ಸ್ಟಾರ್ ಸುವರ್ಣದ ಮತ್ತೊಂದು ಧಾರಾವಾಹಿ 'ಅವನು ಮತ್ತೆ ಶ್ರಾವಣಿ'ಗೆ ಕ್ಲೈಮ್ಯಾಕ್ಸ್; ಅಂತ್ಯ ಹೇಗಾಗುತ್ತೆ?
ಕಿರುತೆರೆಯಲ್ಲಿ ಒಂದಲ್ಲ ಒಂದು ಹೊಸ ಧಾರಾವಾಹಿಗಳು ಲಾಂಚ್ ಆಗುತ್ತಿರುತ್ತವೆ. ಹಳೆಯ ಧಾರಾವಾಹಿಗಳು ಕೊನೆಗೊಳ್ಳುತ್ತವೆ. ಇದು ಕಿರುತೆರೆ ಲೋಕದಲ್ಲಿ ಕಾಮನ್. ಆದರೆ, ಕೆಲವು ಧಾರಾವಾಹಿಗಳು ಸುಮಾರು ಒಂದೂವರೆ ಎರಡು ವರ್ಷ ನಿರಂತರವಾಗಿ ಪ್ರಸಾರ ಆಗುತ್ತಲೇ ಇರುತ್ತವೆ. ಇಂತಹ ಧಾರಾವಾಹಿಗಳಲ್ಲಿ ಸ್ಟಾರ್ ಸುವರ್ಣದ 'ಅವನು ಮತ್ತೆ ಶ್ರಾವಣಿ' ಧಾರಾವಾಹಿ ಕೂಡ ಒಂದು. ಈ ಸೀರಿಯಲ್ ಈಗ ಅಂತ್ಯ ಕಾಣುತ್ತಿದೆ.
ಸ್ಟಾರ್ ಸುವರ್ಣದಲ್ಲಿಯೇ 2014ರಲ್ಲಿ ಅವನು ಮತ್ತೆ ಶ್ರಾವಣಿ ಎನ್ನುವ ಸೀರಿಯಲ್ ಬಂದಿತ್ತು. ಸರಿ ಸುಮಾರು 900 ಎಪಿಸೋಡ್‌ಗಳನ್ನು ಪ್ರಸಾರ ಮಾಡಿ ಪ್ರೇಕ್ಷಕರ ಮನ ಗೆದ್ದಿತ್ತು. 2023ರಲ್ಲಿ ಮತ್ತೆ ಇದೇ ಶೀರ್ಷಿಕೆಯನ್ನು ತೆಗೆದುಕೊಂಡು ಹೊಸ ಕಥೆಯೊಂದಿಗೆ ಈ ಧಾರಾವಾಹಿಯನ್ನು ಪ್ರಸಾರ ಮಾಡಲಾಗುತ್ತಿತ್ತು. ಆರಂಭದ ದಿನಗಳಲ್ಲಿ ಈ ಧಾರಾವಾಹಿಯ ನಾಯಕಿ ಶ್ರಾವಣಿ ಕೆಲವು ಕಾರಣಗಳಿಂದ ಬೇಜಾರಾಗಿ ವಿದೇಶಕ್ಕೆ ಹೋಗಿ ಸೆಟಲ್ ಆಗಿರುತ್ತಾಳೆ. ಅಚಾನಕ್ ಆಗಿ ತಂಗಿ ಮದುವೆ ಅರೇಂಜ್ ಆಗಿದ್ದರಿಂದ ವಿದೇಶದಿಂದ ಹಿಂತಿರುಗುತ್ತಾಳೆ. ಆಗ ಅವಳಿಗೆ ತಾನು ವಿಚ್ಛೇದನ ತೆಗೆದುಕೊಂಡಿದ್ದವನ ಜೊತೇನೆ ತನ್ನ ತಂಗಿಯ ಮದುವೆ ಆಗುತ್ತಿದೆ ಅನ್ನೋದು ಗೊತ್ತಾಗುತ್ತೆ.

ಈ ಸೀರಿಯಲ್ ಹೀರೋ ಅಭಿಮನ್ಯು. ಧಾರಾವಾಹಿ ಆರಂಭದಲ್ಲಿ ಅಭಿಮನ್ಯುವಿಗೆ ಹಾಗೂ ಶ್ರಾವಣಿಗೆ ಮದುವೆ ಆಗಿರುವ ವಿಷಯ ಯಾರಿಗೂ ಗೊತ್ತಿರುವುದಿಲ್ಲ. ಕಾಲೇಜು ದಿನಗಳಲ್ಲಿ ಅವರಿಬ್ಬರು ಲವ್ ಮಾಡಿ ಮದುವೆ ಮಾಡಿಕೊಂಡಿರುತ್ತಾರೆ. ಹಾಗೇ ಅವರು ಡಿವೋರ್ಸ್ ಕೂಡ ಮಾಡಿಕೊಂಡಿರುತ್ತಾರೆ. ಈ ಕಾರಣದಿಂದ ಶ್ರಾವಣಿ ಅವಳು ವಿದೇಶಕ್ಕೆ ಹೋಗಿ ಸೆಟೆಲ್ ಆಗಿರುತ್ತೆ. ಇವರಿಬ್ಬರ ಮಧ್ಯೆ ಚೀಕು ಎನ್ನುವ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ಇರುತ್ತೆ. ಈ ಚೀಟು ಇಬ್ಬರನ್ನೂ ಒಂದು ಮಾಡುತ್ತಾ? ಅನ್ನೋದು ಆರಂಭದ ಕಥೆಯಾಗಿತ್ತು.
ಎರಡಕ್ಷರದ ಪ್ರೀತಿಗೆ ಸಿಗಲಿದೆಯೇ ಎರಡನೇ ಅವಕಾಶ ಎನ್ನುವ ಟ್ಯಾಗ್ ಲೈನ್‌ನೊಂದಿಗೆ ಶುರುವಾಗಿದ್ದ ಧಾರಾವಾಹಿ ಅವನು ಮತ್ತೆ ಶ್ರಾವಣಿ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿದ್ದ ಭಾವನಾತ್ಮಕ ಧಾರಾವಾಹಿ ಆಗಿತ್ತು. ನಾಳೆ (ಸೆಪ್ಟೆಂಬರ್ 9) ಈ ಧಾರಾವಾಹಿ ಅಂತ್ಯ ಹಾಡುತ್ತಿದೆ. ಕ್ಲೈಮ್ಯಾಕ್ಸ್ ಎಪಿಸೋಡ್ ಪ್ರಸಾರ ಆಗಲಿದೆ.
ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರೋದು ಸ್ಕಂದ ಅಶೋಕ್. ಇವರು ಈ ಹಿಂದೆ 'ಸರಸು', 'ರಾಧಾ ರಮಣ'ದಂತಹ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿದ್ದರು. ಕಾರಣಾಂತರಗಳಿಂದ 95ನೇ ಎಪಿಸೋಡ್ ವೇಳೆಗೆ ನಾಯಕಿ ರಿಪ್ಲೇಸ್ ಆಗಿದ್ದರು. ಅವರ ಜಾಗಕ್ಕೆ ಇಶಿಕಾ ಶೆಟ್ಟಿಗಾರ್ ಎಂಟ್ರಿ ಕೊಟ್ಟಿದ್ದರು. ಅವರೇ ಇಲ್ಲಿವರೆಗೂ ಪ್ರಮುಖ ಪಾತ್ರಗಳಲ್ಲಿ ಮುಂದುವರೆಯುತ್ತಾರೆ.

'ಅವನು ಮತ್ತೆ ಶ್ರಾವಣಿ' ಭಾವನಾತ್ಮಕ ಲವ್ ಸ್ಟೋರಿಯಿಂದ ಶುರುವಾಗಿದ್ದು, ಮುಂದೆ ಸಾಗುತ್ತಿದ್ದಂತೆ ಹಾರರ್ ಸ್ವರೂಪ ಪಡೆದುಕೊಳ್ಳುತ್ತೆ. ಈ ಧಾರಾವಾಹಿಯಲ್ಲಿ ಸಂಯುಕ್ತ ಎನ್ನುವ ಒಂದು ವಿಲನ್ ಪಾತ್ರಕ್ಕೆ ಪ್ರಾಮುಖ್ಯತೆ ಕೊಡುವ ದೃಷ್ಠಿಯಿಂದ ದೆವ್ದದ ಎಂಟ್ರಿ ಆಗಿತ್ತು. ಅದುವೇ ಅಧೀರ. ಸಂಯುಕ್ತ ಲೈಫ್‌ನಲ್ಲಿ ಅಧೀರ ಯಾಕೆ ಬರ್ತಾಳೆ? ಅನ್ನೋದು ಕುತೂಹಲ ಮೂಡಿಸಿತ್ತು. ಇದರಿಂದ ಶ್ರಾವಣಿಗೆ ತೊಂದರೆ ಕೊಡುತ್ತಿರುತ್ತೆ. ಅದನ್ನು ಶ್ರಾವಣಿ ಪ್ರತಿ ದಿನ ಎದುರಿಸುತ್ತಿರುತ್ತಾಳೆ. ಇದು ಸಂಯುಕ್ತಳದ್ದೇ ಕೆಲಸ ಅನ್ನೋದು ಶ್ರಾವಣಿಗೆ ಗೊತ್ತಾಗಿದೆ. ಆದರೆ, ಅದು ಅಭಿಮನ್ಯುವಿಗೆ ಗೊತ್ತಿಲ್ಲ. ಯಾಕಂದ್ರೆ, ಸಂಯುಕ್ತ ಮೇಲೆ ಅಷ್ಟೊಂದು ನಂಬಿಕೆ ಇಟ್ಟಿರುತ್ತಾನೆ. ಈಗ ಕ್ಲೈಮ್ಯಾಕ್ಸ್ ಹಂತದಲ್ಲಿ ಅಭಿ ಹಾಗೂ ಶ್ರಾವಣಿ ಚೆನ್ನಾಗಿದ್ದಾರೆ. ಅಧೀರ ಮನೆ ಬಿಟ್ಟು ಹೋಗಿದೆ. ಈಗ ಸಂಯುಕ್ತಗಳ ಬಣ್ಣ ಬಯಲು ಮಾಡಬೇಕು ಅಂತ ಶ್ರಾವಣಿ ಪಣ ತೊಟ್ಟಿದ್ದಾಳೆ.
ಈಗ ಕ್ಲೈಮ್ಯಾಕ್ಸ್ ಸಂಚಿಕೆಯಲ್ಲಿ ಸಂಯುಕ್ತಳ ಮುಖವಾಡ ಕಳಚಿ ಬೀಳುತ್ತಾ? ಅಭಿ ಹಾಗೂ ಶ್ರಾವಣಿಯ ತಂದೆ-ತಾಯಿ ಸಾಯುವುದಕ್ಕೆ ಕಾರಣವೇನು? ಇವರಿಬ್ಬರನ್ನು ಸಾಯಿಸಿರುವುದರ ಹಿಂದಿನ ಉದ್ದೇಶವೇನು? ಸಂಯುಕ್ತ ಬಾಯಿ ಬಿಡುತ್ತಾಳಾ? ನಾರ್ಕೋ ಟೆಸ್ಟ್‌ನಲ್ಲಿ ರಹಸ್ಯ ಬಯಲಾಗುತ್ತಾ? ಅನ್ನೋದು ಕೊನೆಯ ಸಂಚಿಕೆಯ ಕುತೂಹಲ. ಹಾಗೇ ಶ್ರಾವಣಿ ಗರ್ಭಿಣಿಯಾಗಿದ್ದಾಳೆ. ಹೀಗಾಗಿ ಹೇಗೆ ಎಂಡ್ ಆಗುತ್ತೆ ಅನ್ನೋದು ಕುತೂಹಲ. ಈ ಧಾರಾವಾಹಿ ತನ್ನ 656ನೇ ಎಪಿಸೋಡ್‌ಗೆ ವಿದಾಯವನ್ನು ಹೇಳುತ್ತಿದೆ.


Click it and Unblock the Notifications











