ರಿಷಬ್ ಶೆಟ್ಟಿಯ 'ಕಾಂತಾರ ಚಾಪ್ಟರ್ 1'ಗೆ ಭರ್ಜರಿ ಟಿಆರ್‌ಪಿ; ರೇಟಿಂಗ್ ಎಷ್ಟು?
ರಿಷಬ್ ಶೆಟ್ಟಿ ನಟಿಸಿ-ನಿರ್ದೇಶಿಸಿದ್ದ 'ಕಾಂತಾರ ಚಾಪ್ಟರ್ 1' ಕಳೆದ ವರ್ಷ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಲಾಭ ತಂದುಕೊಟ್ಟಿತ್ತು. ಬಹುಕೋಟಿ ವೆಚ್ಚದಲ್ಲಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದ ಈ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ನಿರೀಕ್ಷೆ ಮಾಡಿದಂತೆ ಬಾಕ್ಸಾಫೀಸ್‌ನಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಐದು ಭಾಷೆಗಳಲ್ಲಿಯೂ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು.
'ಕಾಂತಾರ ಚಾಪ್ಟರ್ 1' ಕನ್ನಡ ಚಿತ್ರರಂಗಕ್ಕೆ ಹಾಗೂ ಹೊಂಬಾಳೆ ಫಿಲ್ಮ್ಸ್‌ಗೆ ಮತ್ತೊಂದು ಮೆಗಾ ಸಕ್ಸಸ್ ಸಿನಿಮಾ ಕೊಟ್ಟಿತ್ತು. ಹೀಗಾಗಿ ಕಳೆದ ವರ್ಷ ಸೆಕೆಂಡ್ ಹಾಫ್‌ನಲ್ಲಿ ಕನ್ನಡ ಫಿಲ್ಮ್ ಇಂಡಸ್ಟ್ರಿ ಮತ್ತೆ ಯಶಸ್ಸಿನ ಅಲೆಯಲ್ಲಿ ತೇಲಾಡಿತ್ತು. ಬಾಕ್ಸಾಫೀಸ್‌ನಲ್ಲಿ ವಿಶ್ವದಾದ್ಯಂತ ಸುಮಾರು ₹900 ಕೋಟಿಗೂ ಅಧಿಕ (Gross) ಕಲೆಕ್ಷನ್ ಮಾಡಿತ್ತು. ಈ ಮೂಲಕ ರಿಷಬ್ ಶೆಟ್ಟಿ ಮತ್ತೊಂದು ಸಕ್ಸಸ್‌ಫುಲ್ ಸಿನಿಮಾ ಕೊಡುವಲ್ಲಿ ಯಶಸ್ವಿಯಾಗಿದ್ದರು.

ಥಿಯೇಟರ್‌ಗಳಲ್ಲಿ ಸದ್ದು ಮಾಡಿದ ಬಳಿಕ ಓಟಿಟಿಗೆ ಲಗ್ಗೆ ಇಟ್ಟಿತ್ತು. ಅಲ್ಲೂ ಸಿನಿಮಾ ದಾಖಲೆ ಮಟ್ಟದಲ್ಲಿ ವೀವ್ಸ್ ಅನ್ನು ಗಳಿಸಿತ್ತು. ಓಟಿಟಿಯಲ್ಲೂ ವೀಕ್ಷಕರು ಮೆಚ್ಚಿಕೊಂಡ ಬಳಿಕ ಕಿರುತೆರೆಗೆ ಲಗ್ಗೆ ಇಟ್ಟಿತ್ತು. ಜೀ ಕನ್ನಡ 'ಕಾಂತಾರ ಚಾಪ್ಟರ್ 1' ಅನ್ನು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮಾಡಿತ್ತು. ಇಲ್ಲೂ ಕೂಡ ವೀಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಿ, ಯಶಸ್ವಿಗೊಳಿಸಿದ್ದಾರೆ.
ಜೀ ಕನ್ನಡಕ್ಕೆ ಭರ್ಜರಿ ರೇಟಿಂಗ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಚಾಪ್ಟರ್ 1' ಜೀ ಕನ್ನಡಕ್ಕೆ ಅತ್ಯುತ್ತಮ ಟಿಆರ್‌ಪಿ ಅನ್ನು ತಂದುಕೊಟ್ಟಿದೆ. ಈ ಮೂಲಕ ಕರ್ನಾಟಕದ ಕಿರುತೆರೆ ವೀಕ್ಷಕರು ಮತ್ತೊಮ್ಮೆ ಸಿನಿಮಾವನ್ನು ಮೆಚ್ಚಿಕೊಂಡಂತೆ ಆಗಿದೆ. ಈ ಮೂಲಕ 'ಕಾಂತಾರ ಚಾಪ್ಟರ್ 1' ಜನಪ್ರಿಯತೆ ಹಾಗೂ ಸಾಂಸ್ಕೃತಿಕ ಬಾಂಧವ್ಯ ಸಾಬೀತು ಮಾಡಿದಂತೆ ಆಗಿದೆ. ಕಳೆದ ತಿಂಗಳು ರಿಲೀಸ್ ಆಗಿದ್ದ ಈ ಸಿನಿಮಾ ಕಿರುತೆರೆ ಇತಿಹಾಸದಲ್ಲಿ ಹೊಸ ಚರಿತ್ರೆಯನ್ನು ಬರೆದಿದೆ.
'ಕಾಂತಾರ ಚಾಪ್ಟರ್ 1' ರೇಟಿಂಗ್
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕಾಂತಾರ ಚಾಪ್ಟರ್ 1' ಜನವರಿ 24, 2026ರಂದು ಕಿರುತೆರೆಯಲ್ಲಿ ಪ್ರಸಾರ ಆಗಿತ್ತು. ಸಂಜೆ 7 ಗಂಟೆಯಿಂದ ಈ ಸಿನಿಮಾವನ್ನು ಪ್ರಸಾರ ಮಾಡಲಾಗಿತ್ತು. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಒಟ್ಟಾಗಿ ಸೇರಿಸಿ, 11.56 TVR ಪಡೆದುಕೊಂಡಿದೆ. ಅದೇ ನಗರ ಪ್ರದೇಶದಲ್ಲಿ 9.30 TVR ದಾಖಲಿಸಿದೆ. ಇದು ಕನ್ನಡ ಮನರಂಜನಾ ಕ್ಷೇತ್ರದಲ್ಲಿ ಒಂದು ಹೊಸ ಮೈಲಿಗಲ್ಲು ಎಂದು ಹೇಳಲಾಗಿದೆ.

ಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್
ಹೊಂಬಾಳೆ ಫಿಲ್ಮ್ಸ್ 'ಕಾಂತಾರ ಚಾಪ್ಟರ್ 1' ಸಿನಿಮಾವನ್ನು ಕಳೆದ ವರ್ಷ ಅಕ್ಟೋಬರ್ 2, 2025 ರಂದು ಥಿಯೇಟರ್‌ಗೆ ಲಗ್ಗೆ ಇಟ್ಟಿತ್ತು. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಕೇವಲ ಕನ್ನಡ ಅಷ್ಟೇ ಅಲ್ಲ. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿಯೂ ಭರ್ಜರಿ ಕಲೆಕ್ಷನ್ ಆಗಿತ್ತು. ಈ ಸಿನಿಮಾಗೆ ವಿಮರ್ಶಕರು ಹಾಗೂ ಪ್ರೇಕ್ಷಕರಿಂದಲೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಒಟಿಟಿ-ಟಿವಿ ಎರಡಲ್ಲೂ ಉತ್ತಮ ಪ್ರತಿಕ್ರಿಯೆ
ವಿಜಯ್ ಕಿರಗಂದೂರು ನಿರ್ಮಿಸಿದ ಈ ಸಿನಿಮಾಗೆ ರಿಷಬ್ ಶೆಟ್ಟಿ ನಿರ್ದೇಶನವಿತ್ತು. ಅಜನೀಶ್ ಲೋಕನಾಥ್ ಸಂಗೀತ ಹಾಗೂ ಅರವಿಂದ್ ಎಸ್. ಕಶ್ಯಪ್ ಕ್ಯಾಮರಾ ವರ್ಕ್ ಹೈಲೈಟ್ ಆಗಿದ್ದವು. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಒಟಿಟಿ ಹಾಗೂ ಕಿರುತೆರೆ ಎರಡರಲ್ಲೂ ಸಿನಿಮಾ ಗೆದ್ದಿರೋದು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ಕೊಟ್ಟಿದೆ. ಅಲ್ಲದೆ, ಪ್ರೈಮ್-ಟೈಮ್‌ನಲ್ಲಿ ಕನ್ನಡ ಸಿನಿಮಾವೊಂದರ ಟೆಲಿವಿಷನ್ ಪ್ರೀಮಿಯರ್ ಭರ್ಜರಿ ರೇಟಿಂಗ್ ಬಂದಿರೋದು ಬಲು ಅಪರೂಪ ಎನ್ನಲಾಗಿದೆ. ಇದು 'ಕಾಂತಾರ ಚಾಪ್ಟರ್ 1' ಜನಪ್ರಿಯತೆಯನ್ನು ಸಾಬೀತು ಮಾಡಿದೆ.


Click it and Unblock the Notifications











