ರವಿಶಂಕರ್ ನಡೆಸಿಕೊಡುವ 'ಸುವರ್ಣ ಗೃಹಮಂತ್ರಿ' ಹೊಸ ಸೀಸನ್‌ಗೆ ಮಹೂರ್ತ; ಸೀಸನ್ 3 ಎಂದಿನಿಂದ ಶುರು?
ಕನ್ನಡದ ಕಿರುತೆರೆಯಲ್ಲಿ ಹೊಸ ಹೊಸ ಕಾರ್ಯಕ್ರಮಗಳು ಲಾಂಚ್ ಆಗುತ್ತಲೇ ಇರುತ್ತವೆ. ತಮ್ಮ ವಾಹಿನಿಯ ವೀಕ್ಷಕರನ್ನು ರಂಜಿಸುವುದಕ್ಕೆ ಮನರಂಜನಾ ವಾಹಿನಿಗಳು ಸದಾ ಪ್ರಯತ್ನಿಸುತ್ತಲೇ ಇರುತ್ತವೆ. ಈ ಪೈಪೋಟಿಯಲ್ಲಿ ಇರೋ ಸ್ಟಾರ್ ಸುವರ್ಣ ವಾಹಿನಿ ಹೊಸ ಕಾರ್ಯಕ್ರಮಗಳ ಜೊತೆಗೆ ಈಗಾಗಲೇ ಜನಪ್ರಿಯವಾಗಿರುವ ಶೋಗಳಿಗೆ ಹೊಸ ರೂಪ ಕೊಟ್ಟು ಪ್ರಸಾರ ಮುಂದಾಗುತ್ತಿದೆ.
ಈಗ ಕರ್ನಾಟಕದ ಗೃಹಿಣಿಯರ ಮನಗೆದ್ದು ಮನೆಮಾತಾಗಿರೋ ಜನಪ್ರಿಯ ಕಾರ್ಯಕ್ರಮ 'ಸುವರ್ಣ ಗೃಹಮಂತ್ರಿ' ಕೂಡ ಒಂದು. ಕನ್ನಡದ ಜನಪ್ರಿಯ ನಟ ರವಿಶಂಕರ್ ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ವಿಶೇಷ ಕಾರ್ಯಕ್ರಮ. ಸ್ಟಾರ್ ಸುವರ್ಣದಲ್ಲಿ ಪ್ರತಿ ದಿನ ಪ್ರಸಾರವಾಗುವ ಸಾಮಾನ್ಯ ಜನರ (ಕಾಮನ್ ಮ್ಯಾನ್) ರಿಯಾಲಿಟಿ ಶೋ ಇದು. ಇದೀಗ ಈ 'ಸುವರ್ಣ ಗೃಹಮಂತ್ರಿ' ತನ್ನ ಮೂರನೇ ಸೀಸನ್ ಆರಂಭ ಆಗುತ್ತಿದೆ. ಈ ಬಾರಿ ಹೊಸತನದ ಹುರುಪಲ್ಲಿ ಬರುವುದಕ್ಕೆ ಸಜ್ಜಾಗಿದೆ.

ಈಗಾಗಲೇ 'ಸುವರ್ಣ ಗೃಹಮಂತ್ರಿ' ರಿಯಾಲಿಟಿ ಶೋ ತನ್ನ ಎರಡು ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಇದೀಗ ಈ ಶೋ 700 ಸಂಚಿಕೆಗಳ ಹೊಸ್ತಿಲಲ್ಲಿದೆ. ಇನ್ನು ಈ ಮೂರನೇ ಸೀಸನ್ ಅದ್ಧೂರಿಯಾಗಿ ಆರಂಭ ಆಗುತ್ತಿದೆ. ಈ ಸೀಸನ್‌ನ ಪ್ರಮುಖ ಆಕರ್ಷಣೆ ಅಂದ್ರೆ, ಇನ್ಮುಂದೆ ಪ್ರತೀ ಸಂಚಿಕೆಯಲ್ಲೂ 'ಸುವರ್ಣ ಪರಿವಾರ'ದ ತಾರೆಯರು ಈ ಶೋನಲ್ಲಿ ಭಾಗಿಯಾಗಲಿದ್ದಾರೆ.
'ಸುವರ್ಣ ಗೃಹಮಂತ್ರಿ' ರಿಯಾಲಿಟಿ ಶೋನಲ್ಲಿ ಸುವರ್ಣ ಸ್ಟಾರ್‌ಗಳ ಜೊತೆ ಜನಸಾಮಾನ್ಯರ ಭರ್ಜರಿ ಜಟಾಪಟಿಯೇ ನಡೆಯುತ್ತೆ. 'ಸುವರ್ಣ ಗೃಹಮಂತ್ರಿ'ಯ ಮೂರನೇ ಸೀಸನ್‌ನ ಮೊದಲ ಸಂಚಿಕೆಯಲ್ಲಿ 'ಆಸೆ' ಧಾರಾವಾಹಿ ಖ್ಯಾತಿಯ 'ಮೀನಾ' ಪಾಲ್ಗೊಂಡಿದ್ದಾರೆ. ಇವರ ಭಾಗವಹಿಸುವಿಕೆಯಿಂದ ವೀಕ್ಷಕರಿಗೆ ಭರ್ಜರಿ ಮನರಂಜನೆಯೇ ಸಿಗಲಿದೆ.

ಇನ್ನು ಈ ಶೋ ಕಾನ್ಸೆಪ್ಟ್ ಅದ್ಬುತವಾಗಿದೆ ತನಗಾಗಿ ಏನನ್ನೂ ಬಯಸದೇ ತನ್ನವರ ಖುಷಿಗಾಗಿ ನಿರಂತರವಾಗಿ ಹಂಬಲಿಸುವ ಗೃಹಿಣಿಯರನ್ನು ಗೌರವಿಸುವ ಉದ್ದೇಶದಿಂದ ಈ ಶೋ ನಡೆಸಿಕೊಡಲಾಗುತ್ತಿದೆ. ಕರ್ನಾಟಕದ ಮನೆ ಮನೆಗೆ ಹೋಗಿ ದಿನಕ್ಕೊಂದು ಕುಟುಂಬವನ್ನು ಭೇಟಿ ಮಾಡಿ, ಗಂಡ-ಹೆಂಡತಿಯನ್ನು ಆಟ ಆಡಿಸಿ , ಮಾತನಾಡಿಸಿ, ಆಕೆಯ ಕುಟುಂಬದವರ ಪರಿಚಯ ಮಾಡಿಕೊಂಡು, ಅವರಿಗಾಗಿ ಆ ದಿನವನ್ನು ಮೀಸಲಿಟ್ಟು ರಾಣಿ ಸೀಟ್‌ನಲ್ಲಿ ಅವರನ್ನ ಕೂರಿಸಿ ಗೌರವಿಸುತ್ತಾ ಧನ್ಯವಾದಗಳನ್ನು ಹೇಳುವ ಕಾರ್ಯಕ್ರಮವಿದು. ಹೀಗಾಗಿ 'ಸುವರ್ಣ ಗೃಹಮಂತ್ರಿ' ಕಿರುತೆರೆ ವೀಕ್ಷಕರ ಮನಗೆದ್ದಿದೆ.
ಪ್ರತಿಯೊಂದು ಮನೆಯ ಬೆಳಗೋ ಗೃಹಿಣಿಯರನ್ನು ಗುರುತಿಸಲಾಗುತ್ತೆ. ನಟ ರವಿ ಶಂಕರ್ ಗೌಡ ಈ ಗೃಹಿಣೆಯ ಅಣ್ಣನ ಸ್ಥಾನದಲ್ಲಿ ನಿಂತು ತವರು ಮನೆಯ ಉಡುಗೊರೆಯಾಗಿ ಬಾಗಿನ ನೀಡಿ ಗೌರವಿಸಿ ಇಡೀ ಕುಟುಂಬವನ್ನು ಒಗ್ಗೂಡಿಸಿ ಸಂಭ್ರಮಿಸುವುದೇ 'ಸುವರ್ಣ ಗೃಹಮಂತ್ರಿ' ಕಾರ್ಯಕ್ರಮದ ವಿಶೇಷತೆ. ಹೊಸ ಸೀಸನ್, ಹೊಸ ಆರಂಭ, ಆಟ-ತುಂಟಾಟದ ಜೊತೆ ಮಸ್ತ್ ಮನರಂಜನೆಯನ್ನೊಳಗೊಂಡಿರುವ 'ಸುವರ್ಣ ಗೃಹಮಂತ್ರಿ' ಸೀಸನ್ 3 ಇದೇ ಬುಧವಾರದಿಂದ (ಮಾರ್ಚ್ 25) ಪ್ರತಿದಿನ ಸಂಜೆ 5 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.


Click it and Unblock the Notifications











