500 ಸಂಚಿಕೆಗಳನ್ನು ಪೂರೈಸಿದ ಜೀ ಕನ್ನಡದ 'ನಾಗಿಣಿ 2' ಧಾರಾವಾಹಿ: ಮುಂದೇನು?
ಜೀ ಕನ್ನಡದ ಮತ್ತೊಂದು ಧಾರಾವಾಹಿ ಯಶಸ್ವಿಯಾಗಿ 500 ಸಂಚಿಕೆಗಳನ್ನು ಪೂರೈಸಿದೆ. 'ನಾಗಿಣಿ 2' ಕಿರಿತೆರೆ ಇತಿಹಾಸದಲ್ಲಿ ಜನಮನ ಗೆದ್ದಿರುವ ಧಾರಾವಾಹಿ. ಈ ಧಾರಾವಾಹಿ ಆರಂಭ ಆದಲ್ಲಿಂದ ವೀಕ್ಷಕರು 'ನಾಗಿಣಿ 2'ಗೆ ಅಂಟಿಕೊಂಡಿದ್ದಾರೆ. ಕಥೆ ಹೇಳುವ ವಿಧಾನ, ಟ್ವಿಸ್ಟ್ ಅಂಡ್ ಟರ್ನ್‌ಗಳು. ದೃಶ್ಯ ವೈಭವ ಎಲ್ಲವೂ ಈ ಧಾರಾವಾಹಿಯ ಪ್ರಮುಖ ಅಂಶಗಳು. ಈ ಕಾರಣಕ್ಕಾಗಿಯೇ 'ನಾಗಿಣಿ 2' 500 ಸಂಚಿಕೆಗಳ ಮೈಲಿಗಲ್ಲನ್ನು ತಲುಪಿದೆ.
ಕೋಟ್ಯಾಂತರ ಜನರ ಮನಗೆದ್ದಿರುವ 'ನಾಗಿಣಿ 2' ಸಂಭ್ರಮ ಮುಗಿಲು ಮುಟ್ಟಿದೆ. ಜೀ ಕನ್ನಡದಲ್ಲಿ 500 ಸಂಚಿಕೆಗಳನ್ನು ಪೂರೈಸಿದ ಕಲವು ಧಾರಾವಾಹಿಗಳಿವೆ. ಈಗ ಆ ಸಾಲಿಗೆ ಮತ್ತೊಂದು ಧಾರಾವಾಹಿ ಸೇರ್ಪಡೆಯಾದಂತಿದೆ. ಇದು ಜೀ ಕನ್ನಡದಲ್ಲೇ ಪ್ರಸಾರವಾಗುತ್ತಿದ್ದ ನಾಗಿಣಿ ಧಾರಾವಾಹಿಯ ಎರಡನೇ ಅವತರಣಿಕೆ. ಮೊದಲ ಭಾಗದಂತೆ ಎರಡನೇ ಅವತರಣಿಕೆ ಕೂಡ ಮೆಚ್ಚುಗೆ ಗಳಿಸಿ ಮುನ್ನುಗ್ಗುತ್ತಿದೆ.
'ನಾಗಿಣಿ' ಎರಡನೇ ಅವತಾರ 'ನಾಗಿಣಿ 2'
ಜೀ ಕನ್ನಡದ 'ನಾಗಿಣಿ' ಧಾರಾವಾಹಿಗೆ ವೀಕ್ಷಕರು ಮನಸೋತಿದ್ದರು. ದೀಪಿಕಾ ದಾಸ್ ಹಾಗೂ ದೀಕ್ಷಿತ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಇದೊಂದು ನಾಗಕನ್ಯೆಯ ದ್ವೇಷವನ್ನ ಆಧರಿಸಿದ ಕಥೆಯಾಗಿತ್ತು. ನಾಗಮಣಿಗೋಸ್ಕರ ಮನುಷ್ಯರು ನಾಗಕನ್ಯೆಯ ಪ್ರೀತಿಯನ್ನೇ ಸಾಯಿಸುತ್ತಾರೆ. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ದೃಷ್ಟಿಯಿಂದ ನಾಗಕನ್ಯೆ ಮನುಷ್ಯನ ಅವತಾರವೆತ್ತಿ ಬರುವ ಕಥೆಯನ್ನು ಕಿರುತೆರೆಯಲ್ಲಿ ಬಿಂಬಿಸಲಾಗಿತ್ತು. ಈ ಧಾರಾವಾಹಿಯ ಎರಡನೇ ಭಾಗವೇ 'ನಾಗಿಣಿ 2'.

'ನಾಗಿಣಿ 2' ಧಾರಾವಾಹಿಯಲ್ಲಿ ದೀಪಿಕಾ ದಾಸ್ ಪಾತ್ರದಲ್ಲಿ ನಮ್ರತಾ ಗೌಡ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ 'ಶಿವಾನಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಧಾರಾವಾಹಿಯಲ್ಲಿ ನಟ ಜಯರಾಂ ಕಾರ್ತಿಕ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಿಶೇಷ ಪಾತ್ರದಲ್ಲಿ ಜೆಕೆ ಕಾಣಿಸಿಕೊಂಡಿದ್ದಾರೆ. ಎರಡನೇ ಅವತರಣಿಕೆಯಲ್ಲಿ ಮರಿನಾ ತಾರಾ, ಮೋಹನ್, ಸ್ವಾತಿ ಮುಂದಾದವರು ನಟಿಸಿದ್ದಾರೆ.

'ನಾಗಿಣಿ 2' ಧಾರಾವಾಹಿಯಲ್ಲಿ ಸಾಂಗ್ ಶೂಟ್
'ನಾಗಿಣಿ 2' ಧಾರಾವಾಹಿಯಲ್ಲಿ ಹಾಡೊಂದನ್ನು ಶೂಟ್ ಮಾಡಲಾಗಿತ್ತು. ಕಿರುತೆರೆ ಇತಿಹಾಸದಲ್ಲಿಯೇ ಮೊದಲ ಬಾರಿಗೆ 'ನಾಗಿಣಿ 2' ಧಾರಾವಾಹಿಯಲ್ಲಿ ಸಿನಿಮಾದಲ್ಲಿರುವಂತೆ ಹಾಡನ್ನು ಇಡಲಾಗಿತ್ತು. ರೊಮ್ಯಾಂಟಿಕ್ ಸಾಂಗ್ ಅನ್ನು ಪರಿಚಯಿಸಲಾಗಿತ್ತು. ಧಾರಾವಾಹಿಯನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗಿತ್ತು. ರೊಮ್ಯಾಂಟಿಕ್ ದೃಶ್ಯಗಳಷ್ಟೇ ಅಲ್ಲದೆ ಪ್ರತಿ ಸಂಚಿಕೆಯಲ್ಲೂ ಟ್ವಿಸ್ ಅನ್ನು ನೀಡಲಾಗುತ್ತಿತ್ತು.
'ನಾಗಿಣಿ 2' ಹಲವು ಕಾರಣಗಳಿಗೆ ವೀಕ್ಷಕರ ಗಮನ ಸೆಳೆದಿದೆ. ನಾಗಕನ್ಯೆಯ ಬಗ್ಗೆ ಕನ್ನಡದ ಧಾರಾವಾಹಿಗಳು ಬಂದಿದ್ದು ತೀರಾ ವಿರಳ. ಹೀಗಾಗಿ ಈ ಧಾರಾವಾಹಿಯನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗುತ್ತಿದೆ. 'ನಾಗಿಣಿ 2' ಸೋಮವಾರದಿಂದ ಶುಕ್ರವಾರದವರೆಗೆ ಪ್ರೈಂ ಟೈಮ್‌ನಲ್ಲಿ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿದೆ. ಸದ್ಯ 500 ಸಂಚಿಕೆಗಳನ್ನು ಪೂರೈಸಿರುವ ಧಾರಾವಾಹಿ ಸಾವಿರ ಸಂಚಿಕೆಗಳ ಗುರಿ ಹೊಂದಿದೆ.


Click it and Unblock the Notifications











