ಜೀ ಕನ್ನಡದಲ್ಲಿ ಹೊಸ ಧಾರಾವಾಹಿ 'ಅಣ್ಣಯ್ಯ': ಕಥೆಯೇನು? ಯಾವಾಗ ಪ್ರಸಾರ?
ಎರಡು ಮೂರು ವರ್ಷಗಳಿಂದ ಪ್ರಸಾರ ಆಗುತ್ತಿರುವ ಧಾರಾವಾಹಿಗಳು ತೆರೆಮರೆಗೆ ಸರಿಯುತ್ತಿವೆ. ಇತ್ತೀಚೆಗಷ್ಟೇ 'ಸತ್ಯ' ಧಾರಾವಾಹಿ ಅಂತ್ಯ ಕಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಹೊಸ ಧಾರಾವಾಹಿ ಪ್ರಸಾರಕ್ಕೆ ರೆಡಿಯಾಗಿ ನಿಂತಿದೆ ಅದುವೇ 'ಅಣ್ಣಯ್ಯ'. ಜೀ ಕನ್ನಡದಲ್ಲಿ ಈ ಧಾರಾವಾಹಿ ಪ್ರಸಾರ ಆಗಲಿದ್ದು, ಕೆಲವು ದಿನಗಳಿಂದ ಭರ್ಜರಿ ಪ್ರಚಾರ ಆರಂಭಿಸಿತ್ತು.
ಈ ಹೊಚ್ಚ ಹೊಸ ಧಾರಾವಾಹಿಯ ತಾರಾಬಳಗ ಕೂಡ ದೊಡ್ಡದಿದೆ. 'ಗಟ್ಟಿಮೇಳ' ಧಾರಾವಾಹಿಯ ನಾಯಕಿ ನಿಶಾ ರವಿಕೃಷ್ಣನ್ ಮತ್ತೆ 'ಅಣ್ಣಯ್ಯ' ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಹಾಗೇ ನಾಗೇಂದ್ರ ಶಾ, ವಿಕಾಶ್ ಉತ್ತಯ್ಯ ಸೇರಿದಂತೆ ಹಲವು ಮಂದಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ಆಗಸ್ಟ್ 12ರಿಂದ ಈ ಹೊಸ ಧಾರಾವಾಹಿ 'ಅಣ್ಣಯ್ಯ' ಪ್ರಸಾರ ಆಗಲಿದೆ. ವಿಶೇಷ ಅಂದರೆ, ಶೆಟ್ಟರ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿರುವ ಪ್ರಮೋದ್ ಶೆಟ್ಟಿ ಈ ಹೊಸ ಸೀರಿಯಲ್ ಅನ್ನು ನಿರ್ಮಾಣ ಮಾಡಿದ್ದಾರೆ. ಪ್ರಮೋದ್ ಶೆಟ್ಟಿ ಮತ್ತು ಸುಪ್ರೀತಾ ಶೆಟ್ಟಿಯ ಶಿವೆ ಸ್ಟುಡಿಯೋಸ್ ನಿರ್ಮಾಣ ಸಂಸ್ಥೆ ಮೂಲಕ ಈ ಧಾರಾವಾಹಿ ನಿರ್ಮಾಣ ಆಗಿದೆ.
ಅಂದ್ಹಾಗೆ 'ಅಣ್ಣಯ್ಯ' ಕಥೆ ಕೂಡ ಅಷ್ಟೇ ಇಂಟ್ರೆಸ್ಟಿಂಗ್ ಆಗಿದೆ. ನಾಲ್ಕು ಜನ ತಂಗಿಯರಿಗೆ ತಾಯಿಯ ಮಮತೆ ತೋರುತ್ತಾನೆ. ತಂಗಿಯಂದಿರ ಓದು- ಮದುವೆಯ ಕನಸು ಕಾಣುತ್ತಾನೆ. ಕಿರಾಣಿ ಅಂಗಡಿಯ ಕೆಲಸ ಮಾಡುತ್ತಲೇ ನಗುನಗುತಾ ಬದುಕುತ್ತಿರುತ್ತಾನೆ ಈ ಅಣ್ಣಯ್ಯ. ಅಂದ್ಹಾಗೆ ಈತ ಮಾಕಾಳಮ್ಮನ ಪರಮ ಭಕ್ತ. ಅಣ್ಣಯ್ಯನಿಗೆ ಊರ ಜಾತ್ರೆಯಲ್ಲಿ ಬರುವ ದೇವಿಯ ಆವೇಶ, ಹಳ್ಳಿಯ ರಾಜಕೀಯ, ಹಬ್ಬದ ಸಂಭ್ರಮ ಎಲ್ಲವೂ ಇಷ್ಟ. ಇದನ್ನು ಅದ್ಧೂರಿಯಾಗಿ ತೋರಿಸಿದ್ದಾರೆ.
ಇನ್ನು ಕಷ್ಟವನ್ನೆಲ್ಲ ನುಂಗಿಕೊಂಡು ನಗು ಹಂಚುತ್ತಿರುವ ಶಿವಣ್ಣನ ಕುಟುಂಬ ಒಂದ್ಕಡೆ, ಅದೇ ಇನ್ನೊಂದು ವಿಷಕಾರೋ ವೀರಭದ್ರನ ಮನೆತನ. ವೀರಭದ್ರನ ಮೊದಲನೇ ಪತ್ನಿ ಸೌಭಾಗ್ಯಳ ಮಗಳೇ ಪಾರ್ವತಿಯೇ ಅಣ್ಣಯ್ಯನ ಮನಸು ಗೆದ್ದಿದ್ದಾಳೆ. ಅಂದ್ಹಾಗೆ ಪಾರ್ವತಿ ಡಾಕ್ಟರ್. ಇನ್ನೂ ಉತ್ತಮ ಶಿಕ್ಷಣ ಪಡೆದಿರುವ ಪಾರ್ವತಿ, ಏನೂ ಓದಿಲ್ಲದ ಶಿವನ ಕೈ ಹಿಡೀತಾಳಾ? ವೀರಭದ್ರ ಈ ಸಂಬಂಧಕ್ಕೆ ಒಪ್ಪುತ್ತಾನಾ? ತಂಗಿಯರನ್ನು ಓದಿಸಿ, ಮದುವೆ ಮಾಡ್ಬೇಕು ಅನ್ನುವ ಅಣ್ಣಯ್ಯನ ಕನಸು ಈಡೇರುತ್ತಾ? ಈ ಎಲ್ಲಾ ಪ್ರಶ್ನೆಗಳಿಗೆ ನಾಳೆಯಿಂದ (ಆಗಸ್ಟ್ 12) ಧಾರಾವಾಹಿಯಲ್ಲಿ ಉತ್ತರ ಸಿಗಲಿದೆ.

ಮೈಸೂರು ಕಡೆಯ ಸೊಗಡು, ಹಳ್ಳಿಯ ಹುಡುಗರ ಕಾಮಿಡಿ ಈ ಧಾರಾವಾಹಿಯಲ್ಲಿ ನೋಡುವುದಕ್ಕೆ ಸಿಗುತ್ತೆ. 'ಪಾರು' ಧಾರಾವಾಹಿಯ ಹನುಮಂತು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಾಗೇಂದ್ರ ಶಾ ಇಲ್ಲಿ ವಿಶಿಷ್ಟ ಅವತಾರ ತಾಳಿದ್ದಾರೆ. 'ಗಟ್ಟಿಮೇಳ' ಧಾರಾವಾಹಿಯ ಅಮೂಲ್ಯ ಪಾತ್ರದಲ್ಲಿ ಮಿಂಚಿದ್ದ ನಿಶಾ ರವಿಕೃಷ್ಣನ್ ಡಾಕ್ಟರ್ ಪಾರ್ವತಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.
'ಅಣ್ಣಯ್ಯ' ಧಾರಾವಾಹಿಯಲ್ಲಿ ರಂಗಭೂಮಿ ಹಿನ್ನೆಲೆಯ ಅನುಭವಿ ಕಲಾವಿದರ ದೊಡ್ಡ ತಂಡವೇ ಇದೆ. ಶಿವಣ್ಣ- ಪಾರ್ವತಿ ಮತ್ತು ನಾಲ್ಕು ತಂಗಿಯರ ಕಥೆ ನಾಳೆಯಿಂದ (ಆಗಸ್ಟ್ 12) ರಾತ್ರಿ 7.30 ಕ್ಕೆ ಪ್ರಸಾರಗೊಳ್ಳಲಿದೆ. 7.30 ಕ್ಕೆ ಪ್ರಸಾರವಾಗುತ್ತಿದ್ದ 'ಪುಟ್ಟಕ್ಕನ ಮಕ್ಕಳು' ಇನ್ಮುಂದೆ ಸಂಜೆ 6.30 ಕ್ಕೆ ಹಾಗೂ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.


Click it and Unblock the Notifications











