ಕೋಪ ಬಿಟ್ಟ ಕಂಠಿ.. ಮುನಿಸಿಕೊಂಡ ಪುಟ್ಟಕ್ಕ; 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಇನ್ನೂ 6 ತಿಂಗಳು ಮುಗಿಯಲ್ಲ
ಕನ್ನಡ ಕಿರುತೆರೆ ಲೋಕದಲ್ಲಿ ಹೊಸ ದಾಖಲೆಯನ್ನು ಬರೆದಿದ್ದ ಧಾರಾವಾಹಿ 'ಪುಟ್ಟಕ್ಕನ ಮಕ್ಕಳು'. ಜೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಈ ಧಾರಾವಾಹಿ ಕಳೆದ ನಾಲ್ಕು ವರ್ಷಗಳಿಂದ ಪ್ರಸಾರ ಆಗುತ್ತಿದೆ. ಪುಟ್ಟಕ್ಕನ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ನಟಿಸುತ್ತಿದ್ದಾರೆ. ಇವರು ಈ ಧಾರಾವಾಹಿಯ ಶಕ್ತಿ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಈ ಧಾರಾವಾಹಿ ಇನ್ನು ಕೆಲವೇ ದಿನಗಳಲ್ಲಿ ಅಂತ್ಯವಾಗುತ್ತೆ ಎಂಬ ಸುದ್ದಿ ಹಬ್ಬಿತ್ತು.
ಸೋಶಿಯಲ್ ಮೀಡಿಯಾದ ಒಂದು ಪೋಸ್ಟ್ ಇದ್ದಕ್ಕಿದ್ದಂತೆ ವೈರಲ್ ಆಗಿತ್ತು. 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಅಂತ್ಯಗೊಳ್ಳುತ್ತಿದೆ. ಆ ಜಾಗದಲ್ಲಿ ಮತ್ತೊಂದು ಸೀರಿಯಲ್ ಪ್ರಸಾರ ಆಗಲಿದೆ ಎಂಬ ಸುದ್ದಿ ಓಡಾಡಿತ್ತು. ಇನ್ನೊಂದು ಕಡೆ ಇದು ನಿಜವೇನೋ ಎಂದು ನೆಟ್ಟಿಗರು ಕೂಡ ನಂಬಿಕೊಂಡಿದ್ದರು. ಆದರೆ, ಕಿರುತೆರೆ ಲೋಕದಲ್ಲಿ ಇದಕ್ಕೆ ವಿರುದ್ಧವಾದ ಸುದ್ದಿಯೊಂದು ಹರಿದಾಡುತ್ತಿದೆ. ಈ ಸೀರಿಯಲ್‌ನ ಪ್ರೋಮೋ ಕೂಡ ಹೊಸ ಅಧ್ಯಾಯದ ಮುನ್ಸುಚನೆಯನ್ನು ಕೊಟ್ಟಿದೆ.

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಸಮಯವನ್ನು ಕೆಲವು ತಿಂಗಳ ಹಿಂದಷ್ಟೇ ಬದಲಾಯಿಸಲಾಗಿತ್ತು. ಅಲ್ಲಿವರೆಗೂ 'ಪುಟ್ಟಕ್ಕನ ಮಕ್ಕಳು' ಸೀರಿಯಲ್ ಟಿಆರ್‌ಪಿ ರೇಸ್‌ನಲ್ಲಿ ಸಿಕ್ಕಾಪಟ್ಟೆ ಫೈಟ್ ಮಾಡುತ್ತಿತ್ತು. ಆದ್ರೀಗ ಕೊಂಚ ಮಟ್ಟಿಗೆ ಹಿನ್ನೆಡೆ ಕಂಡಿದ್ದರೂ, ಈ ಧಾರಾವಾಹಿಯಲ್ಲಿ ಬರುವ ಪಾತ್ರಗಳು ಇನ್ನೂ ವೀಕ್ಷಕರ ಮನಸ್ಸಿನಲ್ಲಿ ಹಾಗೇ ಉಳಿದು ಬಿಟ್ಟಿದೆ. ಹಾಗಿದ್ದರೆ, 'ಪುಟ್ಟಕ್ಕನ ಮಕ್ಕಳು' ಕೊನೆಯಾಗುತ್ತಾ.. ಇಲ್ವಾ? ಇನ್ನೂ ಆರು ತಿಂಗಳು ಪ್ರಸಾರ ಆಗುತ್ತಾ? ಕಹಾನಿಯಲ್ಲಿ ಟ್ವಿಸ್ಟ್ ಏನು ಎಂದು ತಿಳಿಯುವುದಕ್ಕೆ ಮುಂದೆ ಓದಿ.
ಎರಡಂಕಿ ಟಿಆರ್‌ಪಿ ತಂದುಕೊಟ್ಟಿದ್ದ ಸೀರಿಯಲ್
'ಪುಟ್ಟಕ್ಕನ ಮಕ್ಕಳು' ಸೀರಿಯಲ್ 2021, ಡಿಸೆಂಬರ್ 13ರಂದು ಆರಂಭ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಧಾರಾವಾಹಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದೆ. ಈ ಸೀರಿಯಲ್‌ನಲ್ಲಿ ಹಿರಿಯ ನಟಿ ಉಮಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರ ಪಾತ್ರದ ಜೊತೆಗೆ ಮೂವರು ಹೆಣ್ಣು ಮಕ್ಕಳು ಹಾಗೂ ಕಂಠಿಯ ಪಾತ್ರ ಕೂಡ ವೀಕ್ಷಕರಿಗೆ ಇಷ್ಟ ಆಗಿತ್ತು. ಹೀಗಾಗಿ ಜೀ ಕನ್ನಡಕ್ಕೆ ಎರಡಂಕಿ ಟಿಆರ್‌ಪಿಯನ್ನು ತಂದುಕೊಟ್ಟಿತ್ತು. ಸುಮಾರು ಎರಡೂವರೆ ಮೂರು ವರ್ಷಗಳ ಕಾಲ ಈ ಧಾರಾವಾಹಿ ಟಾಪ್‌ನಲ್ಲಿ ಓಡಾಡಿಕೊಂಡಿತ್ತು.
ಪುಟ್ಟಕ್ಕನ ಕಥೆಯೇನು?
ಪುಟ್ಟಕ್ಕನಿಗೆ ಮೂವರು ಹೆಣ್ಣು ಮಕ್ಕಳು. ಈಕೆಗೆ ಗಂಡು ಮಗು ಜನಿಸಿಲ್ಲ ಎಂಬ ಕಾರಣಕ್ಕೆ ಪತಿ ಗೋಪಾಲಯ್ಯ ಇನ್ನೊಂದು ಮದುವೆ ಆಗಿದ್ದನು. ಅಲ್ಲಿಂದ ಒಬ್ಬಂಟಿಯಾಗಿ ಮೂವರು ಹೆಣ್ಣು ಮಕ್ಕಳನ್ನು ಸಾಕಲು ಒಂದು ಮೆಸ್ ನಡೆಸುತ್ತಾ ಜೀವನ ಸಾಗಿಸಿಕೊಂಡು ಬಂದಿದ್ದಳು. ಪುಟ್ಟಕ್ಕನ ಮೆಸ್ ಅಂದರೆ ಸುತ್ತೂರಿಗೆಲ್ಲ ಫೇಮಸ್. ಈಕೆಯ ಕೈ ರುಚಿ ಸವಿಯುವುದಕ್ಕೆ ಇಲ್ಲಿಗೆ ಊಟಕ್ಕೆ ಬರೋದು ಉಂಟು. ಇನ್ನು ಮೂವರು ಹೆಣ್ಣು ಮಕ್ಕಳು ಅಮ್ಮನಿಗೆ ಜೊತೆಯಾಗಿ ನಿಂತಿದ್ದರು. ಹೀಗೆ ಪ್ರತಿ ದಿನ ಟ್ವಿಸ್ಟ್ ಅಂಡ್ ಟರ್ನ್ ಕೊಟ್ಟು ಮುಂದೆ ಸಾಗುತ್ತಾ ಬಂದಿದೆ. ಹಳ್ಳಿಯ ಕತೆಯಾಗಿದ್ದರಿಂದ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಅದರದ್ದೇ ಅಭಿಮಾನಿ ಬಳಗವಿದೆ.

ಹಾಗಿದ್ದರೆ ಧಾರಾವಾಹಿ ಅಂತ್ಯ ಆಗುತ್ತಾ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಅಂತ್ಯ ಆಗುತ್ತೆ ಎನ್ನು ಪೋಸ್ಟ್ ವೈರಲ್ ಆಗಿತ್ತು. ಆದರೆ, ಅಸಲಿ ಸಂಗತಿ ಬೇರೆನೇ ಇದೆ. 'ಪುಟ್ಟಕ್ಕನ ಮಕ್ಕಳು' ಇನ್ನೂ ಆರು ತಿಂಗಳು ಕೊನೆಯಾಗುವುದಿಲ್ಲ. ಡಿಸೆಂಬರ್‌ವರೆಗೂ ಈ ಧಾರಾವಾಹಿ ಕೊನೆಗೊಳ್ಳುವುದಿಲ್ಲ ಎಂದು ಮೂಲಗಳು ಹೇಳುತ್ತಿವೆ. ಆರೂರು ಜಗದೀಶ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗೆ ಹೊಸ ಟ್ವಿಸ್ಟ್ ಕೊಟ್ಟು ಮುನ್ನೆಡೆಸುವುದಕ್ಕೆ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅದಕ್ಕೆ ಪ್ರೋಮೊ ಕೂಡ ಪುಷ್ಠಿ ಕೊಡುತ್ತಿದೆ.
ಬದಲಾದ ಕಂಠಿ
ಇತ್ತೀಚೆಗೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯ ಹೊಸ ಪ್ರೋಮೊ ರಿಲೀಸ್ ಆಗಿದೆ. ಇದು ಸದ್ಯ ಧಾರಾವಾಹಿ ಅಂತ್ಯ ಕಾಣುವುದಿಲ್ಲ ಎಂಬ ಸುಳಿವನ್ನು ನೀಡಿದಂತೆ ಇದೆ. ಯಾಕಂದ್ರೆ, ಕಂಠಿ ಕಂಪ್ಲೀಟ್ ಆಗಿ ಬದಲಾಗಿದ್ದಾನೆ. ವೈಟ್ ಅಂಡ್ ವೈಟ್‌ನಲ್ಲಿ ಮಿಂಚುತ್ತಿದ್ದಾನೆ. ಪಂಚೆಯುಟ್ಟು ಹೆಗಲ ಮೇಲೆ ಒಂದು ಟವೆಲ್ ಹಾಕೊಂಡು ಟಾಪ್ ಲುಕ್ ಕೊಟ್ಟಿದ್ದಾನೆ. ಇತ್ತ ಪುಟ್ಟಕ್ಕ ಎಲ್ಲರ ಮೇಲೂ ಮುನಿಸಿಕೊಂಡಿದ್ದಾಳೆ. ಯಾರೊಂದಿಗೆ ಮಾತಾಡುತ್ತಿಲ್ಲ. ಹೀಗಾಗಿ 'ಪುಟ್ಟಕ್ಕನ ಮಕ್ಕಳು' ಸದ್ಯಕ್ಕೆ ಮುಗಿಯೋ ಲಕ್ಷಣಗಳು ಇಲ್ಲ ಎಂದು ಕಿರುತೆರೆ ಲೋಕದಲ್ಲಿ ಸುದ್ದಿ. ಇದರ ಹೊರತಾಗಿ ಮುಂದೇನಾಗುತ್ತೋ ಗೊತ್ತಿಲ್ಲ.


Click it and Unblock the Notifications











