ಎರಡು ಮೆಗಾ ಧಾರಾವಾಹಿಗೆ ಕೈ ಹಾಕಿದ ಜೀ ಕನ್ನಡ: ಮೆಗಾ ಬಜೆಟ್‌ನಲ್ಲಿ ಮತ್ತೆ 'ರಾಘವೇಂದ್ರ ವೈಭವ', 'ನಾಗಿಣಿ 3'?
ಕನ್ನಡದ ಕಿರುತೆರೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಮನರಂಜನಾ ವಾಹಿನಿ ಜೀ ಕನ್ನಡ. ಆಗಾಗ ಹೊಚ್ಚ ಹೊಸ ಧಾರಾವಾಹಿಗಳನ್ನು ಕಿರುತೆರೆ ವೀಕ್ಷಕರಿಗೆ ಪರಿಚಯ ಮಾಡುತ್ತಲೇ ಇರುತ್ತೆ. ಈಗಾಗಲೇ 'ಸೀತಾ ರಾಮ', 'ಅಮೃತಧಾರೆ' ಅಂತಹ ಹೊಸ ಧಾರಾವಾಹಿಗಳು ಕಿರುತೆರೆ ವೀಕ್ಷಕರನ್ನು ಸೆಳೆದಿಟ್ಟಿದೆ.
ಈ ಯಶಸ್ಸಿನ ಬೆನ್ನಲ್ಲೇ ಜೀ ಕನ್ನಡ ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಎರಡು ಮೆಗಾ ಧಾರಾವಾಹಿಗಳನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಕಿರುತೆರೆ ವಲಯದಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಆ ಎರಡು ಧಾರಾವಾಹಿಗಳನ್ನು ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಮಾಡಲಾಗುತ್ತೆ ಅನ್ನೋ ಸುದ್ದಿ.

ಮತ್ತೆ 'ಗುರು ರಾಘವೇಂದ್ರ ವೈಭವ'
ಕಿರುತೆರೆಯಲ್ಲಿ ಭಕ್ತಿ ಪ್ರಧಾನ ಧಾರಾವಾಹಿಗಳಿಗೆ ಹೆಚ್ಚು ಬೇಡಿಕೆ ಇದೆ. ವೀಕ್ಷಕರು ಭಕ್ತಿ ಪ್ರಧಾನ ಧಾರಾವಾಹಿಗಳನ್ನು ಕೈಬಿಟ್ಟಿಲ್ಲ. ಹೀಗಾಗಿ ಜೀ ಕನ್ನಡದಲ್ಲಿ ರಾಘವೇಂದ್ರ ರಾಯರ ಕಥೆಯನ್ನು ಕಿರುತೆರೆಗೆ ತರುವುದಕ್ಕೆ ಸಕಲ ಸಿದ್ಧತೆಗಳೂ ಆರಂಭವಾಗಿ ಎಂದು ಬಲ್ಲಮೂಲಗಳು ಫಿಲ್ಮಿಬೀಟ್‌ಗೆ ತಿಳಿಸಿವೆ. ಈಗಾಗಲೇ ರಾಘವೇಂದ್ರ ರಾಯರ ಮಹಿಮೆಯನ್ನು ಸಾರುವ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಿತ್ತು. ಅದಕ್ಕೆ ವೀಕ್ಷಕರಿಂದ ಮೆಚ್ಚುಗೆ ಕೂಡ ಸಿಕ್ಕಿತ್ತು.
ರಾಯರ ಭಕ್ತ ರಾಘವೇಂದ್ರ ಹುಣಸೂರು
ಇಂದಿನ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ರಾಘವೇಂದ್ರ ರಾಯರ ಮಹಿಮೆಯನ್ನು ಕಿರುತೆರೆಗೆ ತರಲಾಗುತ್ತಿದೆ. ಹೀಗಾಗಿ ಮೆಗಾ ಬಜೆಟ್‌ನಲ್ಲಿಯೇ ಧಾರಾವಾಹಿಯನ್ನು ನಿರ್ಮಾಣ ಮಾಡಲಾಗುತ್ತೆ ಎನ್ನಲಾಗಿದೆ. ಅಲ್ಲದೆ ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಕೂಡ ರಾಘವೇಂದ್ರ ರಾಯರ ಭಕ್ತ. ಎರಡು ವರ್ಷಗಳ ಹಿಂದೆ ಮಂತ್ರಾಲಯಕ್ಕೆ ಹೋಗಿದ್ದಾರೆ. ರಾಯರ ಕುರಿತಾದ ಧಾರಾವಾಹಿಯನ್ನು ಮಾಡುತ್ತೇನೆ ಎಂದು ಹೇಳಿ ಬಂದಿದ್ದರಂತೆ. ಆ ಮಾತನ್ನು ನೇರವೇರಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

'ನಾಗಿಣಿ 3' ಶೀಘ್ರದಲ್ಲಿಯೇ ಆರಂಭ
ಭಾರತೀಯ ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದ ಹಿಂದಿಯ 'ನಾಗಿನ್' ಕನ್ನಡಕ್ಕೆ ನಾಗಿಣಿಯಾಗಿ ರಿಮೇಕ್ ಆಗಿತ್ತು. 2016ರಲ್ಲಿ 'ನಾಗಿಣಿ' ಧಾರಾವಾಹಿ ಕನ್ನಡದಲ್ಲಿ ಆರಂಭಗೊಂಡಿತ್ತು. ಕನ್ನಡದಲ್ಲೂ ಯಶಸ್ಸುಗೊಂಡ ಬಳಿಕ 2020ಯಲ್ಲಿ 'ನಾಗಿಣಿ 2' ಆರಂಭಗೊಂಡಿತ್ತು. ಈ ಧಾರಾವಾಹಿ ಕೂಡ ಕನ್ನಡ ಕಿರುತೆರೆ ವೀಕ್ಷಕರಿಗೆ ಇಷ್ಟ ಆಗಿತ್ತು. ಈ ಜನಪ್ರಿಯತೆಯನ್ನು ಮನಗಂಡಿರೋ ಜೀ ಕನ್ನಡ 'ನಾಗಿಣಿ 3'ಗೆ ನಿರ್ಮಾಣಕ್ಕೆ ಮುಂದಾಗಿದೆ.
'ನಾಗಿಣಿ 3'ಯಲ್ಲಿ ಹೊಸ ತಂಡ
'ನಾಗಿಣಿ 3' ಕೂಡ ಬಿಗ್ ಬಜೆಟ್ ಹಾಗೂ ಇಂದಿನ ತಂತ್ರಜ್ಞಾನವನ್ನು ಬಳಸಿ ನಿರ್ಮಾಣ ಮಾಡಲಾಗುತ್ತದೆ. ಆದರೆ, ಈ ಹಿಂದೆ 'ನಾಗಿಣಿ' ಸರಣಿಯಲ್ಲಿ ನಟಿಸಿದ ಯಾವುದೇ ಕಲಾವಿದರು ಇರುವುದಿಲ್ಲ. ಹೊಸಬರನ್ನೇ ನಾಗಿಣಿ 3ಗೆ ಕರೆದುಕೊಂಡು ಬರಲಾಗುತ್ತೆ ಎಂಬುದು ಸದ್ಯಕ್ಕಿರೋ ಮಾಹಿತಿ. ಮನರಂಜನಾ ವಾಹಿನಿಗಳ ನಡುವಿನ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಲು ರಾಘವೇಂದ್ರ ರಾಯರ ಕುರಿತ ಧಾರಾವಾಹಿ ಹಾಗೂ 'ನಾಗಿಣಿ 3'ಯನ್ನು ಅಸ್ತ್ರವಾಗಿ ಬಿಡಲಿದೆ ಜೀ ಕನ್ನಡ.


Click it and Unblock the Notifications