ನಿಮ್ಮ ನೆಚ್ಚಿನ ಸೀರಿಯಲ್ ನಟ-ನಟಿಯರು ನಡೆಸೋ ಸೈಡ್ ಬ್ಯುಸಿನೆಸ್‌ಗಳ ಬಗ್ಗೆ ನಿಮಗೆ ಗೊತ್ತಾ?
ಸೀರಿಯಲ್ ದುನಿಯಾದ ನಟ ನಟಿಯರು ನೇರವಾಗಿ ಜನರ ಮನೆ-ಮನಗಳಿಗೇ ತಲುಪಿರ್ತಾರೆ. ಅನೇಕ ಪಾತ್ರಗಳನ್ನಂತೂ ಜನ ತಮ್ಮದೇ ಕುಟುಂಬದ ಕೆಲ ಪಾತ್ರಗಳಿಗೆ ಹೋಲಿಸಿಕೊಂಡಿರುತ್ತಾರೆ. ಹಾಗಾಗಿ ಸೀರಿಯಲ್ ಕಲಾವಿದರು ಒಂದು ರೀತಿಯಲ್ಲಿ ತಮ್ಮ ಮನೆಯ ಸದಸ್ಯರೇ ಎನ್ನುವಂಥಾ ಫೀಲ್ ಕೊಡ್ತಾರೆ.
ಇಷ್ಟೆಲ್ಲಾ ಇಷ್ಟವಾಗೋ ಟಿವಿ ದುನಿಯಾದ ತಾರೆಯರಲ್ಲಿ ಕೆಲವರು ಯಶಸ್ವಿ ಉದ್ಯಮಿಗಳು ಕೂಡಾ ಹೌದು. ಯಾವ್ಯಾವ ಸ್ಟಾರ್ಟ್ ಯಾವ ಬ್ಯುಸಿನೆಸ್ ನಡೆಸ್ತಾರೆ. ಇದರಲ್ಲಿ ಅವರ ಪಾತ್ರ-ಆಸಕ್ತಿ ಏನಿದೆ ಅನ್ನೋ ಫುಲ್ ಡೀಟೆಲ್ಸ್ ಇಲ್ಲಿದೆ.

ಶ್ವೇತಾ ಚಂಗಪ್ಪ
ಮಜಾ ಟಾಕೀಸ್‌ನ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಯಾರಿಗೆ ಗೊತ್ತಿಲ್ಲ ಹೇಳಿ. ಶ್ವೇತಾ ಕಾಮಿಕ್ ಸೆನ್ಸ್ ನಿಜಕ್ಕೂ ಅದ್ಭುತ ಅನ್ನೋದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ, ಕಿರುತೆರೆಯಲ್ಲಿ ಬ್ಯುಸಿಯಾಗಿರೋ ಶ್ವೇತಾ ಚಂಗಪ್ಪ ಒಬ್ಬ ಯಶಸ್ವಿ ಉದ್ಯಮಿ ಕೂಡಾ ಹೌದು. ತಾರಾ ಡಿಸೈನರ್ ಕ್ಲೋತಿಂಗ್ ಬ್ರಾಂಡ್ ಎನ್ನುವ ಸಂಸ್ಥೆಯ ಒಡತಿ ಶ್ವೇತಾ. ಡಿಸೈನರ್ ದಿರಿಸುಗಳನ್ನು ಮಾಡೋ ಇವರ ಬ್ರಾಂಡ್ ಸಿಕ್ಕಾಪಟ್ಟೆ ಫೇಮಸ್ ಕೂಡಾ ಹೌದು. ವೆಡ್ಡಿಂಗ್ ವೇರ್, ಪಾರ್ಟಿ ವೇರ್ ಸೇರಿದಂತೆ ಕಸ್ಟಮೈಜ್ಡ್ ದಿರಿಸುಗಳನ್ನು ರೆಡಿ ಮಾಡೋದರಲ್ಲಿ ತಾರಾ ಡಿಸೈನರ್ ಕ್ಲೋತಿಂಗ್ ಬ್ರಾಂಡ್ ಸಖತ್ ಫೇಮಸ್.
ಶೃತಿ ರಮೇಶ್
'ಲಕ್ಷಣ' ಧಾರಾವಾಹಿಯ ಮೂಲಕ ಮನೆಮಾತಾಗಿರೋ ನಟಿ ಶೃತಿ ರಮೇಶ್ ಕೇವಲ ನಟನೆಯಲ್ಲಿ ಮಾತ್ರವಲ್ಲ, ಬ್ಯುಸಿನೆಸ್‌ನಲ್ಲೂ ಸೈ ಎನಿಸಿಕೊಂಡಿದ್ದಾರೆ. ಖುದ್ದು ಮೇಕಪ್ ಆರ್ಟಿಸ್ಟ್ ಆಗಿರೋ ಶೃತಿ ರಮೇಶ್‌ಗೆ ಸೌಂದರ್ಯದ ಒಳಗುಟ್ಟುಗಳು ಚೆನ್ನಾಗೇ ಗೊತ್ತು. ಹಾಗಾಗಿ ಕೂದಲ ಆರೈಕೆಗೆ ಸಂಬಂಧಿಸಿದಂತೆ ಎಲ್ಲರೂ ಎಷ್ಟೊಂದು ಕಾಳಜಿ ವಹಿಸ್ತಾರೆ ಅನ್ನೋದು ತಿಳಿದಿರೋದ್ರಿಂದ ಅದಕ್ಕೆ ಸಂಬಂಧಿಸಿದ ಉದ್ಯಮವೊಂದನ್ನು ಆರಂಭಿಸಿ ಮುನ್ನಡೆಸುತ್ತಿದ್ದಾರೆ. ರಾಸಾಯನಿಕ ರಹಿತ ತಲೆಗೂದಲ ಎಣ್ಣೆ ತಯಾರಿಕೆ ಮತ್ತು ಮಾರಾಟದ ವಹಿವಾಟು ನಡೆಸುತ್ತಿರೋ ಶೃತಿ ರಮೇಶ್ ಅದಕ್ಕೆ ಗ್ರೊಸೆಲ್ಲಾ ಅನ್ನೋ ಹೆಸರಿಟ್ಟಿದ್ದಾರೆ.
ಶಮಂತ್ (ಬ್ರೋ ಗೌಡ)
'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ 'ವೈಷ್ಣವ್' ಪಾತ್ರಧಾರಿ ಶಮಂತ್ ಬ್ರೋ ಗೌಡ ಬಹುಮುಖ ಪ್ರತಿಭೆ. ನಟನೆ ಜೊತೆಜೊತೆಗೆ ಅವರು ಒಳ್ಳೆ ಹಾಡುಗಾರ ಕೂಡಾ ಹೌದು. ಅಷ್ಟೇ ಅಲ್ಲ, ನಿರ್ದೇಶನದಲ್ಲೂ ಶಮಂತ್ ಮುಂದಿದ್ದಾರೆ. ಹಾಗಾಗಿ ನಟ, ಹಾಡುಗಾರ, ನಿರ್ದೇಶಕ, ಇನ್‌ಫ್ಲ್ಯೂಯೆನ್ಸರ್ ಹೀಗೆ ನಾನಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸೋ ಶಮಂತ್ 'ಬ್ರೋ ಮೀಡಿಯಾ ಸ್ಟುಡಿಯೋಸ್' ಅನ್ನೋ ಸಂಸ್ಥೆಯನ್ನು ಹುಟ್ಟುಹಾಕಿ ಮುನ್ನಡೆಸುತ್ತಿದ್ದಾರೆ. ಈ ಕಂಪೆನಿ ಮೂಲಕ ಮ್ಯೂಸಿಕ್ ಪ್ರೊಡಕ್ಷನ್, ಡಬ್ಬಿಂಗ್, ಆ್ಯಡ್ ಶೂಟ್, ಪ್ರಾಡಕ್ಟ್ ಶೂಟ್, ಫೋಟೋ ಶೂಟ್ ಮುಂತಾದವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ರೂಪಿಕಾ
'ದೊರೆಸಾನಿ' ಧಾರಾವಾಹಿಯ ಮೂಲಕ ಎಲ್ಲರಿಗೂ ಸಖತ್ ಫೇವರಿಟ್ ಆಗಿರೋ ರೂಪಿಕಾ ಕಣ್ಣಲ್ಲೇ ಮಾತಾಡೋದನ್ನು ಗಮನಿಸಿದ್ದೀರಾ? ಇದಕ್ಕೆ ಕಾರಣ ಆಕೆ ಒಬ್ಬ ಅದ್ಭುತ ಡ್ಯಾನ್ಸರ್. ಧಾರಾವಾಹಿಯಲ್ಲಿ ನಟಿಸೋದರ ಜೊತೆಜೊತೆಗೇ ರೂಪಿಕಾ 'ಗೆಜ್ಜೆ ಡ್ಯಾನ್ಸ್ ಸ್ಟುಡಿಯೊ' ಕೂಡಾ ನಡೆಸುತ್ತಾರೆ. ಈ ಮೂಲಕ ತಮ್ಮ ಕಲೆಯಿಂದ ಒಂದು ಯಶಸ್ವಿ ಬ್ಯುಸಿನೆಸ್ ನಡೆಸ್ತಿದ್ದಾರೆ.
ಸಾನ್ಯಾ ಅಯ್ಯರ್
ನಮ್ಮ 'ಪುಟ್ಟಗೌರಿ ಮದುವೆ'ಯ ಸಾನ್ಯಾ ಅಯ್ಯರ್ ಯಾರಿಗೆ ಗೊತ್ತಿಲ್ಲ ಹೇಳಿ? ಆದ್ರೆ ಸಾನ್ಯಾ ಬ್ಯುಸಿನೆಸ್ ಕೂಡಾ ನಡೆಸ್ತಾರೆ ಅಂದ್ರೆ ನಿಮ್ಗೆ ಆಶ್ಚರ್ಯ ಆಗ್ಬಹುದು. 'ರೂಪಾ ಅಯ್ಯರ್ಸ್ - ರಾಯಲ್ ಕೋರ್ಟ್ (ಸೆಲಬ್ರಿಟಿ ಸಲೋನ್ & ಸ್ಪಾ)'ದ ಕೋ ಓನರ್ (ಸಹ ಮಾಲೀಕ) ಆಗಿದ್ದಾರೆ ಸಾನ್ಯಾ. ಇದೊಂದು ಐಶಾರಾಮಿ ಸಲೂನ್ ಆಗಿದ್ದು ಉತ್ತಮ ವಹಿವಾಟು ನಡೆಸುತ್ತಿದೆ.
ತನಿಶಾ ಕುಪ್ಪಂಡ
'ಮಂಗಳಗೌರಿ ಮದುವೆ', 'ಇಂತಿ ನಿಮ್ಮ ಆಶಾ' ಧಾರಾವಾಹಿಗಳ ಮೂಲಕ ಮನೆಮಾತಾಗಿರೋ ಹೆಸರು ತನಿಶಾ ಕುಪ್ಪಂಡ. ತನಿಶಾಗೆ ಬ್ಯುಸಿನೆಸ್ ಮಾಡೋಕೆ ಬಹಳ ಆಸಕ್ತಿ ಮೊದಲಿಂದಲೂ ಇತ್ತಂತೆ. ಹಾಗಾಗಿ ಅವರೊಂದು ಸಖತ್ ರೆಸ್ಟೊರೆಂಟ್ ಅನ್ನು ಯಶಸ್ವಿಯಾಗಿ ನಡೆಸ್ತಿದ್ದಾರೆ. ಅಂದ್ಹಾಗೆ ತನಿಶಾ ಮಾಲೀಕತ್ವದ ರೆಸ್ಟೊರೆಂಟ್ ಹೆಸರು 'ಅಪ್ಪುಸ್ ಕಿಚನ್'. ಇದೇ ರೀತಿ ಮತ್ತಷ್ಟು ಕಿರುತೆರೆ ತಾರೆಯರು ನಟನೆಯ ಜೊತೆಗೆ ಸೈಡ್ ಬ್ಯುಸಿನೆಸ್ ನಡೆಸಿ ಅಲ್ಲೂ ಯಶಸ್ಸಿನ ರುಚಿ ನೋಡ್ತಿದ್ದಾರೆ.


Click it and Unblock the Notifications











