ಎಲ್ಲೆಲ್ಲೂ ಬಿಗ್ ಬಾಸ್ ಚರ್ಚೆ: ಸೆಪ್ಟೆಂಬರ್ ಕೊನೆವಾರ ಶುರು, ಒಟಿಟಿಗೆ ನೋ ಎಂಟ್ರಿ!
ಬಿಗ್ ಬಾಸ್ ರಿಯಾಲಿಟಿ ಶೋ ಯಾರಿಗೆ ಗೊತ್ತಿಲ್ಲ. ಭಾರತದ ಮೂಲೆ ಮೂಲೆಯಲ್ಲೂ ಬಿಗ್ ಬಾಸ್ ಶೋ ಚಿರಪರಿಚಿತ. ವಿದೇಶದಲ್ಲಿ ಜನ್ಮತಾಳಿದ ಈ ಶೋ ಭಾರತಕ್ಕೆ ಬಂದು ಹೆಚ್ಚು ಕಡಿಮೆ 16 ವರ್ಷಗಳಾಗಿವೆ. ಅಲ್ಲಿಂದ ಇಲ್ಲಿವೆರೆಗೂ ಈ ಶೋ ಏಳು-ಬೀಳುಗಳನ್ನು ಕಾಣುತ್ತಲೇ ಮುಂದುವರೆದಿದೆ. ಆದರೆ, ಯಾವ ಭಾಷೆಯಲ್ಲಿ ಗೆದ್ದಿದೆ? ಯಾವ ಭಾಷೆಯಲ್ಲಿ ಸೋತಿದೆ? ಅನ್ನೋ ಪ್ರಶ್ನೆ ಕೂಡ ಅಷ್ಟೇ ಪ್ರಸ್ತುತ.
ಭಾರತದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಶೋಗಳಲ್ಲಿ ಹಿಂದಿ ಭಾಷೆಗೆ ಅಗ್ರಸ್ಥಾನ. ಇಲ್ಲಿ ಖರ್ಚೂ ಹೆಚ್ಚು. ವೀಕ್ಷಕರ ಸಂಖ್ಯೆನೂ ಹೆಚ್ಚು. ಸಲ್ಮಾನ್ ಖಾನ್ ಅಂತಹ ಸೂಪರ್‌ಸ್ಟಾರ್ ವೇದಿಕೆ ಮೇಲೆ ನಿಂತು ನಿರೂಪಣೆ ಮಾಡುವಾಗ ವೀಕ್ಷಕರ ಸಂಖ್ಯೆ ಕೊರತೆ ಆಗಲು ಹೇಗೆ ಸಾಧ್ಯ? ಆದರೆ, ವಿವಾದಗಳು ಬಾಕ್ಸಾಫೀಸ್ ಸುಲ್ತಾನನಿಂದಲೂ ತಡೆಯಲು ಸಾಧ್ಯವಾಗಿಲ್ಲ.
ಭಾರತದಲ್ಲಿ ಬಿಗ್ ಬಾಸ್ ಶೋ ಎಲ್ಲೆಗಳನ್ನು ಮೊದಲು ಮೀರಿದ್ದು ಕೂಡ ಇಲ್ಲೆನೇ. ಸ್ಪರ್ಧಿಗಳ ಕಿತ್ತಾಟ, ಮನೆಯೊಳಿಗಿನ ಅಫೇರ್, ರಾಸಲೀಲೆಗಳು, ಬೀಪ್ ಹಾಕುವಂತಹ ಬೈಗುಳಗಳು, ಚಿತ್ರ-ವಿಚಿತ್ರ ಮನೋಭಾವದ ಸ್ಪರ್ಧಿಗಳನ್ನು ತಂದೆ ಪ್ರಾದೇಶಿಕ ಭಾಷೆಯಲ್ಲೂ ಪ್ರಯೋಗಕ್ಕೆ ಒಡ್ಡಿದ್ದು ಇದೇ ಬಿಗ್ ಬಾಸ್. ಕಳೆದ 15 ಸೀಸನ್‌ಗಳು ಕೂಡ ವಾದ-ವಿವಾದಗಳಿಂದಲೇ ಟಿಆರ್‌ಪಿಯನ್ನು ಗಿಟ್ಟಿಸಿಕೊಂಡಿದೆ. ಈ ಮಧ್ಯೆನೇ 16ನೇ ಸೀಸನ್‌ಗೂ ರೆಡಿಯಾಗುತ್ತಿದೆ.

ಹಿಂದಿ ಬಾಗ್ ಬಾಸ್ ಕಥೆಯೇನು?
ಬಿಗ್ ಬಾಸ್ ಭಾರತದ ಫೇಮಸ್ ರಿಯಾಲಿಟಿ ಶೋಗಳಲ್ಲಿ ಒಂದು. ಅದರಲ್ಲೂ ಹಿಂದಿ ಬಿಗ್ ಬಾಸ್ ರೇಂಜ್ ಯಾವುದೇ ಪ್ರಾದೇಶಿಕ ಭಾಷೆಯಲ್ಲಿ ರೀಚ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಇಲ್ಲಿ ಖರ್ಚು ಹೆಚ್ಚು. ಗಳಿಕೆನೂ ಹೆಚ್ಚು. ನೂರಾರು ಕೋಟಿ ಸುರಿದು ರಿಯಾಲಿಶೋ ಮಾಡುವ ಮನೋರಂಜನಾ ವಾಹಿತಿ ಅಪಾಯದ ಸುಳಿಯಲ್ಲಿಯೇ 100ಕ್ಕೂ ಹೆಚ್ಚು ದಿನಗಳ ಕಾಲ ಪಯಣ ಮಾಡುತ್ತದೆ. ಅದಕ್ಕೆ ನಾವಿಕನಾಗಿ ಇಲ್ಲಿವರೆಗೂ ಸುರಕ್ಷತೆಯ ದಡ ಸೇರಿದ್ದು ಸಲ್ಮಾನ್ ಖಾನ್. ಈಗ ಮತ್ತೊಂದು ಸೀಸನ್‌ಗೆ ಅಣಿಯಾಗುತ್ತಿದ್ದಾರೆ.

ಬಿಗ್ ಬಾಸ್ 16 ಯಾವಾಗ?
ಹಿಂದಿ ಬಿಗ್ ಬಾಸ್ ಪ್ರೀ ಪ್ರೊಡಕ್ಷನ್ ಸ್ಟೇಜ್‌ನಲ್ಲಿದೆ ಎಂದು ವರದಿಯಾಗಿದೆ. ಪ್ರತಿ ಸೀಸನ್‌ಗೂ ಬಿಗ್ ಬಾಸ್ ಮನೆ ಬದಲಾಗುತ್ತಲೇ ಇರುತ್ತೆ. 16ನೇ ಸೀನಸ್‌ನ ಬಿಗ್ ಬಾಸ್ ಮನೆ ಕೂಡ ಬದಲಾಗಲಿದೆ. ಈ ಮನೆ ಕಟ್ಟುವ ಕೆಲಸ ಮುಂದಿನ ವಾರದಿಂದ ಶುರುವಾಗಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಬಿಗ್ ಬಾಸ್ ಮನೆ ಸೆಪ್ಟೆಂಬರ್ ಮಧ್ಯದಲ್ಲಿ ಶುರುವಾಗಲಿದೆ. ಆ ಬಳಿಕ ಟೆಕ್ನಿಕಲ್ ಟೆಸ್ಟ್ ಶುರುವಾಗಲಿದೆ.

ಬಿಗ್ ಬಾಸ್ 16 ಯಾವಾಗ ಶುರು?
ಬಿಗ್ ಬಾಸ್ ಮನೆ ಕಟ್ಟುವ ಕೆಲಸ ಮುಗಿದ ಬಳಿಕ ರಿಯಾಲಿಟಿ ಶೋ ಆರಂಭ ಆಗಲಿದೆ. ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್ ಬಾಸ್ 16ನೇ ಸೀಸನ್ ಆರಂಭ ಆಗುವ ಸಾಧ್ಯತೆಯಿದೆ. ಈ ಬಾರಿ ಈ ರಿಯಾಲಿಟಿ ಶೋ ಹೇಗಿರುತ್ತೆ? ಅನ್ನುವುದನ್ನು ನೋಡಲು ವೀಕ್ಷಕರು ಕಾದು ಕೂತಿದ್ದಾರೆ. ಅದಕ್ಕೆ ತಕ್ಕಂತೆ ಬಿಗ್ ಬಾಸ್ ಸೀಸನ್ 16 ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಇದೇ ವೇಳೆ ಒಟಿಟಿಯಲ್ಲೂ ಬಿಗ್ ಬಾಸ್ ಬರುತ್ತೆ ಎನ್ನುವ ಗುಲ್ಲೆದ್ದಿತ್ತು. ಅದಕ್ಕೂ ಈಗ ತೆರೆ ಬಿದ್ದಿದೆ.

ಒಟಿಟಿಯಲ್ಲಿಲ್ಲ ಬಿಗ್ ಬಾಸ್
ಈ ಬಾರಿ ಒಟಿಟಿಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಪ್ರಸಾರ ಆಗಬೇಕು ಅನ್ನುವ ಕೂಗು ಕೇಳಿಬಂದಿತ್ತು. ಪ್ರಾದೇಶಿಕ ಭಾಷೆಯಲ್ಲಿ ಈಗಾಗಲೇ ಈ ಪ್ರಯತ್ನ ನಡೆಯುತ್ತಿದೆ. ಆದರೆ, ಬಿಗ್ ಬಾಸ್‌ಗಳ ಬಾಪ್ ಹಿಂದಿ ಬಿಗ್ ಬಾಸ್ ಮಾತ್ರ ಈ ವರ್ಷ ಒಟಿಟಿ ಕಡೆ ತಿರುಗಿ ನೋಡಲ್ಲ ಎನ್ನುತ್ತಿದೆ. ಇದು ಕಿರುತೆರೆ ಹಾಗೂ ಒಟಿಟಿ ವಲಯದಲ್ಲಿ ಅಚ್ಚರಿಗೆ ಕಾರಣವಾಗಿರೋದಂತೂ ಸತ್ಯ. ಆದರೆ, 2023 ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಒಟಿಟಿಗಾಗಿಯೇ ಬಿಗ್ ಬಾಸ್ ರಿಯಾಲಿಟಿ ಶೋ ಆರಂಭ ಆಗಲಿದೆ ಎಂದು ಹೇಳಾಗುತ್ತಿದೆ.


Click it and Unblock the Notifications











