ಒಂದ್ಕಡೆ ಭರ್ಜರಿ ಬ್ಯಾಚುಲರ್ಸ್ 2ಗೆ ಫಿನಾಲೆ.. ಇನ್ನೊಂದು 'ನಾವು ನಮ್ಮವರು' ಹೊಸ ಶೋ ಶುರು
ವೀಕೆಂಡ್‌ನಲ್ಲಿ ರಿಯಾಲಿಟಿ ಶೋ ಇರದೇ ಹೋದರೇ ಕಿರುತೆರೆಗೆ ಒಂದು ಕಳೆನೇ ಇರೋದಿಲ್ಲ. ಹೀಗಾಗಿ ಮನರಂಜನಾ ವಾಹಿನಿಗಳು ರಿಯಾಲಿಟಿ ಶೋಗಳನ್ನು ರೆಡಿ ಮಾಡಿಟ್ಟುಕೊಳ್ಳುತ್ತದೆ. ಈಗ ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ 'ಭರ್ಜರಿ ಬ್ಯಾಚುಲರ್ಸ್ 2' ಕೊನೆಯ ಹಂತ ತಲುಪಿದೆ. ಈ ವಾರ ಮತ್ತೊಂದು ಸೀಸನ್ ಅನ್ನು ಯಶಸ್ವಿಯಾಗಿ ಮುಗಿಸುತ್ತಿದೆ.
ಜೀ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ರಿಯಾಲಿಟಿ ಶೋಗಳು ಬಂದಿವೆ. 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್', 'ಸ ರಿ ಗ ಮ ಪ', 'ವೀಕೆಂಡ್ ವಿತ್ ರಮೇಶ್', 'ಡ್ರಾಮಾ ಜೂನಿಯರ್ಸ್' ಮತ್ತು 'ಕಾಮಿಡಿ ಕಿಲಾಡಿಗಳು' ಸೇರಿ ಹಲವಾರು ಶೋಗಳ ಮೂಲಕ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿವೆ. ಈ ಸಾಲಿಗೀಗ 'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಕೂಡ ಸೇರ್ಪಡೆಯಾಗಿದೆ.

'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಯುವಕರ ಜೀವನದ ಪ್ರಮುಖ ಮೈಲಿಗಲ್ಲು ಮದುವೆ. ಈ ಸುಂದರ ಘಳಿಗೆಗೆ ತಯಾರಿ ನಡೆಸುತ್ತಿರುವ ಯುವ ಬ್ಯಾಚುಲರ್‌ಗಳ ಜೀವನ ಮತ್ತು ವ್ಯಕ್ತಿತ್ವಗಳ ಮೇಲೆ ಈ ರಿಯಾಲಿಟಿ ಶೋ ಅನ್ನು ಕೇಂದ್ರೀಕರಿಸಲಾಗಿತ್ತು. ಟಾಸ್ಕ್‌ಗಳ ಜೊತೆಗೆ ಹಾಸ್ಯದ ಸನ್ನಿವೇಶಗಳ ಮೂಲಕ ವೀಕ್ಷಕರನ್ನು ತಲುಪುವುದು ಈ ಶೋನ ಪ್ರಮುಖ ಉದ್ದೇಶವಾಗಿತ್ತು.
ಎರಡನೇ ಸೀಸನ್‌ನಲ್ಲಿ ಹೊಸ ಬ್ಯಾಚುಲರ್‌ಗಳನ್ನು ಜೀ ಕನ್ನಡ ಪರಿಚಯಿಸಿತ್ತು. ಅವರು ತಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸ್ವಾಭಾವಿಕತೆ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಮಾಡಲಾಗಿದ್ದ ಅನೇಕ ಟಾಸ್ಕ್‌ಗಳಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದರು. ಇನ್ನು ಈ ಸೀಸನ್‌ನಲ್ಲಿ 'ಬ್ರಹ್ಮಚಾರಿ vs ಸಂಸಾರಿ', 'ಡೆಡಿಕೇಶನ್ ರೌಂಡ್', 'ಕಂಪ್ಯಾಟಿಬಿಲಿಟಿ ರೌಂಡ್', 'ಪ್ರೊಪೋಸ್ ರೌಂಡ್', 'ಸೀನಿಯರ್ಸ್ vs ಜೂನಿಯರ್ಸ್' ಹೀಗೆ ವಿಭಿನ್ನ ಸುತ್ತುಗಳು ಇದ್ದವು. ಇದರಲ್ಲಿ 'ಏಂಜೆಲ್ಸ್ ಮತ್ತು ಬ್ಯಾಚುಲರ್ಸ್' ವೀಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿರಂಜನ್ ದೇಶಪಾಂಡೆಯ ಅದ್ಬುತ ನಿರೂಪಣೆ ಈ ಶೋನ ಜೀವಾಳ. ಇನ್ನು ಜಡ್ಜ್‌ಗಳಾಗಿ ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಈ ರಿಯಾಲಿಟಿ ಶೋನ ಪ್ರಮುಖ ಆಕರ್ಷಣೆ. ಈ ರಿಯಾಲಿಟಿ ಶೋನಲ್ಲಿ ಬ್ಯಾಚುಲರ್ಸ್ ಹಾಗೂ ಏಂಜೆಲ್ಸ್ ಗಳು ಅಷ್ಟೇ ಗಮನ ಸೆಳೆದಿದ್ದಾರೆ. ವೀಕ್ಷಕರನ್ನು ತಮ್ಮ ಪ್ರತಿಭೆಯ ಮೂಲಕ ಗಮನ ಸೆಳೆದಿದ್ದಾರೆ. ಅಂತಿಮ ಸುತ್ತಿನಲ್ಲಿ ಸುನೀಲಾ-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್- ರಮೋಲಾ, ಹುಲಿ ಕಾರ್ತಿಕ್- ಧನ್ಯ, ಗಾಬ್ರಿ -ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್- ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಡ್ರೋನ್ ಪ್ರತಾಪ್-ಗಗನಾ, ಮತ್ತು ಸೂರ್ಯಾ- ಅಭಿಜ್ಞಾ ಭಾಗವಹಿಸಲಿದ್ದಾರೆ. ಹಾಗೆಯೇ ಭರ್ಜರಿ ಬ್ಯಾಚುಲರ್ ಸೀಸನ್ 2 ನ ವಿಜೇತರು ಯಾರಾಗುತ್ತಾರೆ ಅನ್ನೋದು ಈ ವೀಕೆಂಡ್‌ನಲ್ಲಿ ರಿವೀಲ್ ಆಗಲಿದೆ. ಜೀ಼ ಕನ್ನಡದಲ್ಲಿ ಇದೇ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರ ಆಗಲಿದೆ.

ಹೊಸ ರಿಯಾಲಿಟಿ ಶೋ
'ಭರ್ಜರಿ ಬ್ಯಾಚುಲರ್ಸ್ ಸೀಸನ್ 2' ಮುಗಿಯುತ್ತಿದ್ದಂತೆ ಹೊಸ ರಿಯಾಲಿಟಿ ಶೋ ಅನ್ನು ಇಟ್ಕೊಂಡು ರೆಡಿಯಾಗಿದೆ. ಈಗ 'ನಾವು ನಮ್ಮವರು' ರಿಯಾಲಿಟಿ ಶೋ ಮೂಲಕ ಜನರ ಮನರಂಜನೆ ದುಪ್ಪಟ್ಟು ಮಾಡುವುದಕ್ಕೆ ಸಜ್ಜಾಗಿದೆ. ಅಷ್ಟೇ ಅಲ್ಲದೇ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುವ ಜೀ಼ ಕನ್ನಡ ಸಂಬಂಧಗಳನ್ನು ಸಂಭ್ರಮಿಸುವುದಕ್ಕೆ ಮುಂದಾಗಿದೆ. ಹೀಗಾಗಿ ವೀಕ್ಷಕರಿಗೆ ಮತ್ತೊಂದು ಸರ್ಪ್ರೈಸ್ ಹೊತ್ತು ಬರುತ್ತಿದೆ. ಅದುವೇ 'ನೆನಪಿನ ಅಂಗಳದಲ್ಲಿ'. ಇದೊಂದು ಆನ್-ಗ್ರೌಂಡ್ ಈವೆಂಟ್' ಆಗಿದೆ.
'ನೆನಪಿನ ಅಂಗಳದಲ್ಲಿ' ಕಾರ್ಯಕ್ರಮದ ವೈಶಿಷ್ಠ್ಯತೆ ಏನಂದ್ರೆ, ಕುಟುಂಬದ ಜೊತೆಗಿನ ಸುಂದರವಾದ ಹಳೆಯ ನೆನಪುಗಳನ್ನು ಮತ್ತೆ ಮೆಲುಕು ಹಾಕುವ ಕಾರ್ಯಕ್ರಮ ಆಗಿದೆ. ಇಲ್ಲಿ ಲಗೋರಿ, ಹಾವು ಏಣಿ ಆಟ, ಕುಂಟೆ ಬಿಲ್ಲೆ, ಗೋಲಿ ಆಟ, ಟೆಂಟ್ ಸಿನೆಮಾ, ಸೈಕಲ್ ಟೈಯರ್ ರೇಸ್ ಮುಂತಾದ ಹಳೆಯ ಆಟಗಳು ಕಾಣಿಸುತ್ತವೆ. ಕುಟುಂಬದೊಂದಿಗೆ ಮರೆಯಲಾಗದ ಕ್ಷಣಗಳನ್ನು ಸಂಭ್ರಮಿಸೋಕೆ ಇದೇ ಜುಲೈ 27 ಭಾನುವಾರದಂದು ಬೆಂಗಳೂರಿನ S.H.K ಕನ್ವೆನ್ಷನ್ ಹಾಲ್, #10, ಸಂಗೊಳ್ಳಿ ರಾಯಣ್ಣ ರಸ್ತೆ, ಗೋವಿಂದರಾಜ ನಗರ ವಾರ್ಡ್, ವಿಜಯ ನಗರ, ಬೆಂಗಳೂರು ಇಲ್ಲಿ ಈವೆಂಟ್ ನಡೆಯಲಿದೆ. ಸ್ಪರ್ಧೆಗಳು, ಮನರಂಜನೆ ಮತ್ತು ಮರೆಯಲಾಗದಂತಹ ಕ್ಷಣಗಳನ್ನು ವೀಕ್ಷಕರಿಗಾಗಿ ಹಮ್ಮಿಕೊಂಡಿದೆ.


Click it and Unblock the Notifications











