Hamsa Narayan: 'ಪುಟ್ಟಕ್ಕನ ಮಕ್ಕಳು' ರಾಜೇಶ್ವರಿ ಈಗ ಪೊಲೀಸ್ ಆಫೀಸರ್..!
ಪುಟ್ಟಕ್ಕನ ಪಾತ್ರಕ್ಕೆ ಗತ್ತು, ಗಾಂಭೀರ್ಯ ಹೆಚ್ಚಾಗೋದಕ್ಕೆ ರಾಜೇಶ್ವರಿ ಪಾತ್ರವೂ ಕಾರಣ. ಒಳ್ಳೆಯತನ ಕಾಣಬೇಕು ಅಂದರೆ ಅಲ್ಲಿ ಕೆಟ್ಟತನವೂ ತಾಂಡವವಾಡಲೇ ಬೇಕಾಗುತ್ತದೆ. ಆಗ ಮಾತ್ರ ತೂಕ ಹೆಚ್ಚಾಗುತ್ತದೆ. ವಿಲನ್‌ಗಳಿದ್ದಾಗಲೇ ಅಲ್ಲವಾ ಹೀರೊಯಿಸಂಗೆ ಬೆಲೆ ಸಿಗೋದು. ಅದೇ ರೀತಿ ರಾಜೇಶ್ವರಿಯ ಕೆಟ್ಟ ಗುಣಗಳ ಮುಂದೆ ಪುಟ್ಟಕ್ಕನ ಒಳ್ಳೆಯ ಗುಣ ಎಲ್ಲರನ್ನು ಆಕರ್ಷಿಸುತ್ತಿದೆ. ಹೆಜ್ಜೆ ಹೆಜ್ಜೆಗೂ ಪುಟ್ಟಕ್ಕನಿಗೆ ತೊಂದರೆ ಕೊಡುವುದೇ ರಾಜೇಶ್ವರಿಯ ಕೆಲಸವಾಗಿ ಬಿಟ್ಟಿದೆ. ಊರ ಮಂದಿಯ ಮುಂದೆಲ್ಲಾ ಪಂಚಾಯ್ತಿಯಲ್ಲಿ ಸೋತು ಸುಣ್ಣವಾದರೂ ರಾಜೇಶ್ವರಿಯ ಕೊಬ್ಬು ಮಾತ್ರ ಕರಗಿಲ್ಲ. ಮತ್ತದೇ ಚಾಳಿ, ಮತ್ತದೆ ಧಿಮಾಕು ಅಂತ ಪ್ರೇಕ್ಷಕರು ನಿಗಿ ನಿಗಿ ಕೆಂಡದಂತಾಗುತ್ತಿದ್ದಾರೆ.
ಇನ್ನು ಪುಟ್ಟಕ್ಕನ ಮನೆ ಬಾಗಿಲಿಗೆ ಬರುವುದೇ ಇಲ್ಲ ಎಂದು ಭಾವಿಸಿದ್ದ ಪ್ರೇಕ್ಷಕರಿಗೆ ಮತ್ತೆ ರಾಜೇಶ್ವರಿ ದರ್ಶನ ನೀಡಿದ್ದಾಳೆ. ಸ್ನೇಹಾಳ ಸನ್ಮಾನ ಕಾರ್ಯಕ್ರಮಕ್ಕೆ ಹೊರಟಿದ್ದ ಪುಟ್ಟಕ್ಕ ಮತ್ತು ಸಹನಾಳ ಮುಂದೆ ರಾಜೇಶ್ವರಿ ಪ್ರತ್ಯಕ್ಷವಾಗಿ ಮತ್ತದೇ ಹಳೆ ರಾಗ ತೆಗೆದಿದ್ದಾಳೆ. ರಾಜೇಶ್ವರಿ ಏನೇ ಕೋಪಗೊಂಡರು ಪುಟ್ಟಕ್ಕನ ತಾಳ್ಮೆ ಮುಂದೆ ಏನೇನು ಮಾಡುವುದಕ್ಕೆ ಆಗುತ್ತಿಲ್ಲ. ನಾನು ಒಬ್ಬರ ಮೇಲೆ ಕಣ್ಣಿಟ್ಟರೆ ಮುಗಿಯಿತು ಎಂದು ಸವಾಲು ಬೇರೆ ಹಾಕಿದ್ದಾಳೆ. ರಾಜೇಶ್ವರಿ ಮತ್ತು ಪುಟ್ಟಕ್ಕನ ನಡುವಿನ ಯುದ್ಧ ಯಾವ ಮಟ್ಟಕ್ಕೆ ತಲುಪುತ್ತೆ ಅನ್ನೋ ಕುತೂಹಲ ಸದ್ಯ ಪ್ರೇಕ್ಷಕರಲ್ಲಿದೆ.

ನಿಜ ಜೀವನದಲ್ಲಿ ರಾಜೇಶ್ವರಿ ಇರುವ ರೀತಿಯೇ ಬೇರೆ
ನಟ-ನಟಿಯರು ತೆರೆ ಮೇಲೆ ಇರುವುದೇ ಒಂದಾದರೆ ಅವರ ನಿಜ ಜೀವನದಲ್ಲಿ ಇರುವ ರೀತಿಯೇ ಬೇರೆಯಾಗಿರುತ್ತದೆ. ಅದನ್ನು ಹೊಸದಾಗಿ ಹೇಳುವುದು ಏನೂ ಇಲ್ಲ. ಸೋಶಿಯಲ್ ಮೀಡಿಯಾ ಸಿಕ್ಕಾಪಟ್ಟೆ ಆಕ್ಟಿವ್ ಆದ ಮೇಲೆ ಇದೆಲ್ಲವೂ ಎಲ್ಲರಿಗೂ ತಿಳಿದಿರುವುದೇ. ಅದರಂತೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ರಾಜೇಶ್ವರಿ ಕೂಡ ನಿಜ ಜೀವನದಲ್ಲಿ ಬೇರೆ ರೀತಿಯಲ್ಲಿಯೇ ಇದ್ದಾರೆ. ಅಸಲಿಗೆ ಇವರ ನಿಜವಾದ ಹೆಸರು ಹಂಸ ನಾರಾಯಾಣ್ ಅಂತ. ತುಂಬಾ ಅಂದರೆ ತುಂಬಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಲ್ಲದೆ ಹೋದರೂ, ಆಗೊಂದು ಹೀಗೊಂದು ಅಂತ ಒಂದಷ್ಟು ಸ್ಪೆಷಲ್ ಫೋಟೊಗಳನ್ನು, ಆಸಕ್ತಿಕರ ವಿಚಾರಗಳನ್ನಂತು ಹಂಚಿಕೊಂಡಿದ್ದಾರೆ.
ರಾಜೇಶ್ವರಿಯ ಇಷ್ಟದ ಪಾತ್ರ ಪೊಲೀಸ್
ಯಾವ ಕಲಾವಿದರಿಗೆ ಆಗಲಿ, ಎಷ್ಟೇ ಪಾತ್ರಗಳನ್ನು ಮಾಡಲಿ, ತಮ್ಮಿಷ್ಟದ ಪಾತ್ರ ಒಂದಿರುತ್ತೆ. ನಟನೆಯ ಬದುಕಲ್ಲಿ ತಮ್ಮಿಷ್ಟದ ಪಾತ್ರ ಮಾಡುವುದಕ್ಕಾಗಿಯೇ ಒದ್ದಾಡುತ್ತಿರುತ್ತಾರೆ. ಕೆಲವರಿಗೆ ಆ ಅವಕಾಶ ಸಿಗುತ್ತೆ, ಇನ್ನು ಕೆಲವರಿಗೆ ಸಿಗುವುದೇ ಇಲ್ಲ. ಅದರಂತೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ರಾಜೇಶ್ವರಿಗೆ ಕನಸಿನ ಪಾತ್ರವೊಂದಿದೆ. ಈಗಾಗಲೇ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ವೆರೈಟಿ ವೆರೈಟಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಅವರಿಷ್ಟ ಪಡುವ ಪಾತ್ರ ಸಿಕ್ಕಿರುವುದು ಮಾತ್ರ ಈಗ. ರಾಜೇಶ್ವರಿ ಅಲಿಯಾಸ್ ಹಂಸ ನಾರಾಯಣ್‌ಗೆ ಪೊಲೀಸ್ ಕಾಪ್ ಆಗಿ ಪಾತ್ರ ಮಾಡುವ ಆಸೆ. ಇದೀಗ ಹೊಸ ಸಿನಿಮಾವೊಂದನ್ನು ಮಾಡುತ್ತಿದ್ದು ಆ ಸಿನಿಮಾದಲ್ಲಿ ಪೊಲೀಸ್ ಕಾಪ್ ಆಗಿ ಬಣ್ಣ ಹಚ್ಚಿದ್ದಾರೆ. ಈ ಫೋಟೊ ಶೇರ್ ಮಾಡಿಕೊಂಡು ತನ್ನಿಷ್ಟದ ಪಾತ್ರ ಎಂದು ಬರೆದುಕೊಂಡಿದ್ದಾರೆ.
ಶಾಂತಮ್ಮನನ್ನು ಕೊಂಡಾಡಿದ ನೆಟ್ಟಿಗರು
ಹಂಸ ನಾರಾಯಣ್ ಬೆಣ್ಣೆ ಶಾಂತಾ ಎಂಬ ಪಾತ್ರದಲ್ಲಿ ಖ್ಯಾತಿ ಪಡೆದವರು. ಅವರನ್ನು ಈಗಲು ಹಲವರು ಬೆಣ್ಣೆ ಶಾಂತಾ ಎಂದೆ ಕರೆಯುತ್ತಾರೆ. ಪೊಲೀಸ್ ಕಾಪ್‌ನಲ್ಲಿ ಫೋಟೊಶೇರ್ ಮಾಡಿದ್ದೆ ತಡ ಕಮೆಂಟ್‌ಗಳ ಸುರಿಮಳೆ ಸುರಿದಿದೆ. ಹಲವರು ಬೆಂಕಿ, ಚಿಂದಿ ಅಂತೆಲ್ಲಾ ಕಮೆಂಟ್ ಮಾಡಿದ್ದರೆ, ಬೆಣ್ಣೆ ಶಾಂತಮ್ಮನನ್ನು ಗದ್ದೆಗೆ ಕರೆಸಿಕೊಂಡಿದ್ದನಲ್ಲ ಅವನನ್ನು ಹಿಡಿದುಕೊಂಡು ಬನ್ನಿ ಎಂದು ಕಮೆಂಟ್ ಹಾಕಿದ್ದಾರೆ.

ರಾಜೇಶ್ವರಿಗೆ ಮಂಗಳಮುಖಿ ಹೊಗಳಿಕೆ
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಇಂತಿಷ್ಟೆ ವರ್ಗ ಫಾಲೋವರ್ಸ್ ಇದ್ದಾರೆ ಎನ್ನುವ ಹಾಗಿಲ್ಲ. ಎಲ್ಲಾ ವರ್ಗದವರು ಈ ಧಾರಾವಾಹಿಯನ್ನು ಮನತುಂಬಿ ನೋಡುತ್ತಾರೆ. ಅದರಂತೆ ಮಂಗಳಮುಖಿಯರು ಕೂಡ ಈ ಧಾರಾವಾಹಿಯನ್ನು ಇಷ್ಟ ಪಟ್ಟಿದ್ದಾರೆ. ಅದಕ್ಕೆ ಹಂಸ ಶೇರ್ ಮಾಡಿಕೊಂಡಿರುವ ಆ ಒಂದು ವಿಡಿಯೋ ಸಾಕ್ಷಿಯಾಗಿದೆ. ನೀವೂ ತುಂಬಾ ಚೆನ್ನಾಗಿ ಅಭಿನಯಿಸುತ್ತೀರಿ. ಏನು ಮಾಡೋದು ಪಾಪ ನೀವೂ ಡೈರೆಕ್ಟರ್ ಹೇಳಿಕೊಟ್ಟಂತೆ ಮಾಡುತ್ತೀರಿ ಅಲ್ವಾ ಅಂತ ಸಿಗ್ನಲ್‌ನಲ್ಲಿ ಕಾರು ನಿಂತಾಗ ರಾಜೇಶ್ವರಿಯನ್ನು ಗುರುತಿಸಿ ಮಾತನಾಡಿದ್ದಾರೆ.
ಜಿಮ್ ಮಿಸ್ ಮಾಡಿಕೊಂಡ ರಾಜೇಶ್ವರಿ
ನಟ ನಟಿಯರು ಜಿಮ್‌ಗೆ ಹೋಗುವುದು ಸಹಜ. ತಮ್ಮ ಫಿಟ್ನೆಸ್‌ಗಾಗಿ ಜಿಮ್ ಹೋಗೋದು ಬೇರೆ. ಆದರೆ ಹಂಸಗೆ ಜಿಮ್ ಅಂದರೆ ಸಿಕ್ಕಾಪಟ್ಟೆ ಇಷ್ಟ. ಅದನ್ನು ಅವರ ಸೋಶಿಯಲ್ ಮೀಡಿಯಾ ಮೂಲಕ ಹೇಳಿಕೊಂಡಿದ್ದಾರೆ. ಕೊರೊನಾ ಹೆಚ್ಚಾದಾಗ ಜಿಮ್‌ಗಳೆಲ್ಲಾ ಕ್ಲೋಸ್ ಆಗಿದ್ದವು. ಆಗಲೂ ಹಂಸ ಅವರು ಜಿಮ್ ಹೋಗುವುದನ್ನು ಮಿಸ್ ಮಾಡಿಕೊಂಡಿದ್ದಾರೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಯಾವಾಗ ನಿನ್ನ ನೋಡುತ್ತೇನೋ ಅಂತ ಜಿಮ್‌ನಲ್ಲಿರುವ ಫೋಟೊ ಹಾಕಿ ಬರೆದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ಮತ್ತೆ ಜಿಮ್‌ನಲ್ಲಿರುವ ಫೋಟೊ ಹಾಕಿ ಆದಷ್ಟು ಬೇಗ ವರ್ಕೌಟ್ ವಿಡಿಯೋ ಬರಲಿದೆ ಎಂದಿದ್ದಾರೆ.

ಎಲ್ಲಾ ಲುಕ್‌ಗೂ ಜೈ
ರಾಜೇಶ್ವರಿಯನ್ನು ಈಗ ನೋಡುತ್ತಿರುವುದು ಸಂಪೂರ್ಣ ಸೀರೆ ಲುಕ್‌ನಲ್ಲಿ. ಅದರಲ್ಲೂ ಮೈತುಂಬಾ ಒಡವೆ ಹಾಕಿಕೊಂಡು, ಸೀರೆಯುಟ್ಟು, ತಲೆಗೆ ತುರುಬು ಹಾಕಿ ಯಾವಾಗಲೂ ಜಗಳ ಮಾಡುವ ಬಜಾರಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಈ ಹಿಂದೆ ಇದೆ ಲುಕ್‌ನಲ್ಲಿ ನೋಡಿಲ್ಲ. ತುಂಬಾ ಅಂದರೆ ಅವರ ಸಿನಿಮಾಗಳು, ಧಾರಾವಾಹಿಯಲ್ಲಿ ಚೂಡಿದಾರ್, ಸೀರೆ ಹೀಗೆ ಇನ್ನು ಹಲವು ಡ್ರೆಸ್‌ಗಳಲ್ಲಿ ನೋಡಿರಬಹುದು. ಆದರೆ ರಾಜೇಶ್ವರಿ ಎಲ್ಲಾ ಡ್ರೆಸ್ ನಲ್ಲೂ ತುಂಬಾ ಅದ್ಭುತವಾಗಿ ಕಾಣಿಸುತ್ತಾರೆ. ಸ್ಯಾರಿ ಲುಕ್‌ಗೂ ಸೈ.. ಮಾಡರ್ನ್ ಲುಕ್ ಗೂ ಸೈ ಅನ್ನೋದು ಈ ಫೋಟೊಗಳನ್ನು ನೋಡಿದ್ರೇನೆ ಗೊತ್ತಾಗುತ್ತೆ.


Click it and Unblock the Notifications











