Drama Juniors Season 4: ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ಡ್ರಾಮ ಜೂನಿಯರ್ಸ್ ರೆಡಿ: ಮುಹೂರ್ತ ಯಾವಾಗ?
'ಡ್ರಾಮ ಜೂನಿಯರ್ಸ್' ರಿಯಾಲಿಟಿ ಶೋ ಮತ್ತೆ ಆರಂಭ ಆಗುತ್ತಿದೆ. ಮೂರು ವರ್ಷಗಳ ಹಿಂದೆ ಡ್ರಾಮ ಜೂನಿಯರ್ಸ್ ಶೋಗೆ ಬ್ರೇಕ್ ಹಾಕಲಾಗಿತ್ತು. ಕೊರೊನಾ ಹಾವಳಿಯಿಂದ ಈ ಶೋ ನಡೆದಿರಲಿಲ್ಲ. ಈಗ ಡ್ರಾಮ ಜೂನಿಯರ್ಸ್ ಮತ್ತೆ ಆರಂಭ ಆಗುತ್ತಿದೆ. ಲಾಕ್‌ಡೌನ್ ಬಳಿಕ ಕಿಲಾಡಿ ಮಕ್ಕಳ ಕಾಮಿಡಿ ಕಾರ್ಯಕ್ರಮಕ್ಕೆ ವಿನೂತನವಾಗಿ ಚಾಲನೆ ನೀಡಲು ಜೀ ಕನ್ನಡ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ.
ವೀಕೆಂಡ್ ವಿಥ್ ರಮೇಶ್, ಕಾಮಿಡಿ ಕಿಲಾಡಿಗಳು, ಸರಿಗಮಪದಂತಹ ರಿಯಾಲಿಟಿ ಶೋಗಳು ಜೀ ಕನ್ನಡದಲ್ಲಿ ಯಶಸ್ವಿಯಾಗಿವೆ. ಮೂರು ವರ್ಷಗಳ ಹಿಂದೆ ಪ್ರಸಾರ ಆಗಿದ್ದ ಡ್ರಾಮ ಜೂನಿಯರ್ಸ್ ಸೀಸನ್ 3 ಕೂಡ ಸಕ್ಸಸ್ ಆಗಿತ್ತು. ಮಕ್ಕಳು ಬಣ್ಣ ಹಚ್ಚಿ ವೇಷ ತೊಟ್ಟು ವೇದಿಕೆ ಮೇಲೆ ಡೈಲಾಗ್ ಬಿಡುವುದನ್ನು ನೋಡಲು ಕಿರುತೆರೆ ವೀಕ್ಷಕರು ಕಾತುರರಾಗಿದ್ದರು. ಇನ್ನೊಂದು ಕಡೆ ಪುಟಾಣಿ ಕಲಾವಿದರು ಕೂಡ ತಮ್ಮ ಪ್ರತಿಭೆ ತೋರಿಸಲು ತವಕಿಸುತ್ತಿದ್ದರು. ಅದಕ್ಕೀಗ ವೇದಿಕೆ ಸಜ್ಜಾಗಿದೆ.
'ಡ್ರಾಮಾ ಜೂನಿಯರ್ಸ್' ಅನ್ನು ಪ್ರೇಕ್ಷಕರು ಇಷ್ಟಪಡಲು ಹಲವು ಕಾರಣಗಳಿವೆ. ಕರ್ನಾಟಕದ ಸೊಗಡು, ಸಾಧಕರ ಯಶೋಗಾಥೆಯನ್ನು ತೆರೆಮೇಲೆ ತರಲಿದೆ. ಕನ್ನಡ ಸಾಹಿತ್ಯ ಲೋಕದ ಸುಪ್ರಸಿದ್ಧ ಸಾಹಿತಿಗಳ ಗದ್ಯಗಳು, ಸಣ್ಣ ಕಥೆಗಳನ್ನು ಡ್ರಾಮ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಅಳವಡಿಸಿಕೊಳ್ಳಲಾಗುತ್ತೆ. ಕನ್ನಡದ ನೆಟಿವಿಟಿಗೆ ತಕ್ಕಂತೆ ನಾಟಕಗಳನ್ನು ಸಿದ್ಧಪಡಿಸಿ, ಅದನ್ನು ಮಕ್ಕಳು ಪ್ರತಿನಿಧಿಸಲಿದ್ದಾರೆ. ಇದೇ 'ಡ್ರಾಮ ಸೀನಿಯರ್ಸ್ ಸೀಸನ್ 4' ಮಾರ್ಚ್ 19ರಂದು ಅಧಿಕೃತವಾಗಿ ಚಾಲನೆ ಸಿಗಲಿದೆ.

ಡ್ರಾಮ ಜೂನಿಯರ್ಸ್‌ಗೆ ಮೆಗಾ ಆಡಿಷನ್
ಡ್ರಾಮ ಜೂನಿಯರ್ಸ್ ಸೀಸನ್ 4 ಮತ್ತೆ ಆರಂಭ ಮಾಡಲು ಜೀ ಕನ್ನಡ ಕಳೆದ ಹಲವು ವರ್ಷಗಳಿಂದ ಪ್ರಯತ್ನ ಪಟ್ಟಿದೆ. ಆದರೆ, ಕೊರೊನಾದಿಂದ ಇದು ಸಾಧ್ಯವಾಗಿರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಜೀ಼ಕನ್ನಡ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಮೆಗಾ ಆಡಿಷನ್ ಮಾಡಿತ್ತು. 15ಸಾವಿರಕ್ಕೂ ಅಧಿಕ ಮಕ್ಕಳು ಈ ಆಡಿಷನ್ಸ್ ನಲ್ಲಿ ಭಾಗವಹಿಸಿದ್ದು, ಪ್ರತಿಭಾವಂತ ಮಕ್ಕಳನ್ನು ಹುಡುಕಿ ಕರೆದುಕೊಂಡು ಬರಲಾಗಿದೆ. ಆಯ್ಕೆಯಾದ ಎಲ್ಲಾ ಮಕ್ಕಳು ಇದೇ ಮಾರ್ಚ್ 19ರಂದು ಸಂಜೆ 7.30 ಕ್ಕೆ ಡ್ರಾಮಾ ಜೂನಿಯರ್ಸ್ ವೇದಿಕೆ ಮೇಲೆ ಭರ್ಜರಿ ಪರ್ಫಾಮೆನ್ಸ್ ನೀಡಲಿದ್ದಾರೆ.

ಡ್ರಾಮ ಜೂನಿಯರ್ಸ್‌ಗೆ ಮೂವರು ಗೆಸ್ಟ್
'ಡ್ರಾಮ ಜೂನಿಯರ್ಸ್ ಸೀಸನ್ 4'ನಲ್ಲಿ ಸಾಕಷ್ಟು ವಿಶೇಷತೆಗಳಿವೆ. ಈ ಬಾರಿ ಜಡ್ಜ್ ಕೂಡ ಬದಲಾಗಿದ್ದಾರೆ. ಹಿಂದಿನ ಸಂಚೆಕೆಗೆ ಹೋಲಿಸಿದರೆ, ಈ ಬಾರಿ ಇಬ್ಬರು ಜಡ್ಜ್ ಬದಲಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿಯಾಗಿದೆ. ಡಿಂಪಲ್ ಕ್ವೀನ್ ರಚಿತಾ ರಾಮ್ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹಿಂದಿನ ಮೂರು ಸಂಚಿಕೆಗಳಿಗೆ ತೀರ್ಪುಗಾರರಾಗಿದ್ದ ಜನಪ್ರಿಯ ನಟಿ ಜೂಲಿ ಲಕ್ಷ್ಮಿ ಈ ಸೀಸನ್‌ನಲ್ಲೂ ಮುಂದುವರೆದಿದ್ದಾರೆ.

10 ವರ್ಷದ ಬಳಿಕ ರಚಿತಾ ರಾಮ್
ರಚಿತಾ ರಾಮ್ ದಶಕಗಳ ಹಿಂದೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಸಿನಿಮಾದಲ್ಲಿ ನಟಿಸಲು ಆರಂಭಿಸಿದ್ದರಿಂದ ಜೀ ಕನ್ನಡದ ಯಾವುದೇ ಕಾರ್ಯಕ್ರಮದಲ್ಲೂ ಕಾಣಿಸಿಕೊಂಡಿರಲಿಲ್ಲ. ಈಗ 10 ವರ್ಷಗಳ ಬಳಿಕ ಜೀ ಕುಟುಂಬದ ಅರಸಿ ಡಿಂಪಲ್ ಕ್ವೀನ್ ರಚಿತಾರಾಮ್ ಬಂದಿದ್ದಾರೆ. ರವಿಚಂದ್ರನ್ ಹಾಗೂ ಜೂಲಿ ಲಕ್ಷ್ಮಿ ಜೊತೆ ಮತ್ತೊಬ್ಬ ತೀರ್ಪುಗಾರರಾಗಿ
ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕಾರ್ಯಕ್ರಮದ ಪ್ರೊಮೋ ಜನಪ್ರಿಯತೆಯನ್ನು ಪಡೆದುಕೊಂಡಿದೆ.

ಪ್ರೋಮೊಗಳಿಗೆ ಭಾರಿ ಜನಮನ್ನಣೆ
ಡ್ರಾಮ ಜೂನಿಯರ್ಸ್ ಸೀಸನ್ 4 ಕಾರ್ಯಕ್ರಮದ ಪ್ರೋಮೊಗಳು ಜನರಿಗೆ ಕಿಕ್ ಕೊಟ್ಟಿತ್ತು. ರವಿಚಂದ್ರನ್, ರಚಿತಾ ರಾಮ್ ಕಿಡ್ನಾಪ್ ಮಾಡುವ ಪ್ರೋಮೊ ವೈರಲ್ ಆಗಿತ್ತು. ಈಗ ಸಖತ್ ಕಲರ್‌ಪುಲ್ ಆಗಿರುವ ಜಡ್ಜ್‌ಗಳ ಎಂಟ್ರಿ ಪ್ರೋಮೊ ರಿಲೀಸ್ ಆಗಿದೆ. ಕ್ರೇಜಿಸ್ಟಾರ್ , ಡಿಂಪಲ್ ಕ್ವೀನ್ ಹಾಗೂ ಜೂಲಿ ಲಕ್ಷ್ಮಿಯಂತಹ ದಿಗ್ಗಜರ ಸಮ್ಮುಖದಲ್ಲಿ ಚಿಣ್ಣರ ಪರ್ಫಾಮೆನ್ಸ್ ಹೇಗಿರುತ್ತೆ ಎನ್ನುವುದನ್ನು ನೋಡಲು ಜನರು ಕುತೂಹಲದಿಂದ ಕಾದು ಕೂತಿದ್ದಾರೆ.


Click it and Unblock the Notifications











