13 ವರ್ಷಗಳ ಬಳಿಕ ಕಿರುತೆರೆಯಲ್ಲಿ ಕೋಸ್ಟಲ್ ಸಿನಿಮಾ ಪ್ರಸಾರ: ಹೊಸ ವರ್ಷಕ್ಕೆ ತುಳು 'ಕಾಂತಾರ'
ಏಪ್ರಿಲ್-ಮೇ ತಿಂಗಳು ತುಳುನಾಡಿಗರಿಗೆ ಹೊಸ ವರ್ಷದ ಸಂಭ್ರಮ. ಪ್ರತಿ ವರ್ಷದ ಏಪ್ರಿಲ್ 14ರಂದು ತುಳುನಾಡಿಗರು ಹೊಸ ವರ್ಷವಾಗಿ ಆರಂಭಿಸುತ್ತಾರೆ. ಈ ದಿನವನ್ನು 'ಬಿಸು ಪರ್ಬ' ಎಂದು ಕರೆಯುತ್ತಾರೆ. ಇದೇ ತುಳು ಭಾಷಿಗರಿಗೆ ಸೌರಮಾನ ಯುಗಾದಿ.
ಏಪ್ರಿಲ್ ತಿಂಗಳು ಗಿಡ ಮರಗಳಲ್ಲಿ ಫಲಗಳು ಸಮೃದ್ಧವಾಗಿ ಬೆಳೆದಿರುತ್ತವೆ. ಅದನ್ನು ಬಿಸು ಕಣಿಗೆ ಒಪ್ಪಿಸದೆ ಬಳಸಬಾರದು ಅನ್ನುವ ನಂಬಿಕೆ ತುಳುಭಾಷಿಗರಲ್ಲಿ ಇದೆ. ಈ ಕಾರಣಕ್ಕೆ ಈ ಹಬ್ಬವನ್ನು ತುಳುನಾಡಿನ ಮನೆ ಮಂದಿಯೆಲ್ಲ ಆಚರಣೆ ಮಾಡುತ್ತಾರೆ.

ಇದೇ ಸಂದರ್ಭದಂದು ಕನ್ನಡ ಕಿರುತೆರೆಯಲ್ಲಿ ತುಳು ಸಿನಿಮಾವನ್ನು ಪ್ರಸಾರ ಮಾಡಲಾಗುತ್ತಿದೆ. ಅದುವೇ ರಿಷಬ್ ಶೆಟ್ಟಿ ಹಾಗೂ ಸಪ್ತಮಿಗೌಡ ಅಭಿನಯದ ತುಳು ಅವತರಣಿಕೆಯ 'ಕಾಂತಾರ'. ಈ ಮೂಲಕ ಕಿರುತೆರೆಯಲ್ಲಿ ಹೊಸ ಇತಿಹಾಸವನ್ನು ಬರೆಯಲು ಸಜ್ಜಾಗುತ್ತಿದೆ.
'ಬಿಸು ಪರ್ಬ'ಕ್ಕೆ ತುಳು ಕಾಂತಾರ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಸಿನಿಮಾ 'ಕಾಂತಾರ' ದೇಶಾದ್ಯಂತ ಸದ್ದು ಮಾಡಿತ್ತು. ಕರ್ನಾಟಕದ ಗ್ರಾಮೀಣ ಸೊಗಡಿನ ಸಿನಿಮಾವೊಂದು ಬಾಕ್ಸಾಫೀಸ್ ಅನ್ನೇ ಬೆಚ್ಚಿಬೀಳಿಸಿತ್ತು. ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ 'ಕಾಂತಾರ' ತುಳು ಭಾಷೆಗೆ ಡಬ್ ಆಗಿ ರಿಲೀಸ್ ಆಗಿತ್ತು. ಈಗ ಇದೇ ಮೊದಲ ಕಿರುತೆರೆಯಲ್ಲಿ ಪ್ರಸಾರ ಆಗಲಿದೆ.

ಹೊಸತನದೊಂದಿಗೆ ಕಿರುತೆರೆಯಲ್ಲಿ ಪೈಪೋಟಿಗೆ ಇಳಿದಿರೋ ಸ್ಟಾರ್ ಸುವರ್ಣ 'ಕಾಂತಾರ' ತುಳು ಅವತರಣಿಕೆಯನ್ನು ಪ್ರಸಾರ ಮಾಡುತ್ತಿದೆ. ತುಳುನಾಡಿನ ಹೊಸ ವರ್ಷಕ್ಕೆ ತುಳು ಭಾಷಿಗರಿಗೆ 'ಕಾಂತಾರ' ತೋರಿಸುವುದಕ್ಕೆ ಮುಂದಾಗಿದೆ. ಈ ಮೂಲಕ ತುಳುಭಾಷಿಗರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
13 ವರ್ಷಗಳ ಬಳಿಕ ಸ್ಟಾರ್ ಸುವರ್ಣದಲ್ಲಿ ತುಳು ಕಂಟೆಂಟ್
2010ರಲ್ಲಿ ಸ್ಟಾರ್ ಸುವರ್ಣ ತುಳು ಧಾರಾವಾಹಿಯನ್ನು ಪ್ರಸಾರ ಮಾಡಿತ್ತು. 'ಗೊತ್ತಾನಗ ಪೊರ್ತಾಂಡ್' ಎಂಬ ತುಳು ಧಾರಾವಾಹಿ ಪ್ರೇಕ್ಷಕರ ಮನಗೆದ್ದಿತ್ತು. ಕರಾವಳಿಯ ಮನೆ ಮನೆಯಲ್ಲೂ ಜನಪ್ರಿಯವಾಗಿತ್ತು. ಆ ಬಳಿಕ ಸ್ಟಾರ್ ಸುವರ್ಣ ತುಳು ಕಂಟೆಂಟ್ ಅನ್ನು ಪ್ರಸಾರ ಮಾಡಿರಲಿಲ್ಲ.
ಇದೀಗ ಸುಮಾರು 13 ವರ್ಷಗಳ ಬಳಿಕ ರಿಷಬ್ ಶೆಟ್ಟಿಯ 'ಕಾಂತಾರ'ದ ತುಳು ವರ್ಷನ್ ಅನ್ನು ಪ್ರಸಾರ ಮಾಡುವುದಕ್ಕೆ ಸಜ್ಜಾಗಿದೆ. ಈ ಮೂಲಕ ಕನ್ನಡ ಕಿರುತೆರೆಯಲ್ಲಿ ತುಳು ಕಂಟೆಂಟ್ ಎಂಟ್ರಿ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಿರುತೆರೆಯಲ್ಲಿ ತುಳು ಕಂಟೆಂಟ್ ಹೆಚ್ಚಾಗುತ್ತಾ? ಅನ್ನೋ ಕುತೂಹಲವಿದೆ.
ತುಳು ಮಂದಿಗಾಗಿ 'ಕಾಂತಾರ'
ತುಳು 'ಕಾಂತಾರ' ಕಿರುತೆರೆಯಲ್ಲಿ ಪ್ರಸಾರ ಆಗುತ್ತಿರುವುದರ ಹಿಂದೆ ವಾಹಿನಿಯ ಲೆಕ್ಕಾಚಾರವೂ ಇರಬಹುದು.ಷ ಆದರೆ, ಸದ್ಯಕ್ಕೆ ದೊಡ್ಡ ಮಟ್ಟದ ಪ್ರಭಾವ ಬೀರಲಿಕ್ಕಿಲ್ಲ. ಆದರೆ, ಮುಂದಿನ ದಿನಗಳಲ್ಲಿ ತುಳು ಕಂಟೆಂಟ್‌ಗಳು ಹೆಚ್ಚು ಪ್ರಭಾವ ಬೀರಬಹುದು. ಇದೇ ಬೆನ್ನಲ್ಲೇ ತುಳುವರ ಹೊಸ ವರ್ಷಕ್ಕೆ 'ಕಾಂತಾರ' ರಿಲೀಸ್ ಆಗುತ್ತಿದೆ.
ಅಲ್ಲದೆ, ದೈವಾರಾಧನೆ, ಭೂತಕೋಲ, ಕಂಬಳ, ಕೋಳಿ ಅಂಕ, ಇತ್ಯಾದಿ ಸಂಭ್ರಮಗಳು ನೋಡುಗರಲ್ಲಿ ಕೌತುಕವನ್ನು ಹೆಚ್ಚಿಸುತ್ತೆ. ತುಳುವರ ಹೊಸ ವರ್ಷದ ಪ್ರಯುಕ್ತ 'ತುಳು' ಭಾಷೆಯಲ್ಲೇ ಸ್ಟಾರ್ ಸುವರ್ಣದಲ್ಲಿ 'ಕಾಂತಾರ' ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ ಪ್ರಸಾರ ಆಗುತ್ತಿದೆ.


Click it and Unblock the Notifications











