'ಹಳ್ಳಿಕಾರ್ ಒಡೆಯಾ' ಟೈಟಲ್ ಕೊಟ್ಟಿದ್ಯಾರು? "ತಾಕತ್ತಿದ್ದರೆ ಕಾಡುಗುಡಿಗೆ ಬನ್ನಿ" ಅಂದಿದ್ದೇಕೆ ವರ್ತೂರು ಫ್ಯಾನ್ಸ್?
ಬಿಗ್‌ಬಾಸ್ ಕನ್ನಡ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಿಗ್‌ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ವರ್ತೂರು ಸಂತೋಷ್ ಹಲವು ಸ್ಥಳಗಳಿಗೆ ಭೇಟಿ ಕೊಟ್ಟು ತಮ್ಮ ಬೆಂಬಲಿಗರನ್ನು ಭೇಟಿ ಮಾಡುತ್ತಿದ್ದಾರೆ. ಇದೇ ವೇಳೆ 'ಹಳ್ಳಿಕಾರ್ ಒಡೆಯ' ಅನ್ನುವ ಬಿರುದು ಕೊಟ್ಟಿದ್ದಕ್ಕೆ ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ವರ್ತೂರು ಸಂತೋಷ್‌ಗೆ 'ಹಳ್ಳಿಕಾರ ಒಡೆಯ' ಟೈಟಲ್ ಕೊಟ್ಟಿದ್ದಕ್ಕೆ ಹಳ್ಳಿಕಾರ್ ತಳಿಗಳನ್ನು ಸಾಕಿರುವ ಹಲವು ಮಂದಿ ಸಿಟ್ಟಿಗೆದ್ದಿದ್ದಾರೆ. ಈ ಕಾರಣಕ್ಕೆ ವರ್ತೂರು ಸಂತೋಷ್ ಹಾಗೂ ವಿರೋಧಿಗಳ ನಡುವೆ ಮಾತಿನ ಯುದ್ಧ ನಡೆಯುತ್ತಲೇ ಇದೆ. ವರ್ತೂರ್ ಸಂತೋಷ್ ಕೂಡ ಆಗಾಗ ಕೆಲವು ವೇದಿಕೆಗಳಲ್ಲಿ ಟಾಂಗ್ ಕೊಟ್ಟವರಿಗೆ ತಿರುಗೇಟು ನೀಡುತ್ತಲೇ ಇದ್ದಾರೆ.

ಅಷ್ಟಕ್ಕೂ ವಿವಾದಕ್ಕೆ ಎಡೆ ಮಾಡಿಕೊಟ್ಟಿರೋ ವರ್ತೂರು ಸಂತೋಷ್‌ಗೆ 'ಹಳ್ಳಿಕಾರ್ ಒಡೆಯ' ಟೈಟಲ್ ಕೊಟ್ಟಿದ್ದು ಯಾರು? ಈ ಟೈಟಲ್ ಇಷ್ಟೊಂದು ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು ಯಾಕೆ? 'ಹಳ್ಳಿಕಾರ್ ಒಡೆಯ' ಟೈಟಲ್ ಕೊಟ್ಟ ಯುವಕರು ಸಿಡಿದೆದ್ದಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.
'ಹಳ್ಳಿಕಾರ್ ಒಡೆಯ' ಕೊಡುವುದರಲ್ಲಿ ತಪ್ಪೇನಿದೆ?
ಮಂಡ್ಯ ಸೇರಿದಂತೆ ಹಲವು ಭಾಗಗಳಲ್ಲಿ ರೈತರು ಹಳ್ಳಿಕಾರ್ ತಳಿಗಳನ್ನು ಸಾಕಿದ್ದಾರೆ. ಇವರು ವರ್ತೂರು ಸಂತೋಷ್‌ಗೆ ಹಳ್ಳಿಕಾರ್ ಒಡೆಯ ಟೈಟಲ್ ಕೊಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ವರ್ತೂರು ಸಂತೋಷ್‌ಗೆ 'ಹಳ್ಳಿಕಾರ್ ಒಡೆಯ' ಅಂತ ಟೈಟಲ್ ಕೊಟ್ಟ ಕಾಡುಗುಡಿಯ ಯುವಕರು ಅಖಾಡಕ್ಕೆ ಇಳಿದಿದ್ದಾರೆ. ಈ ಟೈಟಲ್ ಕೊಟ್ಟಿದ್ದೇಕೆ? ಅನ್ನೋದನ್ನು ತಿಳಿಸಿಕೊಟ್ಟಿದ್ದಾರೆ.
"ನೀವೆಲ್ಲ ಕೇಳ್ತಿದ್ದೀರಲ್ಲ.. ಸಂತೋಷ್ ಅಣ್ಣನಿಗೆ ಹಳ್ಳಿಕಾರ್ ಒಡೆಯ ಟೈಟಲ್ ಹೇಗೆ ಕೊಟ್ರಿ ಅಂತ.. ನಮ್ಮೂರಲ್ಲೂ ನಮ್ಮ ತಾತ, ಅಪ್ಪ ಎಲ್ಲರೂ ಎತ್ತುಗಳನ್ನು ಸಾಕಿದ್ದರು. ಅವರಿಗೆಲ್ಲ ಯಾಕೆ ಕೊಟ್ಟಿಲ್ಲ. ನಮ್ಮ ಸ್ನೇಹಿತರು ಸೀಗೆಹಳ್ಳಿಯಲ್ಲಿ ಇದ್ದಾರೆ. ಅವರಿಗೆಲ್ಲ ನಾವ್ಯಾಕೆ ಕೊಟ್ಟಿಲ್ಲ. ಅವರು ಯಾರೂ ಹೇಳಿಕೊಟ್ಟಿಲ್ಲ. ಸಂತೋಷ್ ಅಣ್ಣನ ಹಿಂದೆ ಹೋಗಿದ್ದಕ್ಕೆ ನಾಲ್ಕು ಜನಕ್ಕೆ ಹೇಳಿಕೊಟ್ಟರು. ಇವರಿಗೆ ಹಳ್ಳಿಕಾರ್ ಒಡೆಯ ಕೊಡುವುದರಲ್ಲಿ ತಪ್ಪೇನಿಲ್ಲ." ಎಂದು ಟೈಟಲ್ ಕೊಟ್ಟ ಯುವಕರು ಪ್ರಶ್ನೆ ಮಾಡಿದ್ದಾರೆ.

"ಹಳ್ಳಿಕಾರ್ ಎತ್ತು ಅಂತ ಗೊತ್ತಾಗಿದ್ದೇ ಇವ್ರಿಂದ"
2019ರಲ್ಲಿ ಬೆಂಗಳೂರು ಸಮೀಪದ ಕಾಡುಗುಡಿಯ ಯುವಕರು ವರ್ತೂರು ಸಂತೋಷ್‌ಗೆ 'ಹಳ್ಳಿಕಾರ್ ಒಡೆಯ' ಅನ್ನೋ ಟೈಟಲ್ ಕೊಟ್ಟಿದೆ. ಹಳ್ಳಿಕಾರ್ ತಳಿಗಳ ಬಗ್ಗೆ ನಿರಂತರ ಮಾಹಿತಿ ಹಂಚಿಕೊಂಡಿದ್ದಕ್ಕೆ, ರೇಸ್ ಮಾಡಿದ್ದನ್ನು ಮನಗಂಡು ಈ ಟೈಟಲ್ ಕೊಟ್ಟಿದ್ದಾಗಿ ಹೇಳಿಕೊಂಡಿದ್ದಾರೆ.
"ನಮಗೆ ಯಾರಿಗೂ ಇದು ಹಳ್ಳಿಕಾರ್ ಬ್ರೀಡ್ ಅನ್ನೋದು ಗೊತ್ತಿರಲಿಲ್ಲ. ಅವರ ಬಳಿ ಹೋದ ಮೇಲೆನೇ ಇದು ಹಳ್ಳಿಕಾರ್ ಅಂತ ಹೇಳಿದ್ರು. ಇದೇ ಬ್ರೀಡ್.. ಇದನ್ನು ಉಳಿಸಬೇಕು ಅಂತ ಹೇಳಿದ್ರು. ಅದಕ್ಕೆ ನಾವು ಸಂತೋಷ್ ಅಣ್ಣನಿಗೆ ಹಳ್ಳಿಕಾರ್ ಒಡೆಯ ಅಂತ ಕೊಟ್ಟಿದ್ದು. ಯಾರ ಅಪ್ಪನಿಗೋ.. ಯಾರ ತಾತನಿಗೋ ಹಳ್ಳಿಕಾರ್ ಒಡೆಯ ಅಂತ ಕೊಡುವ ಅವಶ್ಯಕತೆ ಇರಲಿಲ್ಲ. ಇವತ್ತು ಇಡೀ ಕರ್ನಾಟಕಕ್ಕೆ ಹಳ್ಳಿಕಾರ್ ಎತ್ತು ಅಂತ ಗೊತ್ತಾಗಿದ್ದು ವರ್ತೂರು ಸಂತೋಷ್ ಅಣ್ಣನಿಂದನೇ.." ಎಂದು ಹೇಳಿಕೊಂಡಿದ್ದಾರೆ.
"ತಾಕತ್ತಿದ್ದರೆ ಕಾಡುಗುಡಿಗೆ ಬಂದು ಕೇಳಲಿ"
'ಹಳ್ಳಿಕಾರ್ ಒಡೆಯಾ' ಯಾಕೆ ಕೊಟ್ಟಿದ್ದು ಅಂತ ಕೇಳುವವರು ಕಾಡುಗುಡಿಗೆ ಬರಲಿ. ಅವರಿಗೆ ನಾವು ಉತ್ತರ ಕೊಡುತ್ತೇವೆ ಎಂದು ಸವಾಲೆಸೆದಿದ್ದಾರೆ. "ಅವನು ಯಾವನೋ.. ಅವನಿಗೆ ಯಾಕೆ ಕೊಟ್ಟೆ? ಇವನಿಗೆ ಯಾಕೆ? ಅಂತ ಕೇಳುವವರು ಯಾರೇ ಇದ್ದರೂ, ತಾಕತ್ತಿದ್ದರೆ ಕಾಡುಗುಡಿಗೆ ಬಂದು ಕೇಳಲಿ. ನಾವು ಅವರಿಗೆ ಡೈರೆಕ್ಟ್ ಆಗಿ ಉತ್ತರ ಕೊಟ್ಟುಕೊಳ್ಳುತ್ತೇವೆ." ಎಂದಿದ್ದಾರೆ.
ಹಾಗೇ "ಅವರು ನಿನಗೆ ಹಳ್ಳಿಕಾರ್ ಒಡೆಯ ಕೊಡಕೂಡದು. ಇದು ನಮ್ಮ ಜಾತಿಯವರಿಗೆ ಕೊಡಬೇಕು. ನಿಮ್ಮ ಜಾತಿಯವರಿಗೆ ಕೊಡಕೂಡದು. ನೀವು ಅದಕ್ಕೆ ಹುಟ್ಟಿದರೆ ಬಂದು ಮಾತಾಡು ಅಂತ ಹೇಳ್ತಾರಲ್ಲ. ನೋಡು ಸ್ವಾಮಿ ಇದು ಮೂಕ ಪ್ರಾಣಿ. ಈ ಮೂಕ ಪ್ರಾಣಿಯನ್ನು ಯಾರು ಬೇಕಾದರೂ ಸಾಕಬಹುದು. ಸರ್ಕಾರದಲ್ಲೇ ಈ ಹಕ್ಕು ಇದೆ. ಅವಿದ್ಯಾವಂತ ಇರಬೇಕು. ಹೋಗಿ ಬುಕ್ ಎತ್ತಿ ಓದು." ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.


Click it and Unblock the Notifications











