ಪುಟ್ಟಕ್ಕನ ಹೋರಾಟಕ್ಕೆ ಸಾಥ್ ಕೊಟ್ಟ ಕ್ರೇಜಿಸ್ಟಾರ್; ಬೀದಿ ಕೂತು ಪ್ರತಿಭಟನೆ.. ನ್ಯಾಯ ಸಿಗುತ್ತಾ?
ಕಿರುತೆರೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಮೋಡಿ ಮಾಡುತ್ತಿರುವ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಕನ್ನಡದ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಜ್ಯದಲ್ಲಿರುವ ಅದೆಷ್ಟೋ ಮಹಿಳೆಯರನ್ನು ಪ್ರತಿನಿಧಿಸುತ್ತಿರುವ ಪುಟ್ಟಕ್ಕನನ್ನು ಇಷ್ಟು ಮೆಚ್ಚುಗೆ ಸೂಚಿಸುತ್ತಾ ಬರುತ್ತಲೇ ಇದ್ದಾರೆ. ಆರಂಭದ ದಿನಗಳಲ್ಲಿ ಪುಟ್ಟಕ್ಕ ಟಿಆರ್‌ಪಿಯಲ್ಲಿಯೂ ಮೋಡಿ ಮಾಡಿದ್ದರು.
ಈಗ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಮತ್ತೊಂದು ಬಲ ಬಂದಿದೆ. ಈ ಧಾರಾವಾಹಿಯಲ್ಲಿ ಪುಟ್ಟಕ್ಕನಿಗೆ ಬೆಂಬಲ ಕೊಡುವುದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅತಿಥಿ ಪಾತ್ರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಈ ಕಾರಣಕ್ಕೆ ಪುಟ್ಟಕ್ಕನಿಗೆ ಡಬಲ್ ಬಲ ಬಂದಂತೆ ಆಗಿದೆ. ಕಿರುತೆರೆ ವೀಕ್ಷಕರು ಇವರಿಬ್ಬರನ್ನು ಕಣ್ತುಂಬಿ ಕೊಳ್ಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಬದಲಾದ ಸಮಯದಲ್ಲಿ ಮುನ್ನುಗ್ಗುತ್ತಿದೆ. ಸಂಜೆ 6.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಸೀರಿಯಲ್‌ಗೆ ಕ್ರೇಜಿಸ್ಟಾರ್ ಎಂಟ್ರಿ ಕೊಟ್ಟಿದ್ದು ಡಬಲ್ ಪವರ್ ಬಂದಂತೆ ಆಗಿದೆ. ಇದೀಗ 900 ಸಂಚಿಕೆಗಳನ್ನು ಮುಗಿಸಿ, ಸಾವಿರ ಸಂಚಿಕೆಗಳತ್ತ ಹೆಜ್ಜೆ ಇಡುತ್ತಿದೆ. ಇಂತಹ ಸಂದರ್ಭದಲ್ಲಿಯೂ 'ಪುಟ್ಟಕ್ಕನ ಮಕ್ಕಳು' ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳದೆ ಮುನ್ನುಗ್ಗುತ್ತಿದೆ. ಈಗ ಕ್ರೇಜಿಸ್ಟಾರ್ ಎಂಟ್ರಿ ಬೂಸ್ಟ್ ಕೊಡುತ್ತಾ? ಅನ್ನೋದನ್ನು ನೋಡಬೇಕಿದೆ.
ಸಾವಿರ ಸಂಚಿಕೆಗಳತ್ತ ಮುನ್ನುಗ್ಗುತ್ತಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಹೋರಾಟದ ಎಪಿಸೋಡ್ ನಡೆಯುತ್ತಿದೆ. ರಸ್ತೆ ಅಪಘಾತದಲ್ಲಿ ತೀರಿಕೊಂಡಿರುವ ತನ್ನ ಮಗಳು ಸಹನಾ ವಿರುದ್ಧ ಅಪಸ್ವರ ಎದ್ದಿದೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಆಗಿದ್ದ ಅವಳ ಮೇಲೆ ನಿಧನದ ಬಳಿಕವೂ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಹೀಗಾಗಿ ಪುಟ್ಟಕ್ಕ ಮಗಳ ಪರ ಹೋರಾಟಕ್ಕೆ ಇಳಿದಿದ್ದಾರೆ.

ಪುಟ್ಟಕ್ಕ ಈಗ ತನ್ನ ಮಗಳು ಸ್ನೇಹಾ ಮೇಲಿನ ಸುಳ್ಳು ಆರೋಪಕ್ಕೆ ಪ್ರತಿಯಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಮಗಳಿಗೆ ನ್ಯಾಯ ಸಿಗಲೇ ಬೇಕು ಅಂತ ಹಂಬಲಿಸುತ್ತಿದ್ದಾರೆ. ಆದರೆ, ಈ ಹೋರಾಟದಲ್ಲಿ ಪುಟ್ಟಕ್ಕನಿಗೆ ಯಾರೂ ಬೆಂಬಲ ನೀಡಿರಲಿಲ್ಲ. ಇಂತಹ ಸಮಯದಲ್ಲಿ ಪುಟ್ಟಕ್ಕನಿಗೆ ಸಪೋರ್ಟ್ ಮಾಡುವುದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದಾರೆ. 'ಜಸ್ಟಿಸ್ ಫಾರ್ ಸ್ನೇಹಾ' ಹೋರಾಟಕ್ಕೆ ಪುಟ್ನಂಜ ಕೈ ಜೋಡಿಸಿದ್ದಾರೆ.
ರವಿಚಂದ್ರನ್ ಹಾಗೂ ಉಮಾಶ್ರೀ ಇಬ್ಬರೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿದೆ. ಅದರಲ್ಲಿ 'ಪುಟ್ನಂಜ' ಸಿನಿಮಾದ ಪಾತ್ರ ಸಿಕ್ಕಾಪಟ್ಟೆ ಗಮನ ಸೆಳೆದಿತ್ತು. ಆದರೆ, ಇತ್ತೀಚೆಗೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಈಗ ಕಿರುತೆರೆಯ ಮೂಲಕ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕಿರುತೆರೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ರವಿಚಂದ್ರನ್ ಎಂಟ್ರಿಯಿಂದ ಪುಟ್ಟಕ್ಕನ ಹೋರಾಟಕ್ಕೆ ನ್ಯಾಯ ಸಿಗುತ್ತಾ? ಮಗಳಿಗೆ ಅಂಟಿದ ಕಳಂಕ ಹೊರಟು ಹೋಗುತ್ತಾ? ಅನ್ನೋದನ್ನು ನೋಡುವುದಕ್ಕೆ ಪ್ರೇಕ್ಷಕರು ತುದಿಗಾಲಲ್ಲಿ ನಿಂತಿದ್ದಾರೆ.


Click it and Unblock the Notifications











