»   » ಶಿವಣ್ಣನ ಕಣ್ಣಿನಲ್ಲಿ ಅದ್ಭುತ ಶಕ್ತಿಯನ್ನು ಕಂಡ ಉಪೇಂದ್ರ

ಶಿವಣ್ಣನ ಕಣ್ಣಿನಲ್ಲಿ ಅದ್ಭುತ ಶಕ್ತಿಯನ್ನು ಕಂಡ ಉಪೇಂದ್ರ

Posted By:
Subscribe to Filmibeat Kannada

ನಮ್ಮ ಕೆಲವು ನಾಯಕ ನಟರು ಇರುವುದೇ ಹಾಗೆ. ಎಲ್ಲರ ಜೊತೆ ಬೆರೆತು, ಯಾವುದೇ ವಿವಾದಕ್ಕೊಳಗಾಗದೆ ತಾವಾಯಿತು ತಮ್ಮ ಕೆಲಸವಾಯಿತು ಎಂದು ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಕನ್ನಡದ ಕೆಲ ನಟರಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ಒಬ್ಬರು.

ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ (ಸೆ 20, 21) ಅತಿಥಿಯಾಗಿ ಭಾಗವಹಿಸಿದ್ದ ಉಪೇಂದ್ರ ಚಿತ್ರೋದ್ಯಮದಲ್ಲಿ ಹಲವರ ಜೊತೆಗಿನ ತನ್ನ ಒಡನಾಟವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರರಂಗದಲ್ಲಿ ನಾನು ಇವತ್ತು ಏನು ಸಾಧಿಸಿದ್ದರೂ ಅದು ನನಗೆ ದಾರಿದೀಪವಾದವರಿಂದ ಎಂದು ನಿಯತ್ತಿನ ಮಾತನ್ನಾಡಿದ್ದಾರೆ. (ವಿಡಿಯೋ ಭಾಗ 1)

ಕಾರ್ಯಕ್ರಮದಲ್ಲಿ ಹಲವು ಬಾರಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ನೆನೆಸಿಕೊಂಡ ಉಪೇಂದ್ರ, ಶಿವಣ್ಣ ಹಾಲಿನಂತಹ ಮನಸ್ಸಿನವರು. ಅವರ ಕಣ್ಣಿನಲ್ಲಿ ಒಂದು ಅದ್ಭುತ ಶಕ್ತಿಯಿದೆ. ಅವರ ಜೊತೆಗಿನ ಒಡನಾಟವೇ ಒಂದು ಸುಂದರ ಅನುಭವ ಎಂದು ಕಾರ್ಯಕ್ರಮದಲ್ಲಿ ಶಿವಣ್ಣನ ಬಗ್ಗೆ ಹೆಮ್ಮೆಯ ಮಾತನ್ನಾಡಿದ್ದಾರೆ.

ಚಿತ್ರರಂಗಕ್ಕೆ ತನ್ನನ್ನು ಪರಿಚಯಿಸಿದ ಕಾಶೀನಾಥ್, ನಂತರ ತನ್ನ ಬೆಳವಣಿಗೆಗೆ ಕಾರಣರಾದ ವಿ ಮನೋಹರ್, ವಜ್ರೇಶ್ವರಿ ಕಂಬೈನ್ಸ್ ಬಗ್ಗೆ ವಿಶೇಷವಾಗಿ ಮಾತನಾಡಿದ ಉಪೇಂದ್ರ, ತನ್ನ ರಾಜಕೀಯ ಪ್ರವೇಶದ ಬಗ್ಗೆ ಮಾತ್ರ ಗೊಂದಲಮಯ ಹೇಳಿಕೆ ಮುಂದುವರಿಸಿದ್ದಾರೆ. (ವಿಡಿಯೋ ಭಾಗ 2)

ಕಾರ್ಯಕ್ರಮದಲ್ಲಿ ಉಪ್ಪಿ, ಕನ್ನಡ ಚಿತ್ರೋದ್ಯಮ, ಶಿವಣ್ಣ, ತನ್ನ ಮದುವೆ ಹೀಗೆ ಬಹಳಷ್ಟು ಮಾತನ್ನಾಡಿದ್ದಾರೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ.

ರಾಜಕೀಯ ಎಂಟ್ರಿ ಬಗ್ಗೆ ಉಪ್ಪಿ

ತನ್ನ ಹಲವಾರು ಚಿತ್ರಗಳಲ್ಲಿ ರಾಜಕೀಯ ಟಚ್ ಇರುವುದನ್ನು ಒಪ್ಪಿಕೊಂಡ ಉಪ್ಪಿ, ಸಮಾಜದಲ್ಲಿ ಆಮೂಲಾಗ್ರ ಬದಲಾವಣೆ ತರಬೇಕಾದರೆ ಅದು ರಾಜಕೀಯ ಪ್ರವೇಶದಿಂದ ಮಾತ್ರ ಸಾಧ್ಯ. ಮುಂದೊಂದು ದಿನ ರಾಜಕೀಯಕ್ಕೆ ಎಂಟ್ರಿ ಆದರೂ ಆಗಬಹುದು. ಏನು ಆಗಬೇಕೋ ಅದು ಆಗೇ ಆಗುತ್ತೆ. ಎಲ್ಲಾ ದೇವರ ಚಿತ್ತ - ಉಪೇಂದ್ರ

ರಕ್ತಕಣ್ಣೀರು ಡೈಲಾಗ್ ಹೊಡೆದಾಗ ಚಪ್ಪಾಳೆಯ ಸುರಿಮಳೆ

ವಿಶೇಷವಾಗಿ ತನ್ನ ಮಾತಿನ ಅಬ್ಬರದಿಂದಲೇ ಪ್ರೇಕ್ಷಕರನ್ನು ಸೀಟಿನಂಚಿಗೆ ಕೂರಿಸುವ ಉಪೇಂದ್ರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯೆಂದರೆ ಕೇಳಬೇಕೇ? ಪ್ರೇಕ್ಷಕರ ಒತ್ತಾಯದ ಮೇರೆಗೆ ರಕ್ತಕಣ್ಣೀರು ಚಿತ್ರದ ಎವರ್ ಗ್ರೀನ್ ಡೈಲಾಗ್ ಹೇಳಿದಾಗಲಂತೂ ಕಾರ್ಯಕ್ರಮದಲ್ಲಿ ಹಾಜರಿದ್ದವರು standing ovation ಮಾಡಿ ಗೌರವಿಸಿದರು.

ಕಾಶೀನಾಥ್ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟ ಉಪ್ಪಿ

ಬಹಳಷ್ಟು ವೇದಿಕೆಯಲ್ಲಿ ಕಾಶೀನಾಥ್ ಬಗ್ಗೆ ಹೇಳಿದ್ದೇನೆ. ಅವರ ಬಗ್ಗೆ ಮತ್ತು ಅವರು ನನಗೆ ಮಾಡಿದ ನಿಷ್ಕಲ್ಮಶ ಸಹಾಯದ ಮುಂದೆ ನಾನು ಇಂದು ನಿಮ್ಮ ಮುಂದಿದ್ದೇನೆ. ಮಾತು ಮುಂದುವರಿಸುತ್ತಾ ಉಪ್ಪಿ, ಬೆಲೆಕಟ್ಟಲಾಗದ ಅವರ ಸಹಾಯ, ಅಭಿಮಾನ, ಪ್ರೀತಿಯ ಮುಂದೆ ಅಭಿಮಾನದಿಂದ ನಾನು ಅವರ ಶಿಷ್ಯ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಕಾರ್ಯಕ್ರಮಕ್ಕೆ ಬಂದಿದ್ದ ಕಾಶೀನಾಥ್ ಅವರ ಪಾದಮುಟ್ಟಿ ನಮಸ್ಕರಿಸಿದರು.

ವಿ ಮನೋಹರ್ ಬಗ್ಗೆ

ನನ್ನ ಹಾಗೇ ವಿ ಮನೋಹರ್ ಬಹಳಷ್ಟು ಕಲಾವಿದರಿಗೆ ಅನ್ನ ನೀಡಿದ್ದಾರೆ. ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುತ್ತಿದ್ದ ಮನೋಹರ್ ಶಿಷ್ಯರಲ್ಲಿ ನಾನೂ ಒಬ್ಬ ಎಂದು ಹೇಳಲು ಹೆಮ್ಮೆಯಾಗುತ್ತಿದೆ. ನಾನು ಬರೆದ ಸಾಹಿತ್ಯಕ್ಕಾಗಿ ತನ್ನ ಸಾಹಿತ್ಯವನ್ನು ಜೇಬಿನೊಳಗೆ ಇಟ್ಟುಕೊಂಡ ಪುಣ್ಯಾತ್ಮರು ಅವರು.

ನಾನು ಇಂದಿಗೂ ಉಪ್ಪಿಗೆ ಚಿರುಖುಣಿ

ಉಪ್ಪಿ ಚಿತ್ರದಲ್ಲಿ ಅದರಲ್ಲೂ ಪ್ರಮುಖವಾಗಿ ಉಪ್ಪಿ ನಿರ್ದೇಶನದ ಚಿತ್ರಗಳಿಗೆ ಪರ್ಮನೆಂಟ್ ಸದಸ್ಯ ಗುರುಕಿರಣ್. ಸಿನಿಮಾ ಬದುಕಿನ ಆದಿಯಲ್ಲಿ ನಾನು ಪಡುತ್ತಿದ್ದ ಕಷ್ಟದಿಂದ ಹೊರಬರಲು ಉಪ್ಪಿ ನೀಡಿದ ಆತ್ಮಸ್ಥೈರ್ಯವೇ ಕಾರಣ. ಅವರ ಧೈರ್ಯಕ್ಕೆ ನನ್ನದೊಂದು ಸಲಾಂ. ಉಪ್ಪಿ2 ಚಿತ್ರಕ್ಕೆ ಮತ್ತೆ ನಾನು ಸಂಗೀತ ನಿರ್ದೇಶಕ. ಇದು ಉಪ್ಪಿ ನನ್ನ ಮೇಲಿಟ್ಟಿರುವ ಪ್ರೀತಿಗೆ ಕಾರಣ - ಗುರುಕಿರಣ್

ಶಿವಣ್ಣನ ಬಗ್ಗೆ ಮೆಚ್ಚುಗೆಯ ಮಹಾಪೂರ

ನಮ್ಮ ಚಿತ್ರೋದ್ಯಮದಲ್ಲಿ ಶಿವಣ್ಣನಂತಹ ಹಾಲಿನಂತಹ ಮನಸ್ಸಿನವರನ್ನು ನಾನು ನೋಡಿಲ್ಲ. ಮನಸ್ಸಿನಲ್ಲಿ ಇತರರಿಗೆ ಏಳಿಗೆಯನ್ನೇ ಬಯಸುವವರು ಅವರು. ಅವರ ಕಣ್ಣನ್ನು ಒಮ್ಮೆ ನೋಡಿ. ಅವರ ಕಣ್ಣಿನಲ್ಲಿ ಒಂದು ಅಟ್ರ್ಯಾಕ್ಷನ್ ಇದೆ. ಓಂ ಚಿತ್ರ ಮಾಡಿದಾಗ ನಾನು ಒತ್ತಿ ಒತ್ತಿ ಅದನ್ನೇ ಹೇಳುತ್ತಿದ್ದೆ. ಶಿವಣ್ಣ ನಿಮ್ಮ ಕಣ್ಣಲ್ಲಿ ಒಂದು ಶಕ್ತಿಯಿದೆ. ಅದಕ್ಕೆ ಕ್ಯಾಮರಾಮ್ಯಾನ್ ಅವರಿಗೆ ನಿಮ್ಮ ಕಣ್ಣಿನ ಮೇಲೆ ಹೆಚ್ಚಿನ ಫೋಕಸ್ ಮಾಡಲು ಹೇಳಿದ್ದೇನೆ - ಉಪೇಂದ್ರ

ಪತ್ನಿ ಪ್ರಿಯಾಂಕ ಬಗ್ಗೆ

ನಮ್ಮದು ಎರಡು ವಿಭಿನ್ನ ಸಂಸ್ಕ್ರುತಿಯ (ಕನ್ನಡ, ಬೆಂಗಾಲಿ) ಮದುವೆಯಾಗಿತ್ತು. ನಮ್ಮ ಕುಟುಂಬದವರು ಉಪ್ಪಿಯನ್ನು ತುಂಬಾ ಇಷ್ಟಪಡುತ್ತಾರೆ. ಧೈರ್ಯಮಾಡಿ ಒಂದು ದಿನ ಉಪ್ಪಿ ಅವರ ತಂದೆ ತಾಯಿ ಬಳಿ ಮದುವೆಯ ಬಗ್ಗೆ ಪ್ರಸ್ತಾವ ಮಾಡಿದರು. ಅವರ ತಂದೆ, ತಾಯಿ ತಡಮಾಡದೇ ಒಪ್ಪಿಗೆ ಸೂಚಿಸಿ ಮದುವೆ ಮಹೂರ್ತದ ದಿನ ನಿಗದಿ ಮಾಡಿದರು - ಪ್ರಿಯಾಂಕ ಉಪೇಂದ್ರ.

English summary
Hatrick Hero Shivaraj Kumar has special power in his eyes, Real Star Upendra in Weekend With Ramesh TV show in Zee Kannada telecasted on Sep 21.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada