ಕರ್ನಾಟಕದ ಮುಂದಿನ 'ಮಹಾನಟಿ' ಯಾರು? 2ನೇ ಸೀಸನ್ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ
ಜೀ ಕನ್ನಡದ ಮತ್ತೊಂದು ಶೋ ಅಂತ್ಯ ಕಾಣುತ್ತಿದೆ. ನಟಿಯಾಗಬೇಕು ಅಂತ ಪ್ರತಿ ದಿನ ಕನಸು ಕಾಣುತ್ತಿರುವ ಯುವತಿಯರಿಗೆ ಜೀ ಕನ್ನಡ ವೇದಿಕೆ ಮಾಡಿಕೊಟ್ಟಿತ್ತು. ಅದುವೇ 'ಮಹಾನಟಿ'. ಇದು ಕನ್ನಡ ಕಿರುತೆರೆಯ ವಿನೂತನ ಪ್ರಯತ್ನ ರಿಯಾಲಿಟಿ ಶೋ. ಮೊದಲ ಸೀಸನ್ ಯಶಸ್ಸು ಕಾಣುತ್ತಿದ್ದಂತೆ 2ನೇ ಸೀಸನ್‌ಗೆ ಆರಂಭ ಮಾಡಿದ್ದರು. ಆ ಶೋಯೀಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದೆ.
ಮಹಾನಟಿ 2ನೇ ಸೀಸನ್ ಮೂಲಕ ಯುವಪ್ರತಿಭೆಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ನಟಿಸಬೇಕು ಅನ್ನೋ ಹಂಬಲವಿರುವ ಯುವತಿಯರು ಈ ವೇದಿಕೆಗೆ ಎಂಟ್ರಿ ಕೊಡುವುದಕ್ಕೆ ಪೈಪೋಟಿ ಕೊಟ್ಟಿದ್ದರು. ರಾಜ್ಯ ಮೂಲೆ ಮೂಲೆಯಿಂದ 'ಮಹಾನಟಿ' ಶೋಗಳು ಪ್ರತಿಭೆಗಳು ಬಂದಿದ್ದವು. ಈಗ ಈ ಫಿನಾಲೆ ಕೊನೆಯ ಹಂತ ತಲುಪಿದೆ. ಈಗಾಗಲೇ ಫಿನಾಲೆ ತಲುಪಿರುವ ಐವರು ನಟಿಯರು ಐದು ಶಾರ್ಟ್‌ಫಿಲ್ಮ್‌ನಲ್ಲಿ ನಟಿಸಿದ್ದಾರೆ. ಫಿನಾಲೆಗೂ ಮುನ್ನವೇ ಅವರಿಗೆ ಅವಕಾಶಗಳು ಹುಡುಕಿಕೊಂಡು ಬಂದಿವೆ.

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ದೇಶಕರು 'ಮಹಾನಟಿ' ಫೈನಲಿಸ್ಟ್‌ಗಳಿಗೆ ಆಕ್ಷನ್ ಕಟ್ ಹೇಳಿದ್ದರು. ಈಗಾಗಲೇ ಈ ಐದೂ ಶಾರ್ಟ್ ಫಿಲ್ಮ್‌ಗಳು ಥಿಯೇಟರ್‌ನಲ್ಲಿ ಪ್ರೀಮಿಯರ್ ಕೂಡ ಆಗಿವೆ. ಈ ಕಲರ್‌ಫುಲ್ ಪ್ರೀಮಿಯರ್‌ನ ಸಮಾರಂಭದಲ್ಲಿ ಮಹಾನಟಿಯ ಜಡ್ಜಸ್‌ಗಳಾದ ರಮೇಶ್ ಅರವಿಂದ್, ಪ್ರೇಮಾ, ನಿರ್ದೇಶಕ ತರುಣ್ ಸುಧೀರ್ ಮತ್ತು ನಿಶ್ವಿಕಾ ನಾಯ್ಡು ಹಾಗೂ ನಿರೂಪಕಿ ಅನುಶ್ರೀ ಉಪಸ್ಥಿತಿಯಿತ್ತು. ಇದೇ ವೀಕೆಂಡ್‌ನಲ್ಲಿ 'ಮಹಾನಟಿ'ಗೆ ತೆರೆ ಬೀಳುತ್ತಿದೆ.
'ಮಹಾನಟಿ' ಸೀಸನ್ 1 ಭರ್ಜರಿ ಯಶಸ್ಸು ಕಂಡಿತ್ತು. ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಸಿನಿಮಾ ಹಾಗೂ ಕಿರುತೆರೆಯಲ್ಲಿ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಈಗ 'ಮಹಾನಟಿ' ಸೀಸನ್ 2 ಯುವ ನಟಿಯರಿಗೆ ಅದೇ ಭರವಸೆಯನ್ನು ನೀಡಿದೆ. ಗ್ರ್ಯಾಂಗ್ ಫಿನಾಲೆಯಲ್ಲಿ ಮಾನ್ಯ ರಮೇಶ್, ವರ್ಷಾ ಡಿಗ್ರಜೆ, ವಂಶಿ ರತ್ನಕುಮಾರ್, ಶ್ರೀಯ ಅಗಮ್ಯ ಹಾಗೂ ಭೂಮಿಕ ತಮ್ಮೇಗೌಡ ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ.
ಈಗಾಗಲೇ ಐವರನ್ನು ಇಟ್ಟುಕೊಂಡು ಸ್ಯಾಂಡಲ್ವುಡ್‌ನ ಜನಪ್ರಿಯ ನಿರ್ದೇಶಕರಾದ ಹರಿ ಸಂತೋಷ್, ಪನ್ನಗ ಭರಣ, ಕವಿರಾಜ್, ಶ್ರೀನಿಧಿ ಬೆಂಗಳೂರು ಹಾಗೂ ಉಮೇಶ್ ಕೆ. ಕೃಪ ಇವರು ಶಾರ್ಟ್ ಮೂವಿಗಳನ್ನು ನಿರ್ದೇಶಿಸಿದ್ದು, ಈ ಐದೂ ಶಾರ್ಟ್ ಫಿಲ್ಮ್‌ನಲ್ಲಿ 'ಮಹಾನಟಿ 2' ಫೈನಲಿಸ್ಟ್‌ಗಳು ನಟಿಸಿ ಜನ ಮನ ಗೆದ್ದಿದ್ದಾರೆ. ಇದು ಬೆಳ್ಳಿಪರದೆಯತ್ತ ಮೊದಲ ಹೆಜ್ಜೆಯನ್ನು ಇಡುತ್ತಿರುವ ಫೈನಲಿಸ್ಟ್‌ಗಳಿಗೆ ಇದು ಹೆಚ್ಚಿನ ಉತ್ಸಾಹವನ್ನು ನೀಡಿತು.
ಯುವತಿಯರಿಗೆ ಕಿರುತೆರೆಯಿಂದ ಸಿಲ್ವರ್ ಸ್ಕ್ರೀನ್‌ಗೆ ಅವಕಾಶ ಕೊಡಿಸುವುದು 'ಮಹಾನಟಿ' ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಸಿನಿಮಾರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಕಷ್ಟಪಡುತ್ತಿರುವ ಪ್ರತಿಭಾನ್ವಿತ ಯುವ ನಟಿಯರು ಈ ಶೋ ಮೂಲಕ ತಮ್ಮ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾರೆ. ಇಷ್ಟೇ ಅಲ್ಲದೇ, ಜಡ್ಜಸ್‌ಗಳಾದ ಹಿರಿಯ ನಟ ರಮೇಶ್ ಅರವಿಂದ್, ಪ್ರೇಮಾ, ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ನಿಶ್ವಿಕಾ ನಾಯ್ಡು ಇವರಿಗೆ ಸಲಹೆಗಳನ್ನು ನೀಡಿದ್ದಾರೆ.
ಈ ಶೋನಲ್ಲಿ ಭಾಗವಹಿಸುವ ನಟಿಯರಿಗೆ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಇರಬೇಕು ಕೌಶಲ್ಯ, ತೆರೆಮೇಲೆ ಹೇಗೆ ಕಾಣಿಸಬೇಕು? ಹೇಗೆ ನಟಿಸಬೇಕು? ಎನ್ನುವ ಸಲಹೆಯನ್ನು ನೀಡುತ್ತಾರೆ. ಮಹಾನಟಿ 2ನೇ ಸೀಸನ್‌ನ ನಟಿಯರಿಗೂ ಬೆಳ್ಳಿತೆರೆಯ ಬೇರೆ ಬೇರೆ ಆಯಾಮಗಳ ಬಗ್ಗೆ ತರಬೇತಿ ನೀಡಲಾಗಿದೆ. ಇನ್ನು 'ಮಹಾನಟಿ' ಸೀಸನ್ 2 ಗ್ರ್ಯಾಂಡ್ ಫಿನಾಲೆ ಇದೇ ನವೆಂಬರ್ 8ರಂದು ಜೀ಼ ಕನ್ನಡ ವಾಹಿನಿಯಲ್ಲಿ ಸಂಜೆ 7 ಗಂಟೆಯಿಂದ ಪ್ರಸಾರಗೊಳ್ಳಲಿದೆ. 2ನೇ ಸೀಸನ್‌ನ ಮಹಾನಟಿ ಯಾರಾಗುತ್ತಾರೆಂದು ತಿಳಿಯಲು ನವೆಂಬರ್ 8 ರಂದು ಸಂಜೆ 7 ಗಂಟೆಯಿಂದ ಆರಂಭ ಆಗುತ್ತಿರುವ ಈ ಶೋ ವೀಕ್ಷಿಸಿ.


Click it and Unblock the Notifications











