ಯಾಕೆ ಹೀಗಾಯ್ತು ಉಪ್ಪಿ ಸಿನಿಮಾ? ಕಿರಿತೆರೆಯಲ್ಲೂ ಮಕಾಡೆ ಮಲಗಿದ UI..ಟಿಆರ್‌ಪಿ ಎಷ್ಟು?
ಕಳೆದ ವರ್ಷ ರಿಯಲ್ ಸ್ಟಾರ್ ಉಪೇಂದ್ರ ನಟಿಸಿ, ನಿರ್ದೇಶಿಸಿದ 'ಯುಐ' ಸಿನಿಮಾ ರಿಲೀಸ್ ಆಗಿತ್ತು. 2024, ಡಿಸೆಂಬರ್ ಕೊನೆಯ ವಾರದಲ್ಲಿ ರಿಲೀಸ್ ಆಗಿದ್ದ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸೋತ್ತಿತ್ತು. 'ಯುಐ' ಬಿಡುಗಡೆಯಾದ ಕೆಲವೇ ದಿನಗಳಲ್ಲಿ 'ಮ್ಯಾಕ್ಸ್' ರಿಲೀಸ್ ಆಗಿತ್ತು. ಹೀಗಾಗಿ 'ಯುಐ' ದೊಡ್ಡ ಮಟ್ಟಕ್ಕೆ ಯಶಸ್ಸು ಗಳಿಸುವಲ್ಲಿ ವಿಫಲ ಆಯ್ತು.
ಉಪೇಂದ್ರ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್ ಸೋತಿದ್ದೇ ಇಲ್ಲ. ಉಪ್ಪಿ ನಟಿಸಿದ ಸಿನಿಮಾಗಳಿಗಿಂತ ನಿರ್ದೇಶಿಸಿದ ಸಿನಿಮಾಗಳಿಗೆ ಕ್ರೇಜ್ ಹೆಚ್ಚು. ಈ ಕಾರಣಕ್ಕೆ 'ಯುಐ' ಸಿನಿಮಾ ಮೇಲೂ ಅಷ್ಟೇ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ, ಆ ನಿರೀಕ್ಷೆಯನ್ನು ಗೆಲ್ಲುವಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮೊದಲ ಬಾರಿಗೆ ಸೋತಿದ್ದರು. ಈ ಸಿನಿಮಾವನ್ನು ಲಹರಿ ಸಂಸ್ಥೆ ನಿರ್ಮಾಣ ಮಾಡಿತ್ತು.

'ಯುಐ' ರಿಲೀಸ್ ಆದಾಗ ಕೆಲ ಪ್ರೇಕ್ಷಕರಿಗೆ ಸಿನಿಮಾ ಇಷ್ಟ ಆಗಿದ್ದರೆ, ಮತ್ತೆ ಕೆಲವರು ಅಸಮಧಾನವನ್ನು ಹೊರ ಹಾಕಿದ್ದು ಕೂಡ ಇದೆ. ಪ್ಯಾನ್ ಇಂಡಿಯಾ ರಿಲೀಸ್ ಮಾಡಿದ್ದ ಸಿನಿಮಾಗೆ ಬೇರೆ ಭಾಷೆಯಿಂದ ಟೀಕೆಗಳು ಬಂದಿದ್ದವು. ಇನ್ನೊಂದು ಕಡೆ 'ಯುಐ' ಬಿಡುಗಡೆಯಾದ ಒಂದು ವಾರದ ಅಂತರದಲ್ಲಿ 'ಮ್ಯಾಕ್ಸ್' ರಿಲೀಸ್ ಮಾಡಿದ್ದರಿಂದಲೇ ಸಿನಿಮಾ ಸೋಲನ್ನು ಕಾಣ್ತು ಎಂದು ಹೇಳಿದ್ದರು. ಇವೆಲ್ಲ ಏನೇ ಇದ್ದರೂ, ಉಪ್ಪಿ ನಿರ್ದೇಶಿಸಿದ 'ಯುಐ'ಗೆ ಕಿರಿತೆರೆಯಲ್ಲೂ ಸೋಲಾಗಿದೆ.
ಕೆಲವು ವರ್ಷ ಗ್ಯಾಪ್ ಕೊಟ್ಟು ಉಪ್ಪಿ ನಿರ್ದೇಶಿಸಿದ ಸಿನಿಮಾ ಕಳೆದ ವರ್ಷ ಡಿಸೆಂಬರ್ 20ರಂದು ರಿಲೀಸ್ ಆಗಿತ್ತು. 'ಯುಐ' ಸಿನಿಮಾವನ್ನು ಕೇವಲ ಕನ್ನಡದಲ್ಲಷ್ಟೇ ಬೇರೆ ಬೇರೆ ಭಾಷೆಗಳಲ್ಲೂ ಬಿಡುಗಡೆ ಮಾಡಲಾಗಿತ್ತು. ಆದರೆ, ಬಿಡುಗಡೆಯಾದ ಎಲ್ಲಾ ಭಾಷೆಯಲ್ಲೂ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 'ಯುಐ' ಥಿಯೇಟ್ರಿಕಲ್ ರನ್ ಮುಗಿಸಿದ ಬಳಿಕ ಮೊಟ್ಟ ಮೊದಲ ಬಾರಿಗೆ ಕಿರುತೆರೆಯಲ್ಲಿ ಪ್ರಸಾರ ಆಗಿತ್ತು. ಆದರೆ, ಅಲ್ಲೂ ವೀಕ್ಷಕರನ್ನು ಮೋಡಿ ಮಾಡುವಲ್ಲಿ ಸೋತಿದೆ.
ಹೌದು, 'ಯುಐ' ಸಿನಿಮಾ ಹಕ್ಕುಗಳನ್ನು ಜೀ ಕನ್ನಡ ಪಡೆದುಕೊಂಡಿತ್ತು. ಹೀಗಾಗಿ ಈ ಸಿನಿಮಾವನ್ನು ಯುಗಾದಿ ಹಬ್ಬದ ಪ್ರಯುಕ್ತ ಜೀ ಕನ್ನಡ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡಿತ್ತು. ಮಾರ್ಚ್ 30ರಂದು ಸಂಜೆ 4.30ಕ್ಕೆ 'ಯುಐ' ಸಿನಿಮಾವನ್ನು ಪ್ರಸಾರ ಮಾಡಲಾಗಿತ್ತು. ಆ ದಿನ ಟಿಆರ್‌ಪಿ ಹೊರ ಬಿದ್ದಿದ್ದು, ಹಬ್ಬದ ದಿನವೇ ವೀಕ್ಷಕರು 'ಯುಐ' ಸಿನಿಮಾವನ್ನು ನೋಡಿಲ್ಲ. ಕೇವಲ 1.7 (15 to 50 ಅರ್ಬನ್) ಟಿಆರ್‌ಪಿ ಸಿಕ್ಕಿದೆ. ಕಿರುತೆರೆ ಇತಿಹಾಸದಲ್ಲಿ ಸೂಪರ್‌ಸ್ಟಾರ್ ಸಿನಿಮಾವೊಂದಕ್ಕೆ ಇಷ್ಟು ಕಡಿಮೆ ರೇಟಿಂಗ್ ಬಂದಿರಲಿಲ್ಲ ಎನ್ನುತ್ತವೆ ಕಿರುತೆರೆ ಮೂಲಗಳು.

ಕನ್ನಡ ಚಿತ್ರರಂಗ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಮಾರ್ಟಿನ್' ಕೂಡ ಬಾಕ್ಸಾಫೀಸ್‌ನಲ್ಲಿ ಸೋಲುಂಡಿತ್ತು. ದೇಶಾದ್ಯಂತ ಈ ಸಿನಿಮಾಗೆ ಕಟು ಟೀಕೆಗಳು ವ್ಯಕ್ತವಾಗಿದ್ದವು. ಆದರೂ, ಧ್ರುವ ಸರ್ಜಾ ನಟಿಸಿದ 'ಮಾರ್ಟಿನ್' ಸಿನಿಮಾ ಕಿರುತೆರೆಯಲ್ಲಿ 3.5 ಟಿಆರ್‌ಪಿ ಬಂದಿತ್ತು. ಶಿವಣ್ಣ ನಟಿಸಿದ 'ಬೈರತಿ ರಣಗಲ್' 2.5 ರೇಟಿಂಗ್ ಬಂದಿತ್ತು. ಆದರೆ, ಉಪ್ಪಿ ಕ್ರೇಜ್ ಈ ರೇಟಿಂಗ್ ತೀರಾ ಕಡಿಮೆ ಆಯ್ತು. ವೀಕ್ಷಕರಿಗೂ ಈ ಸಿನಿಮಾ ಇಷ್ಟ ಆಗಿಲ್ಲ ಎಂದು ಕಿರುತೆರೆಯ ಮೂಲಗಳು ಅಭಿಪ್ರಾಯ ಪಟ್ಟಿವೆ.
ಇದೇ ದಿನ ಕಲರ್ಸ್ ಕನ್ನಡದಲ್ಲಿ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿದ 'ಭೀಮ್' ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿತ್ತು. 'ಭೀಮ'ಗೆ 3.9 ಟಿಆರ್‌ಪಿ (15 to 50 ಅರ್ಬನ್) ಬಂದಿದೆ. ಆದರೆ, ಇದು ಸಂಜೆ 7.30ಕ್ಕೆ ಪ್ರೈಂಟೈಮ್‌ನಲ್ಲಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗಿತ್ತು. ಹೀಗಾಗಿ 'ಯುಐ' ಜೊತೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅದೇ ದಿನ ಬಿಡುಗಡೆಯಾದ ಕನ್ನಡ ಇನ್ನೊಬ್ಬ ನಟನ ಸಿನಿಮಾಗೆ ಕಿರುತೆರೆಯಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಬಹುದಷ್ಟೇ.


Click it and Unblock the Notifications











