ಒಂದ್ವೇಳೆ ಕಿಚ್ಚ ಸುದೀಪ್ ಖಡಾ ಖಂಡಿತವಾಗಿ ನಿರೂಪಣೆ ಮಾಡಲ್ಲ ಎಂದಿದ್ದರೆ.. ಕಲರ್ಸ್ ಕನ್ನಡ ಮುಂದಿದ್ದ ಆಯ್ಕೆ ಏನು?
ಕಳೆದ ಕೆಲವು ದಿನಗಳಿಂದ ಬಿಗ್ ಬಾಸ್ ಕನ್ನಡದ 12ನೇ ಸೀಸನ್ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು. ಅದಕ್ಕೆ ಕಾರಣ ಕಿಚ್ಚ ಸುದೀಪ್. 11ನೇ ಸೀಸನ್ ಆರಂಭದ ವೇಳೆನೇ ಸುದೀಪ್ ನಿರೂಪಣೆ ಮಾಡುವುದಿಲ್ಲ ಎಂದು ಹಿಂಟ್ ಕೊಟ್ಟಿದ್ದರು. ಸೀಸನ್ ಮುಗಿಯುತ್ತಿದ್ದಂತೆ ಇದು ತನ್ನ ಕೊನೆಯ ಸೀಸನ್ ಎಂದು ಅನೌನ್ಸ್ ಕೂಡ ಮಾಡಿದ್ದರು. ಆಗ ಕಿಚ್ಚನ ಈ ನಿರ್ಧಾರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೆಲವು ರಿಯಾಲಿಟಿ ಶೋ ಬಿಟ್ಟಿದ್ದೇ ಒಳ್ಳೆಯದಾಯ್ತು ಎಂದಿದ್ದರು. ಇನ್ನು ಕೆಲವರು ಕಿಚ್ಚ ಇಲ್ಲದೆ ಬಿಗ್ ಬಾಸ್ ನೋಡುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದರು.
ಈ ವರ್ಷ ಮತ್ತೆ ಬಿಗ್ ಬಾಸ್ ಜ್ವರ ಶುರುವಾಗಿದೆ. ಇನ್ನು ಮೂರು ನಾಲ್ಕು ತಿಂಗಳಲ್ಲಿ ಬಿಗ್ ಬಾಸ್ ಕನ್ನಡದ ಮತ್ತೊಂದು ಸೀಸನ್ ಆರಂಭ ಆಗಲಿದೆ. ಅದಕ್ಕೂ ಮುನ್ನ 12ನೇ ಸೀಸನ್ ಅನ್ನು ಸುದೀಪ್ ನಿರೂಪಣೆ ಮಾಡುತ್ತಾರಾ? ಇಲ್ವಾ? ಎನ್ನುವ ಪ್ರಶ್ನೆ ಎದ್ದಿತ್ತು. ಸುದೀಪ್ ಇಲ್ಲದೇ ಬಿಗ್ ಬಾಸ್ ಅನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಒಂದು ಹಂತದಲ್ಲಿ ಸುದೀಪ್ ಒಪ್ಪದೇ ಇದ್ದರೆ, ಆ ಸ್ಥಾನಕ್ಕೆ ಯಾರು ಬರಬಹುದು? ಎನ್ನುವ ಕುತೂಹಲ ಎಲ್ಲರನ್ನೂ ಕಾಡಿದ್ದು ಸುಳ್ಳಲ್ಲ.

ಅಸಲಿಗೆ ಬಿಗ್ ಬಾಸ್ ಕನ್ನಡ ಅಂದರೆ ಸುದೀಪ್. ಸುದೀಪ್ ಅಂದರೆ, ಬಿಗ್ ಬಾಸ್ ಕನ್ನಡ ಎನ್ನುವ ಮಟ್ಟಿಗೆ ಟ್ರೇಡ್ ಮಾರ್ಕ್ ಅನ್ನು ಒತ್ತಿ ಆಗಿದೆ. ಹೀಗಾಗಿ ಇವರ ಸ್ಥಾನದಲ್ಲಿ ಬೇರೆಯವರನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಆದರೆ, ಒಂದು ವೇಳೆ 12ನೇ ಸೀಸನ್‌ಗೆ ಕಿಚ್ಚ ಸುದೀಪ್ ಒಪ್ಪದೇ ಇದ್ದಿದ್ದರೆ? ಖಡಾ ಖಂಡಿತವಾಗಿ ಬಿಗ್ ಬಾಸ್ ನಿರೂಪಣೆ ಮಾಡುವುದೇ ಇಲ್ಲ ಎಂದು ನಿರ್ಧಾರ ಮಾಡಿದ್ದರೆ? ಕಲರ್ಸ್ ಕನ್ನಡ ಮುಂದಿದ್ದ ಆಯ್ಕೆ ಏನು?
ಇಂತಹದ್ದೊಂದು ಪ್ರಶ್ನೆ ಪತ್ರಿಕಾಗೋಷ್ಠಿಯಲ್ಲಿ ಕಲರ್ಸ್ ಕನ್ನಡದ ಮುಖ್ಯಸ್ಥ ಪ್ರಶಾಂತ್ ನಾಯಕ್ ಮುಂದೆ ಬಂದಿತ್ತು. ಒಂದು ವೇಳೆ ಸುದೀಪ್ ಬಿಗ್ ಬಾಸ್ ಕನ್ನಡ ನಿರೂಪಣೆ ಮಾಡುವುದೇ ಇಲ್ಲ ಎಂದು ನಿರ್ಧಾರ ಮಾಡಿದ್ದರೆ? ಬಿಗ್ ಬಾಸ್ ಅನ್ನು ನಿಲ್ಲಿಸಿ ಬಿಡುತ್ತಿದ್ರಾ? ಎಂಬ ಪ್ರಶ್ನೆ ಎದ್ದಿತ್ತು. ಅನಿರೀಕ್ಷಿತವಾಗಿ ಬಂದಿದ್ದ ಈ ಪ್ರಶ್ನೆಗೆ ಕಿಚ್ಚ ಸುದೀಪ್ ಕೂಡ ಉತ್ತರದ ನಿರೀಕ್ಷೆಯಲ್ಲಿಯೇ ಇದ್ದರು. ಅದಕ್ಕೆ ಕಲರ್ಸ್ ಕನ್ನಡದ ಮುಖ್ಯಸ್ಥರು ಕೊಟ್ಟ ಉತ್ತರವೇನು?
"ನಮಗೆ ಆಪ್ಷನ್ ಉಳಿದೇ ಇರಲಿಲ್ಲ. ಗೊತ್ತಿಲ್ಲ, ನಾವು ಈಗ ಆ ಸನ್ನಿವೇಶದಲ್ಲಿ ಇಲ್ಲ." ಎಂದು ಪ್ರಶಾಂತ್ ನಾಯಕ್ ಹೇಳಿತ್ತಿದ್ದಂತೆ ಕಿಚ್ಚ ಸುದೀಪ್ ಕಾಲೆಳೆದಿದ್ದಾರೆ. "ನಾನು ಈ ಪ್ರಶ್ನೆಯನ್ನು ಕೇಳಿಯೇ ಇರಲಿಲ್ಲ. ಸರಿಯಾಗಿ ಹೇಳಿ. ನಿಮಗೆ ಈಗ ಉತ್ತರ ಸಿಕ್ಕಿದೆ. ಅವರು ಬಿಗ್ ಬಾಸ್ ಅನ್ನು ನಿಲ್ಲಿಸುತ್ತಿರಲಿಲ್ಲ" ಎಂದು ಕಿಚ್ಚ ಸುದೀಪ್ ಕೂಡ ತಮಾಷೆ ಮಾಡಿದ್ದಾರೆ.
"ನನ್ನ ರಿಪ್ಲೇಸ್ಮೆಂಟ್ ಯಾಕೆ ಹುಡುಕುತ್ತೀರ? ಅದನ್ನು ಹುಡುಕುವುದು ಕೂಡ ತಪ್ಪೇ. ಈಗ ರಿಪ್ಲೇಸ್ಮೆಂಟ್ ಆಗುವಂತಹ ವ್ಯಕ್ತಿನಾಗಿದ್ದರೆ, ನಾನು ಜೀವನದಲ್ಲಿ ಏನೂ ಮಾಡಿಯೇ ಇಲ್ಲ ಅಂತ ಆಯ್ತಲ್ಲ. ಬಿಗ್ ಬಾಸ್‌ನಲ್ಲಿ ಆಗಲಿ, ಸಿನಿಮಾದಲ್ಲಿ ಆಗಲಿ. ನನ್ನ ಸಿನಿಮಾ ನನ್ನದು. ನನ್ನ ವೇದಿಕೆ ನನ್ನದು. ಇಲ್ಲಿರುವವರಿಗೆ ಒಬ್ಬೊಬ್ಬರಿಗೆ ಒಂದೊಂದು ಕ್ಯಾರೆಕ್ಟರ್ ಇದೆ. ಇಲ್ಲಿ ನಾವು ಆಪ್ಷನ್ ಅಥವಾ ರಿಪ್ಲೇಸ್ಮೆಂಟ್ ಅನ್ನು ಹುಡುಕಿತ್ತಿದ್ದೇವಾ?" ಎಂದು ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ.
ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಯಿಂದ ಹೊರಗೆ ಹೋಗುವ ನಿರ್ಧಾರ ಮಾಡಿದ್ದೇಕೆ ಎಂದು ರಿವೀಲ್ ಮಾಡಿದ್ದಾರೆ. ಕೆಲವೊಂದು ವಿಚಾರಗಳು ಅವರ ಮನಸ್ಸಿಗೆ ಬೇಸರ ತರಿಸಿತ್ತು. ಪ್ರೀತಿ ಕಡಿಮೆ ಆಗಿತ್ತು. ಕನ್ನಡದಲ್ಲಿ ಕೆಲಸ ಮಾಡುವವರಿಗೆ ಪ್ರಾಮುಖ್ಯತೆ ಕಡಿಮೆ ಇತ್ತು. ಅದೆಲ್ಲವೂ ಸರಿ ಹೋಗಬೇಕು ಎಂದು ಕಿಚ್ಚ ಸುದೀಪ್ ಷರತ್ತು ಹಾಕಿದ್ದರು. ಅದಕ್ಕೆ ವಾಹಿನಿ ಒಪ್ಪಿದ ಮೇಲೆ ಬಿಗ್ ಬಾಸ್ ಕನ್ನಡ ಸೀಸನ್ 12 ನಿರೂಪಣೆ ಮಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.


Click it and Unblock the Notifications











