ಗುಂಡ್ಯಾನ ಹೆಂಡ್ತಿಯಿಂದ ಸುಂದರಿ ತನಕ ಸಮೀಪ್ ಆಚಾರ್ಯ ಕಿರುತೆರೆ ಜರ್ನಿ ಹೇಗಿದೆ ನೋಡಿ
ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುಂದರಿ' ಧಾರಾವಾಹಿಯಲ್ಲಿ ನಾಯಕ ಕರಣ್ ಆಗಿ ಅಭಿನಯಿಸಿ ವೀಕ್ಷಕರ ಮನ ಸೆಳೆದ ಸಮೀಪ್ ಆಚಾರ್ಯ ಮನೋಜ್ಞ ನಟನೆಯ ಮೂಲಕ ಕಿರುತೆರೆ ಜಗತ್ತಿನಲ್ಲಿ ಮನಸೆಳೆದ ಹ್ಯಾಂಡ್ ಸಮ್ ಹುಡುಗ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರ ಕನ್ನಡ ಭಾಷೆಯ 'ಗುಂಡ್ಯಾನ ಹೆಂಡ್ತಿ' ಧಾರಾವಾಹಿಯ ಗುಂಡ್ಯಾ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟ ಸಮೀಪ್ ಆಚಾರ್ಯ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು. ಮೊದಲ ಧಾರಾವಾಹಿಯಲ್ಲಿಯೇ ಉತ್ತರ ಕನ್ನಡ ಭಾಷೆಯನ್ನು ಸೊಗಸಾಗಿ ಮಾತನಾಡಿ ವೀಕ್ಷಕರ ಮನ ಸೆಳೆದ ಸಮೀಪ್ ಹುಟ್ಟಿದ್ದು ಉಡುಪಿಯಲ್ಲಿಯಾದರೂ ಬೆಳೆದಿದ್ದೆಲ್ಲಾ ದೂರದ ಮುಂಬೈನಲ್ಲಿ.

ಸಾಗರ್ ಪಾತ್ರದಲ್ಲಿ ಮೋಡಿ
'ಗುಂಡ್ಯಾನ ಹೆಂಡ್ತಿ' ಧಾರಾವಾಹಿಯ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರ ಕನ್ನಡ ಸೊಗಡಿನ 'ಗಂಗಾ' ಧಾರಾವಾಹಿಯಲ್ಲಿ ನಾಯಕ ಸಾಗರ್ ಪಾತ್ರಕ್ಕೆ ಜೀವ ತುಂಬಿದ್ದ ಸಮೀಪ್ ಆಚಾರ್ಯ ಅಲ್ಲೂ ಕೂಡಾ ಉತ್ತರ ಕನ್ನಡ ಮಾತನಾಡುವ ಪಾತ್ರ ದೊರೆತಿದ್ದು ಕಾಕಾತಾಳೀಯ.
'ರಕ್ಷಾಬಂಧನ'ದ ವಿರಾಟ್ ಆಗಿ ಜನಪ್ರಿಯ
ಮುಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಟಿಸಿದ್ದ ಸಮೀಪ್ ಆಚಾರ್ಯ ಅದರಲ್ಲಿ ಎರಡನೇ ಪ್ರಮುಖ ಪಾತ್ರದಲ್ಲಿ ನಟಿಸಿ ಅಲ್ಲೂ ಕೂಡಾ ವೀಕ್ಷಕರ ಪ್ರಶಂಸೆಗೆ ಪಾತ್ರರಾದ ಪ್ರತಿಭೆ. 'ರಕ್ಷಾಬಂಧನ'ದ ವಿರಾಟ್ ಆಗಿ ಬದಲಾದ ಸಮೀಪ್ ಅವರ ಹೊಸತರದ ನಟನೆಗೆ ಹೆಣ್ ಮಕ್ಕಳು ಮನ ಸೋತಿದ್ದರು. ಆದರೆ ಟಿಆರ್‌ಪಿಯ ಸಮಸ್ಯೆಯಿಂದಾಗಿ 'ರಕ್ಷಾಬಂಧನ' ಧಾರಾವಾಹಿಯು ಅರ್ಧದಲ್ಲಿಯೇ ಪ್ರಸಾರ ನಿಲ್ಲಿಸಿತ್ತು.
'ಕಾವ್ಯಾಂಜಲಿ'ಯಲ್ಲಿ ನಟಿಸಬೇಕಿತ್ತು
'ರಕ್ಷಾಬಂಧನ' ಧಾರಾವಾಹಿಯ ನಂತರ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದ್ದ 'ಕಾವ್ಯಾಂಜಲಿ' ಧಾರಾವಾಹಿಯ ನಾಯಕ ಸುಶಾಂತ್ ಆಗಿ ಸಮೀಪ್ ಆಚಾರ್ಯ ನಟಿಸಬೇಕಿತ್ತು. ಧಾರಾವಾಹಿಯ ಪ್ರೋಮೋ ಕೂಡಾ ರಿಲೀಸ್ ಆಗಿತ್ತು. ಆದರೆ ಕಾರಣಾಂತರಗಳಿಂದ ಧಾರಾವಾಹಿ ಶುರುವಾಗುವ ಮೊದಲೇ ಪಾತ್ರದ ಬದಲಾವಣೆಯಾಗಿದ್ದು ಮಾತ್ರ ವಿಪರ್ಯಾಸ.

ಸಿನಿಮಾಕ್ಕೂ ಪಾದಾರ್ಪಣೆ
ಸದ್ಯ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಸುಂದರಿ' ಧಾರಾವಾಹಿಯಲ್ಲಿ ನಾಯಕ ಕರಣ್ ಆಗಿ ಅಭಿನಯಿಸಿ, ವೀಕ್ಷಕರ ಮನ ಸೆಳೆಯುತ್ತಿರುವ ಸಮೀಪ್ ಆಚಾರ್ಯ ಈಗಾಗಲೇ ಸಿನಿಮಾಕ್ಕೂ ಕಾಲಿಟ್ಟಾಗಿದೆ. ಹೌದು, 'ರಾಜಸ್ಥಾನ್ ಡೈರೀಸ್' ಎನ್ನುವ ಸಿನಿಮಾದಲ್ಲಿ ನಾಯಕನ ಗೆಳೆಯನಾಗಿ ಕಾಣಿಸಿಕೊಳ್ಳುವ ಮೂಲಕ ಹಿರಿತೆರೆಯಲ್ಲಿಯೂ ನಟನಾ ಕಂಪನ್ನು ಪಸರಿಸಿದ್ದಾರೆ.


Click it and Unblock the Notifications











