ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್
ದೇಶದಾದ್ಯಂತ ವಿವಿಧ ರಾಜ್ಯಗಳು ಕಿರುತೆರೆ ಮತ್ತು ಸಿನಿಮಾ ಚಿತ್ರೀಕರಣಗಳನ್ನು ಆರಂಭಿಸಲು ಷರತ್ತುಬದ್ಧ ಅವಕಾಶಗಳನ್ನು ನೀಡಿವೆ. ಅದರಲ್ಲಿಯೂ ಧಾರಾವಾಹಿಗಳ ಚಿತ್ರೀಕರಣ ಕಳೆದ ಒಂದೂವರೆ ತಿಂಗಳಿನಿಂದಲೇ ಆರಂಭವಾಗಿವೆ. ತೆಲಂಗಾಣ ಸರ್ಕಾರ ಜೂನ್ 15ರಿಂದ ಧಾರಾವಾಹಿಗಳ ಚಿತ್ರೀಕರಣ ಆರಂಭಿಸಲು ಅನುಮತಿ ನೀಡಿತ್ತು.
Recommended Video
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಧಿಸಿರುವ ಮಾರ್ಗದರ್ಶಿ ನಿಯಮಗಳಿಗೆ ಅನುಗುಣವಾಗಿ ಅನೇಕ ಧಾರಾವಾಹಿಗಳ ಚಿತ್ರೀಕರಣ ಪ್ರಾರಂಭವಾಗಿತ್ತು. ಆದರೆ ತೆಲುಗಿನ ಖ್ಯಾತ ಕಿರುತೆರೆ ನಟಿ ನವ್ಯಾ ಸ್ವಾಮಿ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿರುವುದು ಆತಂಕ ಮೂಡಿಸಿದೆ.
ನಟಿ ನವ್ಯಾ ಸ್ವಾಮಿ ಮೈಸೂರು ಮೂಲದವರಾಗಿದ್ದಾರೆ. ಕನ್ನಡದ ಲಕುಮಿ, ತಂಗಾಳಿ ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಜತೆಗೆ ಕಿರಿತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಣೆ ಕೂಡ ಮಾಡಿದ್ದರು. ಬಳಿಕ ಅವಕಾಶಕ್ಕಾಗಿ ತೆಲುಗು ಕಿರುತೆರೆ ಪ್ರವೇಶಿಸಿದ್ದರು. ತಮಿಳಿನ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ.
'ನಾ ಪೇರು ಮೀನಾಕ್ಷಿ' ಧಾರಾವಾಹಿ ಮೂಲಕ ಮನೆಮಾತಾಗಿರುವ ನವ್ಯಾ ಸ್ವಾಮಿ, ಆ ಧಾರಾವಾಹಿಯ ಚಿತ್ರೀಕರಣದ ವೇಳೆಯೇ ಕೊರೊನಾ ವೈರಸ್ ಸೋಂಕಿತರ ಜತೆ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಿದ್ದರು. ಅದರ ಫಲಿತಾಂಶ ಬಂದಿದ್ದು, ಪಾಸಿಟಿವ್ ಇರುವುದು ಗೊತ್ತಾಗಿದೆ. ಅವರೀಗ ಸ್ವಯಂ ಕ್ವಾರೆಂಟೈನ್‌ಗೆ ಒಳಗಾಗಿದ್ದಾರೆ.

'ವಾಣಿ ರಾಣಿ', 'ಅರಣ್ಮಣೈ ಕಿಲಿ', 'ರನ್' ಮತ್ತು ಆಮೆ ಕಥಾ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ನಟಿಸಿರುವ ನವ್ಯಾ ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಅವರು ಬೇಗ ಚೇತರಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ವಿಶ್ವಾಸ ಹೊಂದಿದೆ.
ಚಿತ್ರೀಕರಣದ ವೇಳೆ ನವ್ಯಾ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದ ಇತರೆ ಕಲಾವಿದರಿಗೂ ಪ್ರತ್ಯೇಕವಾಗಿ ಇರುವಂತೆ ಮನವಿ ಮಾಡಲಾಗಿದೆ. ಮತ್ತೊಬ್ಬ ಕಿರುತೆರೆ ನಟ ಬೊಡ್ಡು ಪ್ರಭಾಕರ್ ಅವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ.


Click it and Unblock the Notifications











