"ನನಗೆ ಫ್ರೆಂಡ್ ಆಗಿರ್ಬೇಕು, ಕರೆದ ಕಡೆಗೆಲ್ಲ ಬರ್ಬೇಕು" ಎಂದಿದ್ದ ನಿರ್ದೇಶಕ: 'ಶ್ರಾವಣಿ ಸುಬ್ರಮಣ್ಯ' ನಟಿ ಆಸಿಯಾ ಫಿರ್ದೋಸ್
ಆಸಿಯಾ ಫಿರ್ದೋಸ್ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ನಟಿ 'ಶ್ರಾವಣಿ ಸುಬ್ರಮಣ್ಯ'ದ ನಾಯಕ ನಟಿ ಇವರೇ. ಇವರ ಸಹಜ ನಟನೆಯನ್ನು ಕಿರುತೆರೆ ವೀಕ್ಷಕರು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದಾರೆ. ಶ್ರಾವಣಿಯಾಗಿ ಮೆಚ್ಚಿಕೊಂಡಿದ್ದಾರೆ.
'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿಯ ಈ ನಟಿ ಇತ್ತೀಚೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಚಿತ್ರರಂಗದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆರಂಭದ ದಿನಗಳಲ್ಲಿ ತಮಗಾದ ಕೆಟ್ಟ ಅನುಭವಗಳು, ಸಿನಿಮಾಗೆ ಅವಕಾಶ ಕೊಟ್ಟು ಕೆಟ್ಟದಾಗಿ ನಡೆದುಕೊಂಡ ನಿರ್ದೇಶಕನ ಬಗ್ಗೆ ರಿವೀಲ್ ಮಾಡಿದ್ದಾರೆ. ಅವರಿಗೆ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ.

ಆಸಿಯಾ ಫಿರ್ದೋಸ್‌ಗೆ ನಟನೆ ಅಂದರೆ, ಸಿಕ್ಕಾಪಟ್ಟೆ ಇಷ್ಟ. ಈಗಾಗಲೇ ಕಿರುತೆರೆ ಹಾಗೂ ಸಿನಿಮಾ ಎರಡರಲ್ಲೂ ಆಸಿಯಾ ನಟಿಸಿದ ಅನುಭವವಿದೆ. 'ಕನ್ಯಾಕುಮಾರಿ' ಧಾರಾವಾಹಿಯಿಂದ ವೃತ್ತಿ ಆರಂಭಿಸಿದ್ದ ನಟಿ ಈಗ 'ಶ್ರಾವಣಿ ಸುಬ್ರಮಣ್ಯ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ 'ಆಶಾ', 'ಗಗನಸಖಿ ಮಿಸ್ಸಿಂಗ್', 'ದ್ವಂದ್ವ' ಸಿನಿಮಾಗಳಲ್ಲೂ ನಟಿಸಿದ್ದಾರೆ. ಈ ನಟಿ ತನಗಾದ ಕಾಸ್ಟಿಂಗ್ ಕೌಚ್ ಬಗ್ಗೆ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
"ಕಾಸ್ಟಿಂಗ್ ಕೌಚ್ ಅನ್ನು ತುಂಬಾ ಡೀಪ್ ಆಗಿ ಏನೂ ನೋಡಿಲ್ಲ ನಾನು. ನಾನು ಇವತ್ತಿನ ವರೆಗೂ ಯಾರೊಂದಿಗೆ ಕೆಲಸ ಮಾಡಿಕೊಂಡು ಬಂದಿದ್ದೀನಿ. ಅವರೆಲ್ಲರೂ ಚೆನ್ನಾಗಿಯೇ ಇದ್ದಾರೆ. ಆಕ್ಟಿಂಗ್ ಶುರು ಮಾಡುವುದಕ್ಕಿಂತ ಮುಂಚೆ ಚಿತ್ರರಂಗ ಹೀಗಿರುತ್ತೆ ಅನ್ನೋದೆಲ್ಲ ನನಗೆ ಗೊತ್ತಿರಲಿಲ್ಲ." ಎಂದು ಚಿತ್ರರಂಗದ ಬಗ್ಗೆ ತಮಗಿದ್ದ ಕಲ್ಪನೆಯನ್ನು ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.
"ನಾನು ಒಬ್ಬ ಅಂಕಲ್ ಅನ್ನು ಭೇಟಿ ಮಾಡಿದೆ. ಅವರು ಸೀರಿಯಲ್ ಇಂಡಸ್ಟ್ರಿಯಲ್ಲೆಲ್ಲ ಕೆಲಸ ಮಾಡುತ್ತಾರೆ ಅಂತ ಗೊತ್ತಾಯ್ತು. ಅವರು ನೀವು ಬಂದು ಭೇಟಿಯಾಗಿ ಅಂತೆಲ್ಲ ಹೇಳಿದ್ದರು. ನೀನು ಆಕ್ಟರ್ ಆಗಬೇಕಾ? ನೋಡು ನಿನ್ನನ್ನು ಸ್ವಿಮ್ಮಿಂಗ್ ಕ್ಲಾಸ್‌ಗೆ ಕಳಿಸುತ್ತೇನೆ ಅಂತೆಲ್ಲ ಹೇಳಿದ್ದರು. ನಾನು ಅದನ್ನೆಲ್ಲ ನಂಬಲಿಲ್ಲ. ಅವರು ಇಂಡಸ್ಟ್ರಿಯಲ್ಲಿ ಇದ್ದಿದ್ದರಿಂದ ಆಡಿಷನ್ ಎಲ್ಲಿ ಆಗ್ತಿದೆ ಅನ್ನೋದು ಗೊತ್ತಾಗುತ್ತಲ್ಲ ಎನ್ನುವ ಮನಸ್ಥಿತಿ ಇತ್ತಷ್ಟೇ. ಈ ವ್ಯಕ್ತಿ ನನಗೆ ಮೊದಲು ಅಪ್ಪನ ತರ ಫೀಲಿಂಗ್ ಕೊಟ್ಟರು. ಅವರನ್ನು ನಾನು ಮನೆಯವರಿಗೆಲ್ಲ ಪರಿಚಯ ಮಾಡಿಸಿದೆ. ಒಮ್ಮೆ ಒಂದು ಶೂಟಿಂಗ್‌ಗೆ ಹೋದಾಗ ಅಲ್ಲಿ ನನ್ನ ಕೈ ಹಿಡಿದುಕೊಂಡರು. ಆಗ ಗೊತ್ತಾಯ್ತು ಇವರ ಉದ್ದೇಶ ಬೇರೆನೇ ಇದೆ ಅಂತ. ಆಗ ಮನೆಯವರಿಗೆ ಹೇಳಿಬಿಟ್ಟೆ. ಅವರ ಕರೆಯನ್ನು ರಿಸೀವ್ ಮಾಡುವುದನ್ನು ನಿಲ್ಲಿಸಿಬಿಟ್ಟೆ." ಎಂದು ಆಸಿಯಾ ಫಿರ್ದೋಸ್ ತಮ್ಮ ಮೊದಲ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ಇನ್ನು ಆಸಿಯಾ ಫಿರ್ದೋಸ್ ಚಿತ್ರರಂಗಕ್ಕೆ ಬರಬೇಕು ಎಂದುಕೊಂಡಾಗ ಎಷ್ಟೋ ಮಂದಿ ನೆಗೆಟಿವ್ ಆಗಿ ಮಾತಾಡಿದ್ದರಂತೆ. ನಾಯಕಿ ಆಗಬೇಕು ಅಂದರೆ, ಕಮಿಟ್‌ಮೆಂಟ್‌ಗೆ ಒಪ್ಪಿಕೊಳ್ಳಬೇಕು. ಈಗ ಇರುವ ನಟಿಯರೆಲ್ಲರೂ ಅದೇ ರೀತಿ ಹೋಗಿರೋದು ಅಂತ ಹೇಳಿದ್ದನ್ನು ಕೇಳಿ ಗೊಂದಲಕ್ಕೆ ಬಿದ್ದಿದ್ದರಂತೆ. "ನನಗೆ ಎಷ್ಟೋ ಜನ ಹೇಳುತ್ತಿದ್ದರು. ಎಲ್ಲರೂ ಕಮಿಟ್ಮೆಂಟ್ ಅಂತ ಕೇಳುತ್ತಾರೆ. ಯಾರೆಲ್ಲ ನಟಿಯರಾಗಿ ಕೆಲಸ ಮಾಡುತ್ತಿದ್ದಾರೋ ಅವರೆಲ್ಲ ಹಾಗೇ ಹೋಗಿರೋದು. ಈ ಮಾತನ್ನು ನನ್ನ ಸುತ್ತಮುತ್ತ ಹೇಳೋರು. ನಮ್ಮ ಮೈಂಡ್‌ನಲ್ಲಿ ಅದೇ ಕೂತು ಬಿಟ್ಟಿತ್ತು. ಏನು ಮಾಡೋದು ಅಂತ ತಲೆಯಲ್ಲಿ ಕೂತಿತ್ತು." ಎನ್ನುತ್ತಾರೆ.
ಇದೇ ಪಾಡ್‌ಕಾಸ್ಟ್‌ನಲ್ಲಿ 'ಶ್ರಾವಣಿ ಸುಬ್ರಮಣ್ಯ' ಸೀರಿಯಲ್ ನಟಿ ತಮಗಾದ ಇನ್ನೊಂದು ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. "ನನ್ನ ಬದುಕಿನ ಅತೀ ಕೆಟ್ಟ ದಿನಗಳು ಅವು. ಸಿನಿಮಾವೊಂದಕ್ಕಾಗಿ ಆಫೀಸ್‌ಗೆ ಕರೆದಿದ್ರು. ಮನೆ ಹತ್ತಿರಾನೇ ಇತ್ತು. ಹಾಗಾಗಿ ಆಫೀಸ್‌ಗೆ ಹೋದೆ. ನಾನು ಒಬ್ಬಳೇ ಹೋಗಿದ್ದೆ. ಅಮ್ಮನನ್ನು ಕರೆದುಕೊಂಡು ಹೋಗಿರಲಿಲ್ಲ. ಆಗ ನಾನು ಒಂದು ಸಿನಿಮಾ ಮಾಡುತ್ತಿದ್ದೇನೆ. ನಿನಗೆ ಈ ಸಿನಿಮಾ ಮಾಡುವುದಕ್ಕೆ ಇಷ್ಟ ಇದೆಯಾ? ಅಂತ ಕೇಳಿದ್ದರು. ಸ್ಟೋರಿ ಕೇಳಿದೆ ಚೆನ್ನಾಗಿದೆ ಅಂತ ಅನಿಸಿತ್ತು. ಆ ಸಮಯದಲ್ಲಿ ನನಗೂ ಹಣ ಬೇಕಿತ್ತು. ಈ ಸಿನಿಮಾ ಬರುತ್ತೋ ಇಲ್ಲವೋ. ಆದರೆ, ಕೆಲಸ ಇರುತ್ತಲ್ಲ ಅಂತ ಅಂದುಕೊಂಡಿದ್ದೆ. ಯಾರೋ ಕಥೆ ತಂದಿದ್ದವರಿಗೆ ಇವಳೊಂದಿಗೆ ಕಮರ್ಷಿಯಲ್ ಬಗ್ಗೆ ಮಾತಾಡಬೇಕು. ನೀವು ಹೊರಗೆ ಹೋಗಿ ಅಂತ ಕಳುಹಿಸಿದ್ದರು." ಆಗ ಆ ನಿರ್ದೇಶಕನ ಅಸಲಿ ಮುಖ ಗೊತ್ತಾಗಿತ್ತು ಎಂದಿದ್ದಾರೆ.
ಸಹಾಯಕನನ್ನು ಆ ನಿರ್ದೇಶಕ ಹೊರಗೆ ಕಳುಹಿಸಿ, ಆಸಿಯಾ ಫಿರ್ದೋಸ್ ಜೊತೆ ಮತ್ತೆ ಸಿನಿಮಾ ಬಗ್ಗೆ ಮಾತಾಡುವುದಕ್ಕೆ ಶುರು ಮಾಡಿದ್ದರು. ನಟಿಯ ಸಂಭಾವನೆ ಬಗ್ಗೆ ಚರ್ಚೆ ಮಾಡಿದ್ದರು. ಆಸಿಯಾ ಸಂಭಾವನೆಯ ಬಗ್ಗೆ ಚೌಕಾಸಿ ಶುರು ಮಾಡಿದ್ದರು. ಬಳಿಕ ಅದಕ್ಕೂ ಅವರು ಒಪ್ಪಿಕೊಂಡಿದ್ದರು. ಆ ಬಳಿಕ ನಿರ್ದೇಶಕ ಅಸಲಿಗೆ ಮ್ಯಾಟರ್‌ಗೆ ಬಂದಿದ್ದನಂತೆ. ಈ ಸಿನಿಮಾದಲ್ಲಿ ನೀವು ಇರುತ್ತೀರ. ಆದರೆ, ಅದರ ಜೊತೆಗೆ ನನ್ನ ಜೊತೆ ಸ್ನೇಹದಿಂದ ಇರಬೇಕು. ನಾನ ಕರೆದ ಕಡೆ ಎಲ್ಲ ಬರಬೇಕು ಎಂದಿದ್ದರಂತೆ.
"ಅವರು ಒಂದು ಸಂಭಾವನೆ ಹೇಳಿದ್ರು. ಅದಕ್ಕಿಂತ ಸ್ವಲ್ಪ ಜಾಸ್ತಿ ಕೇಳಿದೆ. ಆಗ ಅವರು ಕೊಡೋಣ ಬಿಡಿ. ಅದರೆ, ನಿಮ್ಮ ಪರ್ಸನಾಲಿಟಿ ತುಂಬಾನೇ ಚೆನ್ನಾಗಿದೆ. ನೀವು ತುಂಬಾ ಚೆನ್ನಾಗಿ ಎಲ್ಲರನ್ನೂ ಮಾತಾಡಿಸುತ್ತೀರ. ನೀವು ನನ್ನ ಸಿನಿಮಾದಲ್ಲಿ ಕೆಲಸ ಮಾಡುತ್ತೀರ. ಅದರ ಜೊತೆಗೆ ನೀವು ನನಗೆ ಫ್ರೆಂಡ್ ಆಗಿರಬೇಕು. ಯಾವತರ ಅಂತ ಕೇಳಿದೆ. ನಾನು ಎಲ್ಲೋ ಆಚೆ ಹೋಗುತ್ತೀನಿ, ನಾನು ಸಿನಿಮಾಗೆ ಹೋಗುತ್ತೀನಿ ಅಂದರೆ, ಅಲ್ಲಿಗೆ ಬರಬೇಕು ಅಂತ ಹೇಳಿದ್ರು. ಆಗ ನನಗೆ ಸಿಕ್ಕಾಪಟ್ಟೆ ಕೋಪ ಬಂತು." ಎಂದು ಕೌಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ.
ಇನ್ನು ಆಸಿಯಾ ವೈಯಕ್ತಿಕ ಜೀವನದ ಕಡೆಗೆ ಬರುವುದಾರೇ, ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿದ್ದಾರೆ. ಕಾಲೇಜಿನಲ್ಲಿ ಓದುವಾಗಲೇ ಆಸಿಯಾ ಮಾಡಲಿಂಗ್ ಮಾಡುವುದಕ್ಕೆ ಶುರು ಮಾಡಿದ್ದರು. ಅದರ ಜೊತೆ ಜೊತೆಗೆ ಆಕ್ಟಿಂಗ್ ಕಡೆಗೆ ಹೆಚ್ಚು ಗಮನ ಹರಿಸಿದ್ದರು. ಹಾಗೇ ಧಾರಾವಾಹಿಗಳಿಗೆ ಆಡಿಷನ್ ಕೊಡುವುದಕ್ಕೂ ಶುರು ಮಾಡಿದ್ದರು. ಆದರೆ, ಅವರಿಗೆ ಆರಂಭದಲ್ಲಿ ಸಾಕಷ್ಟು ಕಹಿ ಅನುಭವಗಳು ಆಗಿದ್ದವು.
2020ರಲ್ಲಿ ಆಸಿಯಾ ಫಿರ್ದೋಸ್‌ಗೆ 'ನಾನು ನನ್ನ ಕನಸು' ಸೀರಿಯಲ್‌ನಲ್ಲಿ ಚಿಕ್ಕದೊಂದು ಪಾತ್ರ ಸಿಕ್ಕಿತ್ತು. ಅಲ್ಲಿಂದ ಅವರ ನಟನೆ ಜರ್ನಿ ಶುರುವಾಗಿತ್ತು. ಆದರೆ, 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ಅವರಿಗೆ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಈಗ ಧಾರಾವಾಹಿ ಹಾಗೂ ಸಿನಿಮಾ ಎರಡರಲ್ಲೂ ನಟಿಸುತ್ತಿದ್ದಾರೆ. ಕೋಮಲ್ ಜೊತೆನೂ ಸಿನಿಮಾದಲ್ಲಿ ನಟಿಸುತ್ತಿದ್ದಾರೆಂಬ ಮಾಹಿತಿಯಿದೆ.
ಸದ್ಯಕ್ಕೀಗ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಕಿರುತೆರೆಯಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಇವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದೆ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಬೇಕು ಅನ್ನೋ ಆಸೆ ಇಟ್ಟುಕೊಂಡಿದ್ದಾರೆ. ಆ ಪ್ರಯತ್ನದಲ್ಲಿ ಇದ್ದಾರೆ. ಈಗಾಗಲೇ ಸಿನಿಮಾಗಳಲ್ಲಿ ನಟಿಸಿದ್ದರೂ, ಅವರಿಗೆ ದೊಡ್ಡ ಸಕ್ಸಸ್ ಅನ್ನೋದು ಸಿಕ್ಕಿಲ್ಲ. ಮುಂದೆ ನಟಿಸೋ ಸಿನಿಮಾಗಳಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಿ ಕ್ಲಿಕ್ ಆದರೆ, ಸ್ಯಾಂಡಲ್‌ವುಡ್‌ಗೆ ಒಂದೊಳ್ಳೆಯ ನಟಿಯಾಗಬಹುದು.


Click it and Unblock the Notifications











