Bigg Boss: 'ಬಿಗ್ ಬಾಸ್ ಬಾಂಗ್ಲಾ' ನಿರೂಪಕರಾಗಿ ಬಂಗಾಳದ ಹುಲಿ; ₹125 ಕೋಟಿಗೆ ಸೌರವ್ ಗಂಗೂಲಿ ಡೀಲ್
ಭಾರತದಲ್ಲಿ ಮತ್ತೆ ಬಿಗ್ ಬಾಸ್ ಕ್ರೇಜ್ ಶುರುವಾಗಿದೆ. ಈ ವರ್ಷ ಅಂತೂ ಬಿಗ್ ಬಾಸ್ ಎಲ್ಲಾ ಭಾಷೆಯಲ್ಲೂ ಏಕಕಾಲಕ್ಕೆ ಶುರುವಾಗುವ ಸಾಧ್ಯತೆಯಿದೆ. ಈಗಾಗಲೇ ಕನ್ನಡ, ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಪ್ರತಿ ವರ್ಷ ಈ ಶೋ ಯಶಸ್ವಿಯಾಗುತ್ತಲೇ ಇದೆ. ಪ್ರತಿ ಸೀಸನ್‌ನಲ್ಲೂ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕನ್ನಡದಲ್ಲೂ 13ನೇ ಸೀಸನ್‌ಗೆ ವೇದಿಕೆ ಶುರುವಾಗಿದೆ.
ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್'. ಈಗ ಮತ್ತೊಂದು ಮೈಲಿಗಲ್ಲಿಗೆ ಸಾಕ್ಷಿಯಾಗುತ್ತಿದೆ. ಬರೋಬ್ಬರಿ ಹತ್ತು ವರ್ಷಗಳ ಸುದೀರ್ಘ ಬ್ರೇಕ್ ಬಳಿಕ 'ಬಿಗ್ ಬಾಸ್ ಬಾಂಗ್ಲಾ' ಮತ್ತೆ ಅದ್ಧೂರಿಯಾಗಿ ಶುರುವಾಗುತ್ತಿದೆ. ಬಾಂಗ್ಲಾ ವೀಕ್ಷಕರನ್ನು ರಿಯಾಲಿಟಿ ಶೋ ಮೂಲಕ ಸೆಳೆಯುವುದಕ್ಕೆ ಸಜ್ಜಾಗಿದೆ. ಬಿಗ್ ಬಾಸ್ ಬಾಂಗ್ಲಾದ ಹೊಸ ಅಧ್ಯಾಯದ ಮತ್ತೊಂದು ಹೈಲೈಟ್ ಅಂದರೆ, ಅದು ಸೌರವ್ ಗಂಗೂಲಿ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ 'ಬಿಗ್ ಬಾಸ್ ಬಾಂಗ್ಲ'ದ ನಿರೂಪಕರಾಗಿದ್ದಾರೆ. ಈಗಾಗಲೇ ಈ ಶೋದ ಟೀಸರ್ ಹೊರ ಬಿದ್ದಿದ್ದು, ಅದಕ್ಕೆ ಸೌರವ್ ಗಂಗೂಲಿ ಮುಖವನ್ನು ತೋರಿಸದೇ ಹೋದರೂ ಚಿಕ್ಕದೊಂದು ಸುಳಿವನ್ನು ಬಿಟ್ಟುಕೊಟ್ಟಿದೆ. ಸೌರವ್ ಗಂಗೂಲಿ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದು, ವೀಕ್ಷಕರು ಈ ಶೋ ಬಗ್ಗೆ ತಿಳಿದುಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.
ಬಾಂಗ್ಲಾ ಹುಲಿ ಎಂಟ್ರಿ
'ಬಿಗ್ ಬಾಸ್ ಬಾಂಗ್ಲಾ' ದಶಕಗಳ ಬಳಿಕ ಮತ್ತೆ ಆರಂಭ ಆಗುತ್ತಿರೋದು ಪಕ್ಕಾ. ಸ್ಟಾರ್ ಜಲ್ಶಾ ಚಾನೆಲ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬಿಗ್ ಬಾಸ್ ಬಾಂಗ್ಲಾದ ಮೊದಲ ಟೀಸರ್ ಅನ್ನು ಶೇರ್ ಮಾಡಿದೆ. ಈ ಟೀಸರ್‌ನಲ್ಲಿ ಹುಲಿಯ ಹೆಜ್ಜೆ ಜೊತೆಗೆ, ಖದರ್ ಸೂಟ್ ಧರಿಸಿದ ಸ್ಟೈಲಿಶ್ ಲುಕ್‌ನಲ್ಲಿ ನಿರೂಪಕನ ಎಂಟ್ರಿ ಕೊಡಿಸಿದ್ದಾರೆ. ಮುಖವನ್ನು ತೋರಿಸದೇ ನಿರೂಪಕನನ್ನೂ ಗೌಪ್ಯವಾಗಿ ಇಟ್ಟಿದ್ದರೂ, ಅವರು ಸೌರವ್ ಗಂಗೂಲಿ ವೀಕ್ಷಕರು ಗೆಸ್ ಮಾಡಿದ್ದಾರೆ. 'ದಾದಾ' ಅವರ ಈ ಹೊಸ ಅವತಾರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮತ್ತು ಉತ್ಸಾಹ ಮೂಡಿಸಿದೆ.
125 ಕೋಟಿ ರೂಪಾಯಿಗೆ ಡೀಲ್?
'ಬಿಗ್ ಬಾಸ್ ಬಾಂಗ್ಲಾ'ದ ಟೀಸರ್ ಹೊರಬರುತ್ತಿದ್ದಂತೆ ಸೌರವ್ ಗಂಗೂಲಿ ಹೆಸರು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೇ ಸೌರವ್ ಗಂಗೂಲಿ ಬಿಗ್ ಬಾಸ್ ನಿರೂಪಣೆಗೆ ಪಡೆದಿರುವ ಸಂಭಾವನೆ ಬಗ್ಗೆನೂ ಚರ್ಚೆಯಾಗುತ್ತಿದೆ. ಈಗಾಗಲೇ ಸೌರವ್ ಗಂಗೂಲಿಗೆ 125 ಕೋಟಿ ರೂಪಾಯಿ ಡೀಲ್ ಆಫರ್ ಕೊಟ್ಟಿದ್ದು, ಅದಕ್ಕೆ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಬಿಗ್ ಬಾಸ್ ಬಾಂಗ್ಲಾ ಈ ಟೀಸರ್ ಸಖತ್ ಟ್ರೆಂಡಿಂಗ್‌ನಲ್ಲಿದೆ. ಗಂಗೂಲಿ ನಿರೂಪಣೆ ವೀಕ್ಷಿಸಲು ವೀಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.
ಪ್ರಾದೇಶಿಕ ಭಾಷೆಗಳತ್ತ ಎಂಡೆಮೋಲ್
ಭಾರತದಲ್ಲಿ ಈಗಾಗಲೇ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಮರಾಠಿಯೂ ಸೇರಿದಂತೆ 7 ಭಾಷೆಗಳಲ್ಲಿ ಬಿಗ್ ಬಾಸ್ ಪ್ರದರ್ಶನ ಕಾಣುತ್ತಿದೆ. ಯಶಸ್ವಿಯಾಗಿ ಈ ಶೋಗಳು ನಡೆಯುತ್ತಿವೆ. ಈಗ ಇನ್ನಷ್ಟು ಭಾಷೆಗಳಿಗೆ ವಿಸ್ತರಿಸುವುದಕ್ಕೆ ಮುಂದಾಗಿದೆ. ಈ ಕುರಿತು ಎಂಡೆಮೋಲ್ ಶೈನ್ ಇಂಡಿಯಾದ ಮುಖ್ಯಸ್ಥ ರಿಷಿ ನೇಗಿ ಪ್ರತಿಕ್ರಿಯಿಸಿದ್ದು, "ಸ್ಥಳೀಯ ಮತ್ತು ಪ್ರಾದೇಶಿಕ ಮಾರುಕಟ್ಟೆಯ ವೀಕ್ಷಕರನ್ನು ತಲುಪುವುದು ನಮ್ಮ ಪ್ರಮುಖ ಗುರಿಯಾಗಿದೆ. ಬಂಗಾಳದ ವೀಕ್ಷಕರಿಗೆ ಇಡೀ ದೇಶವೇ ಗುರುತಿಸುವಂತಹ ದೊಡ್ಡ ವ್ಯಕ್ತಿತ್ವದ ಅಗತ್ಯವಿತ್ತು. ಅದಕ್ಕೆ ಸೌರವ್ ಗಂಗೂಲಿ ಅವರೇ ಸೂಕ್ತ ಆಯ್ಕೆ. ಮುಂದಿನ ದಿನಗಳಲ್ಲಿ ಪಂಜಾಬಿ ಹಾಗೂ ಭೋಜಪುರಿ ಭಾಷೆಗಳಿಗೂ ಬಿಗ್ ಬಾಸ್ ವಿಸ್ತರಿಸುವ ಯೋಜನೆ ಇದೆ" ಎಂದು " ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬಿಗ್ ಬಾಸ್ ಬಾಂಗ್ಲಾ ಟೀಸರ್ ಸೆನ್ಸೇಷನ್
ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಟಿವಿಗಾಗಿ ಡಿಸೈನ್ ಮಾಡಿದ್ದು, ಓಟಿಟಿಗೆ ಸದ್ಯಕ್ಕೆ ಬ್ರೇಕ್ ಹಾಕಿರುವುದಾಗಿ ಎಂಡೆಮೋಲ್ ಸಂಸ್ಥೆ ಪ್ರತಿಕ್ರಿಯಿಸಿದೆ. ಸದ್ಯಕ್ಕೆ ಟಿವಿ ವಾಹಿನಿಗಳು ಮತ್ತು ಜಿಯೋಹಾಟ್‌ಸ್ಟಾರ್ (JioHotstar) ಲೈವ್ ಸ್ಟ್ರೀಮಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಬಿಗ್ ಬಾಸ್ ಬಾಂಗ್ಲಾ ಸೀಸನ್ 3ರ ಈ ಟೀಸರ್ ಸದ್ಯ ಕಿರುತೆರೆ ಲೋಕದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಯಾರು ಮತ್ತು ಇದು ಯಾವಾಗ ಅಧಿಕೃತವಾಗಿ ಆರಂಭವಾಗಲಿದೆ ಎಂಬ ಕುರಿತು ಸದ್ಯದಲ್ಲೇ ಮಾಹಿತಿ ಹೊರಬೀಳಲಿದೆ.


Click it and Unblock the Notifications