡ ಅಭಿಮಾನಿಗಳು. ಉಪ್ಪಿ ಆಲೋಚನೆ, ಕಥೆ ಹೇಳುವ ಸ್ಟೈಲ್, ಅವರ ಸಿನಿಮಾ ಟೈಟಲ್ ಎಲ್ಲಕ್ಕೂ ಕುತೂಹಲ ಮೂಡಿಸುತ್ತವೆ. ಇವರ ನಿರ್ದೇಶನದ ಬಗ್ಗೆ ರಾಣಾ ದಗ್ಗುಬಾಟಿ, ಪ್ರಶಾಂತ್ ನೀಲ್, ಆರ್‌ಜಿವಿ, ತ್ರಿವಿಕ್ರಮ್, ರಕ್ಷಿತ್ ಶೆಟ್ಟಿ ಅಂತ ದಿಗ್ಗಜರು ಏನು ಹೇಳಿದ್ದಾರೆ? ನೋಡೋಣ ಬನ್ನಿ.
ರಾಣಾ ದಗ್ಗುಬಾಟಿ
'ಬಾಹುಬಲಿ'ಯ ಬಲ್ಲಾಳದೇವ ರಾಣಾ ದಗ್ಗುಬಾಟಿ 'ಕಬ್ಜ' ಸಿನಿಮಾದ ಟೀಸರ್ ಟೀಸರ್ ರಿಲೀಸ್ ವೇಳೆ ಉಪೇಂದ್ರ ಸಿನಿಮಾ ಬಗ್ಗೆ ಮಾತಾಡಿದ್ದರು. "ನಾನೊಬ್ಬ ಸಿನಿಮಾ ಹೀರೋ ಆಗಿ ಪಾತ್ರಗಳನ್ನು ಅರ್ಥ ಮಾಡಿಕೊಂಡಿದ್ದು, ನಿಮ್ಮ ಮೂವಿಗಳನ್ನು ನೋಡಿದ ಬಳಿಕ. ಈಗ ಎಲ್ಲರೂ ಪ್ಯಾನ್ ಇಂಡಿಯಾ ಅಂತ ಹೇಳುತ್ತಾರೆ. ನಾನು 90ರ ದಶಕದಲ್ಲಿಯೇ ಉಪೇಂದ್ರ ಅವರ ಸಿನಿಮಾಗಳನ್ನು ತೆಲುಗಿನಲ್ಲಿ ಡಬ್ ಆಗಿದ್ದನ್ನು ನೋಡಿದ್ದೇನೆ." ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

ಪ್ರಶಾಂತ್ ನೀಲ್
ನಿರೂಪಕಿ ಅನುಶ್ರೀ ಜೊತೆ ಮಾತಾಡುವಾಗಲೂ ಪ್ರಶಾಂತ್ ನೀಲ್ ಉಪ್ಪಿ ನಿರ್ದೇಶಿಸಿದ ಸಿನಿಮಾ ಬಗ್ಗೆ ಮಾತಾಡಿದ್ದರು. ಮೂರು ವಿಭಿನ್ನ ಶೈಲಿಯ ಸಿನಿಮಾಗಳನ್ನು ವಿಶ್ವದಲ್ಲಿ ಯಾರೂ ನಿರ್ದೇಶಿಸಿಲ್ಲ ಎಂದು ಹೇಳಿದ್ದರು. "ಎಲ್ಲಾ ಕಾಲಕ್ಕೂ ನನ್ನ ಅಚ್ಚು ಮೆಚ್ಚಿನ ನಿರ್ದೇಶಕ ಉಪೇಂದ್ರ. ಇಡೀ ವಿಶ್ವದಲ್ಲಿ ಶ್, ತರ್ಲೆ ನನ್ ಮಗ, ಓಂ ಅಂತ ಸಿನಿಮಾವನ್ನು ಯಾರೂ ಮಾಡಿಲ್ಲ. ಯಾರಿಂದಲೂ ಮಾಡುವುಕ್ಕೆ ಸಾಧ್ಯವಿಲ್ಲ." ಎಂದಿದ್ದರು.
ರಾಮ್ ಗೋಪಾಲ್ ವರ್ಮಾ
'ಕಬ್ಬ' ರಿಲೀಸ್ ವೇಳೆ ಉಪೇಂದ್ರ ನಿರ್ದೇಶಿಸುವ ಸಿನಿಮಾಗಳ ಬಗ್ಗೆ ರಾಮ್ ಗೋಪಾಲ್ ವರ್ಮಾ ಓಪನ್ ಆಗಿ ಮಾತಾಡಿದ್ದರು. "ನಾನು ಯಾವಾಗಲು ನಿಮ್ಮ ಕೆಲಸವನ್ನು ಗೌರವಿಸುತ್ತೇನೆ. ನೀವು ಯೋಚನೆ ಮಾಡುವ ರೀತಿ, ಅನ್ವೇಷಣೆ, ನಿಮ್ಮ ಸಿನಿಮಾಗೆ ನೀವು ಇಡು ಟೈಟಲ್‌ಗಳು, ಜನರು ಏನು ಯೋಚನೆ ಮಾಡುತ್ತಾರೋ ಅದಕ್ಕೆ ತದ್ವಿರುದ್ಧವಾಗಿ ಯೋಚನೆ ಮಾಡುವುದು ನನಗೆ ಇಷ್ಟ ಆಗುತ್ತೆ. ನಿಮ್ಮಲ್ಲಿ ಸಿನಿಮಾ ಬಗ್ಗೆ ಇರುವ ರೆಬಲ್‌ನೆಸ್ ಇಷ್ಟ." ಎಂದಿದ್ದಾರೆ.
ತ್ರಿವಿಕ್ರಮ್
"ನಾನು ನಿಜವಾಗಿಯೂ ಉಪೇಂದ್ರ ಅವರ ಅಭಿಮಾನಿ. ಓಂ, ಎ, ಉಪೇಂದ್ರ ಈ ಮೂರು ಸಿನಿಮಾಗಳನ್ನು ಬಹಳಷ್ಟು ಬಾರಿ ನೋಡಿದ್ದೇನೆ. ಅವರ ಸಿನಿಮಾದಲ್ಲಿ ಕಾಂಪ್ರಮೈಸ್ ಆಗುವುದಿಲ್ಲ. ಪ್ರತಿ ಸಿನಿಮಾದಲ್ಲೂ ಏನಾದರೂ ಫಿಲಾಸಫಿ ಇದ್ದೇ ಇರುತ್ತೆ." ಎಂದು ಹೇಳಿದ್ದರು.
ಶಂಕರ್
"ಉಪೇಂದ್ರ ಒಬ್ಬ ಅದ್ಭುತ ನಿರ್ದೇಶ, ಅದ್ಭುತ ನಟ. ಅವರು ನಿರ್ದೇಶಿಸಿದ 'ಎ' ಪ್ರೇರಣೆ ನೀಡುವ ಸಿನಿಮಾ. 'ಎ' ಸಿನಿಮಾದ ಐಡಿಯಾನೇ ಇಷ್ಟ ಆಯ್ತು. ಮೊದಲ ಸೀನ್‌ನಲ್ಲೇ ಕ್ಲೈಮ್ಯಾಕ್ಸ್ ತೋರಿಸಿದ್ದು ಇಷ್ಟ ಆಯ್ತು. ನಾನು ಸಿನಿಮಾ ಬಗ್ಗೆ ಚರ್ಚೆ ಮಾಡುವಾಗ 'ಎ' ತರ ಸ್ಕ್ರೀನ್ ಪ್ಲೇ ಇರಬೇಕು ಅಂತ ಹೇಳುತ್ತೇನೆ." ಎಂದು ಪ್ಯಾನ್ ಇಂಡಿಯಾ ನಿರ್ದೇಶಕ ಶಂಕರ್ ಹೇಳಿದ್ದರು.
ರಕ್ಷಿತ್ ಶೆಟ್ಟಿ
"ನಾನು ಅವರನ್ನು ಒಬ್ಬ ನಟನಾಗಿ ತುಂಬಾನೇ ಇಷ್ಟ ಪಡುತ್ತೇನೆ. ಹಾಗೇ ನಿರ್ದೇಶಕರಾಗಿಯೂ ಅಷ್ಟೇ. ಎ ಆಗಲಿ, ಉಪೇಂದ್ರ ಆಗಲಿ, ಅವರ ದೊಡ್ಡ ಫ್ಯಾನ್ ನಾನು. ನಾನು ಕಾಲೇಜ್‌ನಲ್ಲಿ ಇರುವಾಗ ಉಪ್ಪಿ ಸರ್‌ಗೆ ಫ್ಯಾನ್ ಕ್ಲಬ್ ಮಾಡಿದ್ದರು." ಎಂದು ಉಪೇಂದ್ರ ಸಿನಿಮಾ ಬಗ್ಗೆ ಇದ್ದ ಕ್ರೇಜ್ ಬಗ್ಗೆ ಹೇಳಿದ್ದರು.
ವಿಶ್ವಕ್ ಸೇನ್
"ಒಂದು ಸಿನಿಮಾಗೆ ಟೈಟಲ್ ಇಡುವ ಅವಶ್ಯಕತೆ ಇಲ್ಲ ಅನ್ನೋ ಆಲೋಚನೆ ನನಗೆ ಬಂದಿದ್ದೇ ಉಪೇಂದ್ರ ಅವರ ಸಿನಿಮಾ ನೋಡಿದ ಬಳಿಕ. ನಿಮ್ಮ ಸಿನಿಮಾದಲ್ಲಿ ಸಿಂಬಲ್ ಅಷ್ಟೇ. ಆ ಐಡಿಯಾ ನನಗೆ ಬಹಳ ಇಷ್ಟ ಸರ್." ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.


Click it and Unblock the Notifications











