ಥಿಯೇಟರ್.. ಓಟಿಟಿ ಬಳಿಕ ಕಿರುತೆರೆಯಲ್ಲಿ ಅಬ್ಬರಿಸಲು '45' ರೆಡಿ; ಎಲ್ಲಿ? ಯಾವಾಗ?
ಸ್ಯಾಂಡಲ್‌ವುಡ್‌ನ ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಚೊಚ್ಚಲ ಬಾರಿಗೆ ನಿರ್ದೇಶಿಸಿದ ಸಿನಿಮಾ '45'. ಮೊದಲ ಸಿನಿಮಾವನ್ನು ವಿಭಿನ್ನವಾಗಿ ಮಾಡಬೇಕು ಅನ್ನೋ ಹಂಬಲದಲ್ಲಿ ಕೈ ಹಾಕಿದ್ದರು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಮೂವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೊಂದು ರೆಗ್ಯೂಲರ್ ಸಿನಿಮಾ ಅಲ್ಲದೆ, ವಿಭಿನ್ನ ಕಲ್ಪನೆಯಲ್ಲಿ ಮೂಡಿ ಬಂದಿರುವ ಸಿನಿಮಾ.
'45' ಸಿನಿಮಾವನ್ನು ಒಂದು ಫ್ಯಾಂಟಸಿ ಆಕ್ಷನ್ ಡ್ರಾಮಾ ಕ್ಯಾಟಗರಿಗೆ ಸೇರಿಸಬಹುದು. ಇಲ್ಲಿ ಫಿಲಾಸಫಿಯೊಂದಿಗೆ ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳನ್ನು ಇಟ್ಕೊಂಡು ಕತೆ ಹೆಣೆಯಲಾಗಿತ್ತು. ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶಕರಾಗಿ ಜನ ಮೆಚ್ಚುಗೆ ಗಳಿಸಿದ್ದರು. ಮೊದಲ ಪ್ರಯತ್ನದಲ್ಲಿಯೇ ನಿರ್ದೇಶನದಲ್ಲಿ ಮಿಂಚಿದ್ದರು. ಈ ದುಬಾರಿ ಸಿನಿಮಾವನ್ನು ಎಂ. ರಮೇಶ್ ರೆಡ್ಡಿ ತಮ್ಮ ಸುರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.

ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿಯಂತಹ ದಿಗ್ಗಜರನ್ನು ಇಟ್ಟುಕೊಂಡು ವಿಭಿನ್ನವಾದ ಕಥೆಯೊಂದಿಗೆ ಅತೀಂದ್ರೀಯ ಅಂಶಗಳು ಮತ್ತು ಜೀವನದ ಮೌಲ್ಯಗಳನ್ನು ಅದ್ಭುತವಾಗಿ ಅರ್ಜುನ್ ಜನ್ಯ ತೋರಿಸಿದ್ದಾರೆ. ಇನ್ನು 3 ದಿಗ್ಗಜರು ಜೊತೆಯಾಗಿ ನಟಿಸಿರುವ ಈ ಸಿನಿಮಾವನ್ನು ಪ್ರೇಕ್ಷಕರು ಕೂಡ ಮೆಚ್ಚಿಕೊಂಡಿದ್ದರು. ಈಗ ಸಿನಿಮಾ ಥಿಯೇಟರ್, ಓಟಿಟಿಗೆ ಲಗ್ಗೆ ಇಟ್ಟ ಬಳಿಕ ಕಿರುತೆರೆಯಲ್ಲಿ ಪ್ರಸಾರ ಕಾಣುತ್ತಿದೆ.
ವಿನಯ್ (ರಾಜ್ ಬಿ. ಶೆಟ್ಟಿ) ಎಂಬ ಮೃಧು ಸ್ವಭಾವದ ಸಾಫ್ಟ್‌ವೇರ್ ಎಂಜಿನಿಯರ್ '45' ಸಿನಿಮಾದ ಕಥೆ ಸುತ್ತ ಸಾಗುತ್ತದೆ. ತಾಯಿ ಮತ್ತು ತನ್ನ ಗೆಳತಿ ಮೇಘನಾಳ ಜೊತೆ ಸಿಂಪಲ್ ಲೈಫ್ ಲೀಡ್ ಮಾಡುತ್ತಿದ್ದ ಅವನ ಬದುಕು, ಒಂದು ಅನಿರೀಕ್ಷಿತ ಘಟನೆಯಿಂದ ಸಂಪೂರ್ಣವಾಗಿ ಬದಲಾಗುತ್ತದೆ. ಲೋಕಲ್ ಡಾನ್ ರಾಯಪ್ಪ (ಉಪೇಂದ್ರ) ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದ 'ರೋಸಿ' ಎಂಬ ಕಪ್ಪು ನಾಯಿಯ ಸಾವಿಗೆ ಅರಿಯದೆ ವಿನಯ್ ಕಾರಣನಾಗುತ್ತಾನೆ. ಸಾಕು ನಾಯಿಯನ್ನು ಕಳೆದುಕೊಂಡ ದುಃಖದಲ್ಲಿ ಕೋಪಗೊಂಡ ರಾಯಪ್ಪ, ತಕ್ಷಣ ಶಿಕ್ಷೆ ನೀಡದೆ, ಗರುಡಪುರಾಣದಲ್ಲಿರುವ ಮರಣಾನಂತರ ಜೀವನದ ತತ್ವವನ್ನು ಉಲ್ಲೇಖಿಸಿ, ವಿನಯ್‌ಗೆ ತನ್ನ ತಪ್ಪಿನ ಬಗ್ಗೆ ಆತ್ಮ ಪರಿಶೀಲನೆ ಮಾಡಲು 45 ದಿನಗಳ ಕಾಲಾವಕಾಶ ನೀಡುತ್ತಾನೆ.
ವಿನಯ್‌ಗೆ ಭಯ ಮತ್ತು ಆತಂಕ ಹೆಚ್ಚಾಗುತ್ತೆ. ತನ್ನ ಬದುಕಿನ ಘಟನೆಗಳನ್ನು ಮುಂಚಿತವಾಗಿ ಕಾಣುವ ಭಯಾನಕ ಕನಸುಗಳು ಬರಲು ಆರಂಭಿಸುತ್ತದೆ. ಅದರಲ್ಲಿ ತನ್ನ ಅಂತ್ಯದ ಚಿತ್ರಣವೂ ಸೇರಿದ್ದು, ಆಘಾತಕ್ಕೆ ಒಳಗಾಗುತ್ತಾನೆ. ಈ ಗೊಂದಲದ ನಡುವೆ ಶಿವಣ್ಣ (ಶಿವರಾಜಕುಮಾರ್) ಅವರನ್ನು ಭೇಟಿ ಮಾಡುತ್ತಾನೆ. ದಿಟ್ಟ ವ್ಯಕ್ತಿತ್ವ ಹೊಂದಿರುವ ಶಿವಣ್ಣ ಅವರ ಮಾರ್ಗದರ್ಶಕ ಹಾಗೂ ರಕ್ಷಕರಾಗಿ ನಿಂತುಕೊಳ್ಳುತ್ತಾರೆ. '45' ದಿನಗಳ ಕೌಂಟ್‌ಡೌನ್ ಶುರು ಆಗ್ತಿದ್ದಂತೆ ವಿನಯ್ ತನ್ನ ಹಣೆಬರಹ ಅರಿವಿಗೆ ಬರುತ್ತೆ. ಭವಿಷ್ಯದಲ್ಲಿ ತನ್ನ ಜೀವನದಲ್ಲಿ ಏನಾಗುತ್ತೆ ಅನ್ನೋ ಅಂದಾಜು ಬರುತ್ತಾ ಹೋಗುತ್ತೆ. ಈ ಎಲ್ಲಾ ಅಂಶಗಳು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುತ್ತದೆ. ಈ ಸಿನಿಮಾವೀಗೆ ಜೀ ಕನ್ನಡದಲ್ಲಿ ಫೆಬ್ರವರಿ 22 ರಂದು ಸಂಜೆ 4:30 ಪ್ರಸಾರ ಆಗಲಿದೆ.
ಜೀ ಕನ್ನಡದ ಚೀಫ್ ಚಾನೆಲ್ ಆಫೀಸರ್, ಜೀ಼ ಕನ್ನಡ ಮತ್ತು ಬಿಸಿನೆಸ್ ಹೆಡ್ ಕನ್ನಡ ಜೀ಼5, ದೀಪಕ್ ಶ್ರೀರಾಮುಲು ಪ್ರೀಮಿಯರ್ ಬಗ್ಗೆ ಮಾತನಾಡಿ "ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಅವರು ಜೊತೆಯಾಗಿ ಕಾಣಿಸಿಕೊಂಡಿರುವುದು ಈ ಸಿನಿಮಾದ ತೂಕವನ್ನು ದುಪ್ಪಟ್ಟು ಮಾಡಿದೆ. ಈ ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುವುದನ್ನು ನೋಡುವುದೇ ಒಂದು ಚಂದದ ಅನುಭವ. ಇದು ಜಸ್ಟ್ ಪ್ರೀಮಿಯರ್ ಅಷ್ಟೇ ಅಲ್ಲ. ಇದು ಜೀ಼ ಕನ್ನಡ ಪ್ರೇಕ್ಷಕರಿಗೆ ಒಂದು ಹಬ್ಬ" ಎಂದು ಹೇಳಿದ್ದಾರೆ.
ವಿನಯ್‌ಗೆ ಎದುರಾಗಿರುವ ಕಷ್ಟದಿಂದ ಪಾರಾಗ್ತಾನಾ? ಇಲ್ಲ ವಿಧಿ ಬರಹಕ್ಕೆ ಗುರಿಯಾಗ್ತಾನಾ? ಇದಕ್ಕೆ '45' ಸಿನಿಮಾ ಕಿರುತೆರೆಯಲ್ಲಿ ಫೆಬ್ರವರಿ 22ರಂದು ಸಂಜೆ 4.30ರಿಂದ ಉತ್ತರ ಸಿಗುತ್ತಾ ಹೋಗುತ್ತೆ.


Click it and Unblock the Notifications











