ಹಣವಿದ್ದೂ ಬಳಸಲಾಗದ ಸ್ಥಿತಿಯಲ್ಲಿ ಕಿರುತೆರೆ ನಟಿ: ಆರ್ಥಿಕ ಸಹಾಯಕ್ಕಾಗಿ ಮನವಿ
ಸ್ವರಾಗಿನಿ ಮತ್ತು ಇಸ್ ಪ್ಯಾರ್ ಕೋ ಕ್ಯಾ ನಾಮ್ ದೂನ್ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಕಿರುತೆರೆ ನಟಿ ನೂಪುರ್ ಅಲಂಕಾರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಣವಿದ್ದೂ ಅದನ್ನು ಬಳಸಿಕೊಳ್ಳಲಾಗದ ಸ್ಥಿತಿಯಲ್ಲಿದ್ದಾರೆ.
Recommended Video
ನೂಪುರ್ ಅವರ ದುಡಿಮೆಯ ಹಣವೆಲ್ಲವೂ ಹಗರಣಕ್ಕೆ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್‌ನ ಖಾತೆಗಳಲ್ಲಿವೆ. ಅನಾರೋಗ್ಯಕ್ಕೆ ಒಳಗಾಗಿರುವ ತಾಯಿಯನ್ನು ಆಸ್ಪ್ರತ್ರೆಗೆ ದಾಖಲಿಸಲು ಅವರಿಗೆ ತುರ್ತು ಹಣಕಾಸಿನ ಸಹಾಯದ ಅಗತ್ಯವಿದೆ.
ನೂಪುರ್ ಅವರ ಸ್ನೇಹಿತೆ ರೇಣುಕಾ ಸಹಾನೆ, ಗೆಳತಿಯ ಪರವಾಗಿ ಆರ್ಥಿಕ ನೆರವಿಗೆ ಮನವಿ ಮಾಡಿದ್ದಾರೆ. ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಂಡಿದ್ದು, ಸಹಾಯಹಸ್ತ ಚಾಚುವಂತೆ ಎಲ್ಲರಿಗೂ ಕೋರಿಕೊಂಡಿದ್ದಾರೆ.

ಬ್ಯಾಂಕ್ ಖಾತೆ ನಿಷ್ಕ್ರಿಯ
'ನನ್ನ ಬಹಳ ಆಪ್ತ ಸ್ನೇಹಿತೆಯಾಗಿರುವ ನೂಪುರ್ ಅಲಂಕಾರ್ ತೀವ್ರ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿದ್ದಾರೆ. ಏಕೆಂದರೆ ಅವರ ಎಲ್ಲ ಹಣವೂ ದುರದೃಷ್ಟವಶಾತ್ ಪಿಎಂಸಿ ಬ್ಯಾಂಕ್‌ನಲ್ಲಿದ್ದು, ಅದರ ವ್ಯವಹಾರಗಳ ಮೇಲೆ ನಿರ್ಬಂಧ ಹೇರಿರುವುದು ಗ್ರಾಹಕರನ್ನು ಸಂಕಷ್ಟಕ್ಕೆ ದೂಡಿದೆ' ಎಂದು ರೇಣುಕಾ ಶಹಾನೆ ತಿಳಿಸಿದ್ದಾರೆ.

ಆಸ್ಪತ್ರೆಗೆ ದಾಖಲಿಸಲು ಹಣ ಬೇಕು
ನಟನೆ ಮತ್ತು ಪರ್ಯಾಯ ಚಿಕಿತ್ಸೆಯ ಅಭ್ಯಾಸದ ಮೂಲಕ ಸಂಪಾದಿಸುತ್ತಿರುವ ಹಣವನ್ನು ಬಳಸಿ ತಮ್ಮ ತಾಯಿಯ ಆರೈಕೆ ಮಾಡುತ್ತಿದ್ದಾರೆ. ಲಾಕ್ ಡೌನ್ ಕಾರಣದಿಂದ ಕೆಲಸಗಳು ನಿಂತು ಹೋಗಿವೆ. ಅವರ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಬೇಕಾಗಿದ್ದು, ಅದಕ್ಕೆ ಬಹಳ ವೆಚ್ಚವಾಗುತ್ತದೆ ಎಂದಿದ್ದಾರೆ.

ಹಣ ಕೇಳುವ ಅನಿವಾರ್ಯತೆ
ನಾನು ಅವರ ತಾಯಿಯ ಬ್ಯಾಂಕ್ ಖಾತೆಯ ವಿವರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಿಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಹಣವನ್ನು ಸಹಾಯ ಮಾಡಿ. ಈ ಅನಿವಾರ್ಯ ಸ್ಥಿತಿಗೆ ತಲುಪದ ಹೊರತು ನೂಪರ್ ಸಹಾಯಕ್ಕಾಗಿ ಕೇಳಿಕೊಳ್ಳುತ್ತಿರಲಿಲ್ಲ ಎಂದು ರೇಣುಕಾ ತಿಳಿಸಿದ್ದಾರೆ.

ಆಭರಣ ಮಾರಿದ್ದೇನೆ
ತಮ್ಮ ಖಾತೆಗಳನ್ನು ಸ್ಥಗಿತಗೊಳಿಸಿರುವುದರಿಂದ ಹಣಕ್ಕಾಗಿ ಒಡವೆಗಳನ್ನು ಮಾರಾಟ ಮಾಡಬೇಕಾಯಿತು. ಮನೆಯಲ್ಲಿ ಸ್ವಲ್ಪವೂ ಹಣ ಇಲ್ಲದೆ, ಎಲ್ಲ ಖಾತೆಗಳೂ ನಿಷ್ಕ್ರಿಯಗೊಂಡಿರುವುದರಿಂದ ನನಗೆ ಬೇರೆ ಯಾವ ಮಾರ್ಗವೂ ಇರಲಿಲ್ಲ. ಸ್ನೇಹಿತರಿಂದ ಸಾಲಗಳನ್ನೂ ಪಡೆದುಕೊಂಡಿದ್ದೇನೆ. ಈ ಸಮಸ್ಯೆಗಳೆಲ್ಲ ಯಾವಾಗ ಬಗೆಹರಿಯುತ್ತದೆಯೋ ಗೊತ್ತಿಲ್ಲ. ನನ್ನ ಹಣ ಸಿಗುವುದಿಲ್ಲ ಎಂಬ ಭೀತಿ ಮೂಡಿದೆ ಎಂದು ಇತ್ತೀಚೆಗೆ ನೂಪುರ್ ಸಂದರ್ಶನವೊಂದರಲ್ಲಿ ಹೇಳಿದ್ದರು.


Click it and Unblock the Notifications











