ಬೆಂಗಾಲಿ, ಮಲಯಾಳಂ, ಹಿಂದಿ, ಮರಾಠಿಯಲ್ಲಿ ಯಶಸ್ಸು ಕಂಡ ಧಾರಾವಾಹಿ ಕನ್ನಡಕ್ಕೆ ಎಂಟ್ರಿ: ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು'
ಇದು ಧಾರಾವಾಹಿಗಳ ಜಮಾನ. ಮನೋರಂಜನಾ ವಾಹಿನಿಗಳು ನಿಂತಿರುವುದೇ ಧಾರಾವಾಹಿಗಳ ಮೇಲೆ. ಒಂದು ಧಾರಾವಾಹಿ ಗೆದ್ದರೆ, ಆ ಸಿನಿಮಾ ಚಾನೆಲ್ ಗೆದ್ದಂತೆ. ಪ್ರತಿ ದಿನ ವಿಶಿಷ್ಟ ಕಥೆಯೊಂದಿಗೆ ಕಿರುತೆರೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಹೊಚ್ಚ ಹೊಸ ಧಾರಾವಾಹಿಗಳನ್ನು ವೀಕ್ಷಕರ ಮುಂದೆ ಇಡುತ್ತಲೇ ಇದ್ದಾರೆ. ಇತ್ತೀಚೆಗೆ ಕಿರುತೆರೆಯಲ್ಲೂ ರಿಮೇಕ್ ಸಿರೀಯಲ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪರಭಾಷೆಯ ಒಂದೊಂದೇ ಧಾರಾವಾಹಿ ಕನ್ನಡಕ್ಕೆ ಎಂಟ್ರಿ ಕೊಡುತ್ತಿದೆ.
ಸ್ಟಾರ್ ಸುವರ್ಣ ಕೂಡ ಇದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸ್ಟಾರ್ ಜಲ್ಸಾ (ಬೆಂಗಾಲಿ)ದಲ್ಲಿ ಪ್ರಸಾರ ಆಗಿದ್ದ ಅತ್ಯಂತ ಯಶಸ್ವಿ ಧಾರಾವಾಹಿ 'ಚೋರ್ಕಟೋ'ವನ್ನು ಕನ್ನಡಕ್ಕೆ ತರುತ್ತಿದೆ. ನಾಳೆ(ಫೆ.21)ಯಿಂದ ಈ ಧಾರಾವಾಗಿ ಜೇನುಗೂಡು ಎಂಬ ಹೆಸರಿನಲ್ಲಿ ಪ್ರಸಾರ ಆಗಲಿದೆ. ಹಾಗಿದ್ದರೆ, ಈ ಧಾರಾವಾಹಿಯ ಕಥೆಯೇನು? ಕನ್ನಡದ ಅವತರಣಿಕೆಯಲ್ಲಿ ನಟಿಸುತ್ತಿರುವ ನಟ-ನಟಿಯರು ಯಾರು? ಎಂಬುದನ್ನು ತಿಳಿಯಲು ಮುಂದೆ ಓದಿ.

ಸ್ಟಾರ್ ಸುವರ್ಣದಲ್ಲಿ 'ಜೇನುಗೂಡು'
ಸ್ಟಾರ್ ನೆಟ್‌ವರ್ಕ್‌ನ ಅತ್ಯಂತ ಯಶಸ್ವಿ ಧಾರಾವಾಹಿ ಬೆಂಗಾಲಿ ಭಾಷೆಯಲ್ಲಿ ಪ್ರಸಾರವಾಗಿದ್ದ 'ಚೋರ್ಕಟೋ'. ಈ ಧಾರಾವಾಹಿ 2020ರಲ್ಲಿ ಪ್ರಸಾರ ಆಗಿತ್ತು. ಇದು ಅತೀ ಕಡಿಮೆ ಅವಧಿಯಲ್ಲಿ ಯಶಸ್ವಿ ಕಂಡ ಧಾರಾವಾಹಿ ಎಂಬ ಹೆಗ್ಗಳಿಕೆ ಗಿಟ್ಟಿಸಿಕೊಂಡಿದೆ. ಕಡಿಮೆ ಸಮಯದಲ್ಲಿಯೇ 'ಚೋರ್ಕಟೋ', ಮಲಯಾಳಂ, ಹಿಂದಿ, ಮರಾಠಿ ಹಾಗೂ ತಮಿಳು ಭಾಷೆಗೆ ರಿಮೇಕ್ ಆಗಿತ್ತು. ಇಲ್ಲೂ ಕೂಡ ಧಾರಾವಾಹಿ ಗೆದ್ದಿದ್ದರಿಂದ ಈಗ ಕನ್ನಡದ ವೀಕ್ಷಕರಿಗಾಗಿ 'ಜೇನುಗೂಡು' ಹೆಸರಿನಲ್ಲಿ ಪ್ರಸಾರ ಮಾಡಲಾಗುತ್ತಿದೆ.

'ಜೇನುಗೂಡು' ಧಾರಾವಾಹಿಯ ಕಥೆಯೇನು?
'ಜೇನುಗೂಡು' ಆಧುನಿಕ ಮನೋಭಾವದ ಯುವತಿಯ ಪ್ರೇಮಕಥೆ. ಆಧುನಿಕ ಮನೋಭಾವದ ಈ ಹುಡುಗಿ ಮಧ್ಯಮ ವರ್ಗದ ಹುಡುಗ, ವಿಜ್ಞಾನಿಯೂ ಆಗಿರುವವನ ಪ್ರೀತಿಯಲ್ಲಿ ಬಿದ್ದಾಗ ಅವಳ ಬದುಕು ಹೇಗೆಲ್ಲಾ ಬದಲಾಗುತ್ತದೆ ಎಂಬುದೇ ಧಾರಾವಾಹಿಯ ಒನ್‌ಲೈನ್ ಸ್ಟೋರಿ. ಮೂವರು ಅಣ್ಣತಮ್ಮಂದಿರ ಕುಟುಂಬ. ಇಲ್ಲಿ ಮೂವರ ಸ್ವಭಾವ ಕೂಡ ಬೇರೆಬೇರೆ. ಆದರೂ ಒಬ್ಬರಿಗೊಬ್ಬರು ಬಿಟ್ಟು ಕೊಡುವುದಿಲ್ಲ. ಜೇನುಗೂಡಿನಂತೆ ಇರುವ ಈ ಕುಟುಂಬ ಬೇರೆಯವರಿಗೆ ಮಾದರಿಯಾಗಿರುತ್ತೆ. ಈ ಕುಟುಂಬದ ಎರಡನೇ ತಮ್ಮನ ಮಗನೇ ಶಶಾಂಕ್. ವಿಜ್ಞಾನಿಯಾಗಿ ಅಮೆರಿಕದಲ್ಲಿ ಕೆಲಸ ಹುಡುಕಿಕೊಂಡು ಬಂದಿದ್ದರೂ, ಕುಟುಂಬಕ್ಕಾಗಿ ಆ ಅವಕಾಶವನ್ನು ತ್ಯಜಿಸುತ್ತಾನೆ. ಆತನೇ ಈ ಧಾರಾವಾಹಿಯ ಹೀರೋ.

'ಜೇನುಗೂಡು'ಹೀರೊಯಿನ್ ಕಥೆಯೇನು?
ಜೇನುಗೂಡು ಧಾರಾವಾಹಿಯ ಹೀರೊಗಿಂತ ಹೀರೋಯಿನ್ ದಿಯಾ ಸ್ವಭಾವ ವಿಭಿನ್ನವಾಗಿರುತ್ತೆ. ಫೇಮಸ್ ಸರ್ಜನ್ ಶ್ರೀಧರ್ ಮೂರ್ತಿ ಮಗಳು ದಿಯಾ. ಈಕೆಗೆ ಕುಟುಂಬದ ಬಂಧಗಳ ಬಗ್ಗೆ ಅನುಭವವಿರುವುದಿಲ್ಲ. ದಿಯಾ ತಾಯಿ ಕೆಲಸಕ್ಕಾಗಿ ಮಗಳನ್ನೇ ತ್ಯಜಿಸಿ ಅಮೆರಿಕಗೆ ಹೋಗಿರುತ್ತಾರೆ. ದಿಯಾಳನ್ನು ಅವರ ತಂದೆ ಹಾಗೂ ಅವರ ತಂದೆಯ ತಂಗಿ ಸಾರಿಕಾ ಬೆಳೆಸುತ್ತಾರೆ. ಕುಟುಂಬದ ಅರಿವೇ ಇಲ್ಲದ ದಿಯಾ ಜೋನುಗೂಡು ಸೇರಿದಾಗೆ ಏನಾಗುತ್ತೆ ಎನ್ನುವುದೇ ರೋಚಕ ಟ್ವಿಸ್ಟ್‌ಗಳ ಜೊತೆ ವೀಕ್ಷಕರ ಮುಂದಿಡಲಿದೆ.

ಜೇನುಗೂಡಿನಲ್ಲಿ ಜಗಳ-ದ್ವೇಷ ಕಾಮನ್
ದಿಯಾ ಹಾಗೂ ಶಶಾಂಕ್ ಒಬ್ಬರನ್ನೊಬ್ಬರು ದ್ವೇಷ ಮಾಡುತ್ತಿರುತ್ತಾರೆ. ಇಂತಹವರ ಮಧ್ಯೆ ಸದಾ ಜಗಳ ನಡೆಯುತ್ತಲೇ ಇರುತ್ತೆ. ಇವರಿಬ್ಬರನ್ನೂ ಒಂದು ಮಾಡಲು ಎರಡೂ ಕುಟುಂಬದವರು ಪಡುವ ಪಾಡು. ಕಿತ್ತಾಡುತ್ತಿದ್ದ ದಿಯಾ ಹಾಗೂ ಶಶಾಂಕ್ ಮದುವೆ ಬಳಿಕ ಹೇಗೆ ಬದಲಾಗುತ್ತಾರೆ ಎನ್ನುವುದನ್ನು ನೋಡಬಹುದು. ರೇಖಾ ಕೆ.ಪಿ ಈ ಧಾರಾವಾಹಿಯ ನಿರ್ಮಾಪಕರು. ಅನಿಲ್ 'ಜೇನುಗೂಡು' ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ. ಆರವ್ ಮತ್ತು ನಿತ್ಯ ಶಶಾಂಕ್ ಹಾಗೂ ದಿಯಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರೊಂದಿಗೆ ವೀಣಾಸುಂದರ್, ರಮೇಶ್ ಪಂಡಿತ್ , ರವಿ ಭಟ್, ಶ್ರೀಕಾಂತ್ ಹೆಬ್ಳೀಕರ್ ಹಾಗೂ ಉತ್ತರ ಕರ್ನಾಟಕದ ಕಲಾವಿದರನ್ನು ಒಳಗೊಂಡಿದೆ. 'ಜೇನುಗೂಡು' ಧಾರಾವಾಹಿ ಫೆಬ್ರವರಿ 21ರ ಸೋಮವಾರ ರಾತ್ರಿಯಿಂದ 10 ಗಂಟೆಗೆ ಸ್ಟಾರ್ ಸುವರ್ಣ ಪ್ರಸಾರ ಆಗಲಿದೆ.


Click it and Unblock the Notifications











