16 ವರ್ಷಗಳ ಬಳಿಕ ಸೂಪರ್ ಹಿಟ್ ಜೋಡಿ ದರ್ಶನ; 'ಮಹಾನಟಿ'ಗಾಗಿ ರಮೇಶ್ ಅರವಿಂದ್-ಪ್ರೇಮಾ!
ಸ್ಯಾಂಡಲ್‌ವುಡ್‌ನಲ್ಲಿ ಕೆಲವು ಜೋಡಿಗಳು ಒಟ್ಟಿಗೆ ಕಾಣಿಸಿಕೊಂಡರೆ ಸಾಕು ಆ ಸಿನಿಮಾ ಹಿಟ್ ಆದಂತೆ. ಅಂತಹ ಸಾಕಷ್ಟು ಜೋಡಿಗಳು ಕನ್ನಡ ಚಿತ್ರರಂಗದಲ್ಲಿ ಮೋಡಿ ಮಾಡಿವೆ. ಅವುಗಳಲ್ಲಿ ರಮೇಶ್ ಅರವಿಂದ್ ಹಾಗೂ ಪ್ರೇಮಾ ಜೋಡಿ ಕೂಡ ಒಂದು. ಇವರಿಬ್ಬರು ಒಟ್ಟಿಗೆ ನಟಿಸಿದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿವೆ.
ರಮೇಶ್ ಅರವಿಂದ್ ಹಾಗೂ ಪ್ರೇಮಾ ಕಳೆದ 16 ವರ್ಷಗಳಿಂದ ಒಟ್ಟಿಗೆ ಒಂದೇ ಸಿನಿಮಾ ಕೆಲಸ ಮಾಡಿರಲಿಲ್ಲ. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ್ದ 'ಏಕದಂತ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೇ ಕೊನೆ. ಮತ್ತೆ ಒಟ್ಟಿಗೆ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಒಂದೂವರೆ ದಶಕಗಳಿಂದ ಈ ಜೋಡಿಯನ್ನು ಸಿನಿಪ್ರೇಮಿಗಳು ಮಿಸ್ ಮಾಡಿಕೊಂಡಿದ್ದರು. ಅಂತಹ ಫ್ಯಾನ್ಸ್‌ಗೀಗ ಖುಷಿ ಸುದ್ದಿ ಸಿಕ್ಕಿದೆ.

ರಮೇಶ್ ಅರವಿಂದ್ ಹಾಗೂ ಪ್ರೇಮಾ ಒಟ್ಟಿಗೆ ನಟಿಸಿದ ಸಿನಿಮಾಗಳಲ್ಲಿ ಶೇ.90ರಷ್ಟು ಗೆಲುವು ಕಂಡಿದೆ. 'ನಮ್ಮೂರ ಮಂದಾರ ಹೂವೇ', 'ತುತ್ತಾಮುತ್ತಾ', 'ಚಂದ್ರಮುಖಿ ಪ್ರಾಣಸಖಿ', ಎಸ್.ಮಹೇಂದರ್ ನಿರ್ದೇಶಿಸಿದ 'ಚಂದ್ರೋದಯ', 'ಆಪ್ತಮಿತ್ರ', 'ಏಕದಂತ'ದಂತಹ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಸಿನಿಮಾಗಳು ಪ್ರೇಕ್ಷಕರ ಮನಗೆದ್ದಿವೆ.
2007ರಲ್ಲಿ ವಿಷ್ಣುವರ್ಧನ್, ರಮೇಶ್ ಅರವಿಂದ್ ಹಾಗೂ ಪ್ರೇಮಾ ಒಟ್ಟಿಗೆ 'ಏಕದಂತ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಳಿಕ ಈ ಜೋಡಿ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಈಗ ಸುಮಾರು 16 ವರ್ಷಗಳ ಬಳಿಕ ಮತ್ತೆ ರಿಯಾಲಿಟಿ ಶೋ ಬಳಿಕ ತೆರೆಮೇಲೆ ಬರುವುದಕ್ಕೆ ಸಜ್ಜಾಗಿದೆ. ಅದುವೇ ಜೀ ಕನ್ನಡದ ಹೊಚ್ಚ ಹೊಸ ಶೋ 'ಮಹಾನಟಿ'. ಕನ್ನಡ ಕಿರುತೆರೆಯ ಈ ವಿಭಿನ್ನ ಶೋನಲ್ಲಿ ರಮೇಶ್ ಅರವಿಂದ್ ಹಾಗೂ ಪ್ರೇಮಾ ಜಡ್ಜ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ರಮೇಶ್ ಅರವಿಂದ್ ಹಾಗೂ ಪ್ರೇಮಾ ಇಬ್ಬರನ್ನು ಒಟ್ಟಿಗೆ ನೋಡಬೇಕು ಅಂತ ಬಯಸಿದ್ದ ಸಿನಿಪ್ರಿಯರಿಗೆ 'ಮಹಾನಟಿ' ಸಿಹಿ ಸುದ್ದಿಯನ್ನು ಹೊತ್ತು ತಂದಿದೆ. ಹಾಗೆಯೇ ಪ್ರೇಮಾ ಅವರಂತೆಯೇ ಸಕ್ಸಸ್‌ಪುಲ್ ನಟಿಯಾಗಬೇಕು ಅಂತ ಬಯಸಿದ್ದವರಿಗೆ ಈ ರಿಯಾಲಿಟಿ ಶೋ ಹೊಸ ವೇದಿಕೆಯಾಗಲಿದೆ. ಜೀ ಕನ್ನಡ ಕನ್ನಡ ಚಿತ್ರರಂಗಕ್ಕೆ ಹೊಸ ನಾಯಕ ನಟಿಯನ್ನು ನೀಡುವ ಕೆಲಸಕ್ಕೆ ಕೈ ಹಾಕಿದ್ದು, ಅದಕ್ಕೆ ರಮೇಶ್ ಅರವಿಂದ್ ಹಾಗೂ ಪ್ರೇಮಾ ಸಾಥ್ ಕೊಡುತ್ತಿದ್ದಾರೆ.
ಮಹಾನಟಿಯಲ್ಲಿ ರಮೇಶ್ ಅರವಿಂದ್, ಪ್ರೇಮಾ ಜೊತೆ ಜಡ್ಜ್‌ಗಳಾಗಿ ತರುಣ್ ಸುಧೀರ್ ಹಾಗೂ ನಟಿ ನಿಶ್ವಿಕಾ ನಾಯ್ಡು ಕೂಡ ಇರುತ್ತಾರೆ. ಮಹಾನಟಿಯಾಗಬೇಕು ಅಂತ ಕನಸು ಹೊತ್ತವರಿಗೆ ಈ ರಿಯಾಲಿಟಿ ಶೋ ವೇದಿಕೆಯಾಗಲಿದೆ. ಸುಮಾರು 31 ಜಿಲ್ಲೆಗಳಲ್ಲಿ ಸಂಚಾರ ಮಾಡಿ, ಪ್ರತಿಭೆಗಳನ್ನು ಹುಡುಕಿ, ಅವರಿಗೆ ರಿಯಾಲಿಟಿ ಶೋನಲ್ಲಿ ಅವಕಾಶ ನೀಡುವುದಕ್ಕೆ ಮುಂದಾಗಿದ್ದಾರೆ. ಸದ್ಯ ಈ ಕಾರ್ಯಕ್ರಮದ ಆಡಿಷನ್ ಕೊನೆಯ ಹಂತ ತಲುಪಿದೆ.
'ಮಹಾನಟಿ' ರಿಯಾಲಿಟಿ ಶೋನ ನಾಲ್ಕು ಮಂದಿ ಜಡ್ಜ್‌ಗಳಲ್ಲಿ ಒಬ್ಬರು ಹೊಸದಾಗಿ ಬರುವ ನಟಿಯರಿಗೆ ನಟನೆಯ ಮಜಲುಗಳನ್ನು ಹೇಳಿಕೊಡಲಿದ್ದಾರೆ. ಈ ಮೂಲಕ ಕನ್ನಡ ಕಿರುತೆರೆ ಲೋಕದಲ್ಲಿ ಮನರಂಜನೆಗೆ ಹೊಸ ಕಾರ್ಯಕ್ರಮ ರೂಪುಗೊಳ್ಳುತ್ತಿದ್ದು, ಇದೇ ಮಾರ್ಚ್ 30 ರ ಶನಿವಾರ ಮೊದಲ ಸಂಚಿಕೆಯನ್ನು ಪ್ರಸಾರ ಮಾಡುತ್ತಿದೆ. ಅಲ್ಲಿಂದ ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ.


Click it and Unblock the Notifications











