ನಂದಿ ಬೆಟ್ಟದಲ್ಲಿ 'ಬಹದ್ದೂರ್ ಗಂಡು' ಕಿರಣ್ ರಾಜ್ ಭರ್ಜರಿ ಫೈಟ್
ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ನಟರು ಸಿನಿಮಾದಲ್ಲಿ ನಟಿಸುವುದು ಹೊಸತೇನಲ್ಲ. ಕಿರುತೆರೆ ನಟರಿಗೆ ಕನ್ನಡ ಚಿತ್ರರಂಗ ಮೊದಲಿನಿಂದಲೂ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಿದೆ. ಕಿರುತೆರೆಯಿಂದ ಸಿನಿಮಾಗಳಿಗೆ ಎಂಟ್ರಿ ಕೊಟ್ಟವರಿಗೆ ಪ್ರೇಕ್ಷಕರು ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕೆಲವರಿಗೆ ಸಿನಿಮಾಗಳಲ್ಲಿ ಅದೃಷ್ಟ ಕುಲಾಯಿಸಿದೆ. ಮತ್ತೆ ಕೆಲವರಿಗೆ ಸೋಲಿನ ರುಚಿ ಸಿಕ್ಕಿದೆ. ಈಗ ಮತ್ತೊಬ್ಬ ನಟ ಸ್ಯಾಂಡಲ್‌ವುಡ್ ಎಂಟ್ರಿ ಕೊಡುತ್ತಿದ್ದಾರೆ.
ಧಾರಾವಾಹಿಯಲ್ಲಿ ಮನೆ ಮಾತಾಗಿರುವ ನಟ ಕಿರಣ್ ರಾಜ್ ಬಹದ್ದೂರು ಗಂಡಿನ ಅವತಾರವೆತ್ತಿದ್ದಾರೆ. ಹಲವು ದಿನಗಳಿಂದ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಮಧ್ಯದಲ್ಲಿ ಕೊರೊನಾ ಹಾವಳಿಯಿಂದ ಸಿನಿಮಾ ಶೂಟಿಂಗ್ ಕೊಂಚ ತಡವಾಗಿದ್ದರೂ, ಮತ್ತೆ ಚಿತ್ರೀಕರಣ ಆರಂಭ ಆಗಿದ್ದು ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿದೆ.
ನಂದಿ ಬೆಟ್ಟದಲ್ಲಿ ಬಹದ್ದೂರು ಗಂಡಿನ ಸಾಹಸ ದೃಶ್ಯ
ಧಾರಾವಾಹಿಯಲ್ಲಿ ಹೆಸರು ಮಾಡಿರುವ ಕಿರಣ್ ರಾಜ್ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಇವರ ಮೊಟ್ಟ ಮೊದಲ ಸಿನಿಮಾ 'ಬಹದ್ದೂರ್ ಗಂಡು' ಅದ್ಧೂರಿಯಾಗಿ ಚಿತ್ರೀಕರಣ ನಡೆಯುತ್ತಿದೆ. ಕೆಲವು ದಿನಗಳಿಂದ 'ಬಹದ್ದೂರ್ ಗಂಡು' ಚಿತ್ರದ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ. ನಂದಿ ಬೆಟ್ಟದ ತಪ್ಪಲಿನಲ್ಲಿ 'ಬಹದ್ದೂರ್ ಗಂಡು' ಕಿರಣ್ ರಾಜ್ ಸಾಹಸ ಸನ್ನಿವೇಶಗಳಲ್ಲಿ ನಟಿಸುತ್ತಿದ್ದಾರೆ.

'ಬಹದ್ದೂರ್ ಗಂಡು' ಸಿನಿಮಾದಲ್ಲಿ ನಾಲ್ಕು ಫೈಟ್ ಇದೆ. ಈ ನಾಲ್ಕೂ ಸಾಹಸ ಸನ್ನಿವೇಶಗಳಲ್ಲಿ ದೊಣ್ಣೆ ವರಸೆ ಪ್ರಮುಖ ಆಕರ್ಷಣೆಯಂತೆ. ಇದಕ್ಕಾಗಿ ನಾಯಕ ನಟ ಕಿರಣ್ ರಾಜ್ ಬಹಳ ದಿನಗಳಿಂದ ತಯಾರಿ ಮಾಡಿಕೊಂಡಿದ್ದಾರಂತೆ. ಈ ಮಾತನ್ನು ನಿರ್ದೇಶಕ ಪ್ರಸಿದ್ದ್ ಅವರೇ ಬಹಿರಂಗ ಪಡಿಸಿದ್ದಾರೆ.
ಮೂರು ತಿಂಗಳಿಂದ ಕಿರಣ್ ರಾಜ್ ದೊಣ್ಣೆ ವರಸೆ ಅಭ್ಯಾಸ
'ಬಹದ್ದೂರ್ ಗಂಡು' ಚಿತ್ರದ ನಾಯಕ ಕಿರಣ್ ರಾಜ್ ಈ ಸಾಹಸ ದೃಶ್ಯಗಳಿಗಾಗಿ ಸುಮಾರು ಮೂರು ತಿಂಗಳಿಂದ ದೊಣ್ಣೆ ವರಸೆ ಅಭ್ಯಾಸ ಮಾಡಿದ್ದರು. ಕಿರಣ್ ರಾಜ್ ಹಾಗೂ ಶಬರಿ ಮಂಜು ನಡುವೆ ನಡೆಯುವ ಈ ಸಾಹಸ ದೃಶ್ಯ ನೈಜವಾಗಿ ಮೂಡಿ ಬರಲು ಈ ಪೂರ್ವಾಭ್ಯಾಸ ನಡೆಸಿದ್ದರು. ಸಾಹಸ ನಿರ್ದೇಶಕ ವಿನೋದ್ ಅದ್ದೂರಿಯಾಗಿ ಈ ಸಾಹಸ ಸನ್ನಿವೇಶವನ್ನು ಚಿತ್ರೀಕರಣ ಮಾಡುತ್ತಿದ್ದಾರೆ.

'ಬಹದ್ದೂರ್ ಗಂಡು' ಸಿನಿಮಾವನ್ನು ಪ್ರಸಿದ್ದ್ ಸಿನಿಮಾಸ್ ಮತ್ತು ರಮೇಶ್ ರೆಡ್ಡಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಕಿಟ್ಟಿ ಕೌಶಿಕ್ ಕ್ಯಾಮರಾ ಹಿಡಿದಿದ್ದರೆ, ಗುಮ್ಮಿನೇನಿ ವಿಜಯ್ ಸಂಗೀತ ನೀಡುತ್ತಿದ್ದಾರೆ. ಮೋಹನ್ ಕೊರಿಯೋಗ್ರಫಿ ಮಾಡುತ್ತಿದ್ದಾರೆ.
'ಬಹದ್ದೂರ್ ಗಂಡು' ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದೆ. ನಾಯಕ ಕಿರಣ್ ರಾಜ್ ಜೊತೆ ಯಶಾ ಶಿವಕುಮಾರ್, ರಮೇಶ್ ಭಟ್, ವೀಣಾ ಸುಂದರ್, ಜಯಶ್ರೀ ರಾಜ್, ರಾಕೇಶ್ ರಾಜ್, ಸುರೇಖ, ನಾಗೇಶ್ ರೋಹಿತ್, ಶಬರಿ ಮಂಜು, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ನಟಿಸುತ್ತಿದ್ದಾರೆ.


Click it and Unblock the Notifications











