Weekend With Ramesh ಶೋಗೆ ಡಾಲಿ ಊಹಿಸದ ವ್ಯಕ್ತಿಯನ್ನು ಕರೆಸಿ ಶಾಕ್ ಕೊಟ್ಟ ಜೀ
'ವೀಕೆಂಡ್ ವಿತ್ ರಮೇಶ್' ಸೀಸನ್ 5ರ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಧಕ ಸೀಟ್‌ನಲ್ಲಿ ಒಬ್ಬೊಬ್ಬರೇ ಅತಿಥಿಗಳನ್ನು ಕರೆ ತಂದು ವೀಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸೀಸನ್‌ನಲ್ಲಿ ಸುಮಾರು 20 ಮಂದಿ ಸಾಧಕರು ಸಾಧಕ ಸೀಟ್‌ನಲ್ಲಿ ಕೂರಲಿದ್ದಾರೆ.
ಈಗಾಗಲೇ ಮೋಹಕತಾರೆ ರಮ್ಯಾ, ಇಂಡಿಯನ್ ಮೈಕಲ್ ಜಾಕ್ಸನ್, ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್, ಹಿರಿಯ ನಟ ದತ್ತಣ್ಣ ಈ ಸಂಚಿಕೆಯ ಸಾಧಕರ ಸೀಟ್ ಅಲಂಕರಿಸಿದ್ದಾರೆ. ಈ ಬೆನ್ನಲ್ಲೇ ಮುಂದಿನ ಅತಿಥಿ ಯಾರು ಅನ್ನೋ ಕುತೂಹಲ ಅಂತೂ ಇದ್ದೇ ಇದೆ.

ಜೀ ಕನ್ನಡ ಈ ಬಾರಿ ಕೆಲವು ಚಿಕ್ಕ ಬದಲಾವಣೆಗಳೊಂದಿಗೆ ವೀಕೆಂಡ್ ವಿತ್ ರಮೇಶ್ ಸೀಸನ್ 5 ಅನ್ನು ಲಾಂಚ್ ಪ್ರಚಾರ ಮಾಡುತ್ತಿದೆ. ಇದೂವರೆಗೂ ಮೂವರು ಸಿನಿಮಾ ಕ್ಷೇತ್ರದ ಸಾಧಕರು ಹಾಗೂ ಒಬ್ಬರು ವೈದ್ಯಕೀಯ ಕ್ಷೇತ್ರದ ಸಾಧಕರನ್ನು ಕರೆತರಲಾಗಿದೆ. ಈಗ 6ನೇ ಅತಿಥಿ ಯಾರು? ಅನ್ನೋ ಕುತೂಹಲಕ್ಕೀಗ ತೆರೆಬಿದ್ದಿದೆ.
ವೀಕೆಂಡ್ ವಿತ್ ರಮೇಶ್‌ನಲ್ಲಿ 'ನಟರಾಕ್ಷಸ'
ಹೌದು, ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಅತಿಥಿಯಾಗಿ ಡಾಲಿ ಧನಂಜಯ್ ಆಗಮಿಸುತ್ತಿದ್ದಾರೆ. ಈಗಾಗಲೇ ಎಪಿಸೋಡ್ ಅನ್ನು ಶೂಟ್ ಕೂಡ ಮಾಡಲಾಗಿದೆ. ಇತ್ತೀಚೆಗಷ್ಟೇ 25 ಸಿನಿಮಾಗಳ ಗಡಿ ದಾಟಿರೋ ಡಾಲಿ ಸೀಸನ್ ಐದರಲ್ಲಿ ಸಾಧಕ ಸೀಟ್‌ನಲ್ಲಿ ಕೂರಲಿದ್ದಾರೆ. ಹೀಗಾಗಿ ಡಾಲಿ ಧನಂಜಯ್ ಎಪಿಸೋಡ್ ಕುತೂಹಲ ಕೆರಳಿಸಿದೆ.

ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಡಾಲಿ ಧನಂಜಯ್ ಸವೆಸಿದ ಹಾದಿ ದೊಡ್ಡದಿದೆ. ಅವಮಾನ, ನಿರಂತರ ಸೋಲು ಎಲ್ಲವನ್ನೂ ಮೆಟ್ಟಿನಿಂತು, ಈಗ ನಟನಾಗಿ, ನಿರ್ಮಾಪಕನಾಗಿ, ಸಿನಿ ಸಾಹಿತಿಯಾಗಿ ಬೇರೆ ಬೇರೆ ವಿಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ 'ನಟರಾಕ್ಷಸ' ಸಾಧಕರ ಸೀಟ್‌ನಲ್ಲಿ ಕೂತಿರುವುದು ವೀಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಎಪಿಸೋಡ್‌ನ ಕೆಲವು ಸಂದರ್ಭಗಳಲ್ಲಿ ಜೀ ಕನ್ನಡ ಡಾಲಿಗೆ ಶಾಕ್ ಕೊಟ್ಟಿದೆ.
ಕ್ಯಾಮರಾ ಮುಂದೆ ಬಾರದ ಸಹೋದರಿ ಕರೆತಂದ ತಂಡ
'ನಟರಾಕ್ಷಸ' ಡಾಲಿ ಧನಂಜಯ್ ಎಪಿಸೋಡ್‌ನಲ್ಲಿ ವೀಕ್ಷಕರಿಗೆ ಹಲವು ಅಚ್ಚರಿಗಳಿವೆ. ಅದರಲ್ಲೊಂದು ಧನಂಜಯ್ ಸಹೋದರಿ. ಹಿಂದೆಂದೂ ಇವರನ್ನು ಯಾರೂ ಕ್ಯಾಮರಾದಲ್ಲಿ ನೋಡಿಲ್ಲ. ಧನಂಜಯ್ ಕೂಡ ಇವರ ಬಗ್ಗೆ ಎಲ್ಲಿಯೂ ಮಾತಾಡಿಲ್ಲ. ಇವರನ್ನು ವೀಕೆಂಡ್ ವಿತ್ ರಮೇಶ್ ವೇದಿಕೆಗೆ ಕರೆದುಕೊಂಡು ಬರಲಾಗಿದೆ.
ಅದರಲ್ಲೇನು ವಿಶೇಷತೆಯಿದೆ? ಅನ್ನೋ ಪ್ರಶ್ನೆ ಹುಟ್ಟೋದು ಸಹಜ. ಮೂಲಗಳ ಪ್ರಕಾರ, ಧನಂಜಯ್ ಅವರ ವಿಶೇಷ ಚೇತನ ಸಹೋದರಿ ಇದೇ ಮೊದಲ ಬಾರಿಗೆ ಕ್ಯಾಮರಾ ಮುಂದೆ ಕರೆತರಲಾಗುತ್ತಿದೆ. ಈ ವಿಷಯ ಸ್ವತ: ಧನಂಜಯ್ ಅವರಿಗೂ ಗೊತ್ತಿರಲಿಲ್ಲ. ಹೀಗಾಗಿ ಕಾರ್ಯಕ್ರಮದಲ್ಲಿ ಡಾಲಿಗೆ ಜೀ ಕನ್ನಡ ಕೊಟ್ಟ ಶಾಕ್ ಅಚ್ಚರಿ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಸಂಭಾವನೆ ಕೊಡದವರ ಬಗ್ಗೆ ಓಪನ್ ಟಾಕ್
ಡಾಲಿ ಧನಂಜಯ್‌ಗೆ ಯಶಸ್ಸು ದಿಢೀರನೇ ಸಿಕ್ಕಿದ್ದಲ್ಲ. ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸೈಕಲ್ ಹೊಡೆದಿದ್ದಾರೆ. ಆರಂಭದಲ್ಲಿ ಸಕ್ಸಸ್ ಸಿಕ್ಕರೂ ಬಳಿಕ ಸಾಲು ಸಾಲು ಸೋಲು ಕಂಡಿದ್ದರು. ಅಲ್ಲದೆ, ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರಲು ಖಳನಾಯಕನ ಪಾತ್ರದಲ್ಲಿ ನಟಿಸಬೇಕಿತ್ತು. 'ಡಾಲಿ' ಮೂಲಕ ಮತ್ತೆ ಚಿತ್ರರಂಗದಲ್ಲಿ ಡಾಲಿ ಅಸ್ಥಿತ್ವ ಕಂಡುಕೊಂಡಿದ್ದರು.
ಇದೂವರೆಗೂ ಡಾಲಿ ಧನಂಜಯ್ ಚಿತ್ರರಂಗದಲ್ಲಿ ಅನುಭವಿಸಿದ ಕಷ್ಟಗಳ ಬಗ್ಗೆ ಮಾತಾಡಿದ್ದಾರೆ. ಅಲ್ಲದೆ ಇನ್ನೂ ಸಂಭಾವನೆ ಕೊಡದೆ ಇರುವ ನಿರ್ಮಾಪಕರ ಬಗ್ಗೆನೂ ಮಾತಾಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಡಾಲಿ ಧನಂಜಯ್ ಎಪಿಸೋಡ್ ರಫ್ ಅಂಡ್ ಟಫ್ ಆಗಿರುತ್ತೆ ಅನ್ನೋ ನಿರೀಕ್ಷೆಯಲ್ಲಿ ಕಿರುತೆರೆ ವೀಕ್ಷಕರು ಇದ್ದಾರೆ.


Click it and Unblock the Notifications











