"ಮದುವೆ ಆದ್ರೆ ಮಂತ್ರ ಮಾಂಗಲ್ಯವೇ ಆಗ್ಬೇಕು ಅನ್ನೋ ಕನಸು ಈಡೇರಿದೆ"; ಸರಿಗಮಪ ಗಾಯಕಿ ಸುಹಾನಾ ಸೈಯ್ಯದ್
ಕನ್ನಡದ ರಿಯಾಲಿಟಿ ಶೋ ಸರಿಗಮಪದ ಮೂಲಕ ಜನಪ್ರಿಯರಾಗಿದ್ದ ಶಿವಮೊಗ್ಗದ ಸಾಗರದ ಗಾಯಕಿ ಸುಹಾನಾ ಸೈಯ್ಯದ್. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಸುಹಾನಾ ಸೈಯ್ಯದ್ ಇಂದು (ಆಕ್ಟೋಬರ್ 17) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.16 ವರ್ಷಗಳ ಗೆಳಯ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ವಿವಾಹವಾಗಿದ್ದಾರೆ.
ಸುಹಾನಾ ಸೈಯ್ಯದ್ ಹಾಗೂ ನಿತಿನ್ ಶಿವಾಂಶ್ ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರೂ ಒಂದೇ ಸ್ಕೂಲ್‌ನಲ್ಲಿ ಓದುತ್ತಿದ್ದಾಗಿನಿಂದ ಪರಿಚಯ. ಅಲ್ಲದೆ ನಿತಿನ್ ರಂಗಭೂಮಿ ಕಲಾವಿದರು. ಸುಹಾನಾ ಸೈಯ್ಯದ್‌ಗೂ ರಂಗಭೂಮಿ ಮೇಲೆ ಆಸಕ್ತಿಯಿತ್ತು. ಅಲ್ಲಿಂದಲೂ ಇಬ್ಬರ ಪರಿಚಯ ಇನ್ನೂ ಗಾಢವಾಗಿತ್ತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಆದರೆ, ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದರೂ, ಧೈರ್ಯವಾಗಿ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಧರ್ಮಗಳ ಎಲ್ಲೆಗಳನ್ನು ಮೀರಿ ಪ್ರೀತಿಸಿದ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೀಗೆ ಮದುವೆ ಆಗಬೇಕು ಅನ್ನೋದು ಸರಿಗಮಪ ಗಾಯಕಿ ಸುಹಾನಾ ಸೈಯ್ಯದ್ ಅವರ ಆಶಯ ಕೂಡ ಆಗಿತ್ತು. ಅದರಂತೆ ಗುರು ಹಿರಿಯರ ಹಾಗೂ ಆಪ್ತರ ಸಮ್ಮುಖದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದೆ. ವಿವಾಹದ ಬಳಿಕ ಸ್ಟಾರ್ ಪಿಕ್ಚರ್‌ಗೆ ನೀಡಿದ ಸಂದರ್ಶನದಲ್ಲಿ ಮಂತ್ರ ಮಾಂಗಲ್ಯ, ಲವ್ ಸ್ಟೋರಿ ಬಗ್ಗೆ ಬಗ್ಗೆ ಹೇಳಿಕೊಂಡಿದ್ದಾರೆ.
"ಈ ದಿನಕ್ಕಾಗಿ ಕಾಯುತ್ತಿದ್ದೆ"
ಸರಿಗಮಪದ ಗಾಯಕಿ ಮೂಲತ: ಶಿವಮೊಗ್ಗದ ಸಾಗರದವರು. ಜೀ ಕನ್ನಡದ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಫೇಮಸ್ ಆಗಿದ್ದರು. ಇವರು ಹಾಡಿದ ಕೆಲವು ಹಾಡುಗಳು ವಿವಾದಕ್ಕೂ ಎಡೆ ಮಾಡಿಕೊಟ್ಟಿತ್ತು. ಕೆಲವು ದಿನಗಳ ಹಿಂದಷ್ಟೇ ಪ್ರೀತಿ ಮಾಡುತ್ತಿರುವ ವಿಷಯವನ್ನು ಬಹಿರಂಗಪಡಿಸಿದ್ದ ಗಾಯಕಿ ಮದುವೆ ಬಗ್ಗೆನೂ ಮಾಹಿತಿ ಹಂಚಿಕೊಂಡಿದ್ದರು. ಈಗ ವಿವಾಹದ ಬಳಿಕ ಮದುವೆ ಅಷ್ಟು ಸುಲಭ ಆಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
"ಪ್ರತಿಯೊಬ್ಬರಿಗೂ ಈ ದಿನ ತುಂಬಾನೇ ಸ್ಪೆಷಲ್ ಆಗಿರುತ್ತೆ. ಎಷ್ಟು ಸ್ಪೆಷಲ್ ಅಂತ ಹೇಳುವುದಕ್ಕೆ ಕಷ್ಟ. ಎಲ್ಲಾ ಪ್ರೇಮಿಗಳು ಇಂತಹದ್ದೊಂದು ದಿನಕ್ಕೆ ಕಾಯುತ್ತಿರುತ್ತಾರೆ. ಅದರಲ್ಲೂ ಕುಟುಂಬದವರ ಸಮ್ಮುಖದಲ್ಲಿ ಆಗಬೇಕು ಎನ್ನುವ ಕನಸು ಎಲ್ಲರಲ್ಲೂ ಇರುತ್ತೆ. ಅದು ಎಲ್ಲರಿಗೂ ಅಷ್ಟು ಸುಲಭ ಆಗಿರುವುದಿಲ್ಲ. ನಮಗೆ ಎಲ್ಲಾ ಹಿರಿಯರ ಸಮ್ಮುಖದಲ್ಲಿ ಮಂತ್ರ ಮಾಂಗಲ್ಯದ ರೂಪದಲ್ಲಿ ಆಗುತ್ತಿರೋದು ಖುಷಿಯಾಗಿದೆ." ಎಂದು ಗಾಯಕಿ ಸುಹಾನಾ ಸೈಯ್ಯದ್ ಹೇಳಿದ್ದಾರೆ.
"ಮಂತ್ರ ಮಾಂಗಲ್ಯವೇ ಆಗ್ಬೇಕು ಅನ್ನೋ ಕನಸಿತ್ತು"
ಇನ್ನು ಸುಹಾನಾ ಹಾಗೂ ನಿತಿನ್ ಶಿವಾಂಶ್ ಇಬ್ಬರೂ ಮಂತ್ರ ಮಾಂಗಲ್ಯದ ಮೂಲಕವೇ ಮದುವೆ ಆಗಬೇಕೆಂದು ನಿರ್ಧರಿಸಿದ್ದಾಗಿಯೂ ಹೇಳಿಕೊಂಡಿದ್ದಾರೆ. "ಮದುವೆ ಆದರೆ, ಮಂತ್ರ ಮಾಂಗಲ್ಯವೇ ಆಗಬೇಕು ಎಂಬ ಕನಸು ಬಹಳ ವರ್ಷಗಳಿಂದ ಇತ್ತು. ಅದು ನೆರೆವೇರಿದೆ ಹಾಗಾಗಿ ಬಹಳ ಖುಷಿಯಿದೆ. ತುಂಬಾ ಕಡಿಮೆ ಸಮಯದಲ್ಲಿ ಇದೆಲ್ಲ ನೆರವೇರಿದೆ. ಹೀಗಾಗಿ ಕಡಿಮೆ ಸಮಯದಲ್ಲಿ ನಮ್ಮ ಕರೆಗೆ ಓಗೊಟ್ಟು ನಮ್ಮ ಮದುವೆಗೆ ಗುರು ಹಿರಿಯರು ಬಂದು ಆಶೀರ್ವಾದ ಮಾಡಿದ್ದಾರೆ. ಇಬ್ಬರ ಗುರುಗಳು ತುಂಬಾ ಜನ ಬಂದಿದ್ದಾರೆ." ಎಂದು ಸುಹಾನಾ ಸೈಯ್ಯದ್ ಹರ್ಷ ವ್ಯಕ್ತಪಡಿಸಿದ್ದಾರೆ.
ಇನ್ನು ಗಾಯಕಿ ಸುಹಾನಾ ಸೈಯ್ಯದ್ ತಮ್ಮ ಪತಿ ನಿತಿನ್ ಶಿವಾಂಶ್ ಮೊದಲ ಪರಿಚಯ ಹಾಗೂ ಪ್ರೀತಿ ಹುಟ್ಟಿದ್ದೇಗೆ? ಅನ್ನೋದನ್ನು ಈ ವೇಳೆ ಹೇಳಿಕೊಂಡಿದ್ದಾರೆ. "ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದ್ದು. ಹೈಸ್ಕೂಲ್ ಸಮಯದಿಂದ ನನಗೆ ಪರಿಚಯ." ಎಂದು ಸುಹಾನಾ ಸೈಯ್ಯದ್ ಹೇಳಿಕೊಂಡಿದ್ದಾರೆ.


Click it and Unblock the Notifications











