ಗೌತಮಿ ಗೌಡ, ಮೋಕ್ಷಿತಾ ಪೈಗೆ ಸೇಫ್ ಆಗಿದ್ದೇಗೆ? 'ಕರ್ಣ' ಧಾರಾವಾಹಿಯಲ್ಲಿ ನಟಿಸಿ ಭವ್ಯಾ ಗೌಡ ಸಿಕ್ಕಿಕೊಂಡಿದ್ದೇಕೆ?
ಜೀ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸೀರಿಯಲ್ 'ಕರ್ಣ' ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ಇದಕ್ಕೆ ಕಾರಣ ನಟಿ ಭವ್ಯಾ ಗೌಡ ಅನ್ನೋದು ಈಗ ಜಗತ್‌ಜಾಹೀರಾಗಿದೆ. ನಟಿ ಭವ್ಯಾ ಗೌಡ ಹಾಗೂ ಕಲರ್ಸ್ ಕನ್ನಡದ ನಡುವಿನ ಒಡಂಬಡಿಕೆಯನ್ನು ಮುರಿದು ಹೊರಬಂದಿದ್ದರಿಂದಲೇ ಇಷ್ಟಕ್ಕೆಲ್ಲ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಈಗಾಗಲೇ ಪ್ರಸಾರ ಆಗಬೇಕಿದ್ದ 'ಕರ್ಣ' ಧಾರಾವಾಹಿಯನ್ನು ಇನ್ನೂ ಕೆಲವು ದಿನಗಳ ಕಾಲ ಮುಂದೂಡಲಾಗಿದೆ.
ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಡುವ ವೇಳೆ ಸ್ಪರ್ಧಿಗಳ ಜೊತೆ ಅಗ್ರಿಮೆಂಟ್ ಆಗಿರುತ್ತೆ. ಶೋ ಮುಗಿದ ಆರು ತಿಂಗಳು ಕಲರ್ಸ್ ಕನ್ನಡ ಬಿಟ್ಟು ಬೇರೆ ಮನರಂಜನಾ ವಾಹಿನಿಯ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಹಾಗೇ ಕಲರ್ಸ್ ಕನ್ನಡದ ಧಾರಾವಾಹಿ ಹಾಗೂ ರಿಯಾಲಿಟಿ ಶೋನಲ್ಲಿ ಭಾಗವಹಿಸಬೇಕೆಂದು ಸ್ಪರ್ಧಿಗಳ ಜೊತೆ ಒಡಂಬಡಿಕೆ ಆಗಿರುತ್ತೆ. ಇದನ್ನು ನಟಿ ಭವ್ಯಾ ಗೌಡ ಮುರಿದಿದ್ದಾರೆಂಬ ಆರೋಪವಿದೆ.

ಈ ಸುದ್ದಿ ಹೊರ ಬೀಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲೊಂದು ಚರ್ಚೆ ಶುರುವಾಗಿದೆ. ಗೌತಮಿ ಜಾದವ್ ಬೇರೊಂದು ಮನರಂಜನಾ ವಾಹಿನಿಗೆ ಹೊಸ ಸೀರಿಯಲ್ ಒಪ್ಪಿಕೊಂಡಿದ್ದಾರೆ. ಇನ್ನೊಂದು ಕಡೆ ಮೋಕ್ಷಿತಾ ಪೈ ಜೀ 5ಗೆ ವೆಬ್ ಸೀರಿಸ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಒಂದು ತಿಂಗಳಿಂದ ಒಡಾಡುತ್ತಿದೆ. ಹೀಗಿರುವಾಗ ಕೇವಲ ಭವ್ಯಾ ಗೌಡ ಅವರೇ ಯಾಕೆ? ಅವರ ಮೇಲೆ ಕಲರ್ಸ ಕನ್ನಡ ಕಾನೂನು ಸಮರ ಸಾರಿದ್ದರ ಹಿನ್ನೆಲೆ ಏನು? ಎಂದು ಚರ್ಚೆ ಮಾಡಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಗೌತಮಿ ಜಾದವ್ ಹೊಸ ಸೀರಿಯಲ್ ಬಗ್ಗೆ ಚರ್ಚೆಯಾಗುತ್ತಿದೆ. ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಬಳಿಕ ಗೌತಮಿ ಜಾದವ್ ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿ 'ಸೇವಂತಿ'ಯಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಗೌತಮಿ ಈ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೂ ಕಿರುತೆರೆ ವಲಯದಲ್ಲಿ ಈ ಸುದ್ದಿ ದೊಡ್ಡ ಸುದ್ದಿಯನ್ನೇ ಮಾಡುತ್ತಿದೆ. ಇದನ್ನೇ ಇಟ್ಟುಕೊಂಡು ಗೌತಮಿ ಜಾದವ್ ಅವರಿಗೆ ಹೇಗೆ ಒಪ್ಪಿಗೆ ಸಿಕ್ಕಿತು ಎಂದೂ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಇನ್ನೊಂದು ಕಡೆ ಮೋಕ್ಷಿತಾ ಪೈ ಕೂಡ ಜೀ 5ಗಾಗಿ ವೆಬ್ ಸೀರಿಸ್ ಒಂದರಲ್ಲಿ ನಟಿಸುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ವಿನಯ್ ಗೌಡ ಹಾಗೂ ಮೋಕ್ಷಿತಾ ಪೈ ಈ ಕನ್ನಡ ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆನೂ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ, ನೆಟ್ಟಿಗರಿಗೆ ಮೋಕ್ಷಿತಾ ಪೈ ವಿರುದ್ಧ ಯಾಕೆ ಸಮರ ಸಾರಿಲ್ಲ ಎಂದು ಇನ್ನೊಂದು ಕಡೆ ಚರ್ಚೆ.

ಈ ಚರ್ಚೆಯ ಬೆನ್ನೆಲ್ಲೇ ಕಿರುತೆರೆಯ ಮೂಲಗಳು ಸೂಕ್ತ ಕಾರಣಗಳನ್ನು ನೀಡಿವೆ. ಗೌತಮಿ ಜಾದವ್ ಈಗಾಗಲೇ ಬಿಗ್ ಬಾಸ್ ಅಗ್ರಿಮೆಂಟ್‌ನಂತೆ ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲದೆ, ಅದೇ ಚಾನೆಲ್‌ನಲ್ಲಿ ಪ್ರಸಾರ ಆಗುತ್ತಿರುವ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲಿ ವಿಶೇಷ ಪಾತ್ರದಲ್ಲಿ ಕೆಲವು ದಿನಗಳು ಕಾಣಿಸಿಕೊಂಡಿದ್ದರು. ಜೊತೆಗೆ ಗೌತಮಿ ಜಾದವ್ ಒಪ್ಪಿಕೊಂಡಿರುವ ಸೀರಿಯಲ್ ಪ್ರಸಾರ ಆಗುವ ವೇಳೆಗೆ ಅವರ ಅಗ್ರಿಮೆಂಟ್ ಮುಗಿದಿರುತ್ತೆ. ಹೀಗಾಗಿ ಅವರಿಗೆ ಯಾವುದೇ ಸಮಸ್ಯೆ ಆಗಲಿಲ್ಲ ಎನ್ನುತ್ತಾರೆ.
ಇನ್ನು ಮೋಕ್ಷಿತಾ ಪೈ ಕೂಡ ಬೇರೆ ಮನರಂಜನಾ ವಾಹಿನಿಯ ಸೀರಿಯಲ್, ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿಲ್ಲ. ಅವರು ವೆಬ್ ಸೀರಿಸ್ ಮಾಡುತ್ತಿದ್ದು, ಇದು ಅಗ್ರಿಮೆಂಟ್‌ನ ಭಾಗವಾಗಿರುವುದಿಲ್ಲ. ಹೀಗಾಗಿ ಅವರಿಗೂ ಏನೂ ಸಮಸ್ಯೆ ಆಗಿಲ್ಲ. ಐಶ್ವರ್ಯಾ ಸಿಂಧೋಗಿ ಸ್ವಾರ್ ಸುವರ್ಣ ಸೀರಿಯಲ್‌ನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣ ಹಾಗೂ ಕಲರ್ಸ್ ಕನ್ನಡ ಎರಡೂ ಒಂದೇ ಸಂಸ್ಥೆಗೆ ಸೇರಿದ್ದರಿಂದ ಯಾವುದೇ ಸಮಸ್ಯೆ ಆಗಿಲ್ಲ ಎನ್ನುತ್ತಾರೆ.
ಆದರೆ, ಭವ್ಯಾ ಗೌಡಗೆ ತಮ್ಮ ಅಗ್ರಿಮೆಂಟ್ ಮುಗಿಯುವ ಮುನ್ನವೇ ತಮ್ಮ ಕಾಂಪಿಟೇಟರ್ ವಾಹಿನಿಯ ಧಾರಾವಾಹಿಯಲ್ಲಿ ನಟಿಸಿದ್ದು, ಅದು ಪ್ರಸಾರಕ್ಕೂ ರೆಡಿಯಾಗಿತ್ತು. ಹೀಗಾಗಿ ಭವ್ಯಾ ಗೌಡ ವಿರುದ್ಧ ವಾಹಿನಿ ಕಾನೂನು ಸಮರ ಸಾರಿದೆ ಎಂದು ಕಿರುತೆರೆಯ ಮಂದಿ ಕಾರಣಗಳನ್ನು ಕೊಡುತ್ತಾರೆ. ಸದ್ಯ 'ಕರ್ಣ' ಸೀರಿಯಲ್ ಪ್ರಸಾರ ಆಗುವುದು ಪೋಸ್ಟ್‌ಪೋನ್ ಆಗಿದ್ದು, ಜುಲೈ ಮೂರನೇ ವಾರಕ್ಕೆ ಅಗ್ರಿಮೆಂಟ್ ಮುಗಿಯಲಿದೆ. ಆ ನಂತರ ಸೀರಿಯಲ್ ಪ್ರಸಾರ ಆಗಬಹುದೆಂದು ಹೇಳಲಾಗುತ್ತಿದೆ.


Click it and Unblock the Notifications











